ಚಿತ್ರದುರ್ಗ (ಜ.10): ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಮೂರ್ನಾಲ್ಕು ದಶಕಗಳ ಹಳೆಯ ಶಾಲಾ ಕಟ್ಟಡಗಳ ಪರಿಸ್ಥಿತಿ ಮಾತ್ರ ಸರ್ಕಾರಕ್ಕೆ ಕಾಣುತ್ತಿಲ್ಲ. ಈಗಲೋ ಆಗಲೋ ಬೀಳುವಂತಹ ಚಿತ್ರದುರ್ಗ ಜಿಲ್ಲೆಯ ಈ ಶಾಲಾ ಕಟ್ಟಡದಲ್ಲಿ ಪ್ರಾಣ ಭಯದಿಂದಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಅಲ್ಲದೆ ಕಟ್ಟಡ ಬಿದ್ದು ಮಕ್ಕಳ ಪ್ರಾಣವೇ ಹೋದೀತು ಅಂತ ಶಿಕ್ಷಕರು ಶಾಲೆಯ ಹೊರಗಡೆಯೇ ಪಾಠ ಕಲಿಸುತ್ತಿದ್ದಾರೆ.
ಇದು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ, ಚನ್ನಪ್ಪನಹಟ್ಟಿ ಗ್ರಾಮದಲ್ಲಿನ ಸರ್ಕಾರಿ ಶಾಲೆ ಮತ್ತು ವಿಧ್ಯಾರ್ಥಿ ಗಳ ಪರಿಸ್ಥಿತಿ. ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಪ್ರಾರಂಭದ ದಿನಗಳಿಂದ ಉತ್ತಮ ದಾಖಲಾತಿ ಹೊಂದಿದ್ದ ಶಾಲೆ ಇದೀಗ ಶಿಥಿಲಾವಸ್ಥೆಯ ಕಾರಣಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಪ್ರತಿ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಕಳೆದ ಹದಿನೈದು ವರ್ಷಗಳಿಂದ ಶಾಲೆಯ ಕಟ್ಟಡ ವರ್ಷದಿಂದ ವರ್ಷಕ್ಕೆ ಮಳೆಗೆ ನೆಂದಿದ್ದು, ಬಿರು ಬಿಸುಲಿಗೆ ಒಣಗಿ ಶಿಥಿಲಗೊಳ್ಳುತ್ತಿದೆ.
ಇದರಿಂದ ಶಾಲೆಯಲ್ಲಿ ಕುಳಿತು ಪಾಠ ಕೇಳುತ್ತಿರುವಾಗ ಮಕ್ಕಳಿಗೆ ಯಾವಾಗ ಬೇಕಾದರೂ ಅನಾಹುತ ಆಗಬಹುದು ಎಂಬ ಆತಂಕ ಪೋಷಕರಲ್ಲಿ ಶುರುವಾಗಿದೆ. ಅಲ್ಲದೆ ಅಷ್ಟೆ ಭಯದಿಂದಲೇ ಇಲ್ಲಿನ ಶಾಲಾ ಶಿಕ್ಷಕರು ಶಾಲೆಯ ಹೊರಗಡೆಯೇ ಪಾಠ ಹೇಳಿ ಕೊಡುತ್ತಿದ್ದಾರೆ. ಶಾಲೆಯನ್ನ ಪರಿಶೀಲಿಸಲು ಬರುವ ಶಿಕ್ಷಣ ಇಲಾಖೆ ಅಧಿಕಾರಿಗಳು ನೆಪಕ್ಕೆ ಮಾತ್ರ ಶಾಲೆಯ ಅಭಿವೃದ್ದಿ ಪಡಿಸುವುದಾಗಿ ಹೇಳುತ್ತಾರೆ. ಹೀಗೆ ಭರವಸೆ ಕೊಟ್ಟು ಹೋಗುವ ಅಧಿಕಾರಿಗಳು ಮತ್ತೆ ಇತ್ತ ತಿರುಗಿಯೂ ಕೂಡಾ ನೋಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಪ್ರತಿ ದಿನ ಗ್ರಾಮದಲ್ಲಿನ ಶಾಲೆಯ ಶಿಥಿಲಾವಸ್ಥೆ, ಹಾಗೂ ಮಕ್ಕಳು ಮತ್ತು ಶಿಕ್ಷಕರ ಅವಸ್ಥೆ ಕಂಡ ಗ್ರಾಮಸ್ಥರು ಎಸ್ಡಿಎಂಸಿ ಸದಸ್ಯರು ಕೂಡಲೇ ಶಾಲೆಗೆ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಿ ಕೊಡುವಂತೆ ಹಲವು ಬಾರಿ ಶಿಕ್ಷಣ ಇಲಾಖೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹಾಗೂ ಜಿಲ್ಲಾ ಉಪ ನಿರ್ದೇಶಕರನ್ನೂ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಈ ಹೊಳಲ್ಕೆರೆ ವಿಧಾನಾಸಭಾ ಕ್ಷೇತ್ರದ ಶಾಲೆಯ ಪರಿಸ್ಥಿತಿ ಬಗ್ಗೆ ಈ ಭಾಗದ ಶಾಸಕರಾದ ಎಂ. ಚಂದ್ರಪ್ಪನವರ ಬಳಿಯೂ ಕಟ್ಟಡ ಕಟ್ಟಿಸಿಕೊಡುವಂತೆ ಹಲವು ಭಾರಿ ಕೇಳಿಕೊಂಡಿದ್ದಾರೆ. ಆದರೆ ಇಂದು ನಾಳೆ ಕಟ್ಟಡ ಕಟ್ಟಿಸಿಕೊಡುತ್ತೇವೆ ಎಂದು ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿ ಅನುದಾನ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಕಟ್ಟಡ ನಿರ್ಮಾಣದ ಕೆಲಸ ಮಾತ್ರ ಪ್ರಾರಂಭವಾಗದೆ ಹಾಗೇ ಉಳಿದಿದೆ.
ಇದನ್ನೂ ಓದಿ : ಫೇಸ್ಬುಕ್ನಲ್ಲಿ ನಕಲಿ ಸುಂದರಿಯ ಪ್ರೇಮಪಾಶಕ್ಕೆ ಬಿದ್ದು15 ಲಕ್ಷ ಕಳೆದುಕೊಂಡ ಹುಬ್ಬಳ್ಳಿ ಯುವಕ
ಕಟ್ಟಡ ನಿರ್ಮಾಣದ ಬಗ್ಗೆ ಸಬೂಬು ಹೇಳಿರುವ ಅಧಿಕಾರಿಗಳು ಮಾತ್ರ ಮತ್ತೆ ಇತ್ತ ಗಮನ ಹರಿಸಿಲ್ಲ. ಇವರ ಈ ನಿರ್ಲಕ್ಷಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಾರೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಕಂಡ ಯಾರೂ ಮಕ್ಕಳನ್ನು ಈ ಶಾಲೆಗಗಳಿಗೆ ಸೇರಿಸದಂತಾಗಿದ್ದಾರೆ. ಬೆಳಗಾದರೆ ಶಾಲೆಗಳ ಅಭಿವೃದ್ದಿ ಮಂತ್ರ ಜಪಿಸುವ ಸರ್ಕಾರ ಶಾಲೆಗಳ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ. ಇನ್ನಾದರೂ ಉತ್ತಮ ಗುಣಮಟ್ಟದ ಕಟ್ಟಡ ನೀಡಿ ಜೀವಭಯದಿಂದ ಶಿಕ್ಷಣ ಕಲಿಯುತ್ತಿರುವ ಮಕ್ಕಳನ್ನು ಭಯದಿಂದ ಮುಕ್ತರಾಗಿಸಬೇಕಿದೆ.
(ವರದಿ : ವಿನಾಯಕ ತೊಡರನಾಳ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ