Onion: ಈರುಳ್ಳಿಗೆ ಚಿನ್ನದ ಬೆಲೆ ; ಕಳ್ಳರ ಕಾಟ ಹೆಚ್ಚಳದಿಂದ ಅನ್ನದಾತ ಕಂಗಾಲು

ಈರುಳ್ಳಿ

ಈರುಳ್ಳಿ

ಒಂದು ಎಕರೆ ಈರುಳ್ಳಿ ಬೆಳೆಯಲು 50 ಸಾವಿರ ರೂ ಖರ್ಚು ಬರುತ್ತದೆ. ಈಗ ಕಳ್ಳರ ಕಾಟದಿಂದಾಗಿ ಈರುಳ್ಳಿ ರಕ್ಷಿಸುವುದೇ ಕಷ್ಟವಾಗಿದೆ. ರಾತ್ರಿ ವೇಳೆ ಬೈಕಿನಲ್ಲಿ ಬರುವ ಕಳ್ಳರು ಈರುಳ್ಳಿ ಚೀಲ ಕದ್ದು ಪರಾರಿಯಾಗುತ್ತಿದ್ದಾರೆ

  • Share this:

ವಿಜಯಪುರ(ಅಕ್ಟೋಬರ್​. 25): ಈರುಳ್ಳಿ ಬೆಳೆ ಕೇಳಿದರೆ ಸಾಕು ಈಗ ಕಣ್ಣೀರು ಹಾಕುವ ಸರದಿ ಗ್ರಾಹಕರದ್ದಾಗಿದೆ. ಇದಕ್ಕೂ ಮುಂಚೆ ಅನ್ನದಾತರು ಕಣ್ಣೀರು ಹಾಕುತ್ತಿದ್ದರು.  ಈಗ ರೈತರು ಕಣ್ಣೀರು ಹಾಕುವಂತಾಗಿದೆ. ಕೇವಲ 15 ದಿನಗಳ ಹಿಂದೆ ಉಂಟಾದ ಅತಿವೃಷ್ಠಿಯಿಂದಾಗಿ ಈರುಳ್ಳಿ ಬೆಳೆಗಾರರು ಅಕ್ಷರಶಃ ಕಂಗಾಲಾಗಿ ಹೋಗಿದ್ದರು.  ವಿಜಯಪುರ ಜಿಲ್ಲೆಯಲ್ಲಿ ರೈತರು ಬೆಳೆದ ಶೇ. 90 ರಷ್ಟು ಈರುಳ್ಳಿ ಬೆಳೆಗಾರರು ಅತಿವೃಷ್ಠಿ ಮತ್ತು ನಂತರ ಉಂಟಾದ ಪ್ರವಾಹದಿಂದಾಗಿ ಈರುಳ್ಳಿ ಬೆಳೆಯನ್ನು ಕಳೆದುಕೊಂಡಿದ್ದರು. ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈ ಬಾರಿ 7851 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಆದರೆ, ಅತಿವೃಷ್ಠಿ ಮತ್ತು ಡೋಣಿ ಹಾಗೂ ಭೀಮಾ ಪ್ರವಾಹದಿಂದಾಗಿ ಶೇ. 90 ರಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. ಉಳಿದ ಶೇ.10 ರಷ್ಟು ಈರುಳ್ಳಿ ಬೆಳೆಗಾರರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು.


ಲಾಭ ಸಿಗಬಹುದು ಎಂದು ಸಂತಸದಲ್ಲಿದ್ದರು. ಆದರೆ, ಈಗ ಇವರ ಬಳಿ ಇರುವ ಉಳ್ಳಾಗಡ್ಡಿಯೇ ಇವರಿಗೆ ಶಾಪವಾಗುಂತಾಗಿದೆ. ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಸಂಗ್ರಹಿಸಿ ಇಟ್ಟಿದ್ದ ಬೀಜದ ಈರುಳ್ಳಿಯ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಉಳ್ಳಾಗಡ್ಡಿ ಬೆಳೆಗಾರರು ಕಂಗಾಲಾಗಿದ್ದಾರೆ.  ಆದಷ್ಟು ಬೇಗ ಮಾರುಕಟ್ಟೆಗೆ ಸಾಕಿಸಿದರೆ ಸಾಕು.  ಹಾನಿಯನ್ನಾದರೂ ತಪ್ಪಿಸಬಹುದು ಎಂದು ಈಗ ಮಾರಾಟ ಮಾಡುತ್ತಿದ್ದಾರೆ.


ವಿಜಯಪುರ ಜಿಲ್ಲೆಯಲ್ಲಿ ಕೊಲ್ಹಾರ ತಾಲೂಕಿನ ಮಸೂತಿ, ತೆಲಗಿ ಸುತ್ತಮುತ್ತ  ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆಯುತ್ತಿದ್ದು, ಈ ಭಾಗದಲ್ಲಿ ಫಲವತ್ತಾಗಿರುವ ಕಪ್ಪು ಮಣ್ಣು ಈರುಳ್ಳಿ ಬೆಳೆಗೆ ಹೇಳಿ ಮಾಡಿಸಿದಂತಿದ್ದು, ಮಸೂತಿ ಗ್ರಾಮದ ಶಂಕ್ರಯ್ಯ ಮಠಪತಿ ಎಂಬುವರು ತಮ್ಮ 10 ಎಕರೆಯಲ್ಲಿ ಉತ್ತಮ ಉಳ್ಳಾಗಡ್ಡಿ ಬೆಳೆದಿದ್ದರು. ಈಗ ಶೆಡ್ ನಲ್ಲಿ ಇಡಲಾಗಿದ್ದ ಉಳ್ಳಾಗಡ್ಡಿ ಚೀಲಗಳು ಕಳ್ಳತನವಾದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಈರುಳ್ಳಿ ಮಾರಾಟ ಮಾಡಿದ್ದಾರೆ.


ಇದೇ ಗ್ರಾಮದ ಆನಂದ ಬಿಸ್ತಗೊಂಡ ಕೂಡ ತಮ್ಮ 11 ಎಕರೆಯಲ್ಲಿ ಮತ್ತು ರಮೇಶ್ ಬೀಳಗಿ ಎಂಬುವರು ತಮ್ಮ 20 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, ಈಗಾಗಲೇ ಇವರ ಅಪಾರ ಪ್ರಮಾಣದ ಈರುಳ್ಳಿ ಅತೀವೃಷ್ಠಿಯಿಂದಾಗಿ ಹಾಳಾಗಿದೆ. ಬೀಜಕ್ಕಾಗಿ ಇವರು ಸಂಗ್ರಹಿಸಿ ಇಟ್ಟಿದ್ದ ಉಳ್ಳಾಗಡ್ಡಿ ಚೀಲಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.


ವಿಜಯಪುರ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಉಳ್ಳಾಗಡ್ಡಿಗೆ ಈಗ 80 ರೂ ದಿಂದ 90 ರೂ ಬೆಲೆಯಿದೆ. ಒಂದು ಚೀಲ ಕಳ್ಳತನ ಮಾಡಿದರೆ ಸಾಕು. ಕನಿಷ್ಠ ಐದಾರು ಸಾವಿರ ರೂಪಾಯಿ ಹಣ ಸಿಗುತ್ತದೆ. ಇದು ಖದೀಮರ ಕಣ್ಣು ಈರುಳ್ಳಿ ಮೇಲೆ ಬೀಳಲು ಕಾರಣವಾಗಿದೆ.


ಇದನ್ನೂ ಓದಿ : ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ 25 ಸಾವಿರ ರೂಪಾಯಿ ಪರಿಹಾರ ; ಸಿಎಂ ಯಡಿಯೂರಪ್ಪ


ಒಂದು ಎಕರೆ ಈರುಳ್ಳಿ ಬೆಳೆಯಲು 50 ಸಾವಿರ ರೂ ಖರ್ಚು ಬರುತ್ತದೆ. ಈಗ ಕಳ್ಳರ ಕಾಟದಿಂದಾಗಿ ಈರುಳ್ಳಿ ರಕ್ಷಿಸುವುದೇ ಕಷ್ಟವಾಗಿದೆ. ರಾತ್ರಿ ವೇಳೆ ಬೈಕಿನಲ್ಲಿ ಬರುವ ಕಳ್ಳರು ಪ್ರತಿಯೊಂದು ಬೈಕಿನಲ್ಲಿ ಒಂದೆರಡು ಈರುಳ್ಳಿ ಚೀಲ ಕದ್ದು ಪರಾರಿಯಾಗುತ್ತಿದ್ದಾರೆ. ಈ ಕುರಿತು ಯಾರಿಗೆ ದೂರು ಕೊಡುವುದು ಇದೆಲ್ಲ ಗೊತ್ತಿರುವವರೇ ಮಾಡುತ್ತಿದ್ದಾರೆ ಎಂದು ಯುವ ರೈತ ಆನಂದ ಬಿಸ್ತಗೊಂಡ್ ನ್ಯೂಸ್ 18 ಕನ್ನಡದ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.


ಈರುಳ್ಳಿ ಈಗ ಬೆಳೆ ಹಾಳಾದ ರೈತರಿಗೆ ಕಣ್ಣೀರು ತರಿಸಿದ್ದರೆ, ಉತ್ತಮ ಈರುಳ್ಳಿ ಸಂಗ್ರಹಿಸಿಟ್ಟ ಅನ್ನದಾತರಲ್ಲೂ ಕಣ್ಣೀರಿಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ, ಬೆಲೆ ಏರಿಕೆಯಿಂದ ಗ್ರಾಹಕರ ಕಣ್ಣಲ್ಲಿಯೂ ನೀರು ತರಿಸುವ ಮೂಲಕ ಕಣ್ಣೀರುಳ್ಳಿ ಎಂದೇ ಜನ ಉಳ್ಳಾಗಡ್ಡಿ ಬಗ್ಗೆ ಮಾತನಾಡುವಂತಾಗಿದೆ. ಈಗ ಈರುಳ್ಳಿ ಬೆಳೆಗಾರರ ಗೋಳು ಕೇಳೋರು ಯಾರು ಎಂಬ ಪರಿಸ್ಥಿತಿ ಎದುರಾಗಿದೆ.

Published by:G Hareeshkumar
First published: