Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:October 16, 2019, 6:00 PM IST
Evening Digest: ನೀವು ಓದಲೇಬೇಕಾದ ಈ ದಿನದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಅಯೋಧ್ಯೆ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ರಾಜಕೀಯ ಸೂಕ್ಷ್ಮದ ಅಯೋಧ್ಯೆಯ ರಾಮ ಜನ್ಮ ಭೂಮಿ- ಬಾಬ್ರಿ ಮಸೀದಿ ಪ್ರಕರಣದ ಎರಡು ಕಡೆಯ ವಕೀಲರ ವಾದ-ಪ್ರತಿವಾದಗಳು ಇಂದಿಗೆ ಮುಕ್ತಾಯಗೊಂಡಿದೆ. ಸತತ 40 ದಿನಗಳಿಂದ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠದ ಎದುರು ಅಯೋಧ್ಯೆ ಪ್ರಕರಣದ ಅಂತಿಮ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಾದ-ಪ್ರತಿವಾದವನ್ನು ಅಕ್ಟೋಬರ್ 17ರಂದು ಮುಗಿಸಬೇಕು ಎಂದು ಈ ಹಿಂದೆ ಗಡುವು ನಿಗದಿ ಮಾಡಲಾಗಿದ್ದು, ಆದಾಗ್ಯೂ, ನೆನ್ನೆಯ ವಿಚಾರಣೆಯಲ್ಲಿ ಸಿಜೆಐ ಅವರು, ಇದರಲ್ಲಿ ಒಂದು ದಿನವನ್ನು ಮೊಟಕುಗೊಳಿಸಿ, ಅ.16ರ ಸಂಜೆ 5 ಗಂಟೆಯೊಳಗೆ ವಾದ ಮುಗಿಸುವಂತೆ ಗಡುವು ನಿಗದಿ ಮಾಡಿದ್ದರು

2. 2020ರ ಫೆಬ್ರವರಿವರೆಗೂ ಗ್ರೇ ಪಟ್ಟಿಯಲ್ಲಿ ಪಾಕಿಸ್ತಾನ

ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್​ಎಟಿಎಫ್​)ಯೂ 2020ರ ಫೆಬ್ರವರಿವರೆಗೂ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲಿ ಇರಿಸಿಕೊಳ್ಳಲು ನಿರ್ಧರಿಸಿದೆ. ಭಯೋತ್ಪಾದನೆ ಹಣಕಾಸು ವಹಿವಾಟು ಮತ್ತು ಅಕ್ರಮ ಲೇವಾದೇವಿಯನ್ನು ಸಂಪೂರ್ಣವಾಗಿ ಹೊಡೆದೊಡಿಸಲು ಇನ್ನು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಇಸ್ಲಾಮಾಬಾದ್​ಗೆ ನಿರ್ದೇಶನವನ್ನೂ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಫ್‌ಎಟಿಎಫ್ 1989ರಲ್ಲಿ ರಚಿಸಲಾದ ಅಂತರ್-ಸರ್ಕಾರಿ ಸಂಸ್ಥೆಯಾಗಿದ್ದು, ಹಣ ವರ್ಗಾವಣೆ, ಭಯೋತ್ಪಾದಕ ಹಣಕಾಸು ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಸಂಬಂಧಿಸಿದ ಇತರ ಬೆದರಿಕೆಗಳ ವಿರುದ್ಧ ಹೋರಾಡುವ ಸಂಸ್ಥೆಯಾಗಿದೆ.

3.ಆರ್ಥಿಕ ಹಿಂಜರಿತ ಎಂದು ಉದ್ಯೋಗ ಕಡಿತ ಮಾಡಲು ಹೊರಟಿದ್ದ ಬಿಸ್ಕತ್ ಕಂಪನಿಗೆ ಈ ವರ್ಷ ಶೇ. 15 ಲಾಭ ಹೆಚ್ಚಳ

ಖ್ಯಾತ ಬಿಸ್ಕತ್ ಕಂಪನಿ ಪಾರ್ಲೆ ಜೀ ಈ ಹಣಕಾಸು ವರ್ಷದಲ್ಲಿ ಭರ್ಜರಿ ಲಾಭ ಹೆಚ್ಚಳ ಮಾಡಿಕೊಂಡಿದೆ. ಟೋಫ್ಲರ್ ಎಂಬ ಸಂಸ್ಥೆಯ ಪ್ರಕಾರ ಪಾರ್ಲೆ ಜೀ ಸಂಸ್ಥೆಗೆ 2018-19ರ ವರ್ಷದಲ್ಲಿ ಶೇ. 15.2ರಷ್ಟು ಲಾಭ ಹೆಚ್ಚಳವಾಗಿದೆ. ಎರಡು ತಿಂಗಳ ಹಿಂದಷ್ಟೇ ಪಾರ್ಲೆ ಜೀ ಕಂಪನಿ ಆರ್ಥಿಕ ಹಿಂಜರಿತದಿಂದಾಗಿ 10 ಸಾವಿರಕ್ಕಿಂತ ಹೆಚ್ಚು ಕೆಲಸಗಾರರನ್ನು ನೌಕರಿಯಿಂದ ಹೊರಹಾಕಬೇಕಾಗಬಹುದ ಎಂದು ಹೇಳಿಕೊಂಡಿತ್ತು. ಇದೀಗ ಈ ಬಿಸ್ಕರ್ ಕಂಪನಿಯ ಲಾಭದ ವಿವರ ಬೆಳಕಿಗೆ ಬಂದಿದೆ. ಪಾರ್ಲೆ ಬಿಸ್ಕತ್ಸ್ ಸಂಸ್ಥೆ ಕಳೆದ ವರ್ಷ 355 ಕೋಟಿ ರೂ ನಿವ್ವಳ ಲಾಭ ಹೊಂದಿತ್ತು. ಈ ವರ್ಷ ಅದು 410 ಕೋಟಿಗೆ ಏರಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ವರ್ಷ 55 ಕೋಟಿಯಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ. ಪಾರ್ಲೆ ಸಂಸ್ಥೆಯ ಒಟ್ಟಾರೆ ಆದಾಯವೂ ಶೇ. 6.4ರಷ್ಟು ವೃದ್ಧಿಯಾಗಿದೆ. ಈ ವರ್ಷ ಪಾರ್ಲೆಯ ಆದಾಯ 9 ಸಾವಿರ ಕೋಟಿ ರೂ ಗಡಿ ದಾಟಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದೆ.

4.ಬ್ಯಾಂಕ್​ಗಳ ಬಿಕ್ಕಟ್ಟಿಗೆ ಆರ್​ಬಿಐ ಬೇಜವಾಬ್ದಾರಿಯೇ ಕಾರಣ; ನೊಬೆಲ್ ವಿಜೇತ ಅಭಿಜಿತ್​ ಬ್ಯಾನರ್ಜಿಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಬೃಹತ್ ಅಪಾಯ ಮತ್ತು ಬಿಕ್ಕಟ್ಟಿಗೆ ಮುಖಮಾಡಿದೆ. ಆದರೆ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಈ ಎಲ್ಲಾ ಪರಿಸ್ಥಿತಿಗೆ ರಿಸರ್ವ್​​ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಬೇಜವಾಬ್ದಾರಿ ನಡೆಯೇ ಕಾರಣ  ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ದೂಷಿಸಿದ್ದಾರೆ. ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ ಹಗರಣ ಹಾಗೂ ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿರುವ ಅಭಿಜಿತ್ ಬ್ಯಾನರ್ಜಿ, “ದೇಶದ ಬ್ಯಾಂಕಿಂಗ್ ವ್ಯವಸ್ಥೆ ಪ್ರಸ್ತುತ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಹಲವು ವರ್ಷಗಳಿಂದ ಗೊಂದಲಕ್ಕೀಡಾದ ಬ್ಯಾಂಕಿಂಗ್ ವ್ಯವಸ್ಥೆ ಇಂದು ಅದರ ಗಾಢವಾದ ಪರಿಣಾಮವನ್ನು ಎದುರಿಸುತ್ತಿದೆ. ಆದರೆ, ಬ್ಯಾಂಕ್​ಗಳ ಈ ವ್ಯವಸ್ಥೆ ಹಾಳಾಗಲು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ (ಆರ್​ಬಿಐ) ಬೇಜವಾಬ್ದಾರಿ ನೀತಿಯೇ ಕಾರಣ.

5ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ

ವಿಪಕ್ಷ ನಾಯಕರಾದ ಬಳಿಕ ಸಿದ್ದರಾಮಯ್ಯ ಇದೇ ಮೊದಲ ಬಾರಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಉಪಚುನಾವಣೆ ಸೇರಿದಂತೆ ರಾಜ್ಯ ರಾಜಕೀಯ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ.  ಉಪಚುನಾವಣಾ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮಗೊಳಿಸುವ ಸಂಬಂಧ ಚರ್ಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಆಹ್ವಾನಿಸಿದ್ದರು. ಇಂದು ಸಂಜೆ 5 ಗಂಟೆಗೆ ಅವರ ಸಭೆ ನಿಗದಿಯಾಗಿತ್ತು. ಆದರೆ ತುರ್ತು ಮಾತುಕತೆ ನಡೆಸುವ ಸಂಬಂಧ 12ಗಂಟೆಗೆ ಭೇಟಿಯಾಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೈ ಕಮಾಂಡ್​ ಸೂಚನೆ ನೀಡಿತು . ಈ ಸೂಚನೆ ಹಿನ್ನೆಲೆ ಅವರು 12ಗಂಟೆಗೆ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

6.ಸಾ.ರಾ.ಮಹೇಶ್​​ರಂತ ನಿಷ್ಠಾವಂತ ಶಾಸಕರು ಜೆಡಿಎಸ್ ಪಕ್ಷದಲ್ಲಿರಬೇಕು ; ಬಸವರಾಜ​​​​ ಹೊರಟ್ಟಿ

ಸಾ.ರಾ. ಮಹೇಶ್ ನಿಷ್ಠಾವಂತ ಜೆಡಿಎಸ್ ಶಾಸಕ. ಅವರಂತಹ ಒಳ್ಳೆಯವರು ಪಕ್ಷದಲ್ಲಿ ಇರಬೇಕು. ಎಲ್ಲರೂ ಹೀಗೆ ಪಕ್ಷ ಬಿಟ್ಟು ಹೋದರೆ ಪಕ್ಷದ ಭವಿಷ್ಯ ಕರಾಳವಾಗುತ್ತೆ‌ ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ​​ ಹೊರಟ್ಟಿ ಹೇಳಿದ್ದಾರೆ. ಅವರ ಮನವೊಲಿಸಬೇಕಾಗಿದ್ದು ಪಕ್ಷದ ಮುಖಂಡರ ಜವಾಬ್ದಾರಿ. ಅವರ ಮನಸ್ಸಿಗೆ ಆದ ನೋವನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಎಂತಹ ಪ್ರಸಂಗದಲ್ಲಿಯೂ ಸಾ.ರಾ. ಮಹೇಶ್ ಅವರು ಜೆಡಿಎಸ್ ಪಕ್ಷದ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ರಾಜಿನಾಮೆಗೆ ಕಾರಣಗಳೇನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ ಎಂದರು.

7.ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜ್ಯ ಕಾಂಗ್ರೆಸ್​ನ ಕೆಸಿ ರಾಮಮೂರ್ತಿ; ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

ಕಾಂಗ್ರೆಸ್​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೆ.ಸಿ.ರಾಮಮೂರ್ತಿ ಅವರು ಇಂದು ತಮ್ಮ ಸಂಸದ ಸ್ಥಾನ ಮತ್ತು ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ರಾಮಮೂರ್ತಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಐಪಿಎಸ್​ ಅಧಿಕಾರಿಯಾಗಿರುವ ರಾಮಮೂರ್ತಿ ಅವರು ಶೀಘ್ರದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

8.ಶಿವಮೊಗ್ಗದಲ್ಲೂ ಶಂಕಿತ ಉಗ್ರರು ಜಾಡು, ಸ್ಯಾಟಲೈಟ್​ ಪೋನ್?; ಮಲೆನಾಡಿನಲ್ಲಿ ಮನೆಮಾಡಿದ ಆತಂಕ

ದಸರಾ ಹಬ್ಬದ ಸಂದರ್ಭದಲ್ಲಿ ಶ್ರೀರಂಗಪಟ್ಟಣದಲ್ಲಿ ನಾಲ್ವರು ಶಂಕಿತ ಉಗ್ರರು ಸ್ಯಾಟಲೈಟ್ ಪೋನ್ ಬಳಕೆ ಮಾಡಿ ಪೊಲೀಸರ ಅತಿಥಿಯಾದ ಸುದ್ದಿ ತಣ್ಣಗಾಗುವುದರೊಳಗಾಗಿ ಶಿವಮೊಗ್ಗದಲ್ಲೂ ಇಂತಹದ್ದೇ ಘಟನೆ ಕಂಡುಬಂದಿದ್ದು ಮಲೆನಾಡಿನಲ್ಲಿ ಆತಂಕ ಮನೆಮಾಡಿದೆ. ತೀರ್ಥಹಳ್ಳಿಯ ಸುರಾನಿ ಗ್ರಾಮದ ತೋಟದ ಸಮೀಪ ಸೆಟಲೈಟ್ ಪೋನ್ ಬಳಕೆ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸೆಟಲೈಟ್ ಫೋನ್ ಬಳಕೆಯಾಗಿರುವ ಮಾಹಿತಿ ಮೇರೆಗೆ ನಿನ್ನೆ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಟ್ಟುಕಳಿಸಿದ್ದಾರೆ ಎನ್ನಲಾಗುತ್ತಿದೆ.

9.ದರ್ಶನ್​ರ​ ಮ್ಯಾನೇಜರ್​ಗೆ ಗೇಟ್​ಪಾಸ್: ಸಾಮಾಜಿಕ ಜಾಲತಾಣದ ಮೂಲಕ ವಿಷಯ ಬಹಿರಂಗ

ಕಳೆದ ಒಂದು ವರ್ಷದಿಂದ ನಟ ದರ್ಶನ್‍ರ ಮ್ಯಾನೇಜರ್ ಆಗಿದ್ದ ಶ್ರೀನಿವಾಸ್‍ಗೆ ಗೇಟ್‍ಪಾಸ್ ನೀಡಲಾಗಿದೆ. ಈ ಕುರಿತು ಇವತ್ತು ದರ್ಶನ್‍ರ ಅಫಿಶಿಯಲ್ ಫ್ಯಾನ್ಸ್ ಪೇಜ್ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಮ್ಯಾನೇಜರ್​ ಶ್ರೀನಿವಾಸ್ ಅವರ ಫೋಟೋ ಜೊತೆಗೆ ಒಂದು ಪೋಸ್ಟ್​ ಮಾಡಲಾಗಿದೆ. 'ನಮ್ಮ ಡಿಬಾಸ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್‍ರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿಬಾಸ್‍ರವರ ಹೆಸರಿನಲ್ಲಿ ಯಾವುದೇ ವ್ಯವಹಾರ ಮಾಡದಿರಿ' ಎಂದು ದರ್ಶನ್​ ಅವರ ಅಭಿಮಾನಿಗಳ ಟ್ವಿಟರ್​ ಪುಟದಲ್ಲಿ ಶೇರ್​ ಮಾಡಲಾಗಿದೆ.

10.ಕೊನೆಗೂ ವಿವಾದಾತ್ಮಕ ಸೂಪರ್ ಓವರ್​ ನಿಯಮ ಕೈಬಿಟ್ಟ ಐಸಿಸಿ..!

2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರಿ ಟೀಕೆಗೆ ಕಾರಣವಾದ ಸೂಪರ್ ಓವರ್​ನ ಬೌಂಡರಿ ಕೌಂಟ್ ನಿಯಮವನ್ನು ಕೊನೆಗೂ ಐಸಿಸಿ ಬದಲಾಯಿಸಿದೆ. ಅದರಂತೆ ಇನ್ನು ಮುಂದೆ ಸೂಪರ್ ಓವರ್ ಟೈ ಆದರೆ ಪಂದ್ಯವನ್ನು ಕೊನೆವರೆಗೂ ಮುಂದುವರೆಸುವುದಾಗಿ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ. ಕ್ರಿಕೆಟ್​ನಲ್ಲಿ ಎರಡೂ ತಂಡಗಳ ಸ್ಕೋರ್​ ಸಮಗೊಂಡರೆ  ಸೂಪರ್ ಓವರ್ ಆಡಿಸಲಾಗುತ್ತಿತ್ತು. ಇದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೂ ಅನ್ವಯವಾಗುತ್ತಿತ್ತು. ಆದರೆ ಇದೀಗ ಬಂದಿರುವ ಹೊಸ ನಿಮಯದ ಪ್ರಕಾರ ಸೂಪರ್ ಓವರ್ ಸಮವಾದರೂ, ಒಂದು ತಂಡ ಗೆಲ್ಲುವವರೆಗೂ ಸೂಪರ್ ಓವರ್ ಮುಂದುವರೆಯಲಿದೆ.
First published: October 16, 2019, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading