ರಾಯಚೂರು (ಮಾ. 12) : ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಈ ವರ್ಷ ಕೊರೋನಾ ಅಡ್ಡಿಯಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅಬ್ಬರಿಸಿದ ಕೊರೋನಾ ಹಿನ್ನಲೆಯಲ್ಲಿ ಶಾಲೆಗಳಿಗೆ ಬೀಗ ಹಾಕಲಾಗಿತ್ತು. ಅದರೊಂದಿಗೆ ಅಕ್ಷರ ದಾಸೋಹ ಯೋಜನೆಯಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ಸಹ ನಿಲ್ಲಿಸಲಾಗಿದೆ. ಈ ಹಿನ್ನಲೆ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ಬದಲಿ ಆಹಾರ ಧಾನ್ಯವನ್ನು ಮನೆಗೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ. ಆದರೆ, ಇಲ್ಲಿಯವರೆಗೂ ಮೊದಲು ಹಂತದ ಆಹಾರ ಧಾನ್ಯವನ್ನು ನೀಡಲಾಗಿಲ್ಲ. ಈ ಮಧ್ಯೆ ಈಗ ಶಾಲೆಗಳು 6ನೇ ತರಗತಿಯಿಂದ ಎಸ್ ಎಸ್ ಎಲ್ ಸಿಯವರೆಗೂ ಆರಂಭವಾಗಿದ್ದರೂ ಶಾಲೆಗಳಲ್ಲಿ ಬಿಸಿಯೂಟ ನೀಡುತ್ತಿಲ್ಲ, ಅದರ ಬದಲಿ 1 ರಿಂದ 10 ನೇಯ ತರಗತಿಯವರಗಿನ ಮಕ್ಕಳಿಗೆ ಅವರ ತರಗತಿಗೆ ಅನುಗುಣವಾಗಿ ಆಹಾರಧಾನ್ಯವನ್ನು ನೀಡಲಾಗುತ್ತಿದೆ.
.ಮಧ್ಯಾಹ್ನ ಬಿಸಿಯೂಟ ಸ್ಥಗಿತಗೊಂಡಿದ್ದರ ಬಗ್ಗೆ ನ್ಯೂಸ್ 18 ಅಭಿಯಾನವನ್ನೇ ಮಾಡಿತ್ತು. ಇದೇ ವೇಳೆ ಹೈಕೋರ್ಟ್ ಮಧ್ಯೆ ಪ್ರವೇಶಿಸಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಸ್ಥಗಿತಗೊಂಡಿರುವದಕ್ಕೆ ರಾಜ್ಯ ಸರಕಾರದ ವಿರುದ್ದ ಗರಂ ಆಗಿ ತಕ್ಷಣ ಬಿಸಿಯೂಟದ ಬದಲಿ ಆಹಾರ ಧಾನ್ಯವನ್ನು ನೀಡಲು ಸೂಚಿಸಿತ್ತು. ಹೈಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ 54 ದಿನಗಳ ಶಾಲಾ ಅವಧಿಗೆ ಆಹಾರ ಧಾನ್ಯವನ್ನು ನೀಡಲಾಗುತ್ತಿದೆ. ಆದರೆ, ಈ ಆಹಾರ ನೀಡುವಲ್ಲಿ ಶೇ100 ಸಾಧನೆಯಾಗಿಲ್ಲ. ರಾಜ್ಯದಲ್ಲಿ ನವಂಬರ್ ತಿಂಗಳಿನಿಂದ ಆಹಾರಧಾನ್ಯ ನೀಡುವ ಕಾರ್ಯ ನಡೆದಿದೆ. ಇಲ್ಲಿಯವರೆಗೂ ಶೇ 75.42 ರಷ್ಟು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ನೀಡಲಾಗಿದೆ. ಒಟ್ಟು 54180 ಶಾಲೆಗಳಲ್ಲಿ 40865 ಶಾಲೆಗಳಿಗೆ ಆಹಾರ ಧಾನ್ಯ ನೀಡಲಾಗಿದೆ. ಇನ್ನೂ 13315 ಶಾಲೆಗಳಿಗೆ ಆಹಾರ ಧಾನ್ಯ ನೀಡಿಲ್ಲ, ಒಟ್ಟು 5634199 ವಿದ್ಯಾರ್ಥಿಗಳ ಪೈಕಿ 4175549 ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ನೀಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಶೇ 96.64 ರಷ್ಟು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ನೀಡಲಾಗಿದೆ.
ಇದನ್ನು ಓದಿ: ಹುಬ್ಬಳ್ಳಿ ಶಾಲೆ ತೆರವು ವಿವಾದ: ನಡು ರಸ್ತೆಯಲ್ಲೇ ತರಗತಿ; ಸ್ಥಳಕ್ಕೆ ಡಿ.ಡಿ.ಪಿ.ಐ ಭೇಟಿ
ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 100 ರಷ್ಟು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ನೀಡಲಾಗಿದೆ. ಮಂಡ್ಯದಲ್ಲಿ ಕೇವಲ 25.08 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಆಹಾರ ಧಾನ್ಯ ನೀಡಲಾಗಿದೆ.ಈ ಸಂದರ್ಭದಲ್ಲಿ ತೊಗರಿ ಬೇಳೆ, ಅಕ್ಕಿ, ಉಪ್ಪು ಹಾಗೂ ಅಡುಗೆ ಎಣ್ಣೆ ನೀಡಲು ಸೂಚಿಸಿತ್ತು, ಆದರೆ, ಇಲ್ಲಿಯವರೆಗೂ ಅಡುಗೆ ಎಣ್ಣೆ ನೀಡಿಲ್ಲ. ರಾಜ್ಯದಾದ್ಯಂತ ಅಡುಗೆ ಎಣ್ಣೆ ವಿತರಿಸಲು ಬೆಂಗಳೂರಿನ ರಂಬೂಶ್ರೀ ಟೆಕ್ ಸಿಸ್ಟಮ್ ಲಿಮಿಟೆಡ್ ನವರಿಗೆ ಗುತ್ತಿಗೆ ನೀಡಲಾಗಿತ್ತು, ಗುತ್ತಿಗೆದಾರ ಅಡುಗೆ ಎಣ್ಣೆ ನೀಡಿಲ್ಲ(ಈ ಕಾರಣಕ್ಕೆ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದಾರೆ ಎನ್ನುವ ಮಾಹಿತಿ). ಇದರಿಂದ ಆಹಾರ ಧಾನ್ಯ ನೀಡುವಲ್ಲಿಯೂ ಪೂರ್ಣ ಪ್ರಮಾಣದ ಆಹಾರ ಧಾನ್ಯ ನೀಡಲಾಗಿಲ್ಲ.
ಅಕ್ಟೋಬರ್ ತಿಂಗಳವರೆಗಿನ ಆಹಾರ ಧಾನ್ಯ ವಿತರಿಸುವುದೇ ಪೂರ್ಣವಾಗಿಲ್ಲ, ಅಕ್ಟೋಬರ್ ನಿಂದ ಎಪ್ರಿಲ್ ನವರೆಗೆ ಆಹಾರ ಧಾನ್ಯ ವಿತರಿಸುವುದು ಯಾವಾಗ ಎಂದು ಪ್ರಶ್ನೆ ಎದ್ದಿದೆ. ಅಕ್ಟೋಬರ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೆ ಆಹಾರ ಧಾನ್ಯ ಈಗ ವಿತರಿಸಲು ಇಲಾಖೆಗೆ ಸೂಚನೆ ನೀಡಿದೆ. ಆದರೆ ಇನ್ನೂ ಗುತ್ತಿಗೆದಾರರ ನೇಮಕವಾಗಿಲ್ಲ ಎನ್ನುವ ಮಾಹಿತಿ ಇದೆ. ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗೆ ಕೊರೋನಾ ಅಡ್ಡಿಯಾಗಿದ್ದು, ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಕಾಲಕ್ಕೆ ಆಹಾರಧಾನ್ಯವನ್ನು ನೀಡದೆ ಇರುವದು ಕಂಡು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ