HOME » NEWS » State » NOT POSSIBLE TO IMPLEMENT SIXTH PAY COMMISSION FOR TRANSPORT EMPLOYEES SAYS ANJUM PARVEJ RHHSN

ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ, ಬೇಕಿದ್ದರೆ ಶೇ.10 ವೇತನ ಪರಿಷ್ಕರಣೆಗೆ ಸಿದ್ಧ; ಅಂಜುಂ ಫರ್ವೇಜ್

ವಿಜಯಪುರ ಮತ್ತು ಚಾಮರಾಜನಗರದಲ್ಲಿ ಕ್ವಾರ್ಟರ್ಸ್ ಖಾಲಿ ಮಾಡಿಸುವ ನೊಟೀಸ್ ಕೊಟ್ಟಿದ್ದನ್ನು ತಡೆ ಹಿಡಿದಿದ್ದೇವೆ. ಯಾರನ್ನು ಮನೆ ಖಾಲಿ ಮಾಡಿಸಲ್ಲ. ಎಸ್ಮಾ ಜಾರಿ ಮಾಡಲು ಅವಕಾಶವಿದೆ. ಜೂನ್ ವರೆಗೆ ಎಸ್ಮಾ ಜಾರಿಯ ಅವಕಾಶವನ್ನು ಕಾರ್ಮಿಕ ಇಲಾಖೆ ನೀಡಿದೆ. ಪರಿಸ್ಥಿತಿ ಬಂದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದರು.

news18-kannada
Updated:April 8, 2021, 5:43 PM IST
ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ, ಬೇಕಿದ್ದರೆ ಶೇ.10 ವೇತನ ಪರಿಷ್ಕರಣೆಗೆ ಸಿದ್ಧ; ಅಂಜುಂ ಫರ್ವೇಜ್
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ‌ಫರ್ವೇಜ್.
  • Share this:
ಬೆಂಗಳೂರು: ಸಾರಿಗೆ ವಿಭಾಗಗಳಲ್ಲಿ 20,000 ಬಸ್ ಗಳಿವೆ. ದಿನನಿತ್ಯ 40 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಮುಷ್ಕರದಿಂದ ಜನರಿಗೆ ಅನಾನುಕೂಲವಾಗಿದೆ‌. ಪೂರ್ಣ ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಸಾಧ್ಯವಾಗದೇ ಇದ್ದರು ಭಾಗಶಃ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ನಮ್ಮ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ನೌಕರರಿಗೆ ನೀಡಲಾಗುವ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿ ಸಮನಾದ ವೇತನ ನೀಡಲು ಸಾಧ್ಯವಿಲ್ಲ. ಆದರೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ವೇತನ ಪರಿಷ್ಕರಣೆ ಮಾಡುವುದಾಗಿ ಮಾತುಕೊಟ್ಟಿದ್ದೇವೆ‌ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ‌ಫರ್ವೇಜ್ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಜುಂ ಫರ್ವೇಜ್ ಅವರು, ಸಾರಿಗೆ ನೌಕರರ ಮುಷ್ಕರ ಹೊಸದೇನಲ್ಲ‌. ಆಡಳಿತ ಮಂಡಳಿ ಹಾಗೂ ನೌಕರರ ಘರ್ಷಣೆ ಹೊಸದೇನಲ್ಲ. ಆದರೆ ಇದೇ ಮೊದಲ ಬಾರಿಗೆ ನೌಕರರು ಬಿಗಿಪಟ್ಟು ಹಿಡಿದು ಕೂತಿದ್ದಾರೆ‌. ಕಳೆದ ಡಿಸೆಂಬರ್, ಫೆಬ್ರವರಿ, ಮಾರ್ಚ್ ನಲ್ಲು ನೌಕರರ ಸಂಘಟನೆಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಕಳೆದ ವರ್ಷ ಜನವರಿಯಲ್ಲೇ ವೇತನ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿತ್ತು‌. ಆದರೆ ಕೋವಿಡ್ ಕಾರಣದಿಂದ ಸ್ಥಗಿತವಾಗಿತ್ತು. ಈ ಮೊದಲೂ ಸಹ ಆಯಾ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಶೇ.5ರಿಂದ ಶೇ 10ರಷ್ಟು ವೇತನ ಹೆಚ್ಚಳ ಮಾಡಲಾಗಿದೆ‌ ಎಂದು ಹೇಳಿದರು.

ವೇತನ ಪರಿಷ್ಕರಣೆ ಸಂಬಂಧ ಡಿಸಿಎಂ ಕೂಡ ಸಾರಿಗೆ ನೌಕರರ ಯೂನಿಯನ್ ಗಳ ಜತೆ ಸುಮಾರು ಎರಡೂವರೆ ಗಂಟೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.  ಕೋವಿಡ್ ಲಾಕ್ ಡೌನ್ ಸಮಯದಲ್ಲೂ ಸಹ ವೇತನ ಪಾವತಿ ನಿಲ್ಲಿಸಿಲ್ಲ. ಈಗಲೂ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ದವಿದೆ. ಆದರೆ ಘೋಷಣೆ ಮಾಡಲು ಇದು ಸಮಯವಲ್ಲ‌. ನಮ್ಮ ಮಾತಿಗೆ ಬೆಲೆ ಕೊಡದೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈಗಾಗಲೇ ಸರ್ಕಾರ ಒಪ್ಪಿಕೊಂಡು ಈಡೇರಿಸಿರುವ ಎಂಟು ಬೇಡಿಕೆಗಳು ಯಾವುವು ಸಣ್ಣ ಪುಟ್ಟ ಬೇಡಿಕೆಗಳಲ್ಲ ಎಂದರು.

ಇದನ್ನು ಓದಿ: ಸಾರಿಗೆ ನೌಕರರ ಮುಷ್ಕರ: ನಿವೃತ್ತ ಚಾಲಕ, ನಿರ್ವಾಹಕರಿಗೆ ಒಪ್ಪಂದದ ಸೇವೆ ನೀಡಲು ಆಹ್ವಾನ

ಈಗ ಸಾರಿಗೆ ಇಲಾಖೆಯಿಂದ 21,000ಕ್ಕೂ ಹೆಚ್ಚು ಖಾಸಗಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸೇವೆ ಒದಗಿಸಿದ್ದೇವೆ‌. ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ. ಯಾರು ಪ್ರತಿಭಟನೆ ಮಾಡುತ್ತಿದ್ದಾರೆ, ಪ್ರಚೋದನೆ ಮಾಡಿದ್ದಾರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ದಿನಕ್ಕೆ 20 ಕೋಟಿ ನಷ್ಟವಾಗುತ್ತಿದೆ‌. ಈಗಾಗಲೇ 40 ಕೋಟಿ ನಷ್ಟವಾಗಿದೆ. ಹಾಗಾಗಿ ಹಠ ಬಿಟ್ಟು ಕರ್ತವ್ಯಕ್ಕೆ ಬನ್ನಿ ಎಂದು ಮನವಿ ಮಾಡುತ್ತಿದ್ದೇವೆ. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ. ಅವರು ಹಠ ಬಿಟ್ಟು ಬರಲಿ. ತಕ್ಷಣ ಒಂದು ಮಧ್ಯಂತರ ಪರಿಹಾರವಾಗಿ ಶೇ.10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ದ. ನಂತರ ಉಳಿದ ಶೇ.2ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು ಎಂದು ಮನವಿ ಮಾಡಿದರು.
Youtube Video

ಈ ಮುಷ್ಕರ ಮುಂದುವರಿದರೆ ಕಳೆದ ಎರಡು ವರ್ಷದ ಹಿಂದೆ ನಿವೃತ್ತರಾಗಿರುವ ಹಾಗೂ ದೈಹಿಕವಾಗಿ ಸಶಕ್ತರಾಗಿರುವ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ವಿಜಯಪುರ ಮತ್ತು ಚಾಮರಾಜನಗರದಲ್ಲಿ ಕ್ವಾರ್ಟರ್ಸ್ ಖಾಲಿ ಮಾಡಿಸುವ ನೊಟೀಸ್ ಕೊಟ್ಟಿದ್ದನ್ನು ತಡೆ ಹಿಡಿದಿದ್ದೇವೆ. ಯಾರನ್ನು ಮನೆ ಖಾಲಿ ಮಾಡಿಸಲ್ಲ. ಎಸ್ಮಾ ಜಾರಿ ಮಾಡಲು ಅವಕಾಶವಿದೆ. ಜೂನ್ ವರೆಗೆ ಎಸ್ಮಾ ಜಾರಿಯ ಅವಕಾಶವನ್ನು ಕಾರ್ಮಿಕ ಇಲಾಖೆ ನೀಡಿದೆ. ಪರಿಸ್ಥಿತಿ ಬಂದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದರು.
Published by: HR Ramesh
First published: April 8, 2021, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories