COVID-19 Protocols: ಕೋವಿಡ್ ನಿಯಮ ಉಲ್ಲಂಘನೆ; ಹುಬ್ಬಳ್ಳಿಯ ಮೂರು ಆಸ್ಪತ್ರೆಗಳಿಗೆ ನೋಟಿಸ್ ಜಾರಿ

ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 75 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 31 ಜನ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯವರಿಂದ ಮಾಹಿತಿ ನೀಡಲಾಗಿತ್ತು. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಶಕುಂತಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ 6 ಜನ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಿರೋದು ಬೆಳಕಿಗೆ ಬಂದಿತ್ತು.

ಆಸ್ಪತ್ರೆ

ಆಸ್ಪತ್ರೆ

  • Share this:
ಹುಬ್ಬಳ್ಳಿ(ಏ.28): ರಾಜ್ಯದಲ್ಲಿ ಕೊರೋನಾ ವ್ಯಾಪಕ ಹಿನ್ನೆಲೆ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆ ಮೀಸಲಿಡದ, ಸಾರ್ವಜನಿಕರಿಗೆ ಎದ್ದು ಕಾಣುವಂತೆ ದರಪಟ್ಟಿ ಪ್ರಕಟಿಸದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮೂರು ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಕೋವಿಡ್ ಸೋಂಕಿತರ ಚಿಕಿತ್ಸೆಯ ಬಗ್ಗೆ ತಪ್ಪು ಮಾಹಿತಿ ನೀಡಿದ ಹುಬ್ಬಳ್ಳಿಯ ಮೂರು ಆಸ್ಪತ್ರೆಗಳಿಗೆ ನೋಟೀಸ್ ಕೊಡಲಾಗಿದೆ. ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ ತತ್ವದರ್ಶಾ ಹಾಸ್ಪಿಟಲ್ ಎ ಯುನಿಟ್ ಆಫ್ ತತ್ವದರ್ಶಾ ಹೆಲ್ತ್ ಕೇರ್ ಸೂಲ್ಯುಷನ್ಸ್ ಆಸ್ಪತ್ರೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಸಾಂಕ್ರಾಮಿಕ ರೋಗ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ರನ್ವಯ 24 ಗಂಟೆಯಲ್ಲಿ ಉತ್ತರ ನೀಡುವಂತೆ ತಿಳಿಸಿ, ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ.

ಬಾಗಲುಗುಂಟೆಯಲ್ಲಿ ಕೋವಿಡ್​ ಕೇರ್​ ಸೆಂಟರ್​​​ಗೆ ಚಾಲನೆ ನೀಡಿದ ಸಚಿವ ಆರ್.ಅಶೋಕ್

ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 75 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 31 ಜನ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯವರಿಂದ ಮಾಹಿತಿ ನೀಡಲಾಗಿತ್ತು. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಶಕುಂತಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ 6 ಜನ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಿರೋದು ಬೆಳಕಿಗೆ ಬಂದಿತ್ತು. ಕೋವಿಡ್-19 ಅಲ್ಲದ ಪ್ರಕರಣಗಳನ್ನು ಕೂಡಾ ಕೋವಿಡ್-19 ಎಂದು ಪರಿಗಣಿಸಿ ಹಾಗೂ ಜಿಲ್ಲಾಡಳಿತಕ್ಕೆ ಒಟ್ಟು 31 ಜನ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿರೋದು ಸಾಬೀತಾಗಿದೆ.

ಇನ್ನು ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 26 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 26 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯಿಂದ ಮಾಹಿತಿ ಬಂದಿತ್ತು. ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ ಕೋವಿಡ್ ದೃಢಪಟ್ಟ 6 ಜನರಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ. ಒಟ್ಟು 26 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿರೋದು ಬೆಳಕಿಗೆ ಬಂದಿದೆ.

ತತ್ವದರ್ಶಾ ಆಸ್ಪತ್ರೆಯು 150 ಹಾಸಿಗೆಗಳಿಗೆ ಅನುಮತಿ ಪಡೆದಿದ್ದು, ಇದರಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕಿತ್ತು. ಆದರೆ ತತ್ವದರ್ಶಾ ಆಸ್ಪತ್ರೆಯವರು ಕೋವಿಡ್ ದೃಢಪಟ್ಟ ಪ್ರಕರಣಗಳ ಲ್ಯಾಬೋರೇಟರಿ ಫಲಿತಾಂಶ ಇಲ್ಲದೇ ಕೋವಿಡ್ ಪ್ರಕರಣಗಳೆಂದು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದು ಕಂಡು ಬಂದಿದೆ.

ಜಿಲ್ಲಾಡಳಿತಕ್ಕೆ ಕೋವಿಡ್-19 ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಕುರಿತು ಹಾಗೂ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಟ್ಟಿರುವುದಾಗಿ ತಪ್ಪು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರೊ ಡಿಸಿ ನಿತೇಶ್ ಪಾಟೀಲ, ಕೆಪಿಎಂಇ ಕಾಯ್ದೆ ಪ್ರಕಾರ ಆಸ್ಪತ್ರೆ ಮುಂಭಾಗದಲ್ಲಿ ರೋಗಿಗಳಿಗೆ ವಿಧಿಸುವ ದರಪಟ್ಟಿಯನ್ನು ಪ್ರದರ್ಶಿಸದ, ಎಬಿಎಆರ್‍ಕೆ ಯೋಜನೆಯ ಮಾಹಿತಿ ಹಾಗೂ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಆಸ್ಪತ್ರೆ ಮುಂಭಾಗದಲ್ಲಿ ಪ್ರದರ್ಶಿಸದ ಮತ್ತು ಕೋವಿಡ್ ಶಿಷ್ಟಾಚಾರವನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಈ ಮೂರು ಆಸ್ಪತ್ರೆಗಳು ಸೂಕ್ತ ಕಾರಣ ನೀಡಬೇಕು ಇಲ್ಲದಿದ್ದಲ್ಲಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ.
Published by:Latha CG
First published: