ಹುಬ್ಬಳ್ಳಿ(ನ.05): ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಸಮೀಪಿಸುತ್ತಿದೆ. ಆದರೆ ಈ ಬಾರಿಯ ದೀಪಾವಳಿ ಸಾರ್ವಜನಿಕರಿಗೆ ದುಬಾರಿಯಾಗಿರಲಿದೆ. ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು ಜನರನ್ನು ಕಂಗಾಲಾಗಿಸಿದೆ. ಅದರಲ್ಲೂ ತರಕಾರಿ, ಬೇಳೆ ಕಾಳುಗಳ ಬೆಲೆ ದುಬಾರಿಯಾಗಿದ್ದು, ದೀಪಾವಳಿ ಹೊಸ್ತಿಲಲ್ಲಿ ಎದುರಾದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಹಣತೆ ಹಚ್ಚಲು ಎಣ್ಣೆ ಕೊಳ್ಳಬೇಕಾದರೂ ಹತ್ತಾರು ಬಾರಿ ಯೋಚನೆ ಮಾಡುವಂತ ಸ್ಥಿತಿ ಎದುರಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಬೆಂಗಳೂರು, ಗೋವಾ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೂ ತರಕಾರಿ ಉತ್ತರ ಕರ್ನಾಟಕ ಭಾಗದಿಂದ ಸರಬರಾಜಾಗುತ್ತದೆ. ಈರುಳ್ಳಿ, ಮೆಣಸಿನಕಾಯಿ, ಜೋಳ, ಕಡಲೆ, ಹೆಸರು ದೇಶಾದ್ಯಂತ ರಫ್ತಾಗುತ್ತದೆ. ಆದರೆ ಅತಿವೃಷ್ಟಿಯ ಹೊಡೆತ ಉತ್ತರ ಕರ್ನಾಟಕವನ್ನು ಕಂಗೆಡೆಸಿದೆ.
ಪ್ರವಾಹದಿಂದ ತರಕಾರಿ ಸೇರಿದಂತೆ ಇನ್ನಿತರ ಬೆಳೆ ನೀರು ಪಾಲಾಗಿದೆ. ಪರಿಣಾಮ ತರಕಾರಿ, ಆಹಾರ ಧಾನ್ಯಗಳ ಕೊರತೆ ಸೃಷ್ಟಿಯಾಗಿ, ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಸ್ಥಳೀಯರ ಮೇಲೂ ಆಗುತ್ತಿದೆ. ಅದರಲ್ಲೂ ಹಬ್ಬದ ಊಟಕ್ಕೆ ತರಹೇವಾರಿ ತರಕಾರಿ ಇಲ್ಲದೇ ಊಟ ರುಚಿಸದು. ಹಾಗಂತ ಮಾರುಕಟ್ಟೆಗೆ ತರಕಾರಿ ಕೊಳ್ಳಲು ಹೋದರೆ ನೂರಿನ್ನೂರರ ನೋಟು ಯಾವುದಕ್ಕೂ ಸಾಲದು.
ಈರುಳ್ಳಿ ಬೆಲೆ ಕೆಜಿಗೆ 80ರಿಂದ 100 ರೂಪಾಯಿ ಗಡಿಯಲ್ಲಿಯೇ ಇದೆ. ಆಲೂಗಡ್ಡೆ 50 ರಿಂದ 70 ರೂಪಾಯಿಗೆ ಕೆಜಿ ತೂಗುತ್ತಿದೆ. ಬೆಂಡೆಕಾಯಿ, ಚವಳಿಕಾಯಿ, ಹಾಗಲಕಾಯಿ, ಬದನೆಕಾಯಿ 80ರಿಂದ 100 ರೂಪಾಯಿಗೆ ಕೆಜಿಯಂತೆ ಮಾರಾಟವಾಗುತ್ತಿದೆ. ಬೀನ್ಸ್, ಬಟಾಣಿ, ಕ್ಯಾರೆಟ್ 100 ರೂಪಾಯಿ ಗಡಿ ದಾಟಿವೆ. ಹಸಿ ಶುಂಠಿ 200 ರೂಪಾಯಿಗೆ ಕೆಜಿಯಾಗಿದ್ದರೆ, ಬೆಳ್ಳುಳ್ಳಿ 180ರಿಂದ 200 ರೂಪಾಯಿಯಾಗಿದೆ. ತೆಂಗಿನಕಾಯಿ ಬೆಲೆಯೂ ದಿಢೀರನೆ ಏರಿಕೆ ಕಂಡಿದೆ. ಬೇಳೆ ಕಾಳುಗಳ ಬೆಲೆಯೂ ಗಗನಕ್ಕೇರಿದೆ. ತೊಗರಿ ಬೇಳೆ 150ರಿಂದ 170ರೂಪಾಯಿ. ಸೂರ್ಯಕಾಂತಿ ಎಣ್ಣೆಯಂತೂ ಒಂದೇ ವಾರದಲ್ಲಿ ಲೀಟರ್‌ಗೆ 25 ರೂಪಾಯಿ ಹೆಚ್ಚಳವಾಗಿದೆ. ಪಾಮ್ ಎಣ್ಣೆ ಬೆಲೆಯೂ 15ರೂಪಾಯಿ ಏರಿಕೆ ಕಂಡಿದೆ.
ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ ಸಂತಸ ತಂದಿದೆ; ಮೃತ ಅನ್ವಯ್ ನಾಯಕ್ ಕುಟುಂಬ
ಈ ಪರಿಯಾಗಿ ಬೆಲೆ ಏರಿಕೆಯಾಗುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಈಗಾಗಲೇ ನಿರಂತರ ಲಾಕ್‌ಡೌನ್‌ನಿಂದ ಲಕ್ಷಾಂತರ ಜನರ ಗಳಿಕೆ ಕುಸಿದಿದೆ. ಕೆಲಸವಿಲ್ಲದೆ ಮಧ್ಯಮ ವರ್ಗದ ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತರಕಾರಿ, ಆಹಾರ ಧಾನ್ಯಗಳ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗುತ್ತಾ ಹೋದಲ್ಲಿ ಬದುಕು ಸಾಗಿಸುವುದಾದರೂ ಹೇಗೆ ಎನ್ನುವ ಚಿಂತೆ ಶುರುವಾಗಿದೆ.
ದಸರಾ ಹಬ್ಬಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಇದೀಗ ದೀಪಾವಳಿಯಲ್ಲಿಯೂ ಬೆಲೆ ಏರಿಕೆಯ ಕತ್ತಲು ಆವರಿಸಿದ್ದು, ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಗೆ ಬರುವ ಜನರು ಸಂಖ್ಯೆಯೂ ಇಳಿಮುಖವಾಗಿದೆ. ಹಬ್ಬ ಹರಿದಿನ ಆಚರಿಸುವುದಾದರೂ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ