Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18-kannada
Updated:October 9, 2019, 6:21 PM IST
Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:

  1. ನೌಕರರ ತುಟ್ಟಿ ಭತ್ಯೆ ಮೂರು ಪಟ್ಟ ಹೆಚ್ಚಿಸಿದ ಕೇಂದ್ರ ಸರ್ಕಾರ ಹಬ್ಬದ ಸೀಸನ್​ ಆರಂಭವಾದ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಕೇಂದ್ರ ಬಂಪರ್​ ಆಫರ್​ ನೀಡಿದೆ. ಇಷ್ಟು ದಿನಗಳ ಕಾಲ ಇದ್ದ 5% ತುಟ್ಟಿ ಭತ್ಯೆಯನ್ನು 17%ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಮೂರು ಪಟ್ಟಿಗೂ ಹೆಚ್ಚು ಭತ್ಯೆ ಸಿಗಲಿದೆ. ಈ ಮೂಲಕ ದೀಪಾವಳಿ ಹಬ್ಬಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಕೇಂದ್ರ ಖುಷಿಯ ಸುದ್ದಿಯನ್ನು ನೀಡಿದೆ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಸರ್ಕಾರದ ನಿರ್ಧಾರವನ್ನು ಬುಧವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ. ಒಟ್ಟೂ 50 ಲಕ್ಷ ಸರ್ಕಾರಿ ನೌಕರರು ಮತ್ತು 62 ಲಕ್ಷ ಪಿಂಚಣಿದಾರರು ಫಲಾನುಭವಿಗಳಾಗಲಿದ್ದಾರೆ. ಈ ಹಿಂದೆ ತುಟ್ಟಿ ಭತ್ಯೆ (ಡಿಎ) 5% ನೀಡಲಾಗುತ್ತಿತ್ತು. ಆದರೀಗ 12% ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತುಟ್ಟಿ ಭತ್ಯೆ 17% ಆಗಲಿದೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್​ ಜಾವ್ಡೇಕರ್​ ಸರ್ಕಾರದ ನಿರ್ಧಾರವನ್ನು "ದೀಪಾವಳಿ ಉಡುಗೊರೆ" ಎಂದು ಕರೆದಿದ್ದಾರೆ. ಜತೆಗೆ ಡಿ.ಎ. ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 16,000 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ ಎಂದೂ ಮಾಹಿತಿ ನೀಡಿದರು.

2.ಜಮ್ಮು ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕರಿಸಲು ಕಾಂಗ್ರೆಸ್​ ನಿರ್ಧಾರ

ಕಣಿವೆ ರಾಜ್ಯದಲ್ಲಿ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸಲು ಕಾಂಗ್ರೆಸ್​ ತೀರ್ಮಾನ ಮಾಡಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದಾಗಿನಿಂದ ರಾಜಕೀಯ ನಾಯಕರು ಗೃಹ ಬಂಧನದಲ್ಲಿದ್ದಾರೆ. ಎರಡು ತಿಂಗಳಾದರೂ ಅವರು ಬಂಧ ಮುಕ್ತಗೊಂಡಿಲ್ಲ. ಈ ಹಿನ್ನೆಲೆ ಚುನಾವಣೆಯನ್ನು ಬಹಿಷ್ಕಾರ​ ಮಾಡಲು ಕಾಂಗ್ರೆಸ್​ ನಿರ್ಧರಿಸಿದೆ. ಇದೇ ಅ.24ರಿಂದ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ. "ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಗೊಳಿಸುವಲ್ಲಿ ಕಾಂಗ್ರೆಸ್​ ನಂಬಿಕೆ ಹೊಂದಿದೆ. ಚುನಾವಣೆಗಳಿಂದ ಅವನ್ನು ಮರೆಮಾಚುವ ಪ್ರಯತ್ನ ನಡೆಸಿಲ್ಲ. ಆದರೆ, ಇಂದು ರಾಜ್ಯ ಆಡಳಿತದಲ್ಲಿನ ಅಸಡ್ಡೆ ವರ್ತನೆ ಮತ್ತು ಹಿರಿಯ ನಾಯಕರ ಗೃಹ ಬಂಧನದ ಅವಧಿ ಮುಂದುವರೆದ ಹಿನ್ನೆಲೆ ಈ ತೀರ್ಮಾನವನ್ನು ಕಾಂಗ್ರೆಸ್​ ಕೈಗೊಂಡಿದೆ '  ಎಂದು ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಜಿಎ ಮಿರ್​ ತಿಳಿಸಿದ್ದಾರೆ.

3. ಬಿಎಸ್ವೈ ಮುಗಿಸಲು ಷಡ್ಯಂತ್ರ- ಯತ್ನಾಳ್​" ಸಿಎಂ ಯಡಿಯೂರಪ್ಪನವರನ್ನು ಮುಗಿಸಲು ರಾಜ್ಯದ ಇಬ್ಬರು ಕೇಂದ್ರ ಸಚಿವರು ಯತ್ನಿಸುತ್ತಿದ್ದಾರೆ. ಈ ಬಗ್ಗೆ ನನಗೆ ದೆಹಲಿಯಿಂದ ಮಾಹಿತಿ ಸಿಕ್ಕಿದೆ.  ಕೇಂದ್ರ ಸಚಿವರೇ ಈ ಷಡ್ಯಂತ್ರ ರೂಪಿಸಿದ್ಧಾರೆ ಎಂದು ಬಿಜೆಪಿ ನಾಯಕ ಬಸವರಾಜ ಪಾಟೀಲ ಯತ್ನಾಳ್​ ಹೊಸ ಬಾಂಬ್​ ಸಿಡಿಸಿದ್ದಾರೆ. ಅನಂತಕುಮಾರ್​ ಅವರು ಇದ್ದಾಗಲೂ ಯಡಿಯೂರಪ್ಪ ಅನಂತಕುಮಾರ್​ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದರು. ಆದರೆ, ಪಕ್ಷ ಹಾಗೂ ನಾಡಿನ ವಿಚಾರ ಬಂದರೆ ಇಬ್ಬರೂ ಒಂದಾಗುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ರಾಜ್ಯದ ಈ ಚಾಡಿಕೋರ ಸಚಿವರು ಮೋದಿ ಯ ಬಳಿ ನನ್ನ ಬಗ್ಗೆಯೂ ಚಾಡಿ ಮುಟ್ಟಿಸುತ್ತಿದ್ದಾರೆ. ಅವರ ಕುತಂತ್ರದಿಂದಲೇ ನನಗೆ ಶೋಕಾಸ್​ ನೊಟೀಸ್​ ಬಂದಿದೆ. ಸಿಎಂ ಬಿಎಸ್​ವೈ ಅವರಿಗೆ ನೆರೆ ಪರಿಹಾರದ ಕುರಿತು ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಲು ಅವಕಾಶ ಸಿಗದಿರುವುದಕ್ಕೂ ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

4.ಪ್ರತಾಪ್​ಸಿಂಹನ ಜೊತೆ ಎಚ್ಚರಿಕೆಯಿಂದ ಇರುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದರು; ಸೋಮಣ್ಣ

ಮೈಸೂರು ಉಸ್ತುವಾರಿ ಸಚಿವನಾಗಿ ದಸರಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಈ ಅವಕಾಶ ನೀಡಿದ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ವೇಳೆ ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್​ ಸದಸ್ಯರು, ಅಧಿಕಾರಿಗಳು ಸಹಕಾರ ನೀಡಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದಸರಾ ಆಚರಣೆ ಕುರಿತು ಸಲಹೆ ನೀಡುವ ಜೊತೆಗೆ ಸಂಸದ ಪ್ರತಾಪ್​ ಸಿಂಹ ಜೊತೆ ಎಚ್ಚರಿಕೆಯಿಂದ ಇರುವಂತೆ ಕಿವಿಮಾತು ಹೇಳಿದ್ದರು ಎಂದರು.  ದಸರಾ ಸಂಭ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಜಂಟಿ  ಪತ್ರಿಕಾಗೋಷ್ಠಿ ನಡೆಸಿದ ಸೋಮಣ್ಣ, ಪ್ರತಾಪ್​ ಸಿಂಹ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಚಿವರು, ದಸರಾ ಆಚರಣೆ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಎರಡು ಮೂರು ಬಾರಿ ಕರೆ ಮಾಡಿ ಸಲಹೆ ಪಡೆದಿದ್ದೆ. ಆ ವೇಳೆ ಅವರು  ಪ್ರತಾಪ್​ ಸಿಂಹ ತುಂಬ ಬುದ್ದಿವಂತ. ಆತನ ಜೊತೆ ಹುಷಾರಾಗಿ ಇರು. ಆತನನ್ನು ಸುಲಭವಾಗಿ ನಂಬಬೇಡ. ನೀವೆಲ್ಲಾ ದಸರಾ ಕಾರ್ಯಕ್ರಮವನ್ನು ಚೆನ್ನಾಗಿ ಮಾಡುತ್ತೀರಾ ಎಂಬ ಭರವಸೆ ಇದೆ ಎಂದಿದ್ದರು ಎಂದು ಪರೋಕ್ಷವಾಗಿ ಪಕ್ಕದಲ್ಲಿದ್ದ ಸಂಸದರನ್ನು ತಿವಿದರು.

5. ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ

ಬಹು ನಿರೀಕ್ಷಿತ ಬಿಜೆಪಿ ಸರ್ಕಾರದ ಮೊದಲ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ರಾಜಧಾನಿಯ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ನೆರೆ ಪರಿಹಾರ ಸೇರಿದಂತೆ ಅನೇಕ ವಿಚಾರಗಳು ಕೋಲಾಹಲವನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಈ ಕುರಿತ ಚರ್ಚೆಗಳನ್ನು ಗಮನಿಸಲು ಇಡೀ ರಾಜ್ಯದ ಜನರೂ ಸಹ ಕಾತರರಾಗಿರುವುದು ಸುಳ್ಳಲ್ಲ. ಆದರೆ, ಇದೀಗ ದಿಢೀರ್​ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ವಿಧಾನಮಂಡಲ ಅಧಿವೇಶನಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

6.ಕದ್ದು ಮುಚ್ಚಿ ಬಿಜೆಪಿ ಸೇರಲ್ಲ; ಸುಮಲತಾ

ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಗೆಲುವಿನ ಕೃತಜ್ಞತೆ ತಿಳಿಸಲು ನಾನು ಬಿಜೆಪಿ ಸಭೆಗೆ ಆಗಮಿಸಿದ್ದೇನೆ. ಬಿಜೆಪಿ ಸೇರುವುದಿದ್ದರೆ ಕದ್ದು ಮುಚ್ಚಿ ಸೇರುವುದಿಲ್ಲ. ಎಲ್ಲರಿಗೂ ತಿಳಿಸಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡನೆಯಾಗುತ್ತೇನೆ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ. ಚುನಾವಣೆ ಬಳಿಕ ಇದೇ ಮೊದಲ ಬಾರಿ ಬಿಜೆಪಿ ಸಭೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಾಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಅವರು,  ಈ ಮೊದಲೇ ನಾಲ್ಕೈದು ಬಾರಿ ಬಿಜೆಪಿ ಸಭೆಗೆ ಭಾಗಿಯಾಗಲು  ಪ್ರಯತ್ನಿಸಿದ್ದೆ. ಆದರೆ, ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ ಎಂದರು. ಬಿಜೆಪಿಗೆ ಸೇರುವುದು ಎಂದು ನಿಶ್ಚಯಿಸಿದರೆ, ಇದರಲ್ಲಿ ಮುಚ್ಚುಮರೆ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿಗೆ ಕೇಂದ್ರದಲ್ಲಿ 330ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ. ನಾನು ಸೇರ್ಪಡನೆಯಾಗಲೇ ಬೇಕು ಎಂಬ ಅವಶ್ಯಕತೆ ಇಲ್ಲ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಬಿಜೆಪಿ ಸಹಕಾರ ಕೇಳುವುದು ನನ್ನ ಕರ್ತವ್ಯ ಎಂದರು.

7.ಪ್ರತಿಪಕ್ಷ ನಾಯಕ ಯಾರು?

ಅಧಿವೇಶನದಲ್ಲಿ ಆಡಳಿತ ಪಕ್ಷದ ನಾಯಕನಷ್ಟೇ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಸಾಕಷ್ಟು ಬೆಲೆ ಇದೆ. ಆದರೆ, ಈವರೆಗೆ ಕಾಂಗ್ರೆಸ್ ಹೈಕಮಾಂಡ್ ಪ್ರತಿಪಕ್ಷ ನಾಯಕ ಯಾರೂ? ಎಂಬುದನ್ನು ಘೋಷಣೆ ಮಾಡದೆ ಇರುವುದು ಕೈ ಪಕ್ಷದೊಳಗೆ ಹತ್ತಾರು ಗೊಂದಲಗಳಿಗೆ ಕಾರಣವಾಗಿದೆ. ನಾಳೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಸಿಎಲ್​ಪಿ ಸಭೆಯನ್ನೂ ಸಹ ಆಯೋಜಿಸಿತ್ತು. ಸಾಮಾನ್ಯವಾಗಿ ಈ ಸಭೆಯಲ್ಲಿ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತದೆ. ಅಲ್ಲದೆ, ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಮಣಿಸಲು ಅಗತ್ಯವಾದ ತಂತ್ರವನ್ನು ಸಭೆಯಲ್ಲಿ ಹೆಣೆಯಲಾಗುತ್ತದೆ. ಆದರೆ, ಈ ಸಭೆಗೆ ಸಿದ್ದರಾಮಯ್ಯ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಹೆಚ್.ಕೆ. ಪಾಟೀಲ್ ಸೇರಿದಂತೆ ಅನೇಕ ಪ್ರಮುಖ ನಾಯಕರು ಗೈರಾಗಲಿದ್ದಾರೆ. ಅಲ್ಲದೆ, ಈ ನಾಯಕರ ಹಿಂಬಾಲಕರೂ ಸಹ ಸಿಎಲ್​ಪಿ ಸಭೆಗೆ ನಿರಾಸಕ್ತಿ ತೋರಿದ್ದು, ಕೈ ಹೈಕಮಾಂಡ್​ ಹಾಗೂ ರಾಜ್ಯ ಉಸ್ತುವಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

8.ಕನ್ನಡ ಫಲಕಗಳಿದ್ದರೆ ಮಾತ್ರ ಉದ್ಯಮಕ್ಕೆ ಪರವಾನಗೆ; ,ಮೇಯರ್​

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಮತ್ತಿತರ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ಫಲಕಗಳಿದ್ದರೆ ಮಾತ್ರ ಉದ್ಯಮಗಳಿಗೆ ಪರವಾನಗಿ ನೀಡುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ. ಯಾವುದೇ ಹೊಸ ಉದ್ಯಮಗಳ ಬೋರ್ಡ್​​ ಗಳಲ್ಲಿ ಕನ್ನಡವಿದ್ದರೆ ಮಾತ್ರ ಟ್ರೇಡ್ ಲೈಸೆನ್ಸ್ ನೀಡಲು ನಿರ್ಧರಿಸಿದ್ದು, ಉದ್ದಿಮೆ ಪರವಾನಿಗೆ ಕನ್ನಡ ಕಡ್ಡಾಯ ಇರಬೇಕು. ಬೋರ್ಡ್ ನಲ್ಲಿ ದೊಡ್ಡ ಅಕ್ಷರಗಳಲ್ಲಿ ಕನ್ನಡವಿರಬೇಕು ಅದನ್ನು ಸ್ಪಷ್ಟಪಡಿಸಿಕೊಂಡೇ ಟ್ರೇಡ್ ಲೈಸೆನ್ಸ್ ನೀಡುವಂತೆ ಕಟ್ಟಪ್ಪಣೆ ಹೊರಡಿಸಲಾಗುವುದು. ನವೆಂಬರ್ ತಿಂಗಳಾದ್ಯಂತ ಕನ್ನಡ ನಾಮಫಲಕಗಳ ಅಳವಡಿಕೆಗೆ ನಿರ್ಧರಿಸಲಾಗಿದೆ. ಕಂಪನಿಯ ಹೆಸರಿಗೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಾಮಫಲಕಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ. ಆದೇಶ ಪಾಲನೆ ಮಾಡದಿರುವವರ ಪರವಾನಿಗೆಯನ್ನು ರದ್ದು ಮಾಡಲಾಗುತ್ತದೆ. ಈ ಬಗ್ಗೆ ನವೆಂಬರ್ 1 ರಿಂದಲೇ ಜಾರಿಗೊಳಿಸಲು ಆಲೋಚನೆ ಮಾಡಲಾಗಿದೆ ಎಂದು ನ್ಯೂಸ್18 ಕನ್ನಡಕ್ಕೆ ಮೇಯರ್ ಗೌತಮ್ ಕುಮಾರ್ ಜೈನ್​​​​​​ ತಿಳಿಸಿದ್ದಾರೆ.

9.ಕತಾರ್​ನಲ್ಲಿ ಪುಟ್ಟ ಪೋರಿಯೊಂದಿಗೆ ಡಿಬಾಸ್​ ಡ್ಯಾನ್ಸ್​

ದರ್ಶನ್​ ಅಭಿಮಾನಿಗಳು ಎಂದರೆ ಜೀವ ಬಿಡುವ ನಟ. ತಮ್ಮ ಫ್ಯಾನ್ಸ್​ಗಳೇ ಸೆಲೆಬ್ರಿಟಿಗಳು ಎಂದು ಹೇಳುವ ಮೂಲಕ ಅವರು ಅಭಿಮಾನಿಗಳಿಗೆ ತಮ್ಮ ಹೃದಯದಲ್ಲಿ ಕೊಟ್ಟಿರುವ ಸ್ಥಾನವನ್ನು ತೋರಿಸಿದ್ದರು. ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ನಾನಾ ಭಾಗಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಅವರನ್ನು ಏನೇ ಕಾರ್ಯಕ್ರಮ ಅಥವಾ ಯಾವುದೇ ದೊಡ್ಡ ಸಮಾರಂಭಗಳಾದರೂ ತಾವಿರು ದೇಶಕ್ಕೆ ಆಹ್ವಾನಿಸುತ್ತಾರೆ. ಕಳೆದ ವರ್ಷ ದರ್ಶನ್​ ಕತಾರ್​ಗೆ ಹೋಗಿದ್ದು, ಅಲ್ಲಿ ನಡೆದ ಡಿನ್ನರ್​ ಪಾರ್ಟಿಯಲ್ಲಿ ದಚ್ಚು ಅವರ ಸಿನಿಮಾದ ಹಾಡಿಗೆ ಡಾನ್ಸ್​ ಮಾಡಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ.

10.ಏಕದಿನದಲ್ಲೂ ಭಾರತದ ವನಿತೆಯರ ಶುಭಾರಂಭ

ತವರಿನಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಟಿ-20 ಸರಣಿ ವಶಪಡಿಸಿಕೊಂಡ ಭಾರತದ ಮಹಿಳೆಯರು ಏಕದಿನ ಸರಣಿಯ ಮೊದಲ ಪಂದ್ಯದಲ್ಲೆ ಭರ್ಜರಿ ಶುಭಾರಂಭ ಮಾಡಿದ್ದಾರೆ. 9 ವಿಕೆಟ್​ಗಳ ಅಮೋಘ ಜಯದೊಂದಿಗೆ ಮಿಥಾಲಿ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಡೊದರಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭದಲ್ಲೇ ಹರಿಣಗಳ ಲೆಕ್ಕಾಚಾರವನ್ನು ಭಾರತೀಯರು ತಲೆಕೆಳಗೆ ಮಾಡಿದರು. ಲಿಜೆಲ್ಲ ಲೀ ಪಂದ್ಯದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಗೋಸ್ವಾಮಿ ಬೌಲಿಂಗ್​ಗೆ ಔಟ್ ಆದರು. ತ್ರಿಶಾ ಚೆಟ್ಟಿ 14 ರನ್​ಗೆ​ ನಿರ್ಗಮಿಸಿದರೆ, ಮಿನ್​ನೋನ್ ಆಟ 16 ರನ್​ಗೆ ಅಂತ್ಯವಾಯಿತು. ಇತ್ತ ಅಲ್ಪ ರನ್ ಕಲೆಹಾಕಿದ್ದ ವೊಲ್ವಾರ್ಟ್​​ 39 ರನ್​ಗೆ ಸುಸ್ತಾದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಮರಿಜನ್ನೆ ಕಪ್ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರು ಭಾರತೀಯರ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ ಹೋದರು.
First published: October 9, 2019, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading