ಧಾರವಾಡ(ಅ.12): ಸದ್ಯ ಸುರಿಯುತ್ತಿರುವ ಮಳೆಯಿಂದ ಇಡೀ ರೈತ ವರ್ಗವೇ ಕಂಗಾಲಾಗಿದೆ. ಕಳೆದ ವರ್ಷವು ಸಹ ಪ್ರವಾಹಕ್ಕೆ ನಲುಗಿದ ರೈತರು ಮತ್ತೆ ಈ ವರ್ಷ ಗಾಯದ ಮೇಲೆ ಬರೆ ಎಳೆದಂತೆ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರಲ್ಲಿ ಈರುಳಿ ಬೆಳೆ ಸಹ ಒಂದು. ಹೌದು ಧಾರವಾಡ ಜಿಲ್ಲೆಯಲ್ಲಿ 2020ರ ಮುಂಗಾರಿನಲ್ಲಿ 28905 ಹೆಕ್ಷೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಇದರಿಂದ ಅಂದಾಜು 5.78 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ ನಿರಂತರ ಮಳೆ ಸುರಿದ ಪರಿಣಾಮ ತೇವಾಂಶ ಹೆಚ್ಚಾಗಿ 14,041 ಹೆಕ್ಟೇರ್ ಪ್ರದೇಶ ನಷ್ಟವಾಗಿದೆ. ಕಳೆದ ಎರಡು ವರ್ಷಗಳಿಂದ ಈರುಳಿ ಬೆಳೆಗಾರರಿಗೆ ತೀವ್ರ ಹಾನಿಯಾಗುತ್ತಿದೆ. ನಿರಂತರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶ ಸೇರಿದಂತೆ ಈರುಳ್ಳಿ ಬೆಳೆದ ಹೊಲಗಳಲ್ಲಿ ನೀರು ನಿಂತು ತೇವಾಂಶ ಹೆಚ್ಚಳವಾಗಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ. ಮಳೆ ಹೆಚ್ಚಾಗಿದ್ದರಿಂದ ಕೊಳೆ ರೋಗ, ತಿರುಗು ರೋಗ ಕಾಣಿಸಿಕೊಂಡಿದೆ. ಅಲ್ಲದೇ ಕೆಲವು ಪ್ರದೇಶದಲ್ಲಿ ಈಗಾಗಲೇ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆ ನಾಶವಾಗಿದೆ.
ರೈತರು ದುಬಾರಿ ಬಿತ್ತನೆ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಟ 25-30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳೆ ಪ್ರತಿ ಕೆ.ಜಿ.ಗೆ 45 ರಿಂದ 55 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಒಣಗಿದ, ಗುಣಮಟ್ಟದ ಸ್ಥಳೀಯ ಈರುಳ್ಳಿಗೆ ಹೆಚ್ಚು ಬೆಲೆ ಇದೆ. ಎಪಿಎಂಸಿಯಲ್ಲಿ ಕಡಿಮೆ ದರ ಇದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಸಾರ್ವಜನಿಕರು ಹೆಚ್ಚು ಬೆಲೆಗೆ ಖರೀದಿ ಮಾಡುವಂತಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಈರುಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರದ ದಿನ ಆಶ್ಲೇಷ ಸೇವೆಗೆ ಮುಗಿಬಿದ್ದ ಭಕ್ತರು
ಧಾರವಾಡ ತಾಲೂಕು - 2,215 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿ
ಹುಬ್ಬಳ್ಳಿ ತಾಲೂಕು- 2,400 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿ
ಕುಂದಗೋಳ ತಾಲೂಕು-1500 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿ
ನವಲಗುಂದ ತಾಲೂಕು- 5726 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿ
ಅಣ್ಣಿಗೇರಿ ತಾಲೂಕು- 2,200 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿ
ಒಟ್ಟು ಧಾರವಾಡ ಜಿಲ್ಲೆಯಲ್ಲಿ 14,041 ಹೆಕ್ಟೇರ್ ಈರುಳ್ಳಿ ಪ್ರದೇಶ ಹಾನಿಯಾಗಿದೆ.
ಬಿಟ್ಟು ಬಿಡದೇ ಸುರಿದ ಮಳೆಗೆ ಹೊಲದಲ್ಲಿ ನೀರು ನಿಂತು ಉಳ್ಳಾಗಡ್ಡಿ ಬೆಳೆ ಕೊಳೆಯುತ್ತಿದೆ. ಅದಕ್ಕೆ ಸಾವಿರಾರೂ ಖರ್ಚು ಮಾಡಿ ಬೆಳೆದಿದ್ದೆವು. ಆದರೆ, ಈಗ ನಿರಂತರ ಸುರಿದ ಮಳೆಯ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ, ಇನ್ನು ಜಮೀನಿನಲ್ಲಿ ಬೆಳೆ ರೋಗಕ್ಕೆ ತುತ್ತಾಗಿದೆ. ಸರಕಾರ ಈ ಬಗ್ಗೆ ಸರಿಯಾದ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ಪ್ರಗತಿಪರ ರೈತ ಬಸವರಾಜ ಹೊಂಬಳ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ