Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:October 5, 2019, 6:27 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಸರ್ಕಾರ ಸೂಚಿಸಿದರೆ ಯಾವುದೇ ಗುರಿಯನ್ನಾದರೂ ನಾಶ ಮಾಡಲು ಸಿದ್ಧ: ಭಾರತೀಯ ವಾಯುಪಡೆ

ಭಾರತ-ಪಾಕ್ ವೈಮಾನಿಕ ಸಂಘರ್ಷದ ವೇಳೆ ಭಾರತೀಯ ಹೆಲಿಕಾಪ್ಟರನ್ನು ತಮ್ಮ ಕ್ಷಿಪಣಿಯೇ ಹೊಡೆದುರುಳಿಸಿತು ಎಂದು ಒಪ್ಪಿಕೊಂಡ ಭಾರತೀಯ ವಾಯು ಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭಡೂರಿಯಾ ಇದೀಗ ತಮ್ಮ ಪಡೆ ಎಂಥ ಪರಿಸ್ಥಿಗೂ ಸಿದ್ಧ ಎಂದು ತಿಳಿಸಿದ್ದಾರೆ. ಸರ್ಕಾರ ಸೂಚಿಸಿದರೆ ಯಾವುದೇ ಗುರಿಯನ್ನೂ ಹೊಡೆದು ನಾಶ ಪಡಿಸಲು ವಾಯು ಪಡೆ ಸನ್ನದ್ಧವಾಗಿದೆ ಎಂದು ಭಡೂರಿಯಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

2.ಕಾಶ್ಮೀರದಲ್ಲಿ ಉಗ್ರರಿಂದ ಮತ್ತೆ ಗ್ರೆನೇಡ್ ದಾಳಿ; ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಜನರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ

ಶಂಕಿತ ಉಗ್ರರು ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಉಗ್ರರು ನಡೆಸಿರುವ ಈ ಗ್ರೆನೇಡ್ ದಾಳಿಯಲ್ಲಿ ಓರ್ವ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 8 ಜನರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಒಬ್ಬರ ಎದೆಗೆ ತೀವ್ರ ತೆರನಾದ ಪೆಟ್ಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅನಂತ್​ನಾಗ್ ಜಿಲ್ಲೆಯಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
 3.ಮೆಟ್ರೋಗಾಗಿ 2500 ಮರಗಳ ಮಾರಣ ಹೋಮ; ರಾತ್ರೋರಾತ್ರಿ ಬೀದಿಗಳಿದ ಮುಂಬೈನ 200 ಹೋರಾಟಗಾರರ ಬಂಧನ


ಮುಂಬೈನ ಆರೆ ಎಂಬಲ್ಲಿ ಮೆಟ್ರೋ 3ನೇ ಹಂತದ ಕಾಮಗಾರಿಗಾಗಿ ಸುಮಾರು 2,500 ಕ್ಕೂ ಹೆಚ್ಚಿನ ಮರಗಳನ್ನು ಕಡಿಯಲು ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಹೀಗಾಗಿ ರಾತ್ರೋರಾತ್ರಿ ಮರ ಕಡಿಯಲು ಮುಂದಾದ ಅಧಿಕಾರಿಗಳ ಕ್ರಮ ಖಂಡಿಸಿ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಪರಿಣಾಮ 200 ಕ್ಕೂ ಹೆಚ್ಚಿನ ಜನರನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

4.ಪಾಕಿಸ್ತಾನದಿಂದ ಹಣ ಪಡೆದು ಚಿತಾವಣೆ; ಕಾಶ್ಮೀರಿ ಪ್ರತ್ಯೇಕತಾವಾದಿಗಳ ವಿರುದ್ಧ ಚಾರ್ಜ್​ಶೀಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ಅಸ್ಥಿರ ವಾತಾರಣ ನಿರ್ಮಿಸಲು ಪಾಕಿಸ್ತಾನ ಕುತಂತ್ರ ರೂಪಿಸಿದೆ. ಇಲ್ಲಿಯ ಪ್ರತ್ಯೇಕತಾವಾದಿಗಳಿಗೆ ಹಣ ನೀಡಿ, ಭಯೋತ್ಪಾದನೆಗೆ ಪ್ರಚೋದನೆ ಮಾಡಿದೆ ಎಂದು ಭಾರತದ ರಾಷ್ಟ್ರೀಯ ತನಿಖಾ ದಳ ಆರೋಪಿಸಿದೆ. ಯಾಸಿನ್ ಮಲಿಕ್ ಸೇರಿದಂತೆ ವಿವಿಧ ಕಾಶ್ಮೀರೀ ಪ್ರತ್ಯೇಕತಾವಾದಿ ಹೋರಾಟಗಾರರ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಎನ್​​ಐಎ ಚಾರ್ಜ್ ಶೀಟ್ ದಾಖಲಿಸಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆ ನಡೆಸಿದ್ದಾರೆ, ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಯಾಸಿನ್ ಮಲಿಕ್, ಅಸಿಯಾ ಆಂದ್ರಾಬಿ, ಮಸರತ್ ಅಲಮ್, ಶಬೀರ್ ಅಹ್ಮದ್ ಶಾ ಮತ್ತು ಅಬ್ದುಲ್ ರಷೀದ್ ಶೇಖ್ ವಿರುದ್ಧ ಆರೋಪ ಮಾಡಲಾಗಿದೆ.

5.ಪ್ರಸಕ್ತ ವರ್ಷದಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್​ ಪರೀಕ್ಷೆ ನಡೆಸಲು ಚಿಂತನೆ; ಸುರೇಶ್​ ಕುಮಾರ್​​​

ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಏಳನೇ ತರಗತಿ ಮಕ್ಕಳಿಗೆ ಪಬ್ಲಿಕ್​ ಪರೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದರು. ಏಳನೇ ತರಗತಿಗೆ ಪಬ್ಲಿಕ್​ ಪರೀಕ್ಷೆ ನಡೆಸುವುದರಿಂದ  ಮಕ್ಕಳ ಕಲಿಕಾ ಗುಣಮಟ್ಟ ಅಭಿವೃದ್ಧಿಯಾಗುತ್ತದೆ.  ಪಬ್ಲಿಕ್​ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯಬೇಡ. ಪಬ್ಲಿಕ್​ ಪರೀಕ್ಷೆ ನಡೆಸುವ ಉದ್ದೇಶ ವಿದ್ಯಾರ್ಥಿಗಳನ್ನು ಫೇಲ್​ ಮಾಡುವುದಲ್ಲ. ಪ್ರಯೋಗಿಕವಾಗಿ ಪಬ್ಲಿಕ್​ ಪರೀಕ್ಷೆ ಏರ್ಪಡಿಸಲಾಗುವುದು ಎಂದರು.

6.ತುಮಕೂರಲ್ಲಿ ಪರಿಹಾರ ಪಡೆಯಲು ಸಂತ್ರಸ್ತರೇ ಮುಂದೆ ಬರುತ್ತಿಲ್ಲ, ಏನು ಮಾಡುವುದು?: ಮಾಧುಸ್ವಾಮಿ

ನೆರೆ ಸಂತ್ರಸ್ತರ ಪರಿಹಾರ ಕುರಿತು ರಾಜ್ಯ ಸರ್ಕಾರ ತ್ವರಿತಗತಿ ಪರಿಹಾರಕ್ಕೆ ಮುಂದಾಗಿದೆ. ಆದರೆ, ಸಂತ್ರಸ್ತರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು 50 ಸಾವಿರ ನೀಡಲಾಗುತ್ತಿದೆ. ಈ ಕುರಿತು ಅರ್ಜಿಯನ್ನು ನೀಡುವಂತೆಕೂಡ ಸಂತ್ರಸ್ತರಿಗೆ ಮನವಿ ಮಾಡಲಾಗಿದೆ. ಆದರೆ ಈ ವರೆಗೆ ಸಲ್ಲಿಗೆಯಾಗಿರುವ ಅರ್ಜಿಗಳು ಕೇವಲ 9 ಸಾವಿರ ಮಾತ್ರ.

7.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆಯ ಸ್ವಾಗತ

ತೆರಿಗೆ ಸಲಹೆಗಾರರ ಸಮ್ಮೇಳನಕ್ಕೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಯ ಸ್ವಾಗತ ಸಿಕ್ಕಿದೆ. ನೆರೆ ಪರಿಹಾರಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಮಾನ ನಿಲ್ದಾಣದ ಎದುರು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸಮರ್ಪಕ ನೆರೆ ಪರಿಹಾರ ನೀಡುತ್ತಿಲ್ಲವೆಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. "ಡೌನ್ ಡೌನ್ ನಿರ್ಮಲಾ ಸೀತಾರಾಮನ್" ಎಂದು ಕೂಗಿ ಆಕ್ರೋಶ‌ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ ಪೊಲೀಸರು ಗೋಕುಲ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ದರು.

8.ಬೊಕ್ಕಸ ಖಾಲಿಯಾಗಿದೆ ಎಂಬ ಸಿಎಂ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ; ತಂದೆ ಸಮರ್ಥಿಸಿಕೊಂಡ ಬಿವೈ ರಾಘವೇಂದ್ರ

ರಾಜ್ಯದಲ್ಲಿನ ಭೀಕರ ಪ್ರವಾಹದಿಂದಾದ ಹಾನಿ ಕುರಿತು ಸರ್ಕಾರ ಸಲ್ಲಿಸಿದ ಯಾವುದೇ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಲ್ಲ. ಕೇಂದ್ರ ಹೆಚ್ಚಿನ ಮಾಹಿತಿಯನ್ನು ಕೇಳಿದೆ ಅಷ್ಟೇ. ವರದಿ ತಿರಸ್ಕರಿಸಿದೆ ಎಂಬುದು ತಪ್ಪು ತಿಳುವಳಿಕೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರವಾಹ ಪರಿಹಾರವಾಗಿ ಕೇಂದ್ರ ಸರ್ಕಾರ 1200 ಕೋಟಿ ಮಧ್ಯಂತರ ಹಣ ಬಿಡುಗಡೆ ಮಾಡಿದ್ದು, ಹಂತ ಹಂತವಾಗಿ ಉಳಿದ ಅನುದಾನ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

9.ಶೂಟಿಂಗ್ ಮಾಡುವಾಗ ನಾಯಕನಟನ ಕೆಟ್ಟ ಬೆವರಿನ ವಾಸನೆಗೆ ನಟಿ ರಾಕುಲ್ ರಿಯಾಕ್ಷನ್ ಹೇಗಿತ್ತು?

ಭಾರತೀಯ ಸಿನಿ ರಂಗದಲ್ಲಿ ಬರುವ ಸಿನಿಮಾಗಳಲ್ಲಿ ಹೆಚ್ಚಿನ ಪಾಲು ನಾಯಕ ಪ್ರಧಾನ ಚಿತ್ರಗಳಾಗಿರುತ್ತವೆ. ಹೀಗಿರುವಾಗ ಸ್ಟಾರ್​ ನಟರ ಸಿನಿಮಾಗಳಲ್ಲಿ ಅವರದ್ದೇ ಮೇಲುಗೈ ಇಲ್ಲಿ ನಾಯಕಿಯರು ಯಾವುದೇ ವಿಷಯದ ಬಗ್ಗೆ ಚಕಾರ ಎತ್ತುವಂತಿರುವುದಿಲ್ಲ. ಈ ಹಿಂದೆ ಬಹುಭಾಷಾ ನಟಿ ಕತ್ರಿನಾ ಕೈಫ್​ ಬಾಲಿವುಡ್​ ನಟರ ಬಗ್ಗೆ ಸಮಧಾನ ವ್ಯಕ್ತಪಡಿಸಿದ್ದರು. ತಾವು ಅಭಿನಯಿಸಿದ ಬಾಲಿವುಡ್​ ಸಿನಿಮಾಗಳಲ್ಲಿ ಕೆಲವರು ಚಿತ್ರೀಕರಣದ ಸೆಟ್​ಗೆ ಬರುವಾಗ ಸ್ನಾನ ಕೂಡ ಮಾಡಿ ಬಂದಿರುತ್ತಿರಲಿಲ್ಲ. ಅವರೊಂದಿಗೆ ಅಭಿಮನಯಿಸೋಕೆ ಕಷ್ಟವಾಗುತ್ತೆ ಅಂತ ಹೇಳುವ ಮೂಲಕ ತಮಗಾಗಿದ್ದ ಕಹಿ ಅನುಭವವನ್ನು ಹಂಚಿಕೊಂಡಿದ್ದರು.

10.ವೈಜಾಗ್​ನಲ್ಲಿ ಇತಿಹಾಸ ಸೃಷ್ಟಿಸಿದ ಹಿಟ್​ಮ್ಯಾನ್; 1994ರ ದಾಖಲೆ 2019ರಲ್ಲಿ ಉಡೀಸ್

ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. 431 ರನ್​ಗೆ ಹರಿಣಗಳನ್ನು ಆಲೌಟ್ ಮಾಡಿ 2ನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಈ ನಡುವೆ ಹಿಟ್​ಮ್ಯಾನ್ ರೋಹಿತ್ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ 6 ಸಿಕ್ಸರ್ ಸಿಡಿಸಿದ್ದ ರೋಹಿತ್ ಸದ್ಯ ಎರಡನೇ ಇನ್ನಿಂಗ್ಸ್​ನಲ್ಲೂ 4 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಬ್ಯಾಟ್​​ನಿಂದ 3ನೇ ಸಿಕ್ಸರ್ ಸಿಡಿಯುತ್ತಿದ್ದಂತೆ ಮಹತ್ವದ ದಾಖಲೆ ನಿರ್ಮಾಣವಾಗಿದೆ.

First published: October 5, 2019, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading