Sushma ChakreSushma Chakre
|
news18-kannada Updated:February 7, 2020, 1:44 PM IST
ಚರಂಡಿ ನೀರು ಸೇರಿರುವ ಕೆರೆಗಳು
ಕಾರವಾರ (ಫೆ. 7): ಕೆರೆ ಅಭಿವೃದ್ಧಿ ಮಾಡಿ ಜೀವಜಲ ಹೆಚ್ಚಿಸಬೇಕೆಂದು ಸರ್ಕಾರ ಹೇಳುತ್ತಲೇ ಇದೆ. ಪ್ರಜ್ಞಾವಂತರು ಕೂಡ ಇದನ್ನೇ ಹೇಳುತ್ತಾರೆ. ಆದರೆ, ಪ್ರಜ್ಞಾವಂತರಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕೆರೆಗಳ ಅಭಿವೃದ್ಧಿ ಮರೀಚಿಕೆಯಾಗಿದ್ದು, ಕೆರೆ ಮಾಲಿನ್ಯವೇ ಇಲ್ಲಿನ ದೊಡ್ಡ ಸಾಧನೆಯಾಗಿದೆ.
ಒಂದೆಡೆ ಕೆರೆಗಳ ತುಂಬ ನೀರು ತುಂಬಿಕೊಂಡಿದೆ. ಇನ್ನೊಂದೆಡೆ ಅದೇ ಕೆರೆಗಳಿಗೆ ಚರಂಡಿಗಳ ಕೊಳಚೆ ನೀರನ್ನು ಹರಿಬಿಡುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದಾಗ ಇಂತಹ ಕೆರೆಗಳ ಹತ್ತಿರ ಹೋಗಲೂ ಭಯವಾಗುತ್ತದೆ. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗುತ್ತಿದೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣ. ಇಲ್ಲಿರುವ ಬಹುತೇಕ ಕೆರೆಗಳಲ್ಲಿ ಚರಂಡಿ ನೀರು ತುಂಬಿಕೊಂಡ ಪರಿಣಾಮ ಬಳಕೆಗೆ ಬಾರದಂತಾಗಿವೆ.
ಕೆರೆಯ ನೀರನ್ನು ಕೆರೆಗೆ ತುಂಬಿ ಎಂಬ ಗಾದೆ ಮಾತಿದೆ. ಆದರೆ, ಹಳಿಯಾಳ ಪುರಸಭೆ ಮಾತ್ರ ಕೆರೆಗಳಿಗೆ ನಗರದ ಚರಂಡಿ ನೀರನ್ನು ಹರಿಸುತ್ತಿದೆ. ಇದರ ಪರಿಣಾಮ ನಗರದಲ್ಲಿರುವ 10ಕ್ಕೂ ಅಧಿಕ ಕೆರೆಗಳು ಚರಂಡಿ ನೀರಿನಿಂದಾಗಿ ಬಳಕೆಗೆ ಬಾರದಂತಾಗಿವೆ. ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಪರಿಣಾಮ ಜನರ ಮನೆಗಳಿಂದ ಚರಂಡಿಗೆ ಹರಿಯುವ ತ್ಯಾಜ್ಯ ನೀರು ನೇರವಾಗಿ ಕಾಲುವೆಗಳ ಮೂಲಕ ಕೆರೆಗಳನ್ನು ಸೇರುತ್ತಿದೆ.
ಇದನ್ನೂ ಓದಿ: ಅಧಿಕಾರ ನೀಡುವುದು ಜನರೇ ವಿನಃ ಸಿದ್ದರಾಮಯ್ಯ ಅಲ್ಲ; ಎಚ್.ಡಿ. ಕುಮಾರಸ್ವಾಮಿ ತಿರುಗೇಟು

ಕಲುಷಿತಗೊಂಡಿರುವ ಹಳಿಯಾಳದ ಕೆರೆ
ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ಸಹ ಕಾಮಗಾರಿ ಹಂತದಲ್ಲಿದ್ದು, ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯ ನೀರನ್ನು ಬೇರೆಡೆ ಹರಿಬಿಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಯಥೇಚ್ಛವಾಗಿ ಕೆರೆಗಳಿಗೆ ಚರಂಡಿ ನೀರು ಸೇರುತ್ತಿದೆ. ಹೀಗಾಗಿ, ಕೆರೆಗಳಲ್ಲಿ ಸಂಗ್ರಹವಾಗಿರುವ ನೀರು ಬಳಕೆಗೆ ಬಾರದಂತಾಗಿದೆ. ಪಟ್ಟಣದಲ್ಲಿ ಸುಮಾರು 12 ಕೆರೆಗಳಿದ್ದು ಪುರಸಭೆಯ ನಿರ್ಲಕ್ಷ್ಯದಿಂದಾಗಿ ಕೆರೆಗಳು ಕೊಳಚೆ ಗುಂಡಿಗಳಂತಾಗಿವೆ. ಪಟ್ಟಣದ ಚರಂಡಿ ನೀರು ಮಾತ್ರವಲ್ಲದೆ ತ್ಯಾಜ್ಯವನ್ನು ಕೂಡ ಕೆರೆಗಳಿಗೇ ಎಸೆಯಲಾಗುತ್ತಿದೆ.
ಇಂತಹ ಅವಸ್ಥೆಗೆ ಕಾರಣವೇನು?:ಹಳಿಯಾಳ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆಗಾಗಿ ಸರ್ಕಾರದಿಂದ 80 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ಸಹ ಪ್ರಾರಂಭವಾಗಿದೆ. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಪಟ್ಟಣದ ತ್ಯಾಜ್ಯ ನೀರು ಕೆರೆಗಳಿಗೆ ಸೇರುತ್ತಿದೆ. ಅಲ್ಲದೇ ಕೆರೆಗಳಿಗೆ ಚರಂಡಿ ನೀರು ಸೇರುತ್ತಿರುವುದರಿಂದ ಕೆರೆಗಳ ನೀರಿನಲ್ಲಿ ರೋಗಾಣುಗಳು ಉತ್ಪತ್ತಿಯಾಗುವಂತಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ರೋಗಭೀತಿ ಕೂಡ ಶುರುವಾಗಿದೆ. ಹೀಗಾಗಿ, ಆದಷ್ಟು ಬೇಗ ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ಕೆರೆಗಳನ್ನು ಬಳಕೆಗೆ ಬರುವಂತೆ ಮಾಡಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ. ಇನ್ನು ಈ ಬಗ್ಗೆ ಮಾಜಿ ಸಚಿವ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಬಳಿ ಕೇಳಿದರೆ, ಈಗಾಗಲೇ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಗಳ ಹೂಳೆತ್ತಿಸಲು ಸಹ ವಿವಿಧ ಇಲಾಖೆಗಳಡಿ ಹಣ ಮಂಜೂರು ಮಾಡುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ.
ಇದನ್ನೂ ಓದಿ: ಮಂತ್ರಿಗಳನ್ನು ಅನರ್ಹರೆನ್ನುವ ಸಿದ್ದರಾಮಯ್ಯ ಗೆದ್ದಿದ್ದು ಹೇಗೆಂದು ಗೊತ್ತಿದೆ; ಎಚ್. ವಿಶ್ವನಾಥ್ ವಾಗ್ದಾಳಿ
ಹಳಿಯಾಳ ತಾಲ್ಲೂಕಿನಾದ್ಯಂತ 130ಕ್ಕೂ ಅಧಿಕ ಕೆರೆಗಳ ಹೂಳೆತ್ತಿಸುವ ಕೆಲಸವನ್ನು ಮಾಡಲಾಗಿದ್ದು, ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಆದರೂ ಪೂರ್ಣ ಪ್ರಮಾಣದ ಅಭಿವೃದ್ದಿ ಕಾಣುತ್ತಿಲ್ಲ. ಅಲ್ಲದೇ ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೃಷಿ, ತೋಟಗಾರಿಕೆ ಇತ್ಯಾದಿಗಳ ಬಳಕೆಗೆ ಯೋಗ್ಯವಾಗುವಂತೆ ಕೆರೆಗಳನ್ನು ಸಿದ್ಧಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಒಟ್ಟಾರೆ, ಒಳಚರಂಡಿ ಅವ್ಯವಸ್ಥೆಯಿಂದಾಗಿ ಕೆರೆಗಳು ಬಳಕೆಗೆ ಬಾರದಂತಾಗಿರೋದು ನಿಜಕ್ಕೂ ದುರಂತವೇ. ಇನ್ನಾದರೂ ಸಂಬಂಧಪಟ್ಟವರು ಆದಷ್ಟು ಬೇಗ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ಚರಂಡಿ ನೀರು ಸೇರುವುದನ್ನು ತಪ್ಪಿಸಬೇಕಾಗಿದೆ.
(ವರದಿ: ದರ್ಶನ್ ನಾಯಕ್)
First published:
February 7, 2020, 1:44 PM IST