Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:October 18, 2019, 6:18 PM IST
Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಸಿದ್ದರಾಮಯ್ಯ ಆಪ್ತ ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ; ಆರೋಪಿ ಕಾರ್ಪೆಂಟರ್ ಶಿವು ಬಂಧನ

ಸಿದ್ದರಾಮಯ್ಯ ಅವರ ಪರಮಾಪ್ತ ಶಾಸಕರಾಗಿರುವ ಭೈರತಿ ಸುರೇಶ್ ಅವರನ್ನು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಕೊತ್ತನೂರಿನ ಭೈರತಿ ಗ್ರಾಮದಲ್ಲೇ ಸುರೇಶ್ ಅವರನ್ನು ಕೊಲೆಗೈಯಲು ಯತ್ನಿಸಿಲಾಗಿದೆ. ಗ್ರಾಮದ ಶಿವ ಎಂಬಾತ ಚಾಕುವಿನಿಂದ ಭೈರತಿ ಸುರೇಶ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆದರೆ, ಭೈರತಿ ಸುರೇಶ್ ಬೆಂಬಲಿಗರು ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜನರ ಗುಂಪಿನೊಂದಿಗೆ ಭೈರತಿ ಸುರೇಶ್ ಮಾತನಾಡುವಾಗ ಶಿವು ಎಂಬಾತ ಏಕಾಏಕಿ ಚಾಕು ಹಿಡಿದು ಮುಂದೆ ಬಂದ ಎನ್ನಲಾಗಿದೆ. ಆದರೆ, ಈತನ ಈ ಕೃತ್ಯಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಕೊತ್ತನೂರು ಪೊಲೀಸರು ಆರೋಪಿ ಶಿವುನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

2. ಸಿಬಿಐ ಹೊಸ ಚಾರ್ಜ್​ಶೀಟ್​ನಲ್ಲಿ ಪಿ. ಚಿದಂಬರಮ್ ಸೇರಿ 14 ಮಂದಿ ಹೆಸರು

ಐಎನ್​ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಹೊಸ ಆರೋಪ ಪಟ್ಟಿ ದಾಖಲಿಸಿದೆ. ರೋಸ್ ಅವೆನ್ಯೂ ಕೋರ್ಟ್​ನಲ್ಲಿ ಸಲ್ಲಿಸಲಾಗಿರುವ ಈ ಚಾರ್ಜ್​ಶೀಟ್​ನಲ್ಲಿ ಪಿ. ಚಿದಂಬರಮ್ ಅವರ ಹೆಸರನ್ನು ಒಳಗೊಂಡಿರುವುದು ಗಮನಾರ್ಹ. ಈ ಮೂಲಕ ಪ್ರಕರಣದಲ್ಲಿ ಚಿದಂಬರಮ್ ಅವರು ಅಧಿಕೃತವಾಗಿ ಆರೋಪಿಯಾಗಲಿದ್ದಾರೆ. 71 ವರ್ಷದ ಪಿ. ಚಿದಂಬರಮ್, ಅವರ ಮಗ ಕಾರ್ತಿ ಚಿದಂಬರಮ್, ಐಎನ್​​ಎಕ್ಸ್ ಮೀಡಿಯಾ ಮಾಲೀಕರಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಚಾರ್ಜ್​ಶೀಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

3.ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಎಡಪಂಥೀಯ : ಸಚಿವ ಪಿಯೂಷ್ ಗೋಯಲ್

ಅರ್ಥಶಾಸ್ತ್ರದಲ್ಲಿ ನೊಬೆಲ್​ ಪ್ರಶಸ್ತಿ ಪಡೆದ ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ ಜಾಗತಿಕವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರ ಚಿಂತನೆಗಳನ್ನು ಭಾರತೀಯರು ತಿರಸ್ಕರಿಸಿದ್ದಾರೆ. ದೇಶದ ಆರ್ಥಿಕತೆ ಭೀಕರ ಸ್ಥಿತಿಯಲ್ಲಿದೆ ಎಂಬ ಬ್ಯಾನರ್ಜಿ ಹೇಳಿಕೆಯನ್ನು ಕಟುವಾಗಿ ಟೀಕಿಸಲಾಗುತ್ತಿದೆ ಎಂದು ಸಚಿವ ಪಿಯೂಷ್ ಗೋಯಲ್ ಉಲ್ಲೇಖಿಸಿದರು. ಜಾಗತಿಕ ಬಡತನ ನಿರ್ಮೂಲನೆಗಾಗಿ ತೋರಿಸಿಕೊಟ್ಟ ಪ್ರಯೋಗಾತ್ಮಕ ಧೋರಣೆಗಳಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಅವರು ಭಾರತದ ಆರ್ಥಿಕತೆ ಶೋಚನೀಯ ಸ್ಥಿತಿಯಲ್ಲಿದೆ ಎಂದು ಹೇಳಿದ್ದರು.

4.ಹಿಂದೂ ಮಹಾಸಭಾ ಮಾಜಿ ನಾಯಕ ಕಮಲೇಶ್​ ತಿವಾರಿ ಗುಂಡಿನ ದಾಳಿಗೆ ಬಲಿಹಿಂದೂ ಸಮಾಜ ಪಕ್ಷ ಹಾಗೂ ಹಿಂದೂ ಮಹಾಸಭಾದ ಮಾಜಿ ನಾಯಕ ಕಮಲೇಶ್​ ತಿವಾರಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಲಕ್ನೋನ ಅವರ ಮನೆ ಬಳಿಯೇಈ ಕೃತ್ಯ ನಡೆದಿದ್ದು, ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲೇಶ್​ ತಿವಾರಿ ಅವರಿಗೆ ಪರಿಚಿತ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದ್ದು, ದಾಳಿಕೋರ ಸಿಹಿ ತಿನಿಸಿನೊಂದಿಗೆ ತಿವಾರಿ ಕಚೇರಿಗೆ ಬಂದಿದ್ದ. ಸ್ವೀಟ್​ ಬಾಕ್ಸ್​ ಕೊಟ್ಟು ಮರಳುವ ವೇಳೆ ಆತ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

5.ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನ್ಯಾ| ಶರದ್ ಬೋಬ್ಡೆ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ತಮ್ಮ ಉತ್ತರಾಧಿಕಾರಿಯಾಗಲು ನ್ಯಾ| ಎಸ್.ಎ. ಬೋಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. 2018, ಅಕ್ಟೋಬರ್ 3ಕ್ಕೆ ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸ್ವೀಕರಿಸಿದ ನ್ಯಾ| ರಂಜನ್ ಗೊಗೋಯ್ ಅವರು ಇದೇ ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ನ್ಯೂಸ್18 ವಾಹಿನಿಗೆ ಮೂಲಗಳು ತಿಳಿಸಿವೆ.

6.ನಾಥೂರಾಮ್​ ಗೋಡ್ಸೆಗೂ ಭಾರತ ರತ್ನ ಕೊಟ್ಟು ಬಿಡಲಿ; ಸಿದ್ದರಾಮಯ್ಯ ಲೇವಡಿ

ಸಮಾಜ ಸುಧಾರಕ ದಾಮೋದರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾರತ ರತ್ನ ಪಡೆಯಲು ಸಾವರ್ಕರ್​​ಗಿಂತ ಅರ್ಹ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದರು. ಗಾಂಧೀಜಿ ಹತ್ಯೆ ಮಾಡಲು ಯೋಜನೆ ರೂಪಿಸಿದ್ದೇ ಸಾವರ್ಕರ್. ನಾಥೂರಾಮ್​ ಗೋಡ್ಸೆ ಹಿಂದೆ ನಿಂತು ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದರು.  ಸೂಕ್ತ ಸಾಕ್ಷಿ ಇಲ್ಲದೇ ಆರೋಪಿಯಾಗಿ ಗುರುತಿಸಿರಲಿಲ್ಲ. ಅಂತಹ ವ್ಯಕ್ತಿಗೆ ಕೇಂದ್ರ ಸರ್ಕಾರ ಭಾರತ ರತ್ನ ಕೊಡಲು ಮುಂದಾಗಿದೆ. ಹಾಗೆಯೇ ಗೋಡ್ಸೆಗೂ ಭಾರತ ರತ್ನ ಕೊಟ್ಟು ಬಿಡಲಿ," ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

7.ಮುಂದಿನೆರಡು ದಿನ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಕಳೆದ ಹದಿನೈದು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಳ, ಸುಬ್ರಹ್ಮಣ್ಯ, ಕುಕ್ಕೆಯಲ್ಲಿ ನಿರಂತರ ಮಳೆಯಾಗುತ್ತಲೆ ಇದೆ. ಈಗಾಗಲೇ ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಸಂಜೆ ಮೇಲೆ ಭಾರೀ ಮಳೆಯಾಗುತ್ತಿದ್ದು, ಇದರಿಂದ ಹಲವು ಗ್ರಾಮಗಳು ವಿದ್ಯುತ್​, ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಕೂಡ ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಲಿದೆ. ಗಂಟೆಗೆ 60ರಿಂದ 65 ಕಿ.ಲೋ ಮೀಟರ್​ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

8.ಸಿಆರ್​ಪಿಸಿ ಸೆಕ್ಷನ್ 409 ಅಡಿಯಲ್ಲಿ ಜನಾರ್ದನ ರೆಡ್ಡಿ ವಿಚಾರಣೆಗೆ ಹೈಕೋರ್ಟ್ ಸಮ್ಮತಿ; ಸಾಬೀತಾದರೆ ಜೀವಾವಧಿ ಶಿಕ್ಷೆ ಸಾಧ್ಯತೆ

ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಸಂಕಷ್ಟ ಬಂದಿದೆ. ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಆರ್​ಪಿಸಿ ಸೆಕ್ಷನ್ 409ರ ಅಡಿಯಲ್ಲಿ ವಿಚಾರಣೆ ನಡೆಸಲು ಸಿಬಿಐಗೆ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಕ್ರಿಮಿನಲ್ ವಿಶ್ವಾಸದ್ರೋಹಕ್ಕೆ ಸಂಬಂಧಿಸಿದ ಈ ಸಿಆರ್​ಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ನೀಡಲು ಸಾಧ್ಯವಿದೆ. ಹೀಗಾಗಿ, ಜನಾರ್ದನ ರೆಡ್ಡಿ ಮತ್ತಿತರ ಆರೋಪಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಂತಾಗಿದೆ.

9.ಟಾಲಿವುಡ್‍ನಲ್ಲೂ ಆ್ಯಕ್ಷನ್ ಪ್ರಿನ್ಸ್ ಖದರ್: ಕನ್ನಡ-ತೆಲುಗಿನಲ್ಲಿ ಪೊಗರು ರಿಲೀಸ್

ಸ್ಯಾಂಡಲ್‍ವುಡ್‍ನಲ್ಲಿ ಈಗೀಗ ಬಹುಭಾಷಾ ಸಿನಿಮಾಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸ್ಟಾರ್​ಗಳ ಸಿನಿಮಾಗಳು ಕಮ್ಮಿಯಂದರೂ ಮೂರ್ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗೋದು ವಾಡಿಕೆ ಆಗಿ ಬಿಟ್ಟಿದೆ. ಆ ಮಟ್ಟಿಗಿದೆ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಈ ಪಟ್ಟಿಗೆ ಈಗ 'ಪೊಗರು' ಸಿನಿಮಾ ಸೇರುತ್ತಿದೆ. `ಕೆಜಿಎಫ್'ನಿಂದ ಪ್ಯಾನ್ ಇಂಡಿಯಾ ಕ್ರೇಜ್ ಶುರುವಾಯ್ತು. ಆ ನಂತರ 'ಕುರುಕ್ಷೇತ್ರ' ಸಿನಿಮಾ ಕನ್ನಡ ಅಲ್ಲದೆ ತೆಲುಗು ತಮಿಳಿನಲ್ಲೂ ಬಿಡುಗಡೆಯಾಯ್ತು. ಬಾಕ್ಸಾಫಿಸ್‍ನಲ್ಲಿ ಕಮಾಲ್ ಮಾಡಿತ್ತು. ಹಾಗೆ ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಸಹ ಪಂಚ ಭಾಷೆಗಳಲ್ಲಿ ಅಬ್ಬರಿಸಿತು. ಈಗ ಇದಕ್ಕೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ.

10.ನಾಳೆಯಿಂದ ಅಂತಿಮ ಕದನ​; ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಭಾರತದ ಈ ಆಟಗಾರ?

ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಟೆಸ್ಟ್​ ನಾಳೆಯಿಂದ ರಾಂಚಿಯ ಜೆಎಸ್​ಸಿಎ ಕ್ರೀಡಾಂಗಂಣಲ್ಲಿ ಆರಂಭವಾಗಲಿದೆ. ಈಗಾಗಲೇ ಸರಣಿ ವಶ ಪಡಿಸಿಕೊಂಡಿರುವ ಭಾರತ ಕ್ಲೀಸ್​ಸ್ವೀಪ್​ನತ್ತ ಚಿನ್ನ ನೆಟ್ಟಿದ್ದರೆ, ಇತ್ತ ಹರಿಣಗಳು ಪ್ರತಿಷ್ಠೆಗಾದರು ಗೆಲ್ಲುವ ಪಣತೊಟ್ಟಿದೆ. ಮೊದಲ ಟೆಸ್ಟ್​ನಲ್ಲಿ ಬರೋಬ್ಬರಿ 203 ರನ್​ಗಳಿಂದ ಕೊಹ್ಲಿ ಪಡೆ ಗೆದ್ದು ಬೀಗಿದರೆ, ಎರಡನೇ ಟೆಸ್ಟ್​ನಲ್ಲಿ 137 ರನ್​ಗಳಿಂದ ಜಯ ಸಾಧಿಸಿ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಸದ್ಯ ನಾಳೆ (ಅ. 19) ಅಂತಿಮ ಟೆಸ್ಟ್​ ಆರಂಭವಾಗಲಿದ್ದು ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 18, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading