ಇಲ್ಲಿ ಸತ್ತರೆ ಮಣ್ಣು ಮಾಡಲು ಸ್ಥಳವಿಲ್ಲ; ರಸ್ತೆ, ಕಾಲುವೆ ಪಕ್ಕವೇ ಹೂಳಬೇಕಾದ ಪರಿಸ್ಥಿತಿ

 ಇಲ್ಲಿರುವವರಲ್ಲಿ ಹಲವರು ತಮ್ಮ ಸ್ವಂತ ಜಮೀನಿನಲ್ಲಿ ಶವ ಹೂತರೆ, ಇನ್ನೂ ಕೆಲವರಿಗೆ ಭೂಮಿ ಇಲ್ಲ. ಈ ಕಾರಣಕ್ಕಾಗಿ ಅವರು ಶವ ಸಂಸ್ಕಾರ ಮಾಡಲು ಜಾಗವನ್ನು ಹುಡುಕಬೇಕಾಗಿದೆ.

ರಸ್ತೆ ಪಕ್ಕ ಶವಸಂಸ್ಕಾರ  ಮಾಡಿರುವುದು

ರಸ್ತೆ ಪಕ್ಕ ಶವಸಂಸ್ಕಾರ ಮಾಡಿರುವುದು

  • Share this:
ರಾಯಚೂರು(ಫೆ. 28): ಮನುಷ್ಯ ಸತ್ತಾಗ ಅವರ ಶವಸಂಸ್ಕಾರ ಮಾಡುವುದು ಪದ್ದತಿ, ತಮ್ಮ ಹಿರಿಯರ ನೆನಪಿಗಾಗಿ ಗೋರಿಗಳನ್ನು ಸಹ ಕಟ್ಟುವವರಿದ್ದಾರೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ಶೇ. 20 ಗ್ರಾಮಗಳಲ್ಲಿ ಶವವನ್ನು ಹೂಳಲು ಸಾರ್ವಜನಿಕ ರುದ್ರಭೂಮಿಗಳಿಲ್ಲ.

ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಳಿ ಕ್ಯಾಂಪ್ ಕಳೆದ ಸುಮಾರು 60 ವರ್ಷಗಳ ಹಿಂದಿನಿಂದಲೂ ಇರುವ ಗ್ರಾಮ, ಸುಮಾರು 120 ಕ್ಕೂ ಅಧಿಕ ಮನೆಗಳಿವೆ. ಇಲ್ಲಿ ಯಾರಾದರೂ ಸತ್ತರೆ ಅಂತ್ಯ ಸಂಸ್ಕಾರಕ್ಕಾಗಿ ಜಾಗವನ್ನು ಹುಡುಕಬೇಕುವುದೇ ದೊಡ್ಡ ಸಮಸ್ಯೆ. ಇಲ್ಲಿರುವವರಲ್ಲಿ ಹಲವರು ತಮ್ಮ ಸ್ವಂತ ಜಮೀನಿನಲ್ಲಿ ಶವ ಹೂತರೆ, ಇನ್ನೂ ಕೆಲವರಿಗೆ ಭೂಮಿ ಇಲ್ಲ. ಈ ಕಾರಣಕ್ಕಾಗಿ ಅವರು ಶವ ಸಂಸ್ಕಾರ ಮಾಡಲು ಜಾಗವನ್ನು ಹುಡುಕಬೇಕಾಗಿದೆ. ಸಾರ್ವಜನಿಕ ರುದ್ರಭೂಮಿ ಇಲ್ಲದೇ ಇರುವದರಿಂದ ಈ ಗ್ರಾಮಸ್ಥರು ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದಲ್ಲಿಯೇ ಶವ ಸಂಸ್ಕಾರ ಮಾಡುತ್ತಾರೆ.

ಇತ್ತೀಚೆಗೆ ಈ ಗ್ರಾಮದ ಜನರು ಶವ ಹೂಳಲು ಜಾಗವಿಲ್ಲದ ಕಾರಣಕ್ಕೆ ಶವದೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು. ಆಗ ಅದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ತಹಶೀಲ್ದಾರ್ ಇಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಖಾಸಗಿಯವರ ಭೂಮಿ ಖರೀದಿಸಲು ಮುಂದಾಗಿದ್ದಾರೆ. ಇಲ್ಲಿಯವರೊಬ್ಬರು ಸರಕಾರ ನಿಗಿದಿಪಡಿಸಿದ ದರಕ್ಕೆ ಭೂಮಿ ಕೊಡಲು ಸಿದ್ದರಾಗಿದ್ದಾರೆ. ಆದರೆ, ಈಗಲೂ ಸಹ ಪತ್ರ ವ್ಯವಹಾರದಲ್ಲಿಯೇ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.

ಇದು ಕೋಳಿ ಕ್ಯಾಂಪ್ ಮಾತ್ರವಲ್ಲ, ಈ ಸ್ಥಿತಿ ಹಲವು ಕಡೆ ಇದೆ. ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಪ್ರದೇಶ ನೀರಾವರಿಯಾಗಿರುವುದರಿಂದ ಸರಕಾರ ನಿಗದಿಪಡಿಸಿದ ದರಕ್ಕೆ ರೈತರು ಭೂಮಿ ನೀಡಲು ಮುಂದಾಗಿಲ್ಲ. ಇದೇ ಕಾರಣಕ್ಕೆ ಖಾಸಗಿಯವರಿಂದ ಭೂಮಿ ಖರೀದಿಸಿ ರುದ್ರಭೂಮಿಗಾಗಿ ಮೀಸಲಿಡಲು ಸಾಧ್ಯವಾಗುತ್ತಿಲ್ಲ.

ಜಿಲ್ಲೆಯಲ್ಲಿ ಎಲ್ಲಿಲ್ಲಿ ರುದ್ರಭೂಮಿಗಳಿಲ್ಲ ಅಲ್ಲಿಯ ಸರಕಾರಿ ಭೂಮಿಯಲ್ಲಿ ರುದ್ರಭೂಮಿ ಮಾಡಲಾಗುವುದು. ಸರಕಾರಿ ಭೂಮಿ ಇಲ್ಲದಿದ್ದರೆ ಖಾಸಗಿಯವರಿಂದ ಖರೀದಿಸಿ ರುದ್ರಭೂಮಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳುತ್ತಾರೆ.

ಇದನ್ನೂ ಓದಿ : ಕೆಲಸ ಸಿಕ್ಕಿದ ಬಳಿಕ ಕಷ್ಟಪಟ್ಟು ಓದಿಸಿದ್ದ ಪೋಷಕರನ್ನೇ ಮರೆತ ಮಗ; ನ್ಯಾಯಮಂಡಳಿ ಮೆಟ್ಟಿಲೇರಿ ಗೆದ್ದ ತಂದೆ..!

ಜಿಲ್ಲೆಯಲ್ಲಿ ಒಟ್ಟು 886 ಗ್ರಾಮಗಳ ಪೈಕಿ 630 ಗ್ರಾಮಗಳಲ್ಲಿ ಸಾರ್ವಜನಿಕ ರುದ್ರಭೂಮಿಗಳಿವೆ. 192 ಗ್ರಾಮಗಳಲ್ಲಿ ರುದ್ರಭೂಮಿಗಳಿಲ್ಲ. ಒಂದು ಕಡೆ ಮಾತ್ರ ರುದ್ರಭೂಮಿ ಮಾಡಲು ಗುರುತಿಸಲಾಗಿದೆ. ಖಾಸಗಿಯವರಿಂದ 19 ಗ್ರಾಮಗಳಲ್ಲಿ ಭೂಮಿ ಖರೀದಿಸಿ ರುದ್ರಭೂಮಿ ಮಾಡಲಾಗುತ್ತಿದೆ. ಇವುಗಳೊಂದಿಗೆ ರುದ್ರಭೂಮಿಗಳ ಜಾಗದ ವಿವಾದ, ಧರ್ಮಗಳ ಮಧ್ಯೆಯ ಭಿನ್ನಾಭಿಪ್ರಾಯಗಳಿಂದ ಗೊಂದಲಗಳಿವೆ.

ಈ ಮಧ್ಯೆ ಇತ್ತೀಚಿಗೆ ಸಮಾಜ ಕಲ್ಯಾಣ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಈ ಕುರಿತು ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿದ್ದಾರೆ. ಊಟವಿಲ್ಲದಿದ್ದರೂ ನಡೆಯುತ್ತೆ. ಆದರೆ, ಸತ್ತಾಗ ಶವ ಸಂಸ್ಕಾರಕ್ಕೆ ಜಾಗ ಇಲ್ಲದಿದ್ದರೆ ಎಲ್ಲಿ ಹೂಳಬೇಕು? ತಕ್ಷಣ ಅವಶ್ಯವಿರುವ ಕಡೆ ರುದ್ರಭೂಮಿ ನೀಡಿ ಎಂದು ಅಧಿಕಾರಿಗಳಿಗೆ ಡಿಸಿಎಂ ತಾಕೀತು ಮಾಡಿದ್ದಾರೆ.
First published: