news18-kannada Updated:November 20, 2020, 12:07 PM IST
ಸಾವಿಗೀಡಾದ ಮಗು
ಮಂಡ್ಯ(ನ.20): ಸಕ್ಕರೆನಾಡು ಮಂಡ್ಯದಲ್ಲಿ ಪೋಷಕರ ನಿರ್ಲ ಕ್ಷ್ಯಕ್ಕೆ ಮತ್ತೊಂದು ಹಸುಳೆ ಸಾವಿಗೀಡಾಗಿದೆ. ಕಳೆದ ತಿಂಗಳು ಮಂಡ್ಯ ನಗರದಲ್ಲಿ ಪೋಷಕರ ನಿರ್ಲಕ್ಷ್ಯದಿಂದ ಎರಡಂತಸ್ತಿನ ಕಟ್ಟಡದ ಮೇಲಿಂದ ಬಿದ್ದು 2 ವರ್ಷದ ಮುದ್ದಾದ ಹೆಣ್ಣು ಮಗು ಸಾವಿಗೀಡಾಗಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಅಂತಹದ್ದೆ ಘಟನೆಯೊಂದು ನಡೆದಿದೆ. ಪೋಷಕರ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಬೈಕ್ ನಿಂದ ಬಿದ್ದು 1 ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಹೌದು! ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮಂಡ್ಯದ ರಾಜ್ ಕುಮಾರ್ ಬಡಾವಣೆಯಲ್ಲಿ ಎರಡಂತಸ್ತಿನ ಕಟ್ಟಡದ ಮೇಲಿಂದ ಧನುಶ್ರೀ ಎನ್ನುವ ಮುದ್ದಾದ ಹೆಣ್ಣು ಮಗುವೊಂದು ಊಟ ಮಾಡಿಸುತ್ತಿದ್ದ ವೇಳೆ ಪೋಷಕರ ನಿರ್ಲಕ್ಷ್ಯದಿಂದಾಗಿ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿತ್ತು. ಆ ಘಟನೆಯಲ್ಲಿ ಮಗುವಿನ ಪೋಷಕರು ಸ್ವಲ್ಪ ಎಚ್ಚರ ತಪ್ಪಿದ್ರಿಂದ ಆ ಮಗು ಕಟ್ಟಡದ ಮೇಲಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿತ್ತು.
ಆ ಘಟನೆ ಮಾಸುವ ಮುನ್ನವೇ ಇದೀಗ ಅಂತಹದ್ದೆ ಮತ್ತೊಂದು ಘಟನೆ ನಡೆದಿದೆ. ಮದುವೆ ಮುಗಿಸಿ ಬರುತ್ತಿದ್ದ ದಂಪತಿ ಕೈಯಿಂದ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ. ಬೈಕ್ ಚಲಾಯಿಸುತ್ತಿದ್ದ ಪತಿ ಬೈಕ್ ಚಲಾಯಿಸಿ ಕೊಂಡು ಬರುವ ವೇಳೆ ರೋಡ್ ಹಂಪ್ ಗಮನಿಸದೆ ಬೈಕ್ ನ್ನು ಚಲಾಯಿಸಿದ್ದರಿಂದ ಪತ್ನಿ ಕೈಲಿದ್ದ 1 ವರ್ಷದ ಹೆಣ್ಣು ಮಗು ಕೆಳಗೆ ಬಿದ್ದು ಸಾವೀಗೀಡಾಗಿದೆ.
ಅತಿವೃಷ್ಟಿಯಿಂದ ಎಕರೆಗಟ್ಟಲೇ ಪರಂಗಿ ಬೆಳೆ ನಾಶ; ಕಣ್ಣೀರಲ್ಲಿ ಕೈತೊಳೆಯುತ್ತಿರುವ ಯಾದಗಿರಿಯ ರೈತ
ನಿನ್ನೆ ಸಂಜೆ ಮಂಡ್ಯದ ಬೇವಿನಹಳ್ಳಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರೊಬ್ಬರ ಮದುವೆಗೆ ಮಂಡ್ಯದ ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ ತಮ್ಮ1 ವರ್ಷದ ಹೆಣ್ಣು ಮಗುವಿನೊಂದಿಗೆ ಬೈಕ್ ನಲ್ಲಿ ತೆರಳಿದ್ದರು. ಮದುವೆ ಮುಗಿಸಿ ವಾಪಸ್ಸು ಬರುವಾಗ ರಾತ್ರಿ ಆಗಿತ್ತು, ಕಿರಗಂದೂರು ಬಳಿ ರೋಡ್ ಹಂಪ್ ಕಾಣಿಸದೆ ಪತಿ ವೇಗವಾಗ ಬೈಕ್ ಚಲಾಯಿಸಿದ್ದರಿಂದ ಪತ್ನಿ ಕೈಲಿದ್ದ ಚಿಕ್ಕ ಮಗು ಕೆಳಗೆ ಬಿದ್ದಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದ ಮಗುವನ್ನು ಪೋಷಕರು ತಕ್ಷಣವೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರಾದರೂ, ಮಗು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದೆ. ಇದ್ದ ಒಂದು ಮಗು ಕಳೆದುಕೊಂಡ ಪೋಷಕರು ಇದೀಗ ಚಿಂತಾಕ್ರಾಂತರಾಗಿದ್ದು ಕುಟುಂಬದಲ್ಲಿ ಶೋಕ ಸಾಗರ ಮನೆ ಮಾಡಿದೆ.ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ ಎರಡು ಘಟನೆಗಳ ಹಿಂದೆ ಪೋಷಕರ ನಿರ್ಲ ಕ್ಷ್ಯ ಮತ್ತು ಕೊಂಚ ಎಚ್ಚರ ತಪ್ಪಿದ ಪರಿಣಾಮ ಎರಡು ಮುದ್ದಾದ ಹಸುಳೆಗಳು ಪ್ರಾಣಬಿಟ್ಟಿವೆ. ಇನ್ನಾದ್ರು ತಂದೆ ತಾಯಿಗಳು ಹಾಗೂ ಪೋಷಕರು ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೆ ಜಾಗರೂಕತೆಯಿಂದ ನೋಡಿಕೊಳ್ಳುವ ಮೂಲಕ ತಮ್ಮ ಮನೆಯ ನಂದಾದೀಪ ನಂದಿ ಹೋಗದಂತೆ ನೋಡಿಕೊಳ್ಳಬೇಕಿದೆ.
Published by:
Latha CG
First published:
November 20, 2020, 12:04 PM IST