ಗದಗ (ಅ.24): ಭರ್ಜರಿ ಬೆಲೆ ನಿರೀಕ್ಷಿಸಿದ್ದ ಈರುಳ್ಳಿ ಬೆಳೆಗಾರರು ಇದೀಗ ಕಣ್ಣೀರು ಹಾಕುವಂತೆ ಆಗಿದೆ. ಭಾರೀ ಮಳೆಗೆ ಈರುಳ್ಳಿ ಬೆಳೆ ನಾಶವಾಗಿದ್ದು, ಉತ್ತಮ ಬೆಲೆ ಬಂದ ಸಮಯದಲ್ಲಿ ಈರುಳ್ಳಿ ಬೆಳೆ ಮಳೆಗೆ ಕೊಚ್ಚಿ ಹೋಗಿರುವುದು ರೈತರ ಬದುಕಿಗೆ ಬರೆ ಎಳೆದಂತೆ ಆಗಿದೆ. ಅದರಲ್ಲಿಯೂ ಈ ಬಾರಿ ಜಿಲ್ಲೆಯಲ್ಲಿ ರೈತರು ತೋಟಗಾರಿಕೆ ಬೆಳೆಯಲ್ಲಿ ಸಿಂಹಪಾಲು ಈರುಳ್ಳಿ ಬೆಳೆಯನ್ನು ಬೆಳೆದಿದ್ದಾರೆ. ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ನರಗುಂದ, ರೋಣ, ಗಜೇಂದ್ರಗಡ ಸೇರಿದಂತೆ ಜಿಲ್ಲೆಯ ಏಳು ತಾಲೂಕಿನಲ್ಲಿ ಅಪಾರ ಪ್ರಮಾಣದ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿದೆ. ಆದರೆ, ಅತಿಯಾದ ಮಳೆ ಈರುಳ್ಳಿ ಬೆಳೆಯನ್ನು ಸರ್ವನಾಶ ಮಾಡಿದೆ. ಕಟಾವು ಮಾಡಬೇಕೆಂದು ಲೆಕ್ಕಾಚಾರದಲ್ಲಿದ್ದಾಗ ಅತಿಯಾದ ಮಳೆ ಸುರಿದ ಜಮೀನಿನಲ್ಲಿ ಕೊಳೆಯುತ್ತಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ 32 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ, 16 ಸಾವಿರ 515 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಸರ್ವನಾಶವಾಗಿದೆ.
ರೈತರು ಒಂದು ಎಕರೆ ಪ್ರದೇಶಕ್ಕೆ ಕನಿಷ್ಠ 20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. ಈ ಭಾರಿ ಈರುಳ್ಳಿ ಒಳ್ಳೆಯ ಬೆಲೆ ಸಹ ಬಂದಿದ್ದು, ಈರುಳ್ಳಿ ಮಾರಾಟ ಮಾಡಿ ಒಳ್ಳೆಯ ಆದಾಯಗಳಿಸಬೇಕು ಎಂದರೆ ಮಳೆಯ ಆರ್ಭಟಕ್ಕೆ ಸಿಲುಕಿ ರೈತನ ಕನಸು ನುಚ್ಚು ನೂರಾಗಿದೆ .
ಮಾರುಕಟ್ಟೆಯಲ್ಲಿ ಈರುಳ್ಳಿ 70 ರಿಂದ 100 ರೂಪಾಯಿ ಮಾರಾಟವಾಗುತ್ತಿದೆ. ಆದರೆ ರೈತರು ಬೆಳೆದ ಈರುಳ್ಳಿ ಜಮೀನಿನಲ್ಲಿ ಕೊಳೆತು ಹೋಗುತ್ತಿದೆ. ಅಳಿದು ಉಳಿದು ಈರುಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಬಂದರೆ ಹಸಿ ಈರುಳ್ಳಿಯನ್ನು ಖರೀದಿ ಮಾಡುತ್ತಾ ಇಲ್ಲ. ಹೀಗಾಗಿ ರೈತರು ಒಂದು ಎಕರೆ ಪ್ರದೇಶಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯ ಮಾಡುದ್ದಿದ್ದಾರೆ
ಜಿಲ್ಲೆಯಾದ್ಯಂತ ತೋಟಗಾರಿಕೆ ಇಲಾಖೆ ಮಾಡಿರುವ ಸರ್ವೆ ಪ್ರಕಾರ 12 ಕೋಟಿ. 88 ಲಕ್ಷ ರೂಪಾಯಿ ಈರುಳ್ಳಿ ಬೆಳೆ ನಾಶವಾಗಿದೆ. ಜಿಲ್ಲೆಯಾದ್ಯಂತ 16 ಸಾವಿರ 515 ಹೆಕ್ಟೇರ್ ಪ್ರದೇಶದ ಈರುಳ್ಳಿ ನಾಶವಾಗಿದ್ದು, ಇಂದಿನ ಬೆಲೆ ಪ್ರಕಾರ ಮಾರಾಟವಾಗಿದ್ದರೆ ಸುಮಾರು 784 ಕೋಟಿ ಜಿಲ್ಲೆಯ ರೈತರಿಗೆ ಲಾಭ ಬರುತ್ತಿತ್ತು. ಸಕಾಲಕ್ಕೆ ಉತ್ತಮ ಮಳೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದರು. ರೈತರು ಅಂದುಕೊಂಡಂತೆ ಈವಾಗ ಉತ್ತಮ ಬೆಲೆ ಬಂದಿದೆ. ಆದರೆ ಮಳೆಯ ರೌದ್ರನರ್ತನಕ್ಕೆ ರೈತನ ಬದುಕು ಮೂರಾಭಟ್ಟಿಯಾಗಿದ್ದು, ಈರುಳ್ಳಿ ರೈತರ ಕಣ್ಣಲ್ಲಿ ನೀರು ಹಾಕುವಂತೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ