ಜಗದೀಶ್ ಶೆಟ್ಟರ್ ಸಿಎಂ ಮಾಡಲು ಬಿಜೆಪಿಯ ಒಂದು ಬಣ ಯತ್ನ: ಸತೀಶ್ ಜಾರಕಿಹೊಳಿ ಬಾಂಬ್

ಕಾಂಗ್ರೆಸ್​ನಿಂದ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋಗಿರೋ ಶಾಸಕರು ಜಗದೀಶ ಶೆಟ್ಟರ್ ಪರ ಲಾಬಿ ಮಾಡಲು ಆರಂಭಿಸಿದ್ದಾರೆ. ಜಗದೀಶ ಶೆಟ್ಟರ್ ಸಿಎಂ ಆದ್ರೆ ಹೆಚ್ಚು ಲಾಭವಾಗುವ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಬೆಳಗಾವಿ(ಮೇ 30): ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬಂಡಾಯ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿರೋ ಬಣದಿಂದಲೇ ಜಗದೀಶ ಶೆಟ್ಟರ್ ಅವರನ್ನು ಸಿಎಂ ಮಾಡಲು ಯತ್ನ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಇರೋದು ಬಹಿರಂಗವಾಗುತ್ತಿದೆ.

ಬೆಳಗಾವಿಯಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ, ಸರ್ಕಾರದಲ್ಲಿ ವಲಸಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿ ಶಾಸಕರು ಅಸಮಾಧನಗೊಂಡಿದ್ದಾರೆ. ಇದು ಬಿಜೆಪಿ ಆಂತರಿಕ ವಿಚಾರವಾಗಿದ್ದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಕಾದು ನೋಡಬೇಕು ಎಂದರು.

ಕಾಂಗ್ರೆಸ್​ನಿಂದ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋಗಿರೋ ಶಾಸಕರು ಜಗದೀಶ ಶೆಟ್ಟರ್ ಪರ ಲಾಬಿ ಮಾಡಲು ಆರಂಭಿಸಿದ್ದಾರೆ. ಜಗದೀಶ ಶೆಟ್ಟರ್ ಸಿಎಂ ಆದ್ರೆ ಹೆಚ್ಚು ಲಾಭವಾಗುವ ನಿರೀಕ್ಷೆಯಲ್ಲಿ ಇದ್ದಾರೆ. ಬಿಜೆಪಿಗೆ ಹೋಗಿರುವ ಎಲ್ಲರೂ ಸ್ವಂತ ಲಾಭಕ್ಕಾಗಿ ಹೋಗಿದ್ದಾರೆ. ಯಾವುದೇ ಪಕ್ಷದ ಸಂಘಟನೆ, ರಾಜ್ಯ ಅಭಿವೃದ್ಧಿ ಅವರಿಗೆ ಮುಖ್ಯವಾಗಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದರು.

ಇದನ್ನೂ ಓದಿ: ಬಿಜೆಪಿಯೊಳಗಿನ ಹೊಸ ಬಂಡಾಯ ಪರ್ವದ ಮಾಸ್ಟರ್​ಮೈಂಡ್ ಮಾಜಿ ಸಿಎಂ?

ಸಚಿವ ರಮೇಶ್ ಜಾರಕಿಹೊಳಿ ಇನ್ನೂ 5 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಕಾಂಗ್ರೆಸ್​ನಿಂದ ಯಾರೊಬ್ಬರೂ ಬಿಜೆಪಿಗೆ ಹೋಗಲ್ಲ. ಈಗ ಎಲ್ಲ ಸಚಿವ ಸ್ಥಾನಗಳು ಭರ್ತಿಯಾಗಿದ್ದು, ಬಂದವರಿಗೆ ಏನ್ ಕೊಡ್ತಾರೆ? ಕೇವಲ ಶಾಸಕರಾಗಿ ಉಳಿಯೋಕೆ ಬಿಜೆಪಿಗೆ ಏಕೆ ಹೋಗಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು, ಕಾಂಗ್ರೆಸ್​ನಿಂದ ಯಾವುದೇ ಆಪರೇಷನ್ ನಡೆಸಲ್ಲ. ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡುವಷ್ಟು ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಬಳಿ ಇಲ್ಲ ಎಂದು ಯಮಕನಮರಡಿ ಶಾಸಕರು ವ್ಯಂಗ್ಯ ಮಾಡಿದರು.

ಬಿಜೆಪಿ ಬಂಡಾಯ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ಕುಸ್ತಿ ಬಂಡಾಯಗಾರರ ಧೈರ್ಯದ ಮೇಲೆ ನಿರ್ಧಾರವಾಗಲಿದೆ. ಸದ್ಯ ಕುಸ್ತಿ ಆರಂಭವಾಗಿದ್ದು, ಕೇವಲ ಸೆಡ್ಡು ಹೊಡೆದು ಅಖಾಡದ ಹೊರಗೆ ನಿಂತರೆ ಪ್ರಯೋಜನವಿಲ್ಲ. ಅಖಾಡ ಪ್ರವೇಶ ಮಾಡದೇ ಬಾಳೆಹಣ್ಣು ತಂದರೆ ಏನೂ ಆಗೊಲ್ಲ. ಕೆಂಪು ಧ್ವಜ ತೋರಿಸಿ ತೊಡೆ ತಟ್ಟಿದ್ರೆ ಮಾತ್ರ ನಿಜವಾದ ಕುಸ್ತಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕೊರೋನಾ ಎಫೆಕ್ಟ್​: ಮೂರು ತಿಂಗಳಾದರೂ ಬಾದಾಮಿಗೆ ಭೇಟಿ ನೀಡದ ಸಿದ್ದರಾಮಯ್ಯಗೆ ಕಾದು ಕುಳಿತ ಜನ

ಬಿಜೆಪಿ ಪಕ್ಷದಲ್ಲಿ ಒಟ್ಟು ಮೂರು ಬಣಗಳು ಇವೆ. ಕಾಂಗ್ರೆಸ್​​ನಿಂದ ಬಿಜೆಪಿಗೆ ಹೋಗಿರುವವ ಒಂದು ಗುಂಪು. ಸಂಘ ಪರಿವಾರದಿಂದ ಬಂದಿರುವ ಬಿಜೆಪಿ ಶಾಸಕರದ್ದು ಮತ್ತೊಂದು ಗುಂಪು, ಹಾಗೂ ಜನತಾ ಪರಿವಾರದಿಂದ ಬಿಜೆಪಿಗೆ ಹೋಗಿರುವ ಶಾಸಕರ ಇನ್ನೊಂದು ಗುಂಪು ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ವರದಿ: ಚಂದ್ರಕಾಂತ ಸುಗಂಧಿ

First published: