• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • NR Santosh: ಎನ್‌ಆರ್ ಸಂತೋಷ್‌ಗೆ ಕೈತಪ್ಪಿದ ಅರಸೀಕೆರೆ ಟಿಕೆಟ್‌; ಕುತೂಹಲ ಮೂಡಿಸಿದ ಬಿಎಸ್‌ವೈ ಮಾಜಿ ಆಪ್ತನ ನಡೆ

NR Santosh: ಎನ್‌ಆರ್ ಸಂತೋಷ್‌ಗೆ ಕೈತಪ್ಪಿದ ಅರಸೀಕೆರೆ ಟಿಕೆಟ್‌; ಕುತೂಹಲ ಮೂಡಿಸಿದ ಬಿಎಸ್‌ವೈ ಮಾಜಿ ಆಪ್ತನ ನಡೆ

NR Santosh

NR Santosh

ಒಂದು ಕಾಲದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದ ಎನ್‌ಆರ್ ಸಂತೋಷ್ ತನಗೆ ಅರಸೀಕರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಸಿಡಿದೆದ್ದಿದ್ದಾರೆ. ಯಾರಿದು ಎನ್‌ಆರ್ ಸಂತೋಷ್? ಅವರ ರಾಜಕೀಯ ಬೆಳವಣಿಗೆ ಏನು? ಇಲ್ಲಿದೆ ಡೀಟೇಲ್ಸ್

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ಆಡಳಿತಾರೂಢ ಬಿಜೆಪಿ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಗೆ ತನ್ನ ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳನ್ನು ಘೋಷಿಸಿದೆ. ಜೊತೆಗೆ ಆರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಮಧ್ಯೆ ಜೆಡಿಎಸ್ ವಶದಲ್ಲಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ.


ಹೌದು.. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಆಪ್ತ, ಎನ್‌ಆರ್ ಸಂತೋಷ್ ಅವರು ಅರಂಭದಿಂದಲೂ ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಎರಡನೇ ಪಟ್ಟಿಯಲ್ಲಿ ಎನ್‌ಆರ್ ಸಂತೋಷ್ ಅವರಿಗೆ ಅರಸೀಕೆರೆ ಟಿಕೆಟ್ ಕೈತಪ್ಪಿದೆ. ಆಗಾಗ ವಿವಾದಗಳ ಮೂಲಕ ಸದ್ದು ಮಾಡುತ್ತಿದ್ದ ಎನ್‌ಆರ್ ಸಂತೋಷ್ 2019ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಎಸ್‌ವೈ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಕಣ್ಣೀರಿಟ್ಟ ಎನ್‌ಆರ್ ಸಂತೋಷ್


ಅರಸೀಕೆರೆ ಟಿಕೆಟ್‌ ತಪ್ಪಿರೋದ್ರಿಂದ ಎನ್‌ಆರ್ ಸಂತೋಷ್‌ಗೆ ಮುಖಭಂಗ ಉಂಟಾಗಿದ್ದು, ಅವರ ಅಭಿಮಾನಿಗಳು ಬಿಎಸ್‌ ಯಡಿಯೂರಪ್ಪ ವಿರುದ್ಧ ಟಿಕೆಟ್ ತಪ್ಪಿದ್ದಕ್ಕೆ ಕಿಡಿಕಾರಿದ್ದಾರೆ. ಈ ಮಧ್ಯೆ ಟಿಕೆಟ್ ಮತ್ತೊಬ್ಬರ ಪಾಲಾಗುತ್ತಿದ್ದಂತೆ ಕಣ್ಣೀರಿಟ್ಟ ಎನ್‌ ಆರ್ ಸಂತೋಷ್ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಷ್ಟೇ ಸಂತೋಷ್ ಅಭಿಮಾನಿಗಳು ಬಿಜೆಪಿ ಪಕ್ಷದ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದಿರುವ ಎನ್ ಆರ್ ಸಂತೋಷ್ ತಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಅಂತಾ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ನನಗೆ ಸ್ವಲ್ಪ ಸಮಯ ಕೊಡಿ, ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಈ ಬಗ್ಗೆ ಒಂದೆರೆಡು ದಿನದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರುತ್ತೇನೆ’ ಎಂದು ಹೇಳಿದ್ದರು.


ಇದನ್ನೂ ಓದಿ: Bhagirathi Murulya: ಹಾಲಿ ಸಚಿವ ಅಂಗಾರ ಜಾಗಕ್ಕೆ ಹೊಸ ಮುಖ ಎಂಟ್ರಿ! ಯಾರಿದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ?


ಅಂದ ಹಾಗೆ, 2013-14ರಲ್ಲಿ ಎಲ್ಲಿಂದಲೋ ಬಂದು ರಾತ್ರೋರಾತ್ರಿ ಬಿಎಸ್‌ವೈ ಅವರ ಆಪ್ತರಾಗಿದ್ದ ಎನ್ ಆರ್ ಸಂತೋಷ್ ಅವರದ್ದು ಇಂದಿಗೂ ನಿಗೂಢ ಪಾತ್ರ. 2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಅವರು ರಾಜ್ಯ ಬಿಜೆಪಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು, ಮಾತ್ರವಲ್ಲದೇ ಅಗಾಧವಾದ ಪ್ರಭಾವವನ್ನು ಹೊಂದಿದ್ದರು. 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ‘ಹೈಜಾಕ್’ ಮಾಡಿ ಮುಂಬೈನ ರೆಸಾರ್ಟ್‌ಗೆ ಕರೆದೊಯ್ದು ಕಾಂಗ್ರೆಸ್‌ ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಎನ್‌ಆರ್‌ ಸಂತೋಷ್‌ ಪ್ರಮುಖ ಪಾತ್ರ ವಹಿಸಿದ್ದರು. ಎನ್‌ಆರ್ ಸಂತೋಷ್ ಶಾಸಕರನ್ನು ಮುಂಬೈಗೆ ಕರೆದೊಯ್ದ ಪರಿಣಾಮ ಕರ್ನಾಟಕದಲ್ಲಿ 14 ತಿಂಗಳ ಕಾಲ ಆಡಳಿತ ನಡೆಸಿದ್ದ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನ ಆಗಿತ್ತು.


ಮುಂಬೈ ಟೀಂ ಜೊತೆ ಸಂತೊಷ್ ಸಕ್ರಿಯ


ವಿಶೇಷ ಅಂದ್ರೆ ಅಂದು ಶಾಸಕರನ್ನು ಮುಂಬೈಗೆ ಕರೆದೊಯ್ಯುವ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಎನ್‌ಆರ್ ಸಂತೋಷ್ ನಿಕಟವಾಗಿ ಕೆಲಸ ಮಾಡಿದ್ದರು. ಈ ವೇಳೆ ಎನ್‌ ಆರ್ ಸಂತೋಷ್‌ಗೆ ಬಿಎಸ್‌ವೈ ಉತ್ತಮವಾದ ಉಡುಗೊರೆಯನ್ನು ನೀಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ಸಿಎಂ ಕಚೇರಿಯ ಸಂಪೂರ್ಣ ಉಸ್ತುವಾರಿಯನ್ನು ಪಡೆದುಕೊಂಡು ಎನ್‌ಆರ್ ಸಂತೋಷ್ ಅವರ ರೆಕ್ಕೆಗಳನ್ನು ಕತ್ತರಿಸಲು ಶುರು ಮಾಡಿದ್ದರು. ಸಂತೋಷ್ ಮಾಡಿದ್ದ ಸಹಾಯಕ್ಕೆ ಏನಾದರೂ ಕೊಡಲೇಬೇಕಾದ ಅನಿವಾರ್ಯತೆಗೆ ಬಿದ್ದ ಬಿಎಸ್‌ವೈ ಎನ್ ಆರ್ ಸಂತೋಷ್ ಅವರನ್ನು ಸಲಹೆಗಾರರನ್ನಾಗಿ ನೇಮಿಕೊಳ್ತಾರೆ. ಇಲ್ಲೂ ಇಂಟರೆಸ್ಟಿಂಗ್ ಪಾಯಿಂಟ್ ಅಂದ್ರೆ, ಸಲಹೆಗಾರರಾಗಿದ್ದರೂ ಎನ್ಆರ್ ಸಂತೋಷ್‌ಗೆ ಅಧಿಕಾರಕ್ಕೆ ಸಂಬಂಧಿಸಿದ ಸವಲತ್ತುಗಳನ್ನು ನಿರಾಕರಿಸಲಾಯಿತು.


ಮುಂದುವರಿದು ಸಲಹೆಗಾರ ಸ್ಥಾನದಿಂದ ಹೊರಹೋಗುವಂತೆ ಕೇಳಿದಾಗ ಮುಖಭಂಗ ಮತ್ತು ಅವಮಾನ ಅನುಭವಿಸಿದ್ದ ಎನ್‌ಆರ್ ಸಂತೋಷ್ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಇದರಿಂದ ಬಿಎಸ್‌ವೈ ಸಂತೋಷ್‌ರನ್ನು ವಜಾಗೊಳಿಸಲು ನಿರ್ಧರಿಸಿದರು. ಈ ಎಲ್ಲಾ ಬೆಳವಣಿಗೆಗಳ ನಂತರ ಎನ್‌ಆರ್ ಸಂತೋಷ್ ತನ್ನ ವಾಸ್ತವ್ಯದ ನೆಲೆಯನ್ನು ಹಾಸನ ಜಿಲ್ಲೆಯ ಅರಸೀಕೆರೆಗೆ ಬದಲಾಯಿಸುತ್ತಾರೆ. ಅರಸೀಕೆರೆಯಲ್ಲಿ ಮನೆಯನ್ನು ನಿರ್ಮಿಸಿ ಅಲ್ಲಿನ ಜನರ ಜೊತೆ ಬೆರೆಯುತ್ತಾರೆ. ಜೊತೆಗೆ ಎರಡು ವರ್ಷಗಳಿಂದ ಅರಸೀಕೆರೆಯಿಂದ ತಾನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿ ಮತದಾರರು ಹಾಗೂ ಅಭಿಮಾನಿಗಳನ್ನು ಸೇರಿಸಿ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಲು ಅಪಾರ ಹಣವನ್ನೂ ವ್ಯಯಿಸ್ತಾರೆ. ಜೊತೆಗೆ ಆರೆಸ್ಸೆಸ್‌ನ ಉನ್ನತ ನಾಯಕರನ್ನು ತನ್ನ ಗಾಡ್‌ ಫಾದರ್ ಎಂದು ಹೇಳುತ್ತಲೇ ವಿಜಯೇಂದ್ರ ವಿರುದ್ಧ ಖಾಸಗಿಯಾಗಿ ವಾಗ್ದಾಳಿ ಮಾಡಿದ್ದರು.


ಇದನ್ನೂ ಓದಿ: Karnataka Election 2023: ಎನ್​​ ಆರ್ ಸಂತೋಷ್​​ಗೆ ತಪ್ಪಿದ ಅರಸೀಕೆರೆ ಟಿಕೆಟ್​​; ಬಿಜೆಪಿ ಬಾವುಟ ಸುಟ್ಟು ಹಾಕಿ ಕಾರ್ಯಕರ್ತರ ಆಕ್ರೋಶ


ಈ ಮಧ್ಯೆ ಎನ್‌ಆರ್ ಸಂತೋಷ್‌ನ ಚಟುವಟಿಕೆಗಳು ವಿಜಯೇಂದ್ರಗೆ ಆತಂಕ ಮೂಡಿಸಿದ್ದು, ಸಂತೋಷ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಬಿಎಸ್‌ವೈಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆ ಬಳಿಕ ಬಿಎಸ್‌ವೈ ಸಿಎಂ ಸ್ಥಾನ ತ್ಯಜಿಸುತ್ತಾರೆ. ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಬರುತ್ತಿದ್ದಂತೆ ಬಿವೈ ವಿಜಯೇಂದ್ರ ಅವರ ಹಿಡಿತ ಕೈತಪ್ಪುತ್ತೆ. ಆಗ ಅರಸೀಕೆರೆಯಿಂದ ಸಂತೋಷ್ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತ ಎಂದು ಜನ ಭಾವಿಸಿದ್ದರು.


ಟಿಕೆಟ್ ತಪ್ಪಲು ಬಿಎಸ್‌ವೈ ಕಾರಣ?


ಅರಸೀಕೆರೆಯಿಂದ ತಾನೇ ಬಿಜೆಪಿ ಅಭ್ಯರ್ಥಿ ಎಂದು ಖಚಿತವಾಗಿ ನಂಬಿಕೊಂಡಿದ್ದ ಸಂತೋಷ್‌, ಕಳೆದ ಎರಡು ವರ್ಷಗಳಲ್ಲಿ ಅರಸೀಕೆರೆಯಲ್ಲಿ ವಿವಿಧ ಚಟುವಟಿಕೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಅವರ ದುರಾದೃಷ್ಟಕ್ಕೆ ಬಿಜೆಪಿ ಹೈಕಮಾಂಡ್ ಬಿಎಸ್‌ವೈ ಅವರನ್ನು ಆರು ತಿಂಗಳ ಹಿಂದೆ ಪಕ್ಷದ ಪ್ರಚಾರ ಮುಖ್ಯಸ್ಥರನ್ನಾಗಿ ಮಾಡಿತು. ಕರ್ನಾಟಕದ ಚುನಾವಣೆಗಳು ಜಾತಿ ಮತ್ತು ಉಪಜಾತಿಗಳಿಗೆ ಸಂಬಂಧಿಸಿವೆ ಅನ್ನೋದನ್ನು ಅರಿತುಕೊಂಡ ವರಿಷ್ಠರು, ಎನ್‌ಆರ್‌ ಸಂತೋಷ್ ಅವರ ಅರಸೀಕೆರೆಯ ಕನಸಿಗೆ ತಣ್ಣೀರು ಎರಚುವ ಅಭ್ಯರ್ಥಿಯನ್ನು ನಿರ್ಧರಿಸಲು ಬಿಎಸ್‌ವೈಗೆ ಅವಕಾಶ ಮಾಡಿಕೊಟ್ಟರು.


top videos



    ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಬಿಜೆಪಿ ಪಕ್ಷದಲ್ಲಿ ಬಿಎಸ್‌ವೈ ಅವರ ಪ್ರತಿಸ್ಪರ್ಧಿ ಆಗಿದ್ದ ಕೆಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ವಿರುದ್ಧ ‘ಸ್ಟಿಂಗ್‌’ ಆಪರೇಷನ್ ಮಾಡಿದ ನಂತರ ಎನ್‌ಆರ್‌ ಸಂತೋಷ್‌ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಮತ್ತೆ ಬಿಎಸ್‌ವೈ ಅಧಿಕಾರಕ್ಕೆ ಬಂದ ನಂತರ ಸಂತೋಷ್‌ ವಿರುದ್ಧದ ಪ್ರಕರಣವನ್ನು ಸದ್ದಿಲ್ಲದೆ ಸಮಾಧಿ ಮಾಡಲಾಗಿತ್ತು. ಅಂದಹಾಗೆ, ತಾನು ಬಿಎಸ್‌ವೈ ಅವರ ಸೊಸೆಯ ಮೊಮ್ಮಗ ಎಂದು ಸಂತೋಷ್ ಹೇಳಿಕೊಳ್ಳುತ್ತಾರೆ. ಬಿಎಸ್‌ವೈ ಆಪ್ತೆ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಸಂತೊಷ್ ಆಪ್ತರಾಗಿದ್ದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು