ಸೆ. 14ರಂದು ಗೋವಾಕ್ಕೆ ಬಿಎಸ್​ವೈ ಭೇಟಿ; ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಹೊಸ ಭರವಸೆ

ಮಹದಾಯಿ ಸಮಸ್ಯೆ ಮೂರು ರಾಜ್ಯಗಳ ಸಮಸ್ಯೆಯಾಗಿದ್ದು,  ಆದಷ್ಟು ಶೀಘ್ರವಾಗಿ ಇತ್ಯರ್ಥ ಮಾಡಲಾಗುವುದು ಎಂಬ ಭರವಸೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ನಿನ್ನೆಯಷ್ಟೇ ಬೆಳಗಾವಿಯಲ್ಲಿ ನೀಡಿದ್ದರು.

Seema.R | news18-kannada
Updated:September 11, 2019, 11:28 AM IST
ಸೆ. 14ರಂದು ಗೋವಾಕ್ಕೆ ಬಿಎಸ್​ವೈ ಭೇಟಿ; ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಹೊಸ ಭರವಸೆ
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಸೆ.11): ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹದಾಯಿ ನದಿ ನೀರು ಹಂಚಿಕೆ ಕುರಿತು ಚರ್ಚೆ ನಡೆಸಲು ಸಿಎಂ ಬಿಎಸ್​ ಯಡಿಯೂರಪ್ಪ ಮುಂದಾಗಿದ್ದಾರೆ. ಇದೇ ಸೆ. 14ರಂದು ಗೋವಾಗೆ ತೆರಳಲಿರುವ ಅವರು ಅಲ್ಲಿನ ಸಿಎಂ ಪ್ರಮೋದ್​ ಸಾವಂತ್​ ಜೊತೆ ಪ್ರಕರಣ ಕುರಿತು ಚರ್ಚೆ ನಡೆಸಲಿದ್ದು ಸಮಸ್ಯೆ ಇತ್ಯರ್ಥ ಪಡಿಸುವ ಹೊಸ ಭರವಸೆ ಮೂಡಿದೆ.

ಮಹದಾಯಿ ಸಮಸ್ಯೆ ಕುರಿತು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಜೊತೆ ಸಿಎಂ ಬಿಎಸ್​ ಯಡಿಯೂರಪ್ಪ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮುಂಬೈಗೆ ಭೇಟಿ ನೀಡಿದ್ದ ಅವರು, ಈ ವಿಚಾರ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು.  ಈಗ ಗೋವಾ ಮುಖ್ಯಮಂತ್ರಿ ಜೊತೆ ಕೂಡ ಈ ವಿಚಾರ ಕುರಿತು ಚರ್ಚಿಸಲು ದಿನಾಂಕ ನಿಗದಿ ಮಾಡಿದ್ದಾರೆ.

ಮಹದಾಯಿ ಯೋಜನೆ ನಕ್ಷೆ


ಮಹದಾಯಿ ಸಮಸ್ಯೆ ಮೂರು ರಾಜ್ಯಗಳ ಸಮಸ್ಯೆಯಾಗಿದ್ದು,  ಆದಷ್ಟು ಶೀಘ್ರವಾಗಿ ಇತ್ಯರ್ಥ ಮಾಡಲಾಗುವುದು ಎಂಬ ಭರವಸೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ನಿನ್ನೆಯಷ್ಟೇ ಬೆಳಗಾವಿಯಲ್ಲಿ ನೀಡಿದ್ದರು.

ಇದು ಮೂರು ರಾಜ್ಯಗಳ ಸಮಸ್ಯೆ ಆಗಿರುವುದರಿಂದ ಪ್ರಕರಣದ ಇತ್ಯರ್ಥಕ್ಕೆ ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ಇದು ವಿಳಂಬವಾಗುತ್ತಿದೆ. ಆದರೆ ಸಮಸ್ಯೆ ಬಗೆಹರಿಸಲು ನಾವು ಪ್ರಮಾಣಿಕ ಹೋರಾಟ ಮಾಡುತ್ತೇವೆ ಎಂದಿದ್ದರು.ಈಗ ಪಣಜಿಯಲ್ಲಿ ಗೋವಾ ಸಿಎಂ ಮಾತುಕತೆ ಬಳಿಕ ಮತ್ತೊಮ್ಮೆ ಇಬ್ಬರು ಸಿಎಂಗಳ ಜೊತೆಯೂ ಚರ್ಚಿಸಿ ಈ ವಿವಾದದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ  ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಕೆಲವು ಭಾಗಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಮಹದಾಯಿ ಯೋಜನೆ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರನ್ನು ಈ ಯೋಜನೆಗೆ  ಬಳಸಿಕೊಳ್ಳಲಾಗುವುದು. ಮಹದಾಯಿ ನದಿಯಿಂದ ಖಾನಾಪುರ ಸಮೀಪ ಇರುವ ಕಳಸಾ ಮತ್ತು ಬಂಡೂರಿ ನಾಲಾ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ನದಿ ಮೂಲಕ್ಕೆ ಯಾವ ಧಕ್ಕೆಯಾಗುವುದಿಲ್ಲ. ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂಬುದು ಕರ್ನಾಟಕ ಸರ್ಕಾರದ ವಾದ.

ಆದರೆ, ನದಿ ನೀರು ತಿರುವು ಮಾಡಿದರೆ ಪಶ್ಚಿಮಘಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಾದವಾಗಿದೆ.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ