ಜನವರಿಯ (January) ಆರಂಭ ಎಂದರೆ ಶಾಲೆಗಳಲ್ಲಿ (School) ಪರೀಕ್ಷೆಗಳದ್ದೇ ಕಲರವ. ಶಿಕ್ಷಕರು (Teacher) ಪಾಠ ಪ್ರವಚನಗಳನ್ನು ಮುಗಿಸುವ ತರಾತುರಿಯಲ್ಲಿದ್ದರೆ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳಿಗೆ (Exam) ಸಿದ್ಧರಾಗುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಪರೀಕ್ಷೆ ಬರೆಯುವ ಮಕ್ಕಳು (Students) ಎಲ್ಲಾ ರೀತಿಯಲ್ಲೂ ಸಿದ್ಧರಾಗಿರಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ಸಮಯದಲ್ಲಿ ಸಮಯದ ಹೊಂದಾಣಿಕೆಯನ್ನು ಸೂಕ್ತವಾಗಿ ಮಾಡಬೇಕು ಹೀಗಾಗಿ ಬರವಣಿಗೆಗೆ ಅನುಕೂಲಕರವಾಗಿರುವ ಉತ್ತಮ ಪೆನ್‌ಗಳ ಆಯ್ಕೆಯನ್ನು ಅವರು ಮಾಡಬೇಕಾಗುತ್ತದೆ.
ನಗರದ ಶಾಲೆಗಳ ಹೊಸ ನಿಯಮ
ಬೆಂಗಳೂರು ನಗರದಲ್ಲಿರುವ ಕೆಲವೊಂದು ಶಾಲೆಗಳು ಪೆನ್‌ಗಳಿಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಕ್ಲಿಕ್ಕಿಂಗ್ ಪೆನ್‌ಗಳನ್ನು ಪರೀಕ್ಷಾ ಹಾಲ್‌ಗೆ ತರುವಂತಿಲ್ಲ ಎಂದು ತಿಳಿಸಿದೆ.
ಪರೀಕ್ಷಾ ಕೊಠಡಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನವಿರಬೇಕು ಎಂಬ ನಿಟ್ಟಿನಲ್ಲಿ ಹೆಚ್ಚಿನ ಶಾಲೆಗಳು ಶಬ್ಧವನ್ನುಂಟು ಮಾಡುವ ಕ್ಲಿಕ್ಕಿಂಗ್ ಪೆನ್‌ಗಳನ್ನು ನಿರ್ಬಂಧಿಸಿವೆ. ಮಕ್ಕಳು ಈ ರೀತಿಯ ಪೆನ್‌ಗಳನ್ನು ಪರೀಕ್ಷಾ ಕೊಠಡಿಗಳಿಗೆ ತರದಂತೆ ನೋಡಿಕೊಳ್ಳುವಂತೆ ಹೆತ್ತವರಿಗೆ ಶಾಲಾ ಮಂಡಳಿ ಸುತ್ತೋಲೆ ಕಳುಹಿಸಿದೆ.
ಪೆನ್‌ಗಳ ಕ್ಲಿಕ್ಕಿಸುವಿಕೆ ಇತರ ಮಕ್ಕಳಿಗೆ ತೊಂದರೆಯನ್ನುಂಟು ಮಾಡುತ್ತಿದೆ
ಕ್ಲಿಕ್ಕಿಂಗ್ ಪೆನ್‌ಗಳ ಶಬ್ಧದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಮಕ್ಕಳ ಹೆತ್ತವರು ಸಾಕಷ್ಟು ದೂರು ನೀಡಿರುವುದರಿಂದ ಇಂತಹ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಮೊತ್ತ ಮೊದಲನೆಯದಾಗಿ ಮಕ್ಕಳು ಇಂತಹ ಪೆನ್‌ಗಳನ್ನು ಒತ್ತುವ ಮೂಲಕ ಬರವಣಿಗೆಯನ್ನು ಆರಂಭಿಸಬೇಕಾಗುತ್ತದೆ. ಇನ್ನು ಒಮ್ಮೊಮ್ಮೆ ಏನಾಗುತ್ತದೆ ಎಂದರೆ ನಿರಂತರವಾಗಿ ಬರೆಯದೇ ಇರುವ ಮಕ್ಕಳು ಈ ಪೆನ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಶಬ್ಧವನ್ನುಂಟು ಮಾಡುತ್ತಿರುತ್ತಾರೆ.
ಇದರಿಂದ ಪರೀಕ್ಷಾ ಕೊಠಡಿಯಲ್ಲಿರುವ ಇನ್ನಿತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ, ಅಂತೆಯೇ ಪ್ರಶ್ನೆಗೆ ಉತ್ತರ ಗೊತ್ತಿರದ ಮಕ್ಕಳು ಸುಖಾ ಸುಮ್ಮನೆ ಸಮಯ ಕಳೆಯಲು ಕೂಡ ಪೆನ್‌ಗಳನ್ನು ಕ್ಲಿಕ್ ಮಾಡುತ್ತಿರುತ್ತಾರೆ. ಕೊಠಡಿಯಲ್ಲಿರುವ ಶಿಕ್ಷಕರು ಎಚ್ಚರಿಕೆ ನೀಡಿದರೂ ಮಕ್ಕಳು ಅದಕ್ಕೆ ಕಿವಿಗೊಡುವುದಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಶಾಲಾ ಮಂಡಳಿಯ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು
ಕೆಲವು ಮಕ್ಕಳು ಶಾಲೆಯ ಈ ನಿರ್ಧಾರದಿಂದ ಅಷ್ಟೇನೂ ಖುಷಿಯಾಗಿಲ್ಲ, ಏಕೆಂದರೆ ಪರೀಕ್ಷೆ ಬರೆಯಲು ಇಂತಹುದೇ ಪೆನ್‌ಗಳನ್ನು ತಾವು ಬಳಸುತ್ತಿದ್ದು ಅದೊಂದು ಅಭ್ಯಾಸವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಹತ್ತನೇ ತರಗತಿಯ ವಿದ್ಯಾರ್ಥಿನಿ ಶ್ವೇತಾ ಆರ್ ಶಾಲಾ ಮಂಡಳಿಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಮನೆಯಲ್ಲಿ ಇಂತಹ ಪೆನ್‌ಗಳಲ್ಲಿ ಬರೆದು ಅಭ್ಯಾಸ ನಡೆಸಿರುತ್ತಾರೆ. ಅದೇ ಪೆನ್ ಅನ್ನೇ ಪರೀಕ್ಷಾ ಕೊಠಡಿಗೂ ತರುತ್ತಾರೆ.
ಕ್ಯಾಪ್ ಇರುವ ಬಾಲ್‌ಪಾಯಿಂಟ್ ಪೆನ್ ಅನ್ನು ಬಳಸಿದಾಗ ಬರೆಯುವ ಸಮಯದಲ್ಲಿ ಆಗಾಗ್ಗೆ ಕ್ಯಾಪ್ ಅನ್ನು ತೆಗೆಯಬೇಕಾಗುತ್ತದೆ, ಈ ಸಮಯದಲ್ಲಿ ಕ್ಲಿಕ್ಕಿಂಗ್ ಪೆನ್‌ಗಳು ಸಾಕಷ್ಟು ಸಹಕಾರಿಯಾಗಿದ್ದು ಪೆನ್‌ಗಳ ನಿಬ್‌ಗಳ ಶಾಯಿ, ಉತ್ತರ ಪತ್ರಿಕೆಗೆ ಸೋಕದಂತೆ ಎಚ್ಚರವಹಿಸಲು ಪ್ರಯೋಜನಕಾರಿಯಾಗಿದೆ.
ಏಕೆಂದರೆ ಉತ್ತರ ಬರೆಯುವಾಗ ಮಾತ್ರವೇ ಪೆನ್ ಅನ್ನು ಕ್ಲಿಕ್ ಮಾಡಿದರೆ ಸಾಕಾಗುತ್ತದೆ ಎಂದು ತಿಳಿಸಿದ್ದಾರೆ. ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಮಯದಲ್ಲೇ ಸುತ್ತೋಲೆ ಹೊರಡಿಸಿದ್ದರಿಂದ ನಮ್ಮ ಮೆಚ್ಚಿನ ಪೆನ್‌ಗಳಲ್ಲಿ ಬರೆಯಲಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಇದನ್ನೂ ಓದಿ:Education Expenses: ಶಿಕ್ಷಣ ದುಬಾರಿಯಾಗೋಕೆ ಏನು ಕಾರಣ? ಇಲ್ಲಿದೆ ನೋಡಿ ಸಿಂಪಲ್ ಅನಾಲಿಸಿಸ್
ಇಂಕ್ ಪೆನ್‌ಗಳಿಗೂ ನಿರ್ಬಂಧ ಹೇರಲಾಗಿದೆ
ಪೆನ್‌ಗಳ ಕುರಿತಾದ ನಿಯಮಗಳು ಸಾಕಷ್ಟು ಸಮಯದ ಹಿಂದೆಯೇ ಜಾರಿಯಲ್ಲಿದೆ ಎಂದು ಪೋಷಕರಾದ ಸುಜಾತಾ ನೆನಪಿಸಿಕೊಳ್ಳುತ್ತಾರೆ. ತಮ್ಮ ಶಾಲಾ ದಿನಗಳಲ್ಲಿ ಇಂಕ್ ಪೆನ್‌ಗಳನ್ನು ತರಬಾರದೆಂದು ನಿರ್ಬಂಧಿಸಲಾಗಿತ್ತು.
ಏಕೆಂದರೆ ಇದರಿಂದ ಶಾಯಿ ಸೋರಿ ಉತ್ತರ ಪತ್ರಿಕೆ ಹಾಳಾಗುತ್ತಿತ್ತು ಇಲ್ಲವೇ ಇನ್ನೊಂದು ವಿದ್ಯಾರ್ಥಿಗಳ ಉಡುಪಿಗೆ ಶಾಯಿ ಮೆತ್ತಿಕೊಳ್ಳುತ್ತಿತ್ತು ಹೀಗಾಗಿ ಬಾಲ್ ಪೆನ್‌ಗಳನ್ನು ತರುವಂತೆ ತಿಳಿಸುತ್ತಿದ್ದರು. ಇದೀಗ ಇಂಕ್ ಪೆನ್‌ಗಳೇ ಅದೃಶ್ಯವಾಗಿವೆ ಎಂದು ತಿಳಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ