ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಗ್ರಾಹಕರಿಂದ 15 ಕೋಟಿ ರೂ. ಕಟ್ಟಿಸಿಕೊಂಡು ಪಂಗನಾಮ ಹಾಕಿದ ಖತರ್ನಾನ್ ಖದೀಮರು!

ಒಂದು ವಾರದಲ್ಲೇ ಹಣ ಡಬ್ಬಲ್ ಮಾಡಿಕೊಡುವುದಾಗಿ ಹೇಳಿ ಎಲ್ಲವೂ ಬ್ಯಾಂಕ್ ಖಾತೆಗಳ ಮೂಲಕವೇ ವ್ಯವಹಾರ ಮಾಡುತ್ತಿದ್ದ ಇವರು ಕೋಟಿ ಕೋಟಿ ಸಂಗ್ರಹಿಸಿ ಗ್ರಾಹಕರಿಗೆ ಟೋಪಿ ಹಾಕಿದ್ದಾರೆ. 

HR Ramesh | news18-kannada
Updated:March 3, 2020, 5:15 PM IST
ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಗ್ರಾಹಕರಿಂದ 15 ಕೋಟಿ ರೂ. ಕಟ್ಟಿಸಿಕೊಂಡು ಪಂಗನಾಮ ಹಾಕಿದ ಖತರ್ನಾನ್ ಖದೀಮರು!
ಪ್ರಾತಿನಿಧಿಕ ಚಿತ್ರ.
  • Share this:
ಕೊಡಗು; ತಾವು ಹೂಡುವ ಹಣಕ್ಕೆ ದುಪ್ಪಟ್ಟು ಲಾಭ ಬರುತ್ತೆ ಅಂದರೆ ಯಾರಿಗೆ ತಾನೆ ಆಸೆ ಆಗಲ್ಲ ಹೇಳಿ. ಜನರ ಈ ಆಸೆಯನ್ನೇ ದುರ್ಬಳಕೆ ಮಾಡಿಕೊಂಡ ಏಳು ಜನರ ಖದೀಮರ ತಂಡ, ಆನ್ ಲೈನ್ ಮೂಲಕವೇ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಕಟ್ಟಿಸಿಕೊಂಡು ಎಲ್ಲವನ್ನೂ ಸ್ವಾಹ ಮಾಡಿದೆ. ಬಳಿಕ ಹೂಡಿದ ಹಣ ವಾಪಸ್ ಮಾಡದ ಕಾರಣ ಇದೀಗ ಕಂಬಿ ಎಣಿಸುತ್ತಿದ್ದಾರೆ. 

ಮೂರು ಸಾವಿರ ರೂಪಾಯಿಗೆ, ಒಂದೇ ವಾರಕ್ಕೆ 6 ಸಾವಿರ ಹಣ ಕೊಡುತ್ತೇವೆ ಎಂದು ಆನ್​ಲೈನ್ ಮೂಲಕ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡ ಖತರ್ನಾಕ್ ಖದೀಮರು ಆ ಬಳಿಕ ಹಣವನ್ನು ಗುಳುಂ ಮಾಡಿದ್ದಾರೆ. ಆನ್​ಲೈನ್​ನಲ್ಲಿ ಜನರಿಗೆ ನಯವಾಗಿ ವಂಚನೆ ಮಾಡಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.  ಕೇವಲ ಕೊಡಗು ಜಿಲ್ಲೆಯ ಮಾತ್ರವಲ್ಲದೇ ಇಡೀ ರಾಜ್ಯದ ಎಲ್ಲೆಡೆಯಿಂದ ಜನರು ಇಲ್ಲಿ ಹೂಡಿಕೆ ಮಾಡಿದ್ದಾರೆ.

ಆಂಟೋನಿ ಡಿ ಕುನ್ನಾ ಅಲಿಯಾಸ್ ಡ್ಯಾನಿ, ಶಶಿಕಾಂತ್, ಜಾನ್ ಎಂಬುವವರು ಸುಲಭದ ದಾರಿಯಲ್ಲಿ ಕೋಟಿ ಕೋಟಿ ಸಂಪಾದಿಸಬೇಕು ಎಂದು ಇನ್ನೂ ನಾಲ್ವರನ್ನು ಸೇರಿಸಿಕೊಂಡು ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್ ಎಂಬ ಆನ್ ಲೈನ್ ಇನ್ವೆಸ್ಟ್ ಮೆಂಟ್ ಆ್ಯಪ್ ರೆಡಿ ಮಾಡಿಸಿದ್ದರು. ಈ ಆ್ಯಪ್ ಮೂಲಕ ಇನ್ವೆಸ್ಟ್ ಮೆಂಟ್ ಮಾಡಿಸಿದ ಖದೀಮರು, ಹಣ ಹೂಡಿದವರಿಗೆ ಆರಂಭದ ಒಂದು ತಿಂಗಳು ದುಪ್ಪಟ್ಟು ಹಣ ಕೊಟ್ಟಿದ್ದಾರೆ. ಇದನ್ನೇ ನಂಬಿದ ವಿದ್ಯಾವಂತರೇ ಲಕ್ಷಾಂತರ ರೂಪಾಯಿವರೆಗೂ ಇಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಚೈನ್ ಲಿಂಕ್ ಬಿಜಿನೆಸ್ ರೀತಿ ಇರುವುದರಿಂದ ತಮ್ಮ ಸ್ನೇಹಿತರು ಸಂಬಂಧಿಕರಿಂದಲೂ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಈ ಆ್ಯಪ್​ನಲ್ಲಿ ಮೆಂಬರ್ ಶಿಫ್ ಪಡೆದುಕೊಳ್ಳಬೇಕಾದರೆ ಒಂದು ಸಾವಿರ ರೂಪಾಯಿ ಕಟ್ಟಬೇಕು. ಬಳಿಕ ಮೂರು ಸಾವಿರ ರೂಪಾಯಿಯನ್ನು ಇನ್ವೆಸ್ಟ್‍ ಮಾಡಬೇಕು. ಜೊತೆಗೆ ಮತ್ತೊಬ್ಬರನ್ನು ಈ ಬಿಸಿನೆಸ್​ಗೆ ಹೊಸ ಸದಸ್ಯರನ್ನಾಗಿ ಪರಿಚಯಿಸಬೇಕು. ಹೀಗೆ ಇನ್ವೆಸ್ಟ್‍ಮೆಂಟ್ ಮಾಡಿಸಿರುವ ಈ ಖದೀಮರು, ತುಂಬಾ ಜನರು ಹೂಡಿಕೆ ಮಾಡಿದ್ದಾರೆ ಅಂತಾ ಬಿಂಬಿಸುವುದಕ್ಕಾಗಿ ಸಾವಿರಾರು ನಕಲಿ ಐಡಿಗಳನ್ನು ಮಾಡಿದ್ದರು ಎಂಬುದು ಈಗ ಬಯಲಾಗಿದೆ. ಇದು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ನಾನಾ ಜಿಲ್ಲೆಗಳ ಸಾವಿರಾರು ಗ್ರಾಹಕರಿಂದ, ಬರೋಬ್ಬರಿ 15 ಕೋಟಿಯಷ್ಟು ಹೂಡಿಕೆ ಮಾಡಿಸಿದ್ದಾರೆ.

ಇದನ್ನು ಓದಿ: ಕನ್ನಡ ಕಲಿಸಲು ಬಂದ ಡಿ.ಕೆ. ಸುರೇಶ್​ಗೆ ಶಾಕ್ ನೀಡಿದ ಲಡಾಕ್​ ಸಂಸದ!; ಬಾಯ್ಮುಚ್ಚಿ ಕುಳಿತ ಸಿಂಹ, ಸೂರ್ಯ

ಆರಂಭ ಮೊದಲನೆ ತಿಂಗಳಲ್ಲಿ ಹೂಡಿಕೆದಾರರಿಗೆ ದುಪ್ಪಟ್ಟು ಹಣ ನೀಡಿದ್ದಾರೆ. ಆದರೆ ಎರಡನೇ ತಿಂಗಳು ಎನ್ನುವಷ್ಟರಲ್ಲೇ ತಮ್ಮ ಬಿಸಿನೆಸ್ ಫ್ಲಾಪ್ ಆಗಿದೆ. ಎರಡು, ಮೂರು ತಿಂಗಳಾದರೂ ತಾವು ಹೂಡಿದ್ದ ಹಣಕ್ಕೆ ಲಾಭವಿರಲಿ ಅಸಲು ವಾಪಸ್ ಬರಲಿಲ್ಲವೋ ಆಗ ಮೋಸಹೋಗಿದ್ದ ವ್ಯಕ್ತಿಯೊಬ್ಬರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಈ ದೂರು ಆಧರಿಸಿ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನುಳಿದ ನಾಲ್ವರು ಖದೀಮರಿಗಾಗಿ ಹುಡುಕಾಟ ನಡೆಸಿದ್ದಾರೆ.

ಒಂದು ವಾರದಲ್ಲೇ ಹಣ ಡಬ್ಬಲ್ ಮಾಡಿಕೊಡುವುದಾಗಿ ಹೇಳಿ ಎಲ್ಲವೂ ಬ್ಯಾಂಕ್ ಖಾತೆಗಳ ಮೂಲಕವೇ ವ್ಯವಹಾರ ಮಾಡುತ್ತಿದ್ದ ಇವರು ಕೋಟಿ ಕೋಟಿ ಸಂಗ್ರಹಿಸಿ ಗ್ರಾಹಕರಿಗೆ ಟೋಪಿ ಹಾಕಿದ್ದಾರೆ.

  • ವಿಶೇಷ ವರದಿ: ರವಿ.ಎಸ್ ಹಳ್ಳಿ 


First published: March 3, 2020, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading