news18-kannada Updated:January 20, 2021, 4:51 PM IST
ಕೊರೋನಾ ಲಸಿಕೆ
ಬೆಂಗಳೂರು; ಮಹಾ ಲಸಿಕೆ ಅಭಿಯಾನಕ್ಕೆ ನೀರಿಕ್ಷಿಸಿದಷ್ಟು ಸಹಕಾರ ಸಿಗುತ್ತಿಲ್ಲ. ಲಸಿಕೆ ಬರೋ ಮೊದಲಿದ್ದ ಆಸಕ್ತಿಯೂ ಈಗ ಜನರಿಗಿಲ್ಲ. ಹೀಗಾಗಿ ಲಸಿಕಾ ಅಭಿಯಾನಕ್ಕೆ ಪದೇ ಪದೇ ಹಿನ್ನಡೆಯಾಗುತ್ತಿದೆ. ಹೌದು, ದೇಶದ ಮಹತ್ವಾಕಾಂಕ್ಷಿ ಲಸಿಕಾ ಅಭಿಯಾನ ಲಸಿಕೆ ಬಿಡುಗಡೆಯಾಗೋದಕ್ಕೆ ಮುಂಚೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಲಸಿಕೆ ಅಭಿಯಾನ ಶುರುವಾಗಿದ್ದರೂ ಕೂಡ ನೀರಿಕ್ಷಿತ ಮಟ್ಟದಲ್ಲಿ ಬೆಂಬಲ ಸಿಗುತ್ತಿಲ್ಲ. ಯಾಕಂದರೆ ಆರೋಗ್ಯ ಕಾರ್ಯಕರ್ತರಲ್ಲಿ ಇನ್ನು ಕೂಡ ಅಳುಕಿದ್ದು ಸೈಡ್ ಎಫೆಕ್ಟ್ ಆದರೆ ಏನ್ ಕಥೆ ಅಂತ ಸುಮ್ಮನಿದ್ದಾರೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಏನೇ ಹೇಳಿದರೂ ಕೆಲ ಆರೋಗ್ಯ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡುತ್ತಿಲ್ಲ. ಹೀಗಾಗಿ ರಾಜ್ಯದ ಲಸಿಕಾ ಪ್ರಮಾಣ ದಿನದಿಂದ ದಿನಕ್ಕೆ ತಗ್ಗುತ್ತಲೇ ಇದೆ. ಹಾಗೇ ಬೆಂಗಳೂರಿನಲ್ಲೂ ಲಸಿಕೆ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಪ್ರತಿದಿನ ಕೊರೋನಾ ವಿರುದ್ದದ ಲಸಿಕೆ ಹಾಕಿಸಿಕೊಳ್ಳುವರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.ಯಾಕಂದರೆ ಲಸಿಕೆ ಹಂಚಿಕೆ ಉದ್ಘಾಟನೆಯಾದ ಮೊದಲ ದಿನ ಶೇ. 62 ರಷ್ಟು ಲಸಿಕೆ ಹಂಚಿಕೆಯಾಗಿದೆ. ಎರಡನೇ ದಿನ ಶೇ. 53 ರಷ್ಟು ಹಾಗೇ ಮೂರನೇ ದಿನ ಕೇವಲ ಶೇ. 47 ಜನ ಲಸಿಕೆ ಹಾಕಿಕೊಂಡಿದ್ದಾರೆ.
ರಾಜ್ಯದಲ್ಲಿ ಕೇವಲ ಅರ್ಧದಷ್ಟು ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಹೆಚ್ಚಿನ ರೆಸ್ಪಾನ್ಸ್ ಸಿಗುತ್ತಿಲ್ಲ ಎನ್ನುವುದರ ಮಧ್ಯೆಯೇ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಎಲ್ಲಾ ರಾಜ್ಯಗಳಿಗಿಂತಗೂ ನಮ್ಮ ರಾಜ್ಯದಲ್ಲಿ ಅತಿಹೆಚ್ಚು ಅಂದರೇ 66,392 ಕೊರೋನಾ ವಾರಿಯರ್ಸ್ಗಳಿಗೆ ಲಸಿಕೆ ಹಾಕಲಾಗಿದೆ. 46680 ಲಸಿಕೆ ಹಾಕಿದ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಸಿಕ್ಕಿಂನಲ್ಲಿ 120 ಜನರಿಗೆ ಲಸಿಕೆ ಹಾಕಿ ಅತಿಕಡಿಮೆ ಲಸಿಕೆ ಹಂಚಿದ ರಾಜ್ಯ ಎನಿಸಿಕೊಂಡಿದೆ.
ಉಳಿದ ರಾಜ್ಯಗಳಿಕೆ ಹೋಲಿಸಿ ನೋಡಿದರೆ ರಾಜ್ಯದಲ್ಲಿ ಅತಿಹೆಚ್ಚು ಲಸಿಕೆ ವಿತರಣೆಯಾಗಿದೆ. ಆದರೆ ಕೊರೋನಾ ಹೊಡೆದೊಡಿಸಲು ಶೇ. 100ರಷ್ಟು ಲಸಿಕೆ ವಿತರಣೆಯಾಗಬೇಕಾದ ಅನಿವಾರ್ಯತೆಯಿದೆ. ಆದರೆ ಅತಿ ಹೆಚ್ಚು ಲಸಿಕೆ ಹಂಚಿಕೆಯಾಗಿರುವ ನಮ್ಮ ರಾಜ್ಯದಲ್ಲೂ ಕೊರೋನಾ ಲಸಿಕೆ ಬರೋದಕ್ಕೂ ಮೊದಲಿದ್ದ ಲೆಕ್ಕಾಚಾರದಷ್ಟು ವಿತರಣೆಯಾಗಿಲ್ಲ. ಇನ್ನೂ ಆರೋಗ್ಯ ಕಾರ್ಯಕರ್ತರಲ್ಲೇ ಲಸಿಕೆ ಹಾಕಿಸಿಕೊಳ್ಳಲು ಸಂಪೂರ್ಣ ಧೈರ್ಯ ಬಂದಂತಿಲ್ಲ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ರಾಜ್ಯದಲ್ಲಿ ಲಸಿಕೆ ಹಂಚಿಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಸೂಕ್ತ ಪ್ರಮಾಣದಲ್ಲಿ ಲಸಿಕೆ ಹಂಚಿಕೆಯಾಗಬೇಕಿದೆ.
ಇದನ್ನು ಓದಿ: ರಾಜಭವನ ಮುತ್ತಿಗೆಗೆ ಯತ್ನ; ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನನ್ನು ವಶಕ್ಕೆ ಪಡೆದ ಪೊಲೀಸರು
ಈಗಾಗಲೇ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎನ್ನುವ ಎರಡು ಲಸಿಕೆಯನ್ನು ಹಂಚಲು ಶುರು ಮಾಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಲಸಿಕೆಯಿಂದ ಅಡ್ಡಪರಿಣಾಮಗಳಾದ ಘಟನೆಗಳೂ ವರದಿಯಾಗಿವೆ. ಸೂಜಿ ಚುಚ್ಚಿದ ಭಾಗದಲ್ಲಿ ತುರಿಕೆ, ಅತಿಯಾದ ತಲೆ ನೋವು ಹಾಗೂ ಸುಸ್ತು, ಜ್ವರ, ವಾಂತಿ ಮುಂತಾದವುಗಳ ಜೊತೆಗೆ ಪ್ರಜ್ಞೆ ಕಳೆದುಕೊಂಡವರೂ ಇದ್ದಾರೆ. ಆದರೆ ತಜ್ಞರ ಪ್ರಕಾರ ಇವೆಲ್ಲವೂ ಸರ್ವೇ ಸಾಮಾನ್ಯ. ಆದರೆ ಇತರೆ ರೋಗಗಳಿರುವವರಾಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಅಂತ ಹೇಳುತ್ತಿದ್ದಾರೆ.
ಹೀಗಾಗಿ ಲಸಿಕೆ ಬರೋಕು ಮುಂಚೆ ಜನರಲ್ಲಿ ಯಾವ ಮಟ್ಟದಲ್ಲಿ ಹುಮ್ಮಸ್ಸಿತ್ತೋ ಈಗ ಲಸಿಕೆ ಬಂದ ಮೇಲೆ ಅದನ್ನು ಹಾಕಿಸಿಕೊಳ್ಳಲು ಆ ಮಟ್ಟದಲ್ಲೇ ಹುಮ್ಮಸ್ಸಿಲ್ಲ. ಕೆಲವರಂತೂ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಈಗ ಲಸಿಕೆ ಕೊಟ್ಟವರ ಪಾಡೇನು, ಯಾವ ರೀತಿಯಾಗಿ ಅದು ಪರಿಣಾಮಕಾರಿಯಾಗಲಿದೆ ಎಂಬುವುದನ್ನೆಲ್ಲಾ ನೋಡಿಕೊಂಡು ಲಸಿಕೆ ಹಾಕಿಸಿಕೊಂಡರಾಯ್ತು ಎಂಬ ನಿರ್ಧಾರದಲ್ಲಿದ್ದಾರೆ.
ವರದಿ; ಆಶಿಕ್ ಮುಲ್ಕಿ
Published by:
HR Ramesh
First published:
January 20, 2021, 4:51 PM IST