ನಾಡಿನೆಲ್ಲೆಡೆ ಗಣೇಶನ ಸಂಭ್ರಮ : ಹಂಪಿಯಲ್ಲಿಲ್ಲ ಗಣಪತಿ ಮೂರ್ತಿಗಳಿಗೆ ಪೂಜಾಭಾಗ್ಯ!

news18
Updated:September 13, 2018, 11:35 AM IST
ನಾಡಿನೆಲ್ಲೆಡೆ ಗಣೇಶನ ಸಂಭ್ರಮ : ಹಂಪಿಯಲ್ಲಿಲ್ಲ ಗಣಪತಿ ಮೂರ್ತಿಗಳಿಗೆ ಪೂಜಾಭಾಗ್ಯ!
news18
Updated: September 13, 2018, 11:35 AM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.13) -  ದೇಶದೆಲ್ಲಡೆ ವಿಘ್ನ ನಿವಾರಕ ಗಣೇಶನನ್ನು ಸಂಭ್ರಮ-ಸಡಗರಿಂದ ಪೂಜಿಸಲಾಗುತ್ತಿದೆ. ಆದರೆ ವಿಶ್ವಪ್ರಸಿದ್ಧ ಹಂಪಿಯಲ್ಲಿರುವ ಗಣೇಶನ ಹಬ್ಬಕ್ಕಿಲ್ಲ ಸಂಭ್ರಮ. ಇಲ್ಲಿರುವ ಎರಡು ಬೃಹತ್ ದೊಡ್ಡ ಗಣೇಶ ಮೂರ್ತಿಗಳಿಗೆ ಪೂಜಾ ಭಾಗ್ಯವಿಲ್ಲ. ವಿಶ್ವಪರಂಪರೆ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿರುವ ಈ ಮೂರ್ತಿಗಳ ಪೂಜೆ ಮಾತ್ರ ಮಾಡೋದಿಲ್ಲ.

ನಾಡಿನೆಲ್ಲಡೆ ಗಣೇಶ ಚತುರ್ಥಿಯ ಸಂಭ್ರಮ. ಗಲ್ಲಿಗಲ್ಲಿಯಲ್ಲಿ ಗಣಪನ ಹರ್ಷೋದ್ಗಾರ. ಆದರೇನ್ ಮಾಡೋದು. ತೆರೆದ ಮ್ಯೂಸಿಯಂ ಎಂದು ಹೆಸರುವಾಸಿಯಾಗಿರುವ ಹಂಪಿಯ ಈ ಎರಡು ಬೃಹತ್ ಎತ್ತರದ ಗಣೇಶನ ವಿಗ್ರಹಗಳು ಮಾತ್ರ ಪೂಜೆ ನಡೆಯುತ್ತಿಲ್ಲ. ಹಾಗಂತ ಇವುಗಳನ್ನು ವೀಕ್ಷಿಸಲು ಬರೋರ ಸಂಖ್ಯೆಯಲ್ಲೇನು ಕಡಿಮೆಯಾಗಿಲ್ಲ.

ದಿನಬೆಳಗಾದ್ರೆ ಹಂಪಿಗೆ ಬರುವ ಪ್ರವಾಸಿಗರು ತದೇಕಚಿತ್ತದಿಂದ ಹಂಪಿಯ ಏಕಶಿಲೆ ಕಡಲೆಕಾಳು ಹಾಗೂ ಸಾಸಿವೆಕಾಳು ಗಣೇಶ ವಿಗ್ರಹಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ವಿಶ್ವಪರಂಪರಾ ಪಟ್ಟಿಯಲ್ಲಿರುವ ಗಣೇಶನ ಸ್ಮಾರಕಗಳಿಗೆ ಪೂಜೆ ಜರುಗುವುದಿಲ್ಲ. ಪ್ರಯಾಣಿಕರು ಸ್ಮಾರಕದ ರೀತಿ ನೋಡುತ್ತಾರೆ ವಿನಃ ಕೈಮುಗಿಯೋದು ಡೌಟು. ಈ ಸ್ಮಾರಕಗಳು ಭಿನ್ನವಾಗಿವೆ ಎಂಬ ನಂಬಿಕೆಯಿಂದಾಗಿ ಪೂಜೆ ಮಾಡುತ್ತಿಲ್ಲ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿ ಈರಣ್ಣ.

ಹಂಪಿಯ ಈ ಪ್ರಸಿದ್ಧ ಗಣೇಶನಮೂರ್ತಿಗಳು ಇರುವುದು ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ. ಹೇಮಕೂಟದ ಬೆಟ್ಟದ ಕೆಳಭಾಗದಲ್ಲಿರುವ ಸಾಸಿವೆ ಕಾಳು ಗಣೇಶ ಮೂರ್ತಿ 8 ಅಡಿ ಉದ್ದವಿದೆ. ಪುರಾಣದ ಪ್ರಕಾರ ಗಣಪ ಮಿತಿಮೀರಿ ತಿಂದಿದ್ದರಿಂದ ತನ್ನ ಹೊಟ್ಟೆ ಒಡೆಯುವಂತಾಯಿತು. ಆ ಸಂದರ್ಭದಲ್ಲಿ ಅದನ್ನು ತಡೆಯಲು ಹೊಟ್ಟೆ ಅಡ್ಡಲಾಗಿ ಸರ್ಪವನ್ನು ಸುತ್ತಿಕೊಂಡನೆಂಬ ಪ್ರತೀತಿಯಿದೆ. ಇನ್ನೂ ಈ ವಿಗ್ರಹದ ಬಲಗೈ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು. ಈ ಮೂರ್ತಿಯನ್ನು ಕ್ರಿ.ಶ.1506ರಲ್ಲಿ ಚಂದ್ರಗಿರಿಯ ವ್ಯಾಪಾರಿಯೊಬ್ಬರು ವಿಜಯನಗರ ಸಾಮ್ರಾಜ್ಯದ ನರಸಿಂಹ 2 ಅವರಿಗಾಗಿ ಕಟ್ಟಿಸಿದರು ಎಂಬ ಮಾಹಿತಿಯಿದೆ.

ಇನ್ನು ಕಡಲೆಕಾಳು ಗಣೇಶನ ಮೂರ್ತಿ ಏಕಶಿಲೆಯಾಗಿದ್ದು, 18 ಅಡಿ ಎತ್ತರವಿದೆ. ನೋಡಲು ಬಲು ಸೊಗಸು ಈ ಗಣೇಶನ ಮೂರ್ತಿ. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವಿಶೇಷವಾಗಿ ಪೂಜೆಗೊಳಪಡುತ್ತಿದ್ದ ಹಂಪಿಯ ಈ ಎರಡು ಗಣೇಶನ ಮೂರ್ತಿಗಳು ಇದೀಗ ಇವುಗಳಿಗೆ ಪೂಜೆಭಾಗ್ಯವಿಲ್ಲ.

ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಹಂಪಿಯಾಗಿ ಮಾರ್ಪಾಟಾಯಿತು. ಈ ಸಂದರ್ಭದಲ್ಲಿ ಹಲವು ದೇವಸ್ಥಾನಗಳ ಗರ್ಭಗುಡಿಯಲ್ಲಿರುವ ಮೂರ್ತಿಗಳು ನಾಶವಾದವು. ಗಣೇಶನ ಏಕಶಿಲಾ ಮೂರ್ತಿಗಳು ಭಿನ್ನವಾದವು. ಪುರಾತತ್ವ ಇಲಾಖೆಯವರು ಪೂಜೆಗೆ ಒತ್ತು ನೀಡದ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇದರಿಂದಾಗಿ ಹಂಪಿಯ ಗಣೇಶದ್ವಯರಿಗೆ ದರುಶನ ಭಾಗ್ಯವಿದೆ, ಪೂಜೆ ನಡೆಯೋದಿಲ್ಲ.
First published:September 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ