ನ್ಯೂಸ್ 18 ವರದಿ ಫಲಶ್ರುತಿ | ಅಕ್ರಮ ಮರಳು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ, ವರದಿ ಕೇಳಿದ ಸಚಿವ

ಅಕ್ರಮ ಮರುಳುಗಾರಿಕೆ ಹೇಗೆಲ್ಲಾ ನಡೆಯುತ್ತಿದೆ ಎಂದು ನ್ಯೂಸ್ 18 ಕನ್ನಡ ವರದಿ ಪ್ರಕಟಿಸಿ, ಘಟನೆ ಮೇಲೆ ಬೆಳಕು ಚೆಲ್ಲಿತ್ತು. ನ್ಯೂಸ್ 18 ಕನ್ನಡ ವರದಿ ಆಧರಿಸಿ ಬಾಗಲಕೋಟೆ ಡಿವೈಎಸ್ಪಿ ಚಂದ್ರಕಾಂತ್ ನಂದರಡ್ಡಿ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲೆಯ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಯಿಸಿ ಪರಿಶೀಲಿಸಿದರು.

ಮರುಳು ಅಡ್ಡೆಯ ಮೇಲೆ ಅಧಿಕಾರಿಗಳ ದಾಳಿ.

ಮರುಳು ಅಡ್ಡೆಯ ಮೇಲೆ ಅಧಿಕಾರಿಗಳ ದಾಳಿ.

  • Share this:
ಬಾಗಲಕೋಟೆ(ಮೇ 18): ಬಾಗಲಕೋಟೆ- ಗದಗ ಜಿಲ್ಲೆಯ ಮಲಪ್ರಭಾ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ನ್ಯೂಸ್ 18 ಕನ್ನಡ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಅವರು ಅಕ್ರಮ ಮರಳುಗಾರಿಗೆ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಇಲಾಖೆ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ, ಹಲವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಅಕ್ರಮಮರಳು ಗಣಿಗಾರಿಕೆ ಹಾಟ್ ಸ್ಪಾಟ್ ಪ್ರದೇಶದಲ್ಲಿ ಅಧಿಕಾರಿಗಳು ದಿನವೀಡಿ ಪರಿಶೀಲಿಸಿ ಅಕ್ರಮವೆಸಗಿದ ಇಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಸಚಿವರಿಗೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.

ಬಾಗಲಕೋಟೆ- ಗದಗ ಅವಳಿ ಜಿಲ್ಲೆಯ ಅಧಿಕಾರಿಗಳು ಮಲಪ್ರಭಾ ನದಿ ತೀರದಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಕ್ಷೇತ್ರದಲ್ಲೇ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದ ಬಳಿಯ ಸರ್ವೇ ನಂಬರ್ 80ರಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ನರಗುಂದ ತಾಲೂಕಿನ ಕಲ್ಲಾಪೂರ ಗ್ರಾಮದಲ್ಲಿ ಅನುಮತಿ ಪಡೆದಿದ್ದ ಆನಂದ್ ಬಾಬಾ ಜನಾದ್ರಿ ಅನಧಿಕೃತವಾಗಿ ಮರಳು ತೆಗೆದು ಮಾರಾಟ ಮಾಡುತ್ತಿರುವುದು ಪರಿಶೀಲನೆ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಬಾಗಲಕೋಟೆ -ಗದಗ ಜಿಲ್ಲೆಯ ಮಧ್ಯೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ಪ್ರದೇಶ ಹಾಗೂ ಅನುಮತಿ ಪಡೆಯದ ಪ್ರದೇಶವನ್ನು ಸರ್ವೇ ಅಧಿಕಾರಿಗಳು ಅಳತೆ ಮಾಡಿದಾಗ ಅನುಮತಿ ಪಡೆಯದ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುವುದು ದೃಢವಾಗಿದ್ದು, ದಂಧೆಕೋರ ಆನಂದ್ ಬಾಬಾ ಜನಾದ್ರಿ ಹಾಗೂ ನಿಯಮ ಉಲ್ಲಂಘಿಸಿದ ಮತ್ತೋರ್ವ ಲೀಜ್ ದಾರ ಬಸನಗೌಡ ಪೋಲಿಸ್ ಪಾಟೀಲ್ ವಿರುದ್ಧ ಅಧಿಕಾರಿಗಳು ಕ್ರಿಮಿನಲ್ ಕೇಸ್ ದಾಖಲಿಸಿ, ಸಂಗ್ರಹಿಸಿದ್ದ ಅಕ್ರಮ ಮರಳು, ಜೆಸಿಬಿ, ಹಿಟಾಚಿ, ಪರಿಕರಗಳನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.

ಅಕ್ರಮ ಮರುಳುಗಾರಿಕೆ ಹೇಗೆಲ್ಲಾ ನಡೆಯುತ್ತಿದೆ ಎಂದು ನ್ಯೂಸ್ 18 ಕನ್ನಡ ವರದಿ ಪ್ರಕಟಿಸಿ, ಘಟನೆ ಮೇಲೆ ಬೆಳಕು ಚೆಲ್ಲಿತ್ತು. ನ್ಯೂಸ್ 18 ಕನ್ನಡ ವರದಿ ಆಧರಿಸಿ ಬಾಗಲಕೋಟೆ ಡಿವೈಎಸ್ಪಿ ಚಂದ್ರಕಾಂತ್ ನಂದರಡ್ಡಿ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲೆಯ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಯಿಸಿ ಪರಿಶೀಲಿಸಿದರು. ದಾಳಿ ವೇಳೆ ಬಾದಾಮಿ ತಹಶೀಲ್ದಾರ್ ಎಸ್ ಎಸ್ ಇಂಗಳೆ, ನರಗುಂದ ತಹಶೀಲ್ದಾರ್ ಮಹೇಂದ್ರ ಹಾಜರಿದ್ದರು.

ಇದನ್ನು ಓದಿ: ನಾಳೆಯಿಂದ ಬಸ್ ಸಂಚಾರ ಆರಂಭ; ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಗುರುತಿನ ಚೀಟಿ ಕಡ್ಡಾಯ

ಮಲಪ್ರಭಾ ನದಿ ತೀರದಲ್ಲಿರುವ ಮರಳು ಗಣಿಗಾರಿಕೆ ಕೇಂದ್ರಗಳಲ್ಲಿ ಒಂದಿಲ್ಲೊಂದು ಅಕ್ರಮ ನಡೆಯುತ್ತಿವೆ. ಒಂದೆಡೆ ಅನುಮತಿ ಪಡೆದು, ಮತ್ತೊಂದೆಡೆ ಗಣಿಗಾರಿಕೆ ಮಾಡುವ ಮೂಲಕ ಸಕ್ರಮ ಹೆಸರಲ್ಲಿ ಅಕ್ರಮ ಮರಳು ದಂಧೆ ಜೊತೆಗೆ ಒಂದೇ ಪಾಸ್​ನಲ್ಲಿ ಎರಡ್ಮೂರು ಲಾರಿಯಲ್ಲಿ ಮರಳು ತುಂಬಿ ಸಾಗಣೆ ಮಾಡುತ್ತಿದ್ದರು. ಲಾರಿಗಳ  ಓಡಾಟದಿಂದ ಅಕ್ಕಪಕ್ಕದ ಗ್ರಾಮಸ್ಥರು ಭಯಭೀತರಾಗಿದ್ದು, ಅಪಘಾತವಾದರೆ ಯಾರು ಹೊಣೆ ಎನ್ನುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ತಪ್ಪಿತಸ್ಥ ದಂಧೆಕೋರರ ವಿರುದ್ಧ ಕ್ರಮ ಕೈಗೊಂಡು ಅಕ್ರಮ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

  • ವಿಶೇಷ ವರದಿ: ರಾಚಪ್ಪ ಬನ್ನಿದಿನ್ನಿ


First published: