ಗದಗ: “ಮನೆ (Home) ಬಿದ್ದು ವರ್ಷಗಳೇ ಕಳೆದಿವೆ ಶೌಚಾಲಯದಲ್ಲೇ (Toilet) ಅಡುಗೆ (Food) ಮಾಡ್ಕೊಳ್ತಿದ್ದೀನಿ. ಮನೆ ಕಟ್ಟಿಸಿ ಕೊಡ್ರಿ ಅಂತಾ ಎಲ್ರಿಗೂ ಹೇಳಿದ್ದಾಯ್ತು. ಒಬ್ರೂ ನನ್ನ ಕಷ್ಟ ಕೇಳುವಲ್ರು ರೀ. ಸ್ವಂತಕ್ಕೊಂದು ಮನೆ ಇಲ್ಲದ್ದಕ್ಕೆ ಮಂದಿ (People) ಮನ್ಯಾಗ ಮಲ್ಕೊಳ್ತಿದ್ದೀನಿ. ಅವ್ರು ಒಳಗೆ ಕರ್ಕೊಳ್ಳಲಿಲ್ಲಂದ್ರೆ ದೇವಸ್ಥಾನದಾಗ (Temple) ರಾತ್ರಿ (Night) ಕಳೀತಿದ್ದೀನ್ರಿ. ನನ್ಗೂ ಒಬ್ಬ ಗಂಡು ಮಗ (Son) ಇದ್ದಿದ್ರೆ. ನನ್ನ ಪರಿಸ್ಥಿತಿ ಹಿಂಗ್ಯಾಕೆ ಆಗುತ್ತಿತ್ತು. ನಾನು ಮಂದಿ ಹಂಗ ಸುಖದಿಂದ ಇರ್ತಿದ್ದೆ” ಹೀಗಂತ ನ್ಯೂಸ್ 18 ಕನ್ನಡದ ಮುಂದೇ ಹನುಮವ್ವ ಎಂಬ ವೃದ್ದೆ (Old Women) ತನ್ನ ಅಳಲು ತೋಡಿಕೊಂಡಿದ್ದಾಳೆ. ಹೌದು ಗದಗ (Gadag) ತಾಲ್ಲೂಕು ತಿಮ್ಮಾಪರ ಗ್ರಾಮದ ವೃದ್ಧೆಯ ಗೋಳಾಟ ಕಥೆ ಇದು.
3 ವರ್ಷದ ಹಿಂದೆಯೇ ಮುರಿದು ಬಿದ್ದ ಮನೆ
ತಿಮ್ಮಾಪುರ ಗ್ರಾಮದ ಸುಮಾರು 65 ವಯಸ್ಸಿನ ಹನುಮವ್ವ ಯಲ್ಲಪ್ಪ ಗದಗ ಎಂಬ ವೃದ್ಧೆಯ ಕಣ್ಣೀರ ಕಥೆಯಿದು. ಕಳೆದ 3 ವರ್ಷಗಳ ಹಿಂದೆಯೇ ವೃದ್ಧೆಗಿದ್ದ ಸೂರೊಂದು ಬಿದ್ದಿದೆ. ಇದರಿಂದ ವೃದ್ಧೆ ಬೀದಿಯಲ್ಲಿಯೇ ಆಶ್ರಯ ಪಡೆಯುವಂತಾಗಿದೆ.
ಗ್ರಾಮ ಪಂಚಾಯ್ತಿ ಇಂದ ಸಿಗದ ಸಹಾಯ
ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕಾದ, ಸ್ಥಳೀಯ ಜನರ ಸಮಸ್ಯೆ ಬಗೆಹರಿಸಬೇಕಾದ ಗ್ರಾಮ ಪಂಚಾಯತಿ ಅಜ್ಜಿ ಆಶ್ರಯ ಪಡೆದಿರುವ ಶೌಚಾಲಯದಿಂದ ಕೂಗಳತೆ ದೂರದಲ್ಲಿಯೇ ಇದೆ. ಆದರೆ, ಅಜ್ಜಿಯ ಕಷ್ಟಕ್ಕಾಗಬೇಕಿರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಿವಿಯೂ ಕೇಳ್ತಿಲ್ಲ. ಕಣ್ಣು ಕಾಣಿಸ್ತಿಲ್ಲ.
ಇದನ್ನೂ ಓದಿ: Elephant: ಹಾಸನದಲ್ಲಿ ಹೆಚ್ಚಾಯ್ತು ಕಾಡುಪ್ರಾಣಿ-ಮಾನವರ ಸಂಘರ್ಷ, ಆಹಾರ ಅರಸಿ ಬಂದಿದ್ದ ಕಾಡಾನೆ ಹತ್ಯೆ!
ಕಷ್ಟದಲ್ಲೇ ದಿನ ದೂಡುತ್ತಿರುವ ವೃದ್ದೆ
ಪಾಲಿಗೆ ಬಂದಿದ್ದು ಪಂಚಾಮೃತ ಅಂತಾ ಜೀವನ್ದಾಗ ಬಂದಿದ್ದನ್ನು ಅನುಭವಿಸ್ತಿದ್ದೇನೆ. ಕಷ್ಟ ಇದೆ ಅಂತಾ ಸಾಯೋಕೆ ವರಸಿಗೊಳ್ಳೋಕೆ ಇರುವೆಯಲ್ಲ, ತಗಣಿಯಲ್ಲ. ಸರ್ಕಾರದಿಂದ ತಿಂಗ್ಳಾ ಬರುವ 800 ರೂ. ರೊಕ್ಕದಾಗ ಜೀವನ ನಡೆಸ್ತಿದ್ದೀನಿ. ಇದ್ರೆ ತಿಂತೀನಿ, ಇರದಿದ್ದರೆ ಉಪವಾಸ ಮಲಗ್ತೀನಿ. ಗಂಡು ಮಕ್ಳು ಇದ್ದಿದ್ರೆ ನಾನು ಚಂದಾಗಿರ್ತಿದ್ದೆ. ಅವ್ರು ಬೈದ್ರು, ಮನೆಯಿಂದ ಹೊರಗೆ ಹಾಕಿದ್ರು, ನನಗೆ ಇಂತಹ ದುಸ್ಥಿತಿ ಬರ್ತಿರಲಿಲ್ಲ.
ಗೋಳು ತೋಡಿಕೊಂಡ ಅಜ್ಜಿ
ಮಂದಿಗೆ ಹೊರೆಯಾಗಬಾರದು ಅಂತಾ ಇಲ್ಲೇ ಇರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮಲ್ಕೊಳ್ತೀನಿ. ಮನೆ ಬಿದ್ದು ಮೂರು ವರ್ಷ ಕ್ಕೂ ಹೆಚ್ಚಾಗಿದೆ. ಮನೆ ಬಿದ್ದಿದ್ದಕ್ಕೂ ಪಂಚಾಯತಿಯವ್ರು ಪರಿಹಾರ ಕೊಟ್ಟಿಲ್ಲ. ಇಷ್ಟೊರ್ಷ ಆದ್ರೂ ಮನೆ ಹಾಕಿಲ್ಲ. ಬಿಸಲಾಗ, ಮಳ್ಯಾಗ, ಚಳ್ಯಾಗ ಕುಂದ್ರಾಕ ನೆರಳು ಮಾಡಿಕೊಡ್ರಿ ಅಂತಾ ಕೇಳಿದ್ರು ಯಾರು ದರ್ಕಾರ ಮಾಡುವಲ್ರು ಎಂದು ವೃದ್ಧೆ ತನ್ನೊಡಲೊಳಗಿನ ನೋವು ತೆರೆದಿಟ್ಟಳು.
ಹೆಣ್ಣು ಮಕ್ಕಳಿದ್ದರೂ ಕೇಳುತ್ತಿಲ್ಲ ಕಷ್ಟ
ವೃದ್ಧೆ ಹನಮವ್ವನಿಗೆ ಮೂವರು ಹೆಣ್ಮಕ್ಳು ಇದ್ದು, ತನ್ನ ಮೂರು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾಳೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ಅಜ್ಜಿಯ ಕಷ್ಟಕ್ಕೆ ಆಗ್ತಿಲ್ವಂತೆ. ಆದ್ರೆ, ಹನಮವ್ವನ ಪತಿ ಮೂವತ್ತು ವರ್ಷದ ಹಿಂದೆಯೇ ತೀರಿ ಹೋದರು ಎದೆಗುಂದ ಹನುಮಮ್ಮ ತಾನೊಬ್ಬಳೇ ಹೆಣ್ಮುಕ್ಕಳ ಮದುವೆ ಮಾಡಿ ತೋರಿಸಿದ ಗಟ್ಟಿಗಿತ್ತಿ. ಆದ್ರೆ, ಸದ್ಯದ ಕಷ್ಟ ವೃದ್ಧೆಯನ್ನು ಜರ್ಝರಿತಗೊಳಿಸಿದೆ.
ಟಾಯ್ಲೆಟ್‌ನಲ್ಲೇ ಊಟ, ಅದೇ ಆಸರೆ
ಟಾಯ್ಲೆಟ್ನಲ್ಲಿದ್ದ ಕಮೋಡ್ ತೆಗೆದಿಟ್ಟು ಅಲ್ಲಿಯೇ ಅಡುಗೆ ಮಾಡ್ಕೊಂಡು ಊಟ ಮಾಡ್ತಿದ್ದಾಳೆ. ಅಡುಗೆಗೆ ಬೇಕಾದ ಆಹಾರ ಪದಾರ್ಥಗಳನ್ನೂ ಟಾಯ್ಲೆಟ್ ನಲ್ಲಿಟ್ಟಿದ್ದಾಳೆ. ಮನೆ ಇಲ್ಲದ ಮುಪ್ಪಾನು ಮುದುಕಿಗೆ ಸದ್ಯ ಸ್ವಚ್ಚ ಭಾರತ ಯೋಜನೆಯಡಿ ಗ್ರಾಮ ಪಂಚಾಯತಿಯವರು ಕಟ್ಟಿಸಿಕೊಟ್ಟಿರುವ ಚಿಕ್ಕ ಟಾಯ್ಲೆಟ್ ಆಶ್ರಯ ತಾಣವಾಗಿದೆ. ಅಜ್ಜಿಯ ಈ ಕರುಣಾಜನಕ ಕಥೆ ದೃಶ್ಯ ಕಂಡ ಎಂತಹ ಕಲ್ಲು ಹೃದಯ ಸಹಿತ ಕರಗದಿರದು.
ಇದನ್ನೂ ಓದಿ: Akrama-Sakrama: ಮತ್ತೆ ಶುರುವಾಗಿದೆ ಅರಣ್ಯ ಅತಿಕ್ರಮಣದಾರರಿಗೆ ಆತಂಕ, ಅಕ್ರಮ-ಸಕ್ರಮಕ್ಕಾಗಿ ನಡೆಯುತ್ತಿದೆ ಹೋರಾಟ
ಮನೆ ಹಾಕಿಸಿ ಕೊಡಾಕ ಬ್ಯಾಂಕ್ ಪಾಸ್ ಬುಕ್, ಓಟರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಬೇಕಂದ್ರು. ಅದೆಲ್ಲವನ್ನೂ ಮಾಡ್ಸೀನ್ರಿ. ನಮ್ಮೂರಾಗಿನ ಮೇಂಬರ್ ಗೂ ಇವನ್ನೆಲ್ಲಾ ಕೊಟ್ಟೀನ್ರಿ. ಲಗೂನ ಒಂದು ಮನೆ ಹಾಕಿಸಿ ಪುಣ್ಯ ಕಟ್ಕೊಳ್ರಿ ಅಂತಾ ಹೇಳಿದ್ರು, ಯಾರು ತಲೆಕೆಡಸಿಕೊಳ್ತಿಲ್ರಿ. ಏನ್ ಮಾಡೋದ್ರಿ ಶಿವ ಅಂತಾ ಜೀವನ ಸಾಗಿಸ್ತಿದ್ದೀನಿ ಅಂತಾರೆ ಈ ಅಜ್ಜಿ. ಈಕೆ ಕಷ್ಟವನ್ನು ಸಂಬಂಧ ಪಟ್ಟ ಅಧಿಕಾರಿಗಳು ಪರಿಹರಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ