HOME » NEWS » State » OCTOBER 24 EVENING TOP 10 NEWS HK

Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:October 24, 2019, 6:10 PM IST
Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಉಪ ಚುನಾವಣೆಯಲ್ಲಿ ಎಲ್ಲಾ ಪಕ್ಷಾಂತರಿಗಳಿಗೂ ಸೋಲುಣಿಸಿದ ಮತದಾರ

ಮಹಾರಾಷ್ಟ್ರ, ಹರಿಯಾಣ ಅಲ್ಲದೆ  ಕಳೆದ ಅಕ್ಟೋಬರ್​ 21 ರಂದು 17 ರಾಜ್ಯಗಳ 51 ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆದಿದ್ದು ಇಂದು ಅದರ ಫಲಿತಾಂಶ ಹೊರಬಿದ್ದಿದೆ. ಆದರೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಪ್ರದರ್ಶನ ನೀಡಿದೆ. ಅಲ್ಲದೆ, ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ಅಲ್ಪೇಶ್ ಠಾಕೂರ್ ಸೇರಿದಂತೆ ಪ್ರಮುಖ 3 ಜನ ನಾಯಕರು ಸೋಲು ಕಂಡಿರುವುದು ಪಕ್ಷಾಂತರಿಗಳ ನಡುಕಕ್ಕೆ ಕಾರಣವಾಗಿದೆ.

2.ಉತ್ತರ ಪ್ರದೇಶ ಉಪಚುನಾವಣೆ: ಎನ್​ಡಿಎಗೆ 11 ರಲ್ಲಿ 8; ಬಿಜೆಪಿಗೆ ಒಂದು ಸ್ಥಾನ ನಷ್ಟ

ಉತ್ತರ ಪ್ರದೇಶದ 11 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬಹುತೇಕ ಯಥಾಸ್ಥಿತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಕುಂದುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಹೊತ್ತಿನಲ್ಲೇ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲವನ್ನು ಬಹುತೇಕ ಕಾಯ್ದುಕೊಂಡಿದೆ. 11 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 8ರಲ್ಲಿ ಜಯಿಸಿದೆ. ಬಿಜೆಪಿಯೊಂದೇ ಏಳರಲ್ಲಿ ಗೆದ್ದೆ, ಅಪ್ನಾ ದಳ್ ಒಂದನ್ನು ಉಳಿಸಿಕೊಂಡಿದೆ. ಸಮಾಜವಾದಿ ಪಕ್ಷ 2 ಕ್ಷೇತ್ರಗಳನ್ನ ಜಯಿಸಿದರೆ, ಬಿಎಸ್​ಪಿಗೆ ಒಂದು ದಕ್ಕಿದೆ.

3.ಬಬಿತಾ ಪೋಗಟ್, ಯೋಗೇಶ್ವರ್ ದತ್​​ಗೆ ಹೀನಾಯ ಸೋಲು; ಸಂದೀಪ್ ಸಿಂಗ್​​ಗೆ ಗೆಲುವು

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮೂವರು ಕ್ರೀಡಾಪಟುಗಳಲ್ಲಿ ಒಬ್ಬರು  ಗೆದ್ದು, ಇಬ್ಬರು ಹೀನಾಯ ಸೋಲನ್ನು ಕಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕುಸ್ತಿಪಟಗಳಾದ ಯೋಗೇಶ್ವರ್ ದತ್​ ಹಾಗೂ ಬಬಿತಾ ಪೋಗಟ್ ಅವರುಗಳು ಹೀನಾಯ ಸೋಲನ್ನು ಕಂಡಿದ್ದಾರೆ.  ಹಾಕಿಪಟು ಸಂದೀಪ ಸಿಂಗ್​ ಗೆಲುವನ್ನು ಕಂಡಿದ್ದಾರೆ. 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದರು.

4.ಎಜಿಆರ್ ಗೊಂದಲ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಕುಸಿದ ವೊಡಾಫೋನ್, ಏರ್​ಟೆಲ್ ಷೇರುಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ವಿಚಾರದಲ್ಲಿ ದೂರ ಸಂಪರ್ಕ ಇಲಾಖೆಯ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಕೆಲ ಟೆಲಿಕಾಂ ಕಂಪನಿಗಳ ಷೇರು ಪ್ರಪಾತಕ್ಕೆ ಕುಸಿದಿವೆ. ವೊಡಾಫೋನ್ ಐಡಿಯಾ ಕಂಪನಿಯ ಷೇರು ಮೌಲ್ಯ ಶೇ. 18.58ರಷ್ಟು ಕುಸಿತ ಕಂಡಿದೆ. ಭಾರ್ತಿ ಇನ್​ಫ್ರಾಟೆಲ್ ಮತ್ತು ಭಾರ್ತಿ ಏರ್​ಟೆಲ್ ಕಂಪನಿಗಳ ಷೇರುಗಳೂ ಕೂಡ ಶೇ. 4.34 ಮತ್ತು ಶೇ. 7.31ರಷ್ಟು ಮೌಲ್ಯ ಕುಸಿತ ಕಂಡಿವೆ.

5.ಬಿಜೆಪಿ - ಕೆಜೆಪಿ ಆಗಲಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಎಲ್ಲಿ ಸಿಎಂ ಆಗುತ್ತಿದ್ದರು : ಸಚಿವ ಈಶ್ವರಪ್ಪ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿ ಕೆಜೆಪಿ ಆಗಲಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಎಲ್ಲಿ ಸಿಎಂ ಆಗುತ್ತಿದ್ದರು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ರಾತ್ರಿ ಕನಸು ಕಂಡ ತಿರುಕ ಬೆಳಿಗ್ಗೆ ಎದ್ದು ಮತ್ತೆ ಮುರುಕಲು ತಟ್ಟೆ ತೆಗೆದುಕೊಂಡು ಭಿಕ್ಷೆ ಬೇಡಲು ತೆರಳುತ್ತಾರೆ. ಅದೇ ರೀತಿ, ಸಿದ್ಧರಾಮಯ್ಯನವರು ಕನಸು ಕಾಣುತ್ತಿದ್ದಾರೆ. ನಮ್ಮ ಮತಗಳ ವಿಭಜನೆಯಿಂದಾಗಿ ಅವರು ಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದ್ದಾರೆ.

6.ಮಹಾರಾಷ್ಟ್ರ, ಹರಿಯಾಣದಲ್ಲಿ ಗೆಲ್ಲದಿರಬಹುದು, ಆದರೆ, ಹೋರಾಡುವ ಪ್ರೇರಣೆ ಸಿಕ್ಕಿದೆ; ದಿನೇಶ್ ಗುಂಡೂರಾವ್

ಕಾಂಗ್ರೆಸ್‌ ಪಕ್ಷವನ್ನು ಸೋಲಿಸಬೇಕೆಂದು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು. ಅಧಿಕಾರಿಗಳನ್ನು ಹೆದರಿಸಿದ್ದರು, ಹಣದ ಹೊಳೆ ಹರಿಸಿದ್ದರು. ಕಾಂಗ್ರೆಸ್ ಧೂಳೀಪಟ ಆಗುತ್ತದೆ ಅಂತ ಹೇಳಿದ್ದರು. ಆದರೆ ಫಲಿತಾಂಶ ನೋಡಿದರೆ ಬಿಜೆಪಿ ನಿರೀಕ್ಷೆ ಈಡೇರಿಲ್ಲ‌ ಎಂಬುದು ಗೊತ್ತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಅಮಿತ್ ಶಾ, ಮೋದಿಯವರು ಇಪ್ಪತ್ತು ಬಾರಿ ಹೋಗಿ ಪ್ರಚಾರ ಮಾಡಿದ್ರು. ಹರಿಯಾಣದಲ್ಲಿ ಇನ್ನೂ ಯಾರು ಸರ್ಕಾರ ರಚನೆ ಮಾಡ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ‌. ಕಾಂಗ್ರೆಸ್ ಸರ್ವನಾಶ ಮಾಡೋಕೆ ಪ್ರಯತ್ನ ಮಾಡಿದ್ರು‌. ಐಟಿ, ಇಡಿ, ಸಿಬಿಐಗಳನ್ನು ದುರುಪಯೋಗ ಪಡಿಸಿಕೊಂಡ್ರು. ಇದೆಲ್ಲಾ ನೋಡಿದ್ರೆ ನಾವು ಇನ್ನಷ್ಟು ಗಟ್ಟಿಯಾಗಬೇಕಿದೆ‌. ನಾವು ಪಕ್ಷವನ್ನು ಇನ್ನಷ್ಟು ಸದೃಢ ಮಾಡುತ್ತೇವೆ. ನಾವು ಸೋತಿರಬಹುದು, ಆದರೆ ಫಲಿತಾಂಶದಿಂದಾಗಿ ಹೋರಾಡುವ ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.

7.ರಾಜ್ಯದ ಹಲವೆಡೆ ಮುಂದುವರೆದ ಮಳೆ; ಜನಜೀವನ ಅಸ್ತವ್ಯಸ್ತ

ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ಈ ಬೆನ್ನಲ್ಲೀಗ ಮತ್ತೆ ಕರಾವಳಿ ಭಾಗದಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ, ಕೊಡಗು, ಉತ್ತರ ಕರ್ನಾಟಕ, ಮಲೆನಾಡು ಸೇರದಂತೆ ಇನ್ನೂ ಅನೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮ ವಾಹನ ಸವಾರರು ಪರದಾಡುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

8.ಮತದಾರರನ್ನು ದಾರಿ ತಪ್ಪಿಸುವುದು ಸಾಧ್ಯವಿಲ್ಲ ಎಂದು ಎರಡು ರಾಜ್ಯಗಳ ಫಲಿತಾಂಶ ಸಾಬೀತು ಮಾಡಿದೆ; ಕುಮಾರಸ್ವಾಮಿ

ಮಹಾರಾಷ್ಟ್ರದಲ್ಲಿ ಬರ, ನೆರೆ ಇತ್ತು.  ರಾಜ್ಯಗಳ ಇಂತಹ ವಾಸ್ತವ ಸಮಸ್ಯೆಗಳ ಬಗ್ಗೆ ಗಮನಹರಿಸದೇ, ಕೇವಲ 370 ವಿಧಿ ಕುರಿತು ಪ್ರಧಾನಿ ಪ್ರಚಾರ ನಡೆಸಿದರು. ಚುನಾವಣಾ ಫಲಿತಾಂಶ ನೋಡಿದರೆ, ಮತದಾರರನ್ನು ನಿರಂತರವಾಗಿ ದಾರಿ ತಪ್ಪಿಸುವುದು ಸಾಧ್ಯವಿಲ್ಲ ಎಂಬುದು ಸಾಬೀತು ಆಯಿತು ಎಂದು ಮಾಜಿ ಸಿಎಮ ಎಚ್​ ಡಿ ಕುಮಾರಸ್ವಾಮಿ ತಿಳಿಸಿದರು.  ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶ ಕುರಿತು ಮತಗಟ್ಟೆ ಸಮೀಕ್ಷೆಗಳೆಲ್ಲಾ ಸುಳ್ಳಾಗಿದೆ. ಎರಡು ರಾಜ್ಯದಲ್ಲಿ ಗೆಲ್ಲಬೇಕೆಂಬ ಛಲದಿಂದ ಮೋದಿ, ಷಾ ಹೇಗೆ ಚುನಾವಣೆ ನಡೆಸಿದ್ದಾರೆ ಗೊತ್ತಿದೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ.‌ ಹೆದರಿಸಿ ಅನ್ಯ ಇತರೆ ಪಕ್ಷದ ಮುಖಂಡರನ್ನು ಸೆಳೆದಿದ್ದಾರೆ. ಅದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು

9.ಇಂಗ್ಲಿಷ್​ನಲ್ಲಿ ಮಾತನಾಡಿ ಪೊಗರು ತೋರಿಸಿ ಮತ್ತೆ ಬೈಗುಳ ತಿಂದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಕುವರಿ. ಅವರು ಕನ್ನಡದಲ್ಲಿ ಮಾಡಿದ್ದು ಎರಡೇ ಸಿನಿಮಾ ಆದರೂ, ಅವರು ಕನ್ನಡದ ಬಗ್ಗೆ ಆಗಾಗ ಮಾತು ಜಾರುತ್ತಿರುತ್ತಾರೆ. ಇದರಿಂದಲೇ ಅವರು ಸಾಕಷ್ಟು ಸಲ ಟ್ರಾಲ್​ ಆಗಿದ್ದೂ ಇದೆ. ಈಗಲೂ ಸಹ ಅದೇ ಆಗಿದ್ದು. ಮತ್ತೆ ಇಂಗ್ಲಿಷ್​​ನಲ್ಲಿ ಮಾತನಾಡುವ ಮೂಲಕ ರಶ್ಮಿಕಾ ಮಂದಣ್ಣ ಸಖತಾಗಿ ಬೈಗುಳ ತಿಂದಿದ್ದಾರೆ. ಮಾತೃ ಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು ಎಂದು ಖಾರವಾದ ಮಾತುಗಳನ್ನು ಕೇಳುವಂತಾಗಿದೆ.

10.ಅಧಿಕಾರ ಸ್ವೀಕರಿಸಿದ ಬಳಿಕ ಕೊಹ್ಲಿ- ಧೋನಿ ಬಗ್ಗೆ ಗಂಗೂಲಿ ಹೇಳಿದ್ದೇನು ಗೊತ್ತಾ..?

ಬಿಸಿಸಿಐ ನೂತನ ಅಧ್ಯಕ್ಷನಾಗಿ ಇಂದು ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಅಧಿಕಾರ ವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಲ್ಲ ಮಾದರಿಯಲ್ಲಿ ಸಹಾಯ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಪ್ರಮುಖ ವ್ಯಕ್ತಿ. ನಾಳೆ ಕೊಹ್ಲಿಯನ್ನು ಭೇಟಿಮಾಡಿ ಮಾತನಾಡಲಿದ್ದೇನೆ. ನಾಯಕತ್ವದ ಕಷ್ಟ ಏನು ಎಂಬುದು ನನಗೆ ತಿಳಿದಿದೆ. ನಾನುಕೂಡ ನಾಯಕನಾಗಿದ್ದವನು. ಹೀಗಿರುವಾಗ ಕೊಹ್ಲಿ ಜೊತೆ ಮಾತನಾಡಿ ತಂಡದ ಸ್ಥಿತಿಗತಿ ಬಗ್ಗೆ ತಿಳಿಯುತ್ತೇನೆ ಎಂದಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 24, 2019, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories