• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಂಗಳೂರಿನ ತಲೆ ಎತ್ತಿರುವ ಅಕ್ರಮ ಕಟ್ಟಡಗಳ ತೆರವಿಗೆ ಆಯುಕ್ತರ ಖಡಕ್​ ಸೂಚನೆ

ಮಂಗಳೂರಿನ ತಲೆ ಎತ್ತಿರುವ ಅಕ್ರಮ ಕಟ್ಟಡಗಳ ತೆರವಿಗೆ ಆಯುಕ್ತರ ಖಡಕ್​ ಸೂಚನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸ್ ಇಲಾಖೆಯಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತು ಮಾಹಿತಿ ಹಕ್ಕು ಹೋರಾಟಗಾರರ ದೂರಿನನ್ವಯ ಮಂಗಳೂರು ಮಹಾನಗರ ಪಾಲಿಕೆ ಅಕ್ರಮ ಎಸಗುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

  • Share this:

ಮಂಗಳೂರು (ನ.12): ಪ್ರಧಾನಿ ನರೇಂದ್ರ ಮೋದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ  ಮಂಗಳೂರು ನಗರ ಸೇರ್ಪಡೆಗೊಂಡಿದ್ದು, ಸದ್ಯ ಸ್ಮಾರ್ಟ್ ಸಿಟಿ ಕಾಮಗಾರಿ ನಗರದಾದ್ಯಂತ ನಡೆಯುತ್ತಿದೆ. ಇದರ ಜೊತೆಗೆ ನಗರದಲ್ಲಿ ಬಿಲ್ಡರ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಎದ್ದು ನಿಂತಿದ್ದು, ಅಕ್ರಮ ಕಟ್ಟಡಗಳದ್ದೇ ಕಾರುಬಾರಾಗಿದೆ.  ಕಳೆದ ಹಲವು ವರ್ಷಗಳಿಂದ ಮಾಹಿತಿ ಹಕ್ಕು ಹೋರಾಟಗಾರರು ಮಂಗಳೂರು ನಗರದಲ್ಲಿ ಪಾರ್ಕಿಂಗ್ ಜಾಗಗಳನ್ನು ಅತಿಕ್ರಮಿಸಿ ವಸತಿ ಕಟ್ಟಡ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವುದರ ಬಗ್ಗೆ ಆರೋಪ ಮಾಡಿದ್ದರು. ಅಲ್ಲದೆ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳನ್ನು ಲೋಕಾಯುಕ್ತ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಿಗೆ ಸಲ್ಲಿಸಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ದೂರು ನೀಡಿದ್ದರು. ಆದರೆ, ಈ ಹಿಂದೆ ಬಂದಿದ್ದ ಪಾಲಿಕೆಯ ಯಾವುದೇ ಕಮಿಷನರ್ ಗಳೂ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಈಗ ಈ ಅನಧಿಕೃತ ಕಟ್ಟಡದ ಬಗ್ಗೆ  ಎಚ್ಚೆತ್ತ ಮಂಗಳೂರು ಮಹಾನಗರಪಾಲಿಕೆ ಈ ಕಟ್ಟಡಗಳ ವಿರುದ್ಧ ಸಮರ ಸಾರಿದೆ.


ಅನಧಿಕೃತ ಕಟ್ಟಡದ  ಬಗ್ಗೆ ಕ್ರಮಕ್ಕೆ ಮುಂದಾಗಿದ್ದ ಕೆಲ ಆಯುಕ್ತರು ಒತ್ತಡಕ್ಕೆ ಬಿದ್ದು ವರ್ಗಾವಣೆ ಕೂಡ ಆಗಿದ್ದರು. ಆದರೆ ಇದೀಗ ಬಂದಿರುವ ಐಎಎಸ್ ದರ್ಜೆಯ ಕಮಿಷನರ್ ಅಕ್ಷಯ್ ಶ್ರೀಧರ್ ಅನಧಿಕೃತ ಕಟ್ಟಡಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಇದರ ಮೊದಲ ಭಾಗ ಎಂಬಂತೆ  ನಗರದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಹಲವು ಅಂಗಡಿ ಮಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ನಗರದ ಹಲವೆಡೆ ಮಾರ್ಕೆಟ್ ಸೇರಿದಂತೆ ಅನೇಕ ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್ ಜಾಗಗಳಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ಇದೀಗ ಅವುಗಳಿಗೆ ನೋಟಿಸ್ ಕೊಟ್ಟು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಪಾರ್ಕಿಂಗ್ ಹೊರತುಪಡಿಸಿ ಜಾಗಗಳನ್ನು ಅನ್ಯ ಬಳಕೆಗೆ ಬಳಕೆ ಮಾಡಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.


ಇದನ್ನು ಓದಿ: ಯಾದಗಿರಿ ಪೊಲೀಸ್​​ ಅಧಿಕಾರಿ ಫೇಸ್​ಬುಕ್​ ಖಾತೆಗೆ ಕನ್ನ; ಹಣ ಸಹಾಯ ಮಾಡುವಂತೆ ಸ್ನೇಹಿತರಿಗೆ ವಂಚನೆ


ಹಲವು ವರ್ಷಗಳ ಹಿಂದೆ  ಮಹಾನಗರಪಾಲಿಕೆ ಕೆಎಂಸಿ ಕಾಯ್ದೆಯಂತೆ ನೋಟಿಸ್ ಜಾರಿ ಮಾಡಿ ಕಟ್ಟಡದ ಉಲ್ಲಂಘಿಸಿದ ಭಾಗವನ್ನು ನೆಲಸಮಮಾಡಲು ಆದೇಶ ಮಾಡಿತ್ತು. ಆದರೆ ಈ ವೇಳೆ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿ ತಡೆಯಾಜ್ಞೆ ತಂದಿದ್ದರು.  ನಗರದ ನೂರಕ್ಕೂ ಅಧಿಕ ನಿಯಮ ಉಲ್ಲಂಘಿಸಿ ಕಟ್ಟಲಾದ ಕಟ್ಟಡಗಳ ಪೈಕಿ 78 ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಲಯವು ಆದೇಶ ಮಾಡಿದೆ. ಇದರಲ್ಲಿ 59 ಕಟ್ಟಡಗಳ ನೆಲಸಮಕ್ಕೆ ಆದೇಶ ಕೂಡ ಮಾಡಲಾಗಿದೆ. ಕೆಲವು ಕಟ್ಟಡಗಳ ಮಾಲಕರು ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ವಿಚಾರಣೆ ಬಾಕಿ ಇದೆ. ಹಾಗಾಗಿ ಈ ಪಟ್ಟಿಗೆ ಇನ್ನೂ ಹಲವು ಕಟ್ಟಡಗಳು ಸೇರ್ಪಡೆಯಾಗಿದ್ದು, ನೂತನ ಆಯುಕ್ತರು ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ.


ಅಲ್ಲದೆ ಇನ್ನು ಮುಂದೆ ಕಟ್ಟಡಗಳಿಗೆ ನೋಟಿಸ್ ನೀಡುವ ಬದಲು ಅತಿಕ್ರಮಿತ ಜಾಗವನ್ನು ಗುರುತಿಸಿ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಬ್ಬ ಯೋಜನಾಧಿಕಾರಿಯಿದ್ದು, ಆತ ಕಳೆದ ಮೂವತ್ತು ವರ್ಷಕ್ಕೂ ಅಧಿಕ ಕಾಲ ಇದೇ ಹುದ್ದೆಯಲ್ಲಿರುವ ಕಾರಣ ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡುತ್ತಿದ್ದಾರೆ ಎಂದು ದೂರಲಾಗಿದೆ. ಈತನ ಬೆಂಬಲದಿಂದಲೇ ಪಾರ್ಕಿಂಗ್ ಜಾಗ ಅತಿಕ್ರಮಿಸಿ ಕಟ್ಟಡಗಳನ್ನು ಕಟ್ಟಲು ಬಿಲ್ಡರ್ ಗಳು ಮುಂದಾಗಿರುವುದು ಗೊತ್ತಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈತ ಮಾತ್ರ ವರ್ಗಾವಣೆಯಾಗದೇ ಒಂದೇ ಜಾಗದಲ್ಲಿ ಇದ್ದಾನೆ ಎನ್ನಲಾಗಿದೆ. ಸದ್ಯ ಪಾರ್ಕಿಂಗ್ ಜಾಗ ಅತಿಕ್ರಮಿಸಿರುವ ಕಾರಣ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಮಸ್ಯೆ ಎದುರಾಗಿದೆ ಪಾರ್ಕಿಂಗ್ ಇಲ್ಲದೆ ಇರುವುದರಿಂದ ಜನರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ ತೆರಳುತ್ತಿದ್ದಾರೆ.


ಹೀಗಾಗಿ ಪೊಲೀಸ್ ಇಲಾಖೆಯಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತು ಮಾಹಿತಿ ಹಕ್ಕು ಹೋರಾಟಗಾರರ ದೂರಿನನ್ವಯ ಮಂಗಳೂರು ಮಹಾನಗರ ಪಾಲಿಕೆ ಅಕ್ರಮ ಎಸಗುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂಥವರ ಪರವಾನಿಗೆ ಕೂಡ ರದ್ದುಪಡಿಸಲು ಸಿದ್ಧತೆ ನಡೆಸಿದೆ. ಅನೇಕ ಕಡೆಗಳಲ್ಲಿ ಇಂಥ ಸಮಸ್ಯೆ ಇರುವುದರಿಂದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.


(ವರದಿ: ಕಿಶನ್​ ಕುಮಾರ್​)

top videos
    First published: