ವಾರಾಣಸಿ (ಮೇ.16): ಕಾಶೀ ವಿಶ್ವನಾಥ (Kashi Vishwanath) ಮಂದಿರದ ಭಾಗ ಕೆಡವಿ ಗ್ಯಾನವಾಪಿ (Gyanvapi Mosque) ಮಸೀದಿ ನಿರ್ಮಾಣ ಮಾಡಲಾಗಿದೆ ಅನ್ನೋ ವಿಚಾರ ವಿವಾದಕ್ಕೆ ಕಾರಣವಾಗಿದೆ. ವಿವಾದಕ್ಕೆ ತೆರೆ ಎಳೆಯಲು ವಾರಾಣಸಿ ಜಿಲ್ಲಾ ನ್ಯಾಯಾಲಯ (Varanasi District Court) ಸರ್ವೆ ಕಾರ್ಯ ನಡೆಸಲು ಸೂಚಿಸಿತ್ತು. ಸರ್ವೆಯಲ್ಲಿ ಮಸೀದಿಯಡಿ ಶಿವಲಿಂಗ ಪತ್ತೆಯಾಗಿದ್ದು, ಪರಿಣಾಮ ಗ್ಯಾನವಾಪಿ ಮಸೀದಿಯ ಸಂಪೂರ್ಣ ಆವರಣವನ್ನು ಸೀಲ್ ಮಾಡಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಇತ್ತ ಸರ್ವೆ, ಸಮೀಕ್ಷೆಗೂ ಮುನ್ನವೇ ಕರ್ನಾಟಕದ ಕಾದಂಬರಿಕಾರರಾದ ಎಸ್.ಎಲ್ ಭೈರಪ್ಪ (S.L Bhyrappa) ಅವರ ಆವರಣ ಪುಸ್ತಕದಲ್ಲಿ ಗ್ಯಾನವಾಪಿ ಶಿವಲಿಂಗದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಆವರಣ ಪುಸ್ತಕದ ಪುಟಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು ಭಾರೀ ಸುದ್ದಿಯಾಗಿದೆ.
ಕಾಶಿಯ ಗ್ಯಾನವ್ಯಾಪಿಯ ಸತ್ಯದ ಬಗ್ಗೆ 2007ರಲ್ಲಿ ಪ್ರಕಟವಾದ ಆವರಣ ಕಾದಂಬರಿಯಲ್ಲಿ ಎಸ್.ಎಲ್ ಭೈರಪ್ಪ ಅವ್ರು ಉಲ್ಲೇಖ ಮಾಡಿದ್ರು. ಇದೀಗ ಕರ್ನಾಟಕದಲ್ಲಿ ಎಸ್.ಎಲ್.ಭೈರಪ್ಪ ಬರೆದಿರುವ ಆವರಣ ಕಾದಂಬರಿಯ ಸಾಲುಗಳು ಚರ್ಚೆಗೆ ಬಂದಿವೆ. ಸಾಕಷ್ಟು ವಾಟ್ಸ್ಯಾಪ್ ಗುಂಪುಗಳಲ್ಲಿ ಆವರಣ ಕಾದಂಬರಿಯಲ್ಲಿ ಕಾಶಿ ಬಗ್ಗೆ ಉಲ್ಲೇಖವಾಗಿರೋ 184, 185, 186, 187ನೇ ಪುಟಗಳ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.
ವಿವಾದಕ್ಕೀಡಾಗಿದ್ದ ‘ಆವರಣ’
ಆವರಣ ಪುಸ್ತಕ ಪ್ರಕಟವಾದ ದಿನದಿಂದಲೇ ಕಾದಂಬರಿಯಲ್ಲಿ ಉಲ್ಲೇಖವಾಗಿರೋ ಹಿಂದೂ ಮುಸ್ಲಿಂ ವಿಚಾರಗಳು ಭಾರೀ ಚರ್ಚೆ ಹಾಗೂ ವಿವಾದಕ್ಕೀಡಾಗಿತ್ತು. ಈ ವಿವಾದಗಳ ಬಗ್ಗೆ ಮಾತಾಡಿದ ಭೈರಪ್ಪ ಅವ್ರು, ಸತ್ಯ ಮತ್ತು ಸೌಂದರ್ಯದ ತಾಕಲಾಟದಲ್ಲಿ, ನನ್ನ ಆಯ್ಕೆ ಸತ್ಯ. ಆವರಣ ನನ್ನ ಎರಡನೇ ಐತಿಹಾಸಿಕ ಕಾದಂಬರಿ. ಬರೆಯುವಾಗಲೇ ವಿವಾದ ಸೃಷ್ಟಿಯಾಗುತ್ತದೆ ಎಂಬುದು ನನಗೆ ಗೊತ್ತಿತ್ತು. ಎಂದು ಹೇಳುವ ಮೂಲಕ ವಿಮರ್ಶಾಕಾರರಿಗೆ ತಕ್ಕ ಉತ್ತರ ನೀಡಿದ್ರು.
ಇದನ್ನೂ ಓದಿ: Gyanavapi: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತಂತೆ ಶಿವಲಿಂಗ! ನಾಳೆಯೇ ಕೋರ್ಟ್‌ಗೆ ಅಂತಿಮ ವರದಿ
‘ಆವರಣ’ದಲ್ಲಿ ಗ್ಯಾನವಾಪಿ ಬಗ್ಗೆ ಉಲ್ಲೇಖವಾಗಿರೋ ಸಾಲುಗಳು
ಯಾವುದು? ಯಾವುದು? ವಿಶಾಲಕ್ಷಿ ತಿಳಯದೆ ಕೇಳಿದಳು. ಸುಬ್ಬಣ್ಣಭಾವ ಕೂಡ ಯಾವುದು? ಎಂದರು. ಸಣ್ಣ ಮಂಟಪ. ಹಳ್ಳಿಯ ಬಡಭಕ್ತನು ತಿರುಪೆ ಮಾಡಿ ಊರ ಮುಂದೆ ಕಟ್ಟಿಸಿರುವಷ್ಟು ಕಿರುದು. ಮಂಟಪಕ್ಕೆ ಪ್ರದಕ್ಷಿಣೆ ಹಾಕುವ ಸಂದಣಿಗೆ ಸ್ಥಳವಿಲ್ಲ. ‘ಕಾಶಿ ವಿಶ್ವನಾಥ ಮಂದಿ ಅಂದರೆ ಇದೇನಾ?’ ವಿಶಾಲಾಕ್ಷಿ ಸುಬ್ಬಣ್ಣ ಇಬ್ಬರೂ ಒಂದೇ ಸಲ ಒಂದೇ ವಾಕ್ಯದಿಂದ ಉದ್ಗರಿಸಿದರು. ಇತಿಹಾಸವನ್ನು ಓದಿದ್ದ ಲಕ್ಷ್ಮಿ ಉದ್ಗರಿಸಲಿಲ್ಲ. ಆದರೆ ಅವಳ ಬುದ್ಧಿ ಕುಸಿದಂತಾಯಿತು.
‘ಇಲ್ಲಿ ಬನ್ನಿ ತೋರುಸ್ತೀನಿ. ಜಾಗ ಬಿಡಿಸಿಕೊಂಡು ತುಸು ಓರೆಯಾಗಿ ನಡೆದು ಸರ್ಮಾ ಮೂವರನ್ನೂ ಒಂದು ಕಲ್ಲಿನ ಬಸವಣ್ಣನ ಹತ್ತಿರಕ್ಕೆ ಕರೆತಂದು ಹೇಳಿದ: ‘ಯಾವಾಗಲೂ ಈಶ್ವರನ ಗುಡಿಯ ಮುಂದೆ ತಾನೆ ನಂದಿ ಕೂತಿರೂದು. ಅದು ಧ್ಯಾನಿಸಿ ನೋಡುವುದು ಒಳಗಿರುವ ಲಿಂಗವನ್ನಲ್ಲವೆ? ಈ ನಂದಿ ಏನನ್ನ ನೋಡ್ತಿದೆ ನೋಡಿ ಅರ್ಥಮಾಡ್ಕಳಿ.
ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?
ಲಕ್ಷ್ಮಿಗೆ ಥಟ್ಟನೆ ಅರ್ಥವಾಯಿತು. ಮುಘಲ್ಸರಾಯಿಯಿಂದ ಬರುವಾಗ ಕಾಶಿಗೆ ಐದಾರು ಮೈಲಿ ದೂರದಲ್ಲೇ ಇಡೀ ಕಾಶಿಯನ್ನೇ ದಟ್ಟವಾಗಿ ಆವರಿಸಿ ಕಾಶಿಯ ಆಕಾಶವನ್ನು ದಟ್ಟವಾಗಿ ಕವಿದು; ವಿಶ್ವನಾಥನ ಸ್ಥಾನದ ಗೋಡೆ ತಳಹದಿಗಳ ಮೇಲೆ ಮದಿಸಿ ನಿಂತಿರುವ ಗ್ಯಾನವಾಪಿ ಮಸೀದಿ. ಔರಂಗಾಜೇಬನ ಧಾರ್ಮಿಕ ವಿಜೃಂಭಣೆ. ‘ಔರಂಗಾಜೇಬನು ವಿಶ್ವನಾಥ ಮಂದಿರವನ್ನು ಧ್ವಂಸಮಾಡಿ ಕಟ್ಟಿಸಿದ ಮಸೀದಿಯನ್ನು ಬಂದೂಕುಧಾರಿ ಸಿಪಾಯಿಗಳು ಬೇಲಿ ಕಟ್ಟಿಕೊಂಡು ರಕ್ಷಿಸುತ್ತಿದ್ದಾರೆ,’ ಸರ್ಮಾ ವಿವರಿಸಿದ.
ಮಂದಿರವನ್ನು ನಾಶ ಮಾಡುವಂತೆ ಔರಂಗಜೇಬನ ಹುಕುಂ ಬಂದಿದೆ. ಜನಗಳು ರೊಚ್ಚಿಗೇಳುತ್ತಾರೆಂಬ ಮುನ್ನೆಚ್ಚರಿಕೆಯಿಂದ ಸುಬೇದಾರನು ಗಲ್ಲಿಗಲ್ಲಿಗಳಿಗೂ ಮುಸ್ಲಿಂ ಸೈನಿಕರನ್ನು ನಿಯೋಜಿಸುತ್ತಿದ್ದಾನೆ. ಗುಡಿಯ ಪೂಜಾರಿಗಳಿಗೆ ವಾಸನೆ ಬಡಿಯಿತು. ಮಂದಿರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರಬಹುದು. ವಿಗ್ರಹವನ್ನಾದರೂ. ರಾತ್ರೋರಾತ್ರಿ ಅರ್ಚಕರುಗಳೆಲ್ಲ ಸೇರಿ ಗರ್ಭಗುಡಿಯ ಲಿಂಗವನ್ನು ವಿಸರ್ಜಿಸಿ ಸಾಗಿಸಿ ಗುಡಿಯ ಪಕ್ಕದಲ್ಲಿದ್ದ ಗ್ಯಾನವಾಪಿ, ಜ್ಞಾನದ ಭಾವಿಗೆ ಇಳಿಸಿ ಗುರುತು ಸಿಕ್ಕದಂತೆ ಮಣ್ಣು ಮುಚ್ಚಿ ನೆಲವನ್ನು ಮಟ್ಟ ಮಾಡಿದರು. ಮರುದಿನ ಮಂದಿರವನ್ನು ಕೆಡವಿದವರಿಗೆ ಇದು ತಿಳಿಯಲಿಲ್ಲ. ಹಾಗಾಗಿ ಮೂಲ ವಿಶ್ವನಾಥ ಲಿಂಗಲೇ ಉಳಿಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ