Bank Robbery Case: ಒಬ್ಬೊಬ್ಬರಿಗೆ ಒಂದೊಂದು ಕನಸು ಇರುತ್ತೆ. ಅದನ್ನು ಸಾಕಾರ ಮಾಡಿಕೊಳ್ಳಲು ಹಲವಾರು ರೀತಿಯಲ್ಲಿ ಯತ್ನಿಸ್ತಿರ್ತಾರೆ. ಆದರೆ ಅವರು ಹಿಡಿಯೋ ಮಾರ್ಗ ಕೆಲವೊಮ್ಮೆ ಅಪಾಯಕ್ಕೂ ಎಡೆಮಾಡಿಕೊಡುತ್ತೆ ಅನ್ನೋಕೆ ಹುಬ್ಬಳ್ಳಿಯ ಬ್ಯಾಂಕ್ ದರೋಡೆಕೋರನ (Robber) ಕಥೆ ಸಾಕ್ಷಿಯಾಗಿದೆ. ಹುಬ್ಬಳ್ಳಿಯ (Hubballi) ಕೊಪ್ಪಿಕರ ರಸ್ತೆಯಲ್ಲಿರೋ ಎಸ್.ಬಿ.ಐ. ಬ್ಯಾಂಕ್ ನಲ್ಲಿ (SBI Bank) ದರೋಡೆಗೆ (Robbery) ಯತ್ನಿಸಿ ಸಿಕ್ಕಿಬಿದ್ದ ಪ್ರವೀಣ್ ಕುಮಾರ್ ಹಿನ್ನೆಲೆ ಕೆದಕುತ್ತಾ ಹೋದ್ರೆ ಹಲವಾರು ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ.ದರೋಡೆಕೋರ ಪ್ರವೀಣ್ ಕುಮಾರ್ ಮೈಸೂರಿನ ಟಿವಿಎಸ್ ಕಂಪನಿ(TVS Company)ಯಲ್ಲಿ ಕೆಲಸ ಮಾಡುತ್ತಿದ್ದು. ಮಧ್ಯಮ ವರ್ಗ ಕುಟುಂಬಕ್ಕೆ ಸೇರಿದ್ದ ಪ್ರವೀಣ್ ಕುಮಾರ್, ಉನ್ನತ ವ್ಯಾಸಾಂಗವನ್ನೂ ಮಾಡಿದ್ದನು.
ಜನವರಿ 21 ರಂದು ಆತನ ಮದುವೆ ಹುಬ್ಬಳ್ಳಿಯಲ್ಲಿತ್ತು. ಬಟ್ಟೆ ಇತ್ಯಾದಿಗಳ ಖರೀದಿಗಾಗಿ ಮುಂಚಿತವಾಗಿಯೇ ಹುಬ್ಬಳ್ಳಿಗೆ ಬಂದಿದ್ದ. ಹುಬ್ಬಳ್ಳಿಯ ಈಶ್ವರ ನಗರದ ಯುವತಿಯೊಂದಿಗೆ ಹಸೆಮಣೆ ಏರಬೇಕಿತ್ತು. ಹುಬ್ಬಳ್ಳಿಯ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಪ್ರವೀಣ್, ಬ್ಯಾಂಕ್ ದರೋಡೆ ಮಾಡೋ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ.
ತನಗೊಂದು ವಿಗ್ ಬೇಕೆಂದೂ ತಲೆಕೆಡಿಸಿಕೊಂಡವನಲ್ಲ!
ಮೂಲತಃ ವಿಜಯಪುರದ ಪ್ರವೀಣಕುಮಾರ ಅಪ್ಪಾಸಾಹೇಬ ಪಾಟೀಲ, ಸೌಮ್ಯ ಸ್ವಭಾವದವನು ಎನ್ನಲಾಗಿದೆ. ತಾನಾಯಿತು ತನ್ನ ಕೆಲಸವಾಯಿತು ಎಂಬ ಸ್ವಭಾವದವನು. ಅಷ್ಟೇಕೆ ತನ್ನ ತಲೆಗೂದಲು ಹೋದ್ರೂ, ಅದಕ್ಕೆ ವಿಗ್ ಅಥವಾ ಚಿಕಿತ್ಸೆ ಪಡೆಯಲು ಕೂಡಾ ‘ಒಲ್ಲೆ’ ಅಂದಿದ್ದನಂತೆ. ನಾನು ಹೇಗೆ ಇದ್ದೇನೋ ಹಾಗೇ ಒಪ್ಪಿಕೊಳ್ಳುವ ಹುಡುಗಿಯನ್ನ ಮದುವೆಯಾಗುತ್ತೇನೆ ಎಂದಿದ್ದನಂತೆ. ಈತನ ವಿಚಾರ ಒಪ್ಪಿಕೊಂಡ ರೀತಿಯಲ್ಲಿ ಪ್ರವೀಣಕುಮಾರನನ್ನ ಇಷ್ಟಪಡುವ ಹುಡುಗಿಯೂ ಹುಬ್ಬಳ್ಳಿಯಲ್ಲಿ ಸಿಕ್ಕಿದ್ದಳು.
ಇದನ್ನೂ ಓದಿ: SBI Loan Offer: ರೈತರೇ ಇಲ್ಲಿ ಕೇಳಿ.. ಅತ್ಯಂತ ಕಡಿಮೆ ಬಡ್ಡಿದರಕ್ಕೆ ಲೋನ್.. ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ
ಮದುವೆಯೂ ಫಿಕ್ಸ್ ಆಗಿ, ಇನ್ನೇನು ಹಸೆಮಣೆ ಏರಬೆಕೆನ್ನುವಷ್ಟರಲ್ಲಿ ಮಾಡಿದ ಖತರ್ನಾಕ್ ಐಡಿಯಾ ಜೈಲುಪಾಲಾಗುವಂತೆ ಮಾಡಿದೆ. ಪ್ರವೀಣಕುಮಾರನಿಗೆ ಇದ್ದ ಕನಸೇ, ಅದೇ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದೆ.
ಮದ್ವೆ ಧಾಮ್ ಧೂಮ್ ಆಗಬೇಕು: ಸಾಲಗಾರನ ಪಟ್ಟದಿಂದಲೂ ಮುಕ್ತಿ ಸಿಗ್ಬೇಕು
ತಾನು ಸಾಧಾರಣ ಕುಟುಂಬದಿಂದ ಬಂದಿದ್ದರೂ ಮದುವೆಯನ್ನ ಮಾತ್ರ ಧಾಮ ಧೂಮ್ ಎಂದು ಮಾಡಿಕೋಬೇಕು ಎಂದುಕೊಂಡಿದ್ದನಂತೆ. ಮದುವೆಗೆ ಮುಂಚೆ ತಾನು ಮಾಡಿಕೊಂಡಿದ್ದ ಸಾಲದಿಂದಲೂ ಮುಕ್ತಿ ಪಡೆಯಬೇಕೆಂದುಕೊಂಡಿದ್ದ. ತಾನು ಮಾಡಿಕೊಂಡಿರುವ ಸಾಲವನ್ನು ತೀರಿಸಬೇಕು ಮತ್ತು ಮದುವೆ ಮಾಡಿಕೊಳ್ಳಬೇಕು ಉದ್ದೇಶದಿಂದ ತಾನು ಈ ಕೃತ್ಯ ಎಸಗಿದ್ದಾಗಿ ಆರೋಪಿಯು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಈತ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮದುವೆ ಆಗುವುದರೊಳಗೆ ಈ ಸಾಲ ತೀರಿಸಬೇಕು ಎನ್ನುವ ಉದ್ದೇಶದಿಂದಲೇ ಈ ದುಸ್ಸಾಹಸಕ್ಕೆ ಮುಂದಾಗಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: ಅವನ್ಯಾರೋ ಇದ್ದಾನಲ್ಲ ಕತ್ತಿ.. ಮಾಸ್ಕ್ ಹಾಕದವನು, ಮಂತ್ರಿ ಆಗೋಕೆ ಲಾಯಕ್ಕಾ..? Siddaramaiah ಕಿಡಿನುಡಿ
ಬ್ಯಾಂಕ್ ಗೆ ಸೆಕ್ಯೂರಿಟಿಯೇ ಇಲ್ಲ....
ಇನ್ನು ದರೋಡೆಗೆ ಸಾಕ್ಷಿಯಾಗಿದ್ದ ಕೊಪ್ಪಿಕರ ರಸ್ತೆಯಲ್ಲಿರೋ SBI ಬ್ಯಾಂಕ್ ಶಾಖೆಗೆ ಸೆಕ್ಯುರಿಟಿ ಇಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಕೊಪ್ಪಿಕರ ರಸ್ತೆಯಲ್ಲಿ, ಜನನಿಬಿಡ ಪ್ರದೇಶದಲ್ಲಿರೋ ಎಸ್ಬಿಐ ಶಾಖೆಗೆ ಸೆಕ್ಯುರಿಟಿಯೇ ಇಲ್ಲ ಅನ್ನೋದು ಅಚ್ಚರಿಯಾದ್ರೂ ಸತ್ಯ.
ವ್ಯಾಪಾರಸ್ಥರು, ಉದ್ಯಮಿಗಳು, ಸಾರ್ವಜನಿಕರು ಇಲ್ಲಿ ವ್ಯವಹಾರ ನಡೆಸುತ್ತಾರೆ. ಮೊದಲೇ ಜನಸಂದಣಿ ಪ್ರದೇಶ. ಹೀಗಿದ್ದರೂ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದು ದರೋಡೆಕೋರ ಕೃತ್ಯವನ್ನು ಸಲೀಸಾಗಿ ನಡೆಸಲು ಸಾಧ್ಯವಾಗಿದೆ. ಅದೃಷ್ಟವಶಾತ್ ಸಾರ್ವಜನಿಕರ ಸಹಕಾರದಿಂದ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ಭದ್ರತಾ ಸಿಬ್ಬಂದಿ ಇದ್ದಿದ್ದರೆ ಇಂತಹ ಕೃತ್ಯ ನಡೆಯಲು ಆಸ್ಪದವೇ ಇರುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಡ್ತಾರೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿಕೊಂಡಿಲ್ಲದೇ ಇರುವುದು, ಅದಕ್ಕಿರುವ ಕಾರಣಗಳ ಕಲೆ ಮಾಹಿತಿ ಕಲೆಹಾಕೋದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಏನೇನೋ ಲೆಕ್ಕಾಚಾರ ಮಾಡಿ, ಅಪರಾಧ ಕೃತ್ಯದಲ್ಲಿ ಭಾಗಿಯಾದ ಮಧುಮಗ ಈಗ ಜೈಲಲ್ಲಿ ಮುದ್ದೆ ಮುರೀತಿದಾನೆ...
ಮಗಳಿಂದಲೇ ಮನೆಯಲ್ಲಿ ಕಳ್ಳತನ ಆರೋಪ
ಪ್ರಿಯಕರನ ಮಾತು ನಂಬಿ ಮನೆಯಲ್ಲಿ ಮಗಳಿಂದಲೇ ಕಳ್ಳತನ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ. ತನ್ನ ಮಗಳು 2 ಲಕ್ಷ ರೂಪಾಯಿ ನಗದು ಹಾಗೂ 30 ಗ್ರಾಮ್ ಚಿನ್ನಾಭರಣ ಕಳುವು ಮಾಡಿದ್ದಾಳೆ ಎಂದು ಧಾರವಾಡದ ಲಕ್ಷ್ಮಿ ಸಿಂಗನಕೇರಿಯ ಮಂಜುಳಾ ಆರೋಪಿಸಿದ್ದಾಳೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮಂಜುಳಾ, ತನ್ನ ಮಗಳು ರೇಷ್ಮಾಳನ್ನು ಕಿರಣ್ ಭೋಪಾಲ ಗೋಸಾಯಿ ಎಂಬಾತ ಪುಸಲಾಯಿಸಿ ಮದುವೆಯಾಗಿದ್ದಾನೆ. ಆದರೆ ಈಗಾಗಲೇ ಕಿರಣ್ ಗೆ ಮೂರು ಮದುವೆಗಳಾಗಿವೆ. ಇಷ್ಟಾದರೂ ತನ್ನ ಮಗಳನ್ನು ಬಲೆಗೆ ಬೀಳಿಸಿಕೊಂಡು ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಮನೆ ಬಿಟ್ಟು ಹೋಗುವಾಗ ಮಗಳು ನಗದು ಹಾಗೂ ಚಿನ್ನಾಭರಣ ಕದ್ದು ಒಯ್ದಿದ್ದಾಳೆ.
ಪೊಲೀಸರ ವಿರುದ್ಧವೇ ತಾಯಿಯ ಆರೋಪ
ತನ್ನ ಹೃದಯ ಚಿಕಿತ್ಸೆಗೆಂದು ಹಣ ತಂದು ಮನೆಯಲ್ಲಿಡಲಾಗಿತ್ತು. ಅದನ್ನೇ ಕದ್ದೊಯ್ದಿದ್ದು, ವಾಪಸ್ ಕೊಡ್ತಿಲ್ಲ. ಕಿರಣ್ ನನ್ನ ಮಗಳನ್ನು ವಂಚಿಸಿ ಮದುವೆಯಾಗಿದ್ದಾನೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ದೂರು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾಳೆ.
ವಾರಗಟ್ಟಲೆ ಅಲೆದಾಡಿದರೂ ದೂರು ದಾಖಲಿಸಿಕೊಂಡಿಲ್ಲ ಎಂದು ಯುವತಿಯ ಪೋಷಕರು ಕಿಡಿ ಕಾರಿದ್ದಾರೆ. ಕೆಲ ಠಾಣೆಗಳ ಪೊಲೀಸರು ರಾಜಕೀಯ ಕುಮ್ಮಕ್ಕಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದೂರು ದಾಖಲಿಸಿಕೊಳ್ಳದ ವಿದ್ಯಾಗಿರಿ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ