Online Class: ಇಂದಿನಿಂದ ಆನ್ಲೈನ್ ಕ್ಲಾಸ್ ಶುರು; ಹಳ್ಳಿಗಳಲ್ಲಿ ಅಡ್ಮಿಷನ್ ಆಗಿದ್ದು ಶೇ.5ರಷ್ಟು ವಿದ್ಯಾರ್ಥಿಗಳು ಮಾತ್ರ!
ಗ್ರಾಮೀಣ ಭಾಗದಲ್ಲಿ ಆನ್ಲೈನ್ ಕ್ಲಾಸ್ ಶುರು ಮಾಡಲು ಶೇ. 5ರಷ್ಟು ಮಕ್ಕಳನ್ನು ಕೂಡ ಅಡ್ಮಿಷನ್ ಮಾಡಿಲ್ಲ. ಮತ್ತೊಂದು ಕಡೆ RTE ಅಡಿಯಲ್ಲಿ ಬರುವ ಮಕ್ಕಳಿಗೆ ಉಚಿತ ಶಿಕ್ಷಣ ಮುಂದುವರೆಸಲು ಉನ್ನತಿಕರಣ ಅರ್ಜಿಯೇ ಬಿಡುಗಡೆ ಮಾಡಿಲ್ಲ
ಬೆಂಗಳೂರು (ಜು. 1): ಕೊರೊನಾ ಕಡಿಮೆಯಾದರೂ ಮೂರನೇ ಅಲೆಯ ಆತಂಕ ಜಾಸ್ತಿಯಾಗುತ್ತಿದೆ. ಹೀಗಾಗಿ, ಶಾಲೆ ಆರಂಭ ಮಾಡದೇ ನೇರವಾಗಿ ಪಾಠಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ, ಇಂದಿನಿಂದ ಪಾಠ ಶುರು ಮಾಡಲು ನೂರೆಂಟು ಸಮಸ್ಯೆಗಳು ಎದುರಾಗಿದೆ.
ಇಷ್ಟು ದಿನ ಕೊರೊನಾ ಇರೋದ್ರಿಂದ ಎಲ್ಲ ಶಾಲೆಗಳ ಬಾಗಿಲು ಬಂದ್ ಆಗಿದ್ದವು. ಆದರೆ, ಸದ್ಯದ ಸ್ಥಿತಿ ನೋಡುತ್ತಿದ್ದರೆ ಮೂರನೇ ಅಲೆ ಹಾಗೂ ಡೆಲ್ಟಾ ಪ್ಲಸ್ ಆತಂಕ ಜಾಸ್ತಿಯಾಗಿದೆ. ಇದೇ ರೀತಿ ಆದರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದು ಅರಿತ ಶಿಕ್ಷಣ ಇಲಾಖೆ ಇಂದಿನಿಂದ ಸರ್ಕಾರಿ ಮಕ್ಕಳಿಗೆ ಚಂದನ ವಾಹಿನಿ ಮೂಲಕ ಪಾಠ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಅನ್ ಲೈನ್ ಮೂಲಕ ಪಾಠ ಮಾಡಲು ಸೂಚನೆ ನೀಡಿದೆ. ಆದರೆ, ಇಂದು ಆನ್ಲೈನ್ ಎಜುಕೇಶನ್ ನೀಡಲು ನೂರೆಂಟು ಸಮಸ್ಯೆ ಇದೆ ಎಂದು RUPSA ಸಂಘಟನೆಯ ಅಧ್ಯಕ್ಷ ಹಲನೂರು ಲೇಪಾಕ್ಷಿ ಹಾಗೂ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ ನಿನ್ನೆ ಸಭೆ ನಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಆನ್ಲೈನ್ ಕ್ಲಾಸ್ ಶುರು ಮಾಡಲು ಶೇ. 5ರಷ್ಟು ಮಕ್ಕಳನ್ನು ಕೂಡ ಅಡ್ಮಿಷನ್ ಮಾಡಿಲ್ಲ. ಮತ್ತೊಂದು ಕಡೆ RTE ಅಡಿಯಲ್ಲಿ ಬರುವ ಮಕ್ಕಳಿಗೆ ಉಚಿತ ಶಿಕ್ಷಣ ಮುಂದುವರೆಸಲು ಉನ್ನತಿಕರಣ ಅರ್ಜಿಯೇ ಬಿಡುಗಡೆ ಮಾಡಿಲ್ಲ. ಹೀಗಾಗಿ ಸುಮಾರು 4 ರಿಂದ 5 ಸಾವಿರ ಮಕ್ಕಳಿಗೆ ಅನ್ ಲೈನ್ ಪಾಠ ನಡೆಸೋದು ಹೇಗೆ ಸಾಧ್ಯ ಅಂತ ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿದ್ರು ರುಪ್ಸಾ ಅಧ್ಯಕ್ಷ ಹಲನೂರು ಲೇಪಾಕ್ಷಿ.
ಬಹುತೇಕ ಪೋಷಕರು ಪೂರ್ತಿ ಫೀಸ್ ಕಟ್ಟಲು ಆಗಲ್ಲ ಅಂತ ಶುಲ್ಕ ಕಡಿತಕ್ಕೆ ಒತ್ತಾಯ ಹಾಕುತ್ತಿದ್ದಾರೆ. ಆದರೆ RUPSA ಸಂಘಟನೆ ಯಾವುದೇ ಕಾರಣಕ್ಕೂ ಬಜೆಟ್ ಶಾಲೆಗಳಲ್ಲಿ ಈ ಬಾರಿ ಶುಲ್ಕ ಕಡಿತ ಸದ್ಯಕ್ಕೆ ಇಲ್ಲ ಎಂದಿದೆ. ಕಾರ್ಪೊರೇಟ್ ಶಾಲೆಗಳಿಗೆ ಶುಲ್ಕ ಕಡಿತ ಮಾಡಿ. ಬಜೆಟ್ ಶಾಲೆಗಳು ಕೇವಲ 15ರಿಂದ 20 ಸಾವಿರ ರೂ. ಮಾತ್ರ ಫೀಸ್ ಪಡೆಯುತ್ತದೆ. ಯಾವುದೇ ಕಾರಣಕ್ಕೂ ಈ ಬಾರಿ ಶುಲ್ಕ ಕಡಿತ ಅಸಾಧ್ಯ ಎಂದು ರುಪ್ಸಾ ತಿಳಿಸಿದೆ.
ಒಟ್ಟಾರೆ ತರಗತಿ ಆರಂಭ ಮಾಡಿದರೂ ಕೂಡ ಈಗ ಎಲ್ಲರಿಗೂ ಪಾಠ ತಲುಪೋದು ಅಸಾಧ್ಯವಾಗಿದೆ. ಹೀಗಾಗಿ ಇಲಾಖೆ ಎಚ್ಚೆತ್ತುಕೊಂಡು ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯುವ ಅಗತ್ಯ ಇದೆ. ಇಲ್ಲವಾದರೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಗುಣಮಟ್ಟದ ಶಿಕ್ಷಣ ಸಿಗದೇ ವಿಶ್ವ ಸಂಸ್ಥೆಯ ಅಂದಾಜಿನಂತೆ ಸುಮಾರು 30% ರಷ್ಟು ಮಕ್ಕಳು ಶಾಲೆಗಳಿಂದ ದೂರ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
(ವರದಿ: ಆಶಿಕ್ ಮುಲ್ಕಿ)
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ