ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನ ಕಳೆದಂತೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಏನೇ ಅಂದರೂ ಹೆಲ್ಮೇಟ್ ಧರಿಸಲು ಮುಂದಾಗುತ್ತಿಲ್ಲ. ಇನ್ನು ಹೆಲ್ಮೆಟ್ ಧರಿಸದೇ ಇರುವ ಕಾರಣ ಅಪಘಾತಗಳಲ್ಲಿ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಇನ್ಮುಂದೆ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ನೀಡದಂತೆ ಬಂಕ್ ಮಾಲೀಕರಿಗೆ ಜಿಲ್ಲಾ ಪೊಲೀಸರು ಸೂಚಿಸಿದ್ದಾರೆ.
ಹೆಲ್ಮೆಟ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮವನ್ನು ಜಾರಿಗೊಳಿಸುತ್ತಿದೆ. ಪೊಲೀಸ್ ಇಲಾಖೆಯ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೆಟ್ರೋಲ್ ಬಂಕ್ಗಳ ಮಾಲೀಕರು ಕೂಡ ‘ನೋ ಹೆಲ್ಮೆಟ್ ನೋ ಪೆಟ್ರೋಲ್' ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
![]()
ಪೆಟ್ರೋಲ್ ಬಂಕ್ಗಳಲ್ಲಿ ಸೂಚನಾ ಫಲಕ
ಈ ಬಗ್ಗೆ ಪೆಟ್ರೋಲ್ ಬಂಕ್ಗಳ ಮಾಲೀಕರ ಅಸೋಸಿಯೇಷನ್ ಮಾಹಿತಿ ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದೆ. ಈಗಾಗಲೇ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಈ ನಿಯಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಹೆಲ್ಮೆಟ್ ಧರಿಸದೆ ಪೆಟ್ರೋಲ್ ಬಂಕ್ ಗೆ ತೆರಳಿದ ವಹನ ಸವಾರರಿಗೆ ಈಗ ಈನಿಯಮದ ಬಿಸಿ ತಟ್ಟಿದೆ.
ಯಾಕೆ ಈ ನಿಯಮ?
ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ಇತ್ತಿಚಿಗೆ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯ ನಿಯಮಗಳನ್ನು ಪಾಲಿಸದೇ, ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ. ಅಪಘಾತವಾದ ಕೆಲವೇ ಘಂಟೆಗಳಲ್ಲಿ ತೀವ್ರ ರಕ್ತ ಸ್ರಾವ ವಾಗಿ ಪ್ರಯಾಣಿಕರು ಸಾವನಪ್ಪುತ್ತಿದ್ದಾರೆ ಇದು ಆಘಾತಕಾರಿ ವಿಷಯ.
ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವ ಜನರಲ್ಲಿ ಹೆಚ್ಚಿನವರು ಯುವಕರಾಗಿದ್ದು, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಈ ಹಿಂದೆ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಹೇಳಿದ್ದರು.
‘ಬೈಕ್ ಅಪಘಾತಗಳು ನಡೆದಾಗ ತಲೆಗೆ ಹೆಚ್ಚಿನ ಪೆಟ್ಟು ಬಿದ್ದು ಸಾವು ಸಂಭವಿಸುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ನೀಡದಂತೆ ಬಂಕ್ಗಳಿಗೆ ಸೂಚಿಸಲಾಗುತ್ತಿದೆ’ ಎಂದು ಕೂಡ ತಿಳಿಸಿದ್ದರು. ನುಡಿದಂತೆ ನಡೆದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಈಗ ನೋ ಹೆಲ್ಮೆಟ್ ನೋ ಪೆಟ್ರೋಲ್ ನಿಯಮ ಜಾರಿ ತಂದಿದ್ದಾರೆ.
ಪ್ರಜ್ಞಾವಂತ ನಾಗರಿಕರಿಂದ ಶ್ಲಾಘನೆ:
ಇನ್ನು ನೋ ಹೆಲ್ಮೆಟ್ ನೋ ಪೆಟ್ರೋಲ್ ನಿಯಮ ಜಾರಿಗೆ ತಂದಿರುವ ಬಗ್ಗೆ ಪ್ರಜ್ಞಾವಂತ ನಾಗರಿಕರು ಪೋಲಿಸ್ ಇಲಾಖೆಯನ್ನ ಶ್ಲಾಘಿಸಿದ್ದಾರೆ. ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಂತಹ ನಿಯಮ ಜಾರಿಗೆ ಬಂದಿದ್ದು ಉತ್ತಮ ಪ್ರಶಂಸೆ ಸಿಕ್ಕಿದೆ. ಯುವಕರು ಬೈಕ್ ರೈಡ್ ಮಾಡುವಲ್ಲಿ ಅಸಡ್ಡೆತನ ತೋರುವುದು, ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುವವರು ಪೋಲಿಸ್ ಕಂಡರೆ ಅಡ್ಡ ದಾರಿ ಹಿಡಿದು ಹೋಗುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬಂದಿದ್ದವು. ಆದರೆ ಈನಿಯಮ ಈಗ ಯುವ ಸಮೂದಾಯದ ಮೇಲೆ ಬಾರಿ ಪೆಟ್ಟು ನೀಡಿದ್ದು ಯುವ ಸಮುದಾಯದ ಅಜಾಗರೂಕತೆಗೆ ಮೂಗು ದಾರ ಬಿದ್ದಂತಾಗಿದೆ. ಒಟ್ಟಾರೆ ಪೋಲಿಸ್ ಇಲಾಖೆಯ ಈ ನಿಯಮಕ್ಕೆ ಉತ್ತಮ ಪ್ರಶಂಸೆ ಸಿಗುತ್ತಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ