ಜಿಲ್ಲೆಯಲ್ಲಿ ಒಂದಷ್ಟು ಮಳೆ - ಆದರೂ ತಪ್ಪದ ಬರಗಾಲದ ತೂಗುಕತ್ತಿ

news18
Updated:August 27, 2018, 7:32 PM IST
ಜಿಲ್ಲೆಯಲ್ಲಿ ಒಂದಷ್ಟು ಮಳೆ - ಆದರೂ ತಪ್ಪದ ಬರಗಾಲದ ತೂಗುಕತ್ತಿ
news18
Updated: August 27, 2018, 7:32 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಆಗಸ್ಟ್ 27) :  ದಕ್ಷಿಣ ಕರ್ನಾಟಕದಾದ್ಯಂತ ಕುಂಭದ್ರೋಣ ಮಳೆಯಾಗಿ, ಉಂಟಾದ ಪ್ರವಾಹಕ್ಕೆ ಜನತೆ ತತ್ತರಿಸಿದೆ. ಆದರೆ ಅದೇ ಮಳೆರಾಯನ ಆಗಮನಕ್ಕಾಗಿ ಹೈದರಾಬಾದ್ ಕರ್ನಾಟಕದಲ್ಲಿ ಜನತೆ ಎದುರು ನೋಡುತ್ತಿದೆ.

ಹೈದರಾಬಾದ್ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದ್ದು, ಬೆಳೆಗಳು ಒಣಗಲಾರಂಭಿಸಿವೆ. ಹೆಸರು, ಉದ್ದು, ಎಲ್ಳು, ಸೋಯಾ, ತೊಗರಿ ಬೆಳೆಗಳು ಹಾನಿಗೀಡಾಗುವ ಆತಂಕ ಎದುರಿಸುತ್ತಿವೆ. ಆಗಸ್ಟ್ ಮೂರನೇ ವಾರದಲ್ಲಿ ಅಲ್ಪ ಮಳೆಯಾಗಿದ್ದರೂ ಕಲಬುರ್ಗಿ ಜಿಲ್ಲೆಯಲ್ಲಿ ಶೇ.26 ರಷ್ಟು ಮಳೆ ಕೊರತೆ ಕಾಣಿಸಿದೆ. ತೊಗರಿಗೆ ಒಂದಷ್ಟು ಚೇತರಿಕೆ ಸಿಕ್ಕಿದ್ದರೂ ಅಲ್ಪಾವಧಿ ಬೆಳೆಗಳು ಹಾನಿಗೆ ತುತ್ತಾಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮತ್ತೊಂದೆಡೆ ಕೆರೆ, ಜಲಾಶಯಗಳಲ್ಲಿಯೂ ನೀರು ಸಂಗ್ರಹಗೊಳ್ಳದೆ, ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಮುನ್ಸೂಚನೆ ಸಿಗಲಾರಂಭಿಸಿದೆ.

ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿದ ಪರಿಣಾಮ ಕೆಲ ಜಿಲ್ಲೆಗಳಲ್ಲಿ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿದು, ಪ್ರವಾಹಕ್ಕೆ ನಲುಗುವಂತಾಗಿದೆ. ದಕ್ಷಿಣ ಕರ್ನಾಟಕದಲ್ಲಿಯಂತೂ ಮಳೆರಾಯನ ರೌದ್ರ ನರ್ತನದಿಂದಾಗಿ ಜನರ ಬದುಕೇ ನರಕಸದೃಶವಾಗಿದೆ. ಆದರೆ ಅದೇಕೋ ಹೈದರಾಬಾದ್ ಕರ್ನಾಟಕದ ಮೇಲೆ ಮಳೆರಾಯನ ಮುನಿಸು. ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ನಿರೀಕ್ಷಿತ ಮಳೆ ಬಂದಿಲ್ಲ. ಇದರಿಂದಾಗಿ ರೈತ ಸಮುದಾಯ ತತ್ತರಿಸಿದೆ.

ಮುಂಗಾರಿನ ಆರಂಭದಲ್ಲಿ ಸುರಿದ ಒಂದಷ್ಟು ಮಳೆಗೆ ರೈತರು ಬಿತ್ತನೆ ಮಾಡಿದ್ದು, ಅಲ್ಪಾವಧಿ ಬೆಳೆಗಳು ಪ್ರೌಢಾವಸ್ಥೆಗೆ ಬಂದಿವೆ. ಕಲಬುರ್ಗಿ ಜಿಲ್ಲೆಯಲ್ಲಿ ಹೆಸರು ಕಾಯಿ ಕಟ್ಟುತ್ತಿದ್ದರೆ, ಉದ್ದು, ಸೋಯಾ ಮತ್ತು ಎಳ್ಳು ಹೂವು ಕಟ್ಟುವ ಹಂತದಲ್ಲಿವೆ. ಆದರೆ ಈ ಹಂತದಲ್ಲಿಯೇ ಮಳೆಯ ಕೊರತೆಯಾಗಿ ಬೆಳೆಗಳು ಒಳಗಲಾರಂಭಿಸಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ.

ಹೆಸರು ಕೆಲವೆಡೆ ಕಾಯಿ ಕಟ್ಟಿದ್ದರೆ, ಇನ್ನೂ ಕೆಲವೆಡೆ ಹೂವು ಕಟ್ಟುವ ಹಂತದಲ್ಲಿದೆ. ಉದ್ದು, ಎಳ್ಳು, ಸೋಯಾ ಹೂವು ಕಟ್ಟುತ್ತಿದ್ದು, ತೊಗರಿ ಬೆಳೆಯುವ ಹಂತದಲ್ಲಿದೆ. ಆಗಷ್ಟ್ ಮೂರನೇ ವಾರದಲ್ಲಿ ಸುರಿದ ಅಲ್ಪ ಮಳೆ ತೊಗರಿಗೆ ಒಂದಷ್ಟು ಚೇತರಿಕೆ ನೀಡಿದೆ. ಆದರೆ ಹೆಸರು ನಿರೀಕ್ಷಿತ ಫಸಲು ನೀಡಿಲ್ಲ. ಅಲ್ಲದೆ ಉದ್ದು, ಎಳ್ಳು ಮತ್ತು ಸೋಯಾ ಬೆಳೆಗಳು ಹೂವು ಕಟ್ಟುವ ಹಂತದಲ್ಲಿದ್ದು, ಚೇತರಿಸಿಕೊಳ್ಳಲಾರದ ಹಂತ ತಲುಪಿವೆ.

ಹೀಗಾಗಿ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ರೈತರು. ಪ್ರತಿ ಎಕರೆಗೆ ಬಿತ್ತನೆ, ಕಳೆ ತೆಗೆಯಲು ಇತ್ಯಾದಿ ಕೆಲಸಕ್ಕಾಗಿ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆ ನೆಲ ಕಚ್ಚಿದೆ. ಪ್ರೌಢಾವಸ್ಥೆಯಲ್ಲಿ ಬೆಳೆ ಹಾನಿಯಾಗಿರುವುದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಕೂಡಲೇ ಹಾನಿಯ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.
Loading...

ಕಲಬುರ್ಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 380 ಮಿಲೀ ಮೀಟರ್ ಮಳೆಯಾಗಬೇಕಿತ್ತು. ಆದರೆ ಬಂದಿರುವುದು ಮಾತ್ರ 281 ಮಿ.ಮೀ. ಮಳೆ. ಜಿಲ್ಲೆಯಲ್ಲಿ 100 ಮಿಲೀ ಮೀಟರ್ ಮಳೆ ಕೊರತೆಯಾಗಿದ್ದು, ಶೇ.26 ರಷ್ಟು ಕೊರತೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಮುಂಗಾರಿನಲ್ಲಿ 6.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 6.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಶೇ.96 ರಷ್ಟು ಬಿತ್ತನೆ ಗುರಿ ಸಾಧಿಸಲಾಗಿದೆ.

ಬಿತ್ತನೆಯೇನೋ ಉತ್ತಮವಾಗಿದ್ದರೂ, ನಂತರದಲ್ಲಿ ಮಳೆಯ ಅಭಾವದಿಂದಾಗಿ ಬೆಳೆ ಹಾನಿಯಾಗಲಾರಂಭಿಸಿದೆ. ಆಗಷ್ಟ್ ಮೂರನೇ ವಾರದಲ್ಲಿ ಸುರಿದ ಅಲ್ಪ ಮಳೆಯಿಂದಾಗಿ ತೊಗರಿ ಮತ್ತು ಹತ್ತಿ ಒಂದಷ್ಟು ಚೇತರಿಕೆ ಕಂಡಿವೆ. ಆದರೆ ಉದ್ದು, ಎಳ್ಳು ಮತ್ತು ಸೋಯಾ ಹೂವು ಕಟ್ಟುವ ಹಂತದಲ್ಲಿದ್ದು, ಬೆಳೆ ಚೇತರಿಕೆ ಅಸಾಧ್ಯ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್.ಕೆ.ಸೂಗೂರು ತಿಳಿಸಿದ್ದಾರೆ.

ಇನ್ನು ಮಳೆರಾಯನ ಮುನಿಸಿನಿಂದಾಗಿ ಜಿಲ್ಲೆಯ ಜಲಾಶಯಗಳೂ ಭರ್ತಿಯಾಗಿಲ್ಲ. ಬಹುತೇಕ ಕೆರೆಗಳು ಭರ್ತಿಯಾಗಿಲ್ಲ. ಜಿಲ್ಲೆಯ ಬೆಣ್ಣೆತೊರಾ, ನಾಗರಾಳ ಜಲಾಶಯಗಳಲ್ಲಿ ಒಂದಷ್ಟು ನೀರಿದ್ದರೂ ಪೂರ್ತಿಯಾಗಿ ಭರ್ತಿಯಾಗಿಲ್ಲ. ಇನ್ನು ಅಮರ್ಜಾ, ಗಂಡೋರಿ, ಚಂದ್ರಪಳ್ಳಿ ಜಲಾಶಯಗಳೂ ಖಾಲಿ ಖಾಲಿ ಎಂಬ ಪರಿಸ್ಥಿತಿ ಇದೆ. ಕೆರೆಗಳ ಕಥೆ ಹೇಳುವಂತೆಯೇ ಇಲ್ಲ. ಜಿಲ್ಲೆಯ ಬಹುತೇಕ ಕೆರೆಗಳೂ ಖಾಲಿ ಖಾಲಿಯಾಗಿ ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಆತಂಕ ಸೃಷ್ಟಿಯಾಗಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...