ಬದಲಾದ ಚುನಾವಣಾ ಪ್ರಚಾರ ವಿಧಾನ: ಇದು ಡೋರ್​ ಟು ಡೋರ್​ ಅಲ್ಲ, ಫೋನ್​ ಟು ಫೋನ್​ ಕಾಲ


Updated:May 5, 2018, 2:27 PM IST
ಬದಲಾದ ಚುನಾವಣಾ ಪ್ರಚಾರ ವಿಧಾನ: ಇದು ಡೋರ್​ ಟು ಡೋರ್​ ಅಲ್ಲ, ಫೋನ್​ ಟು ಫೋನ್​ ಕಾಲ

Updated: May 5, 2018, 2:27 PM IST
- ಶರತ್​ ಶರ್ಮ ಕಲಗಾರು, ನ್ಯೂಸ್ 18 ಕನ್ನಡ

ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಮಾತು ಸತ್ಯ. ಕಾಲಘಟ್ಟಗಳ ಅಗತ್ಯತೆಗೆ ಅನುಗುಣವಾಗಿ ಮನುಕುಲ ಮುಂದುವರೆಯುತ್ತಾ ಬಂದಿದೆ. ಈಗ ಚುನಾವಣಾ ಪ್ರಚಾರದ ವಿಚಾರದಲ್ಲೂ ಇದು ಅನ್ವಯವಾಗುತ್ತಿದೆ.

ಬದಲಾದ ಚುನಾವಣ ಲೆಕ್ಕಾಚಾರಗಳು ಮತ್ತು ಪ್ರಚಾರ ವಿಧಾನಗಳಿಗೆ ಈ ಬಾರಿಯ ಕರ್ನಾಟಕ ವಿಧಾನ ಸಭೆ ಚುನಾವಣೆ ಸಾಕ್ಷಿಯಾಗಿದೆ. ಈ ಹಿಂದೆ ಬಹಿರಂಗ ಪ್ರಚಾರ ಮತ್ತು ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಈಗ ಫೋನ್​ ಟು ಫೋನ್​ ಸಿದ್ಧಾಂತಕ್ಕೆ ಬದಲಾಗಿದ್ದಾರೆ. ಇದಕ್ಕೆ ಕಾರಣ ಅಂತರ್ಜಾಲದ ಬಳಕೆದಾರರ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಮತ್ತು ಸಾಮಾಜಿಕ ಜಾಲತಾಣ ಜನರಲ್ಲಿ ಬೀರಿರುವ ಪ್ರಭಾವ.

ಟ್ವಿಟ್ಟರ್​, ಫೇಸ್​ಬುಕ್​, ಇನ್ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳದೇ ಚುನಾವಣೆ ಎದುರಿಸುವ ರಾಜಕೀಯ ನಾಯಕರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಬಹಿರಂಗ ಸಭೆಗಳಲ್ಲಿ ಮಾಡುವ ಭಾಷಣಗಳೂ ಸಹ ಕ್ಷಣ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತಿದೆ. ಆ ಮೂಲಕ ಇನ್ನಷ್ಟು ಜನರನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ.

ಉದಾಹರಣೆಗೆ ಶುಕ್ರವಾರ ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಮಾತನಾಡಿದ ಪ್ರತಿ ಸಾಲುಗಳೂ ಅವರ ಮತ್ತು ಬಿಜೆಪಿಯ ಟ್ವಿಟ್ಟರ್​ ಮತ್ತು ಫೇಸ್​ಬುಕ್​ ಖಾತೆಯಲ್ಲಿ ಹಾಕಲಾಗುತ್ತಿದೆ. ಅದೇ ರೀತಿ ರಾಹುಲ್​ ಗಾಂಧಿ, ಸಿದ್ದರಾಮಯ್ಯ, ಬಿ.ಎಸ್​. ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ಭಾಷಣಗಳೂ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿವೆ.

 

ಹಿಂದಿನ ಚುನಾವಣೆಗಳನ್ನು ಗಮನಿಸುವುದಾದರೆ, ಹಿರಂಗ ಪ್ರಚಾರದಲ್ಲಿ ಅಥವಾ ಮಾಧ್ಯಮದ ಮುಖಾಂತರ ಒಬ್ಬರನ್ನೊಬ್ಬರು ಮೂದಲಿಸುವ, ಆರೋಪಿಸುವ ಕೆಲಸ ನಡೆಯುತ್ತಿತ್ತು. ಆದರೀಗ ಸಾಮಾಜಿಕ ಜಾಲತಾಣವೂ ದೊಡ್ಡ ಸಂವಹನ ಮಾಧ್ಯಮವಾಗಿ ಬೆಳೆದಿದೆ. ಕೇವಲ ಒಂದು ಕ್ಲಿಕ್​ನಲ್ಲಿ ಲಕ್ಷಾಂತರ ಮಂದಿಯನ್ನು ತಲುಪಬಹುದು ಮತ್ತು ಲಕ್ಷಾಂತರ ಜನರೂ ಕುಳಿತಲ್ಲಿಂದಲೇ ರಾಜಕೀಯ ಚಿತ್ರಣವನ್ನು ಅರಿಯಬಹುದು. ಇದನ್ನೆಲ್ಲಾ ಅರಿತಿರುವ ರಾಜಕಾರಣಗಳು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳನ್ನು ಹ್ಯಾಂಡಲ್ ಮಾಡಲು ನೀಡಿದ್ದಾರೆ.

ರಾಜನೀತಿ, ಸ್ಪ್ಯಾರೋ, ಬ್ರೈನ್​ ವರ್ಕ್​, ಮೀಡಿಯಾ ಟು ವಿನ್​ ಹೀಗೇ ಹಲವು ಸಂಸ್ಥೆಗಳು ಡಿಜಿಟಲ್​ ಮೀಡಿಯಾ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುತ್ತವೆ. ಕೆಲ ರಾಜಕಾರಣಿಗಳಂತೂ ಸ್ವಂತ ಡಿಜಿಟಲ್​ ಮೀಡಿಯಾ ಮತ್ತು ಐಟಿ ಸೆಲ್​ಗಳನ್ನೇ ಮಾಡಿಕೊಂಡಿದ್ದಾರೆ.

ಭಾರತ ಯುವಜನರ ದೇಶವಾಗಿದೆ. ಭಾರತದ ಹೆಚ್ಚಿನ ಜನ 45 ವರ್ಷದ ಒಳಗಿನವರಾಗಿದ್ದಾರೆ. ಅದಕ್ಕಾಗಿಯೇ ಭಾರತದಲ್ಲಿ ಟೆಕ್ನಾಲಜಿ ಬಹುಬೇಗ ಬೆಳೆಯುತ್ತಿದೆ ಮತ್ತು ಜನರು ಅಷ್ಟೇ ಬೇಗ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇದೂ ಕೂಡ ಸಾಮಾಜಿಕ ಜಾಲತಾಣಗಳಿಗೆ ಒತ್ತು ನೀಡಲು ಕಾರಣವಿರಬಹುದು.

ಇದೆಲ್ಲದರ ನಡುವೆ ಕೆಲವೇ ದಿನಗಳಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬೀಳಲಿದೆ. ಅಂತಿಮ ತೆರೆ ಬಿದ್ದ ನಂತರ ಸಾಮಾಜಿಕ ಜಾಲತಾಣಗಳೇ ಪ್ರಚಾರದ ಮುಖ್ಯ ಅಸ್ತ್ರವಾಗಲಿದೆ. ಬಹಿರಂಗ ಪ್ರಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ, ಆದರೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವುದು ಮತ್ತು ಕಡಿವಾಣ ಹಾಕುವುದು ಚುನಾವಣಾ ಆಯೋಗಕ್ಕೆ ಸಾಧ್ಯವೇ ಎಂಬುದನ್ನು ಕಾದು ನೋಡಬೇಕು.

ಒಟ್ಟಾರೆಯಾಗಿ ಈ ಬಾರಿಯ ಕರ್ನಾಟಕದ ಡಿಜಿಟಲ್​ ಬ್ಯಾಟಲ್​ ಹತ್ತಿರದಿಂದ ಗಮನಿಸಿದರೆ ಕಾಂಗ್ರೆಸ್​ ಬಿಜೆಪಿಗಿಂತ ಮುಂದಿದೆ ಅನಿಸುತ್ತದೆ. 2014ರ ಲೋಕ ಸಭೆ ಚುನಾವಣೆ ವೇಳೆ ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಂಗ್ರೆಸ್​ ಹಿಂದೆಬಿದ್ದಿತ್ತು. ಆದರೆ ಬಿಜೆಪಿ ಆ ಹೊತ್ತಿಗಾಗಲೇ ಸಾಮಾಜಿಕ ಜಾಲತಾಣದ ಶಕ್ತಿಯನ್ನು ಅರಿತಿದ್ದರು. ಜತೆಗೆ ಚುನಾವಣೆಗೆ ಉತ್ತಮ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. 2014ರಲ್ಲಿ ಸೋತ ನಂತರವೂ ಕಾಂಗ್ರೆಸ್​ ಚುನಾವಣೆಯಲ್ಲಿ ಗಮನಾರ್ಹ ಎಂಬಂತಹ ಬದಲಾವಣೆಗೆ ತೆರೆದುಕೊಂಡಿರಲಿಲ್ಲ.

ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಕಳೆದುಕೊಂಡ ನಂತರ ಕರ್ನಾಟಕ ಕಾಂಗ್ರೆಸ್​ ಎಚ್ಚೆತ್ತಿದೆ. ಅದರ ಪರಿಣಾಮವೇ ಈ ಬಾರಿಯ ಡಿಜಿಟಲ್​ ಯುದ್ಧದಲ್ಲಿ ಬಿಜೆಪಿಗಿಂತ ಉತ್ತಮ ಸಾಧನೆ ಮಾಡಿರುವುದು. ಕಾಂಗ್ರೆಸ್​ ಡಿಜಿಟಲ್ ವಾರ್​ ರೂಂನ ಸದಸ್ಯರೊಬ್ಬರು ನ್ಯೂಸ್​ 18 ಜತೆ ಮಾತನಾಡಿದರು. ಅವರು ಹೇಳುವ ಪ್ರಕಾರ ಡಿಜಿಟಲ್​ ಮಾಧ್ಯಮದಲ್ಲಿ ಈ ಬಾರಿ ಬಿಜೆಪಿಗಿಂತ ಹೆಚ್ಚು ಜನರನ್ನು ಕಾಂಗ್ರೆಸ್​ ತಲುಪಿದೆ.

"ಪ್ರತಿ ಬೂತಿನಲ್ಲೂ ಒಬ್ಬ ಡಿಜಿಟಲ್​ ಯೂತ್​ ಇದ್ದಾರೆ. ಬೂತ್​ ಮಟ್ಟದಲ್ಲೂ ನಾವು ಸಾಮಾಜಿಕ ಜಾಲತಾಣಗಳ ಬಳಸಿ ಜನರನ್ನು ತಲುಪುತ್ತಿದ್ದೇವೆ. ಇಲ್ಲಿಯವರೆಗೂ ಬಿಜೆಪಿ ಮತ್ತು ಜೆಡಿಎಸ್​ಗಿಂತ ತುಂಬಾ ಮುಂದೆ ಓಡಿದ್ದೇವೆ, ಚುನಾವಣೆ ಫಲಿತಾಂಶದ ಬಳಿಕ ಗೆಲುವು ಯಾರದ್ದೆಂಬುದು ತಿಳಿಯಲಿದೆ," ಎನ್ನುತ್ತಾರೆ ಕಾಂಗ್ರೆಸ್​ ಐಟಿ ಸೆಲ್​ನ ಸದಸ್ಯರೊಬ್ಬರು.

ಒಟ್ಟಿನಲ್ಲಿ ಬದಲಾದ ಕಾಲಮಾನಕ್ಕೆ ತಕ್ಕಂತೆ ರಾಜಕಾರಣವೂ ಬದಲಾಗುತ್ತಿದೆ. ಅದರ ಜತೆಗೆ ಕರ್ನಾಟಕ ರಾಜ್ಯವೂ ಹೊಸ ತಲೆಮಾರಿನ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ.
First published:May 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ