ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ, ಕಾಂಗ್ರೆಸ್​ನಲ್ಲಿ ಯಾವುದೂ ಸರಿಯಿಲ್ಲ; ವೇದಿಕೆಯಲ್ಲೇ ಬೆತ್ತಲಾದ ಸತ್ಯಗಳು


Updated:July 11, 2018, 5:13 PM IST
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ, ಕಾಂಗ್ರೆಸ್​ನಲ್ಲಿ ಯಾವುದೂ ಸರಿಯಿಲ್ಲ; ವೇದಿಕೆಯಲ್ಲೇ ಬೆತ್ತಲಾದ ಸತ್ಯಗಳು

Updated: July 11, 2018, 5:13 PM IST
- ಶರತ್​ ಶರ್ಮ ಕಲಗಾರು, ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 11): ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಆಗಾಗ ಬೆಳಕಿಗೆ ಬರುತ್ತಿದ್ದರೆ, ಕಾಂಗ್ರೆಸ್​ ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎಂಬ ಅಂಶ ನಿತ್ಯ ಮುನ್ನೆಲೆಗೆ ಬರುತ್ತಿದೆ. ಇಂದು ದಿನೇಶ್​ ಗುಂಡೂರಾವ್​ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸ್ವೀಕರಿಸುವ ಸಂದರ್ಭದಲ್ಲಿ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ ಡಾ. ಜಿ. ಪರಮೇಶ್ವರ್​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಲೇ ಇಲ್ಲ.

ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್​ ಗುಂಡೂರಾವ್​ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್​ ಹಿರಿಯ ಮುಖಂಡರು ಮಾತನ್ನಾಡಿದರು. ಕಾಂಗ್ರೆಸ್​ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಶಕ್ತಿ ಪ್ರದರ್ಶನ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಅಲ್ಲಿ ಕಂಡಿದ್ದು ಇನ್ನಷ್ಟು ಬಿರುಕು. ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ಕಂಡುಬಂದ ಪ್ರಮುಖ ಅಂಶಗಳು ಇಲ್ಲಿವೆ.

ಪರಮೇಶ್ವರ್​ VS ಸಿದ್ದರಾಮಯ್ಯ:

ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ನಡುವೆ ಇರುವ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಸಿದ್ದರಾಮಯ್ಯ 2006ರಲ್ಲಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆ ಆದಾಗಿನಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್​ ಕೊರಟಗೆರೆಯಲ್ಲಿ ಸೋಲಲು ಸಿದ್ದರಾಮಯ್ಯ ಕಾರಣರಾಗಿದ್ದರು ಎಂಬ ಆರೋಪಗಳಿತ್ತು. ಅದೇ ರೀತಿಯಲ್ಲಿ ಈ ಬಾರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಪರಮೇಶ್ವರ್​ ಕಾರಣ ಎಂಬ ಮಾತುಗಳೂ ಇವೆ.

ಇಂದು ಮಾತನಾಡಿದ ಪರಮೇಶ್ವರ್​, ಭಾಷಣದಲ್ಲಿ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದಾಗ ಸಹಕರಿಸಿದ ಎಲ್ಲರ ಹೆಸರನ್ನೂ ಹೇಳಿ ಧನ್ಯವಾದ ಅರ್ಪಿಸಿದರು. ಆದರೆ 20 ನಿಮಿಷದ ಭಾಷಣದಲ್ಲಿ ಎಲ್ಲಿಯೂ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಲಿಲ್ಲ. ಈ ಮೂಲಕ ಸಿದ್ದರಾಮಯ್ಯ ಅವರ ವಿರುದ್ಧದ ಸಿಟ್ಟನ್ನು ಪರೋಕ್ಷವಾಗಿ ಪರಂ ಹೊರ ಹಾಕಿದ್ದಾರೆ.

ಡಿಕೆಶಿ VS ಸಿದ್ದರಾಮಯ್ಯ​:
Loading...

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್​ ತಮಗೆ ಕಾಂಗ್ರೆಸ್​ನಲ್ಲಿ ಈ ಹಿಂದೆ ಬಹಳ ಬಾರಿ ಅನ್ಯಾಯವಾಗಿದೆ ಎಂದರು. ಜತೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ಆರು ತಿಂಗಳು ಸಂಪುಟದಲ್ಲಿ ಸೇರಿಸಿಕೊಳ್ಳಲಿಲ್ಲ, ಧರ್ಮಸಿಂಗ್​ ಸರ್ಕಾರಾವಧಿಯಲ್ಲೂ ಅಧಿಕಾರದಿಂದ ದೂರ ಇಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಜತೆಗೆ ಯೋಗ್ಯತೆಗೆ ತಕ್ಕ ಸ್ಥಾನಗಳು ಕೆಲವೊಮ್ಮೆ ಸಿಗುವುದಿಲ್ಲ ಎಂಬ ಮಾತನ್ನೂ ಡಿ.ಕೆ. ಶಿವಕುಮಾರ್​ ಹೇಳಿದರು. ಈ ಮೂಲಕ ಸಿದ್ದರಾಮಯ್ಯ ಮೇಲಿನ ತಮ್ಮ ಅಸಮಾಧಾನವನ್ನು ಕೊಂಚ ಮಟ್ಟಿಗೆ ಡಿಕೆಶಿ ಹರಿಬಿಟ್ಟರು.

ಗುಂಡೂರಾವ್​ VS ಡಿಕೆಶಿ:

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್​ ಗುಂಡೂರಾವ್​ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಅವರನ್ನು ಹೊಗಳಿದರು. ನಿಮ್ಮ ಅಧಿಕಾರಾವಧಿಯಲ್ಲಿ ನೀವು ಮಾಡಿದ ಕೆಲಸಗಳನ್ನು ನೋಡಿದರೆ 150ಕ್ಕೂ ಹೆಚ್ಚು ಸೀಟ್​ಗಳಿಂದ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಬಿಜೆಪಿ ಮಾಡಿದ ಅಪಪ್ರಚಾರದಿಂದ ಕಾಂಗ್ರೆಸ್​ ಸೋಲನುಭವಿಸಿತು. ಆದರೆ ನೀವೇನು ಚಿಂತೆ ಮಾಡಬೇಡಿ, ಇಂದಿಗೂ ಕರ್ನಾಟಕದಲ್ಲಿ ನೀವೇ ಜನಪ್ರಿಯ ನಾಯಕರು ಎಂದು ಗುಂಡೂರಾವ್​ ಸಿದ್ದರಾಮಯ್ಯರನ್ನು ಹೊಗಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕಾಗಿ ಹೈಕಮಾಂಡ್​ ಮತ್ತು ಇನ್ನುಳಿದ ಕಾಂಗ್ರೆಸ್​ ಮುಖಂಡರಿಗೆ ಧನ್ಯವಾದ ಅರ್ಪಿಸಿದರು. ಆದರೆ ದಿನೇಶ್​, ಡಿಕೆಶಿಯವರ ಹೆಸರನ್ನು ಎಲ್ಲೂ ಹೇಳಲಿಲ್ಲ. ಡಿಕೆ ಶಿವಕುಮಾರ್​ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರಿಂದ ದಿನೇಶ್​ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಇಬ್ಬರ ನಡುವೆ ಶೀತಲ ಸಮರವಿದೆ ಎಂಬ ಮಾತುಗಳು ಕಾಂಗ್ರೆಸ್​ ಪಕ್ಷದಲ್ಲಿದೆ.

ಒಟ್ಟಿನಲ್ಲಿ ನೂತನ ಅಧ್ಯಕ್ಷರು ಪದಗ್ರಹಣ ಮಾಡುವ ದಿನವೇ ಕಾಂಗ್ರೆಸ್​ನಲ್ಲಿನ ಭಿನ್ನಮತ ಮತ್ತೆ ಮುನ್ನಲೆಗೆ ಬಂದಿದೆ. ಶಕ್ತಿ ಪ್ರದರ್ಶನದ ಬದಲು, ಕಾಲೆಳೆಯುವುದಕ್ಕಾಗಿಯೇ ಕಾರ್ಯಕ್ರಮವನ್ನು ಬಳಸಿಕೊಂಡಂತಾಗಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...