ವಿಜಯಪುರದ ಜಿಲ್ಲಾಸ್ಪತ್ರೆ ಸ್ವ್ಯಾಬ್ ಸಂಗ್ರಹ ಕೇಂದ್ರವೋ? ಕೊರೊನಾ ಪಸರಿಸುವ ತಾಣವೋ?

ಇಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಅಲ್ಲದೇ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕೊರೋನಾ ಸೋಂಕು ಪಸರಿಸುವ  ಆತಂಕ ಕೂಡ ಹೆಚ್ಚಾಗಿದೆ.

ಕೇಂದ್ರದ ಮುಂದೆ ವಿದ್ಯಾರ್ಥಿಗಳ ಗುಂಪು

ಕೇಂದ್ರದ ಮುಂದೆ ವಿದ್ಯಾರ್ಥಿಗಳ ಗುಂಪು

  • Share this:
ದ ವಿಜಯಪುರ (ಜ. 09): ಶಾಲೆ-ಕಾಲೇಜುಗಳು ಪ್ರಾರಂಭವಾಗಿದ್ದು,  ಹಾಜರಾಗುವ ವಿದ್ಯಾರ್ಥಿಗಳಿಗೆ ಕೊರೋನಾ ವರದಿ ಕಡ್ಡಾಯವಾಗಿದೆ. ಇದೇ ಹಿನ್ನಲೆ ದಿನಕ್ಕೆ ನೂರಾರು ವಿದ್ಯಾರ್ಥಿಗಳು ಕೋವಿಡ್​ ಪರೀಕ್ಷೆಗೆ ಒಳಗಾಗುತ್ತಿದ್ದು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಟಲುದ್ರವ ಮಾದರಿ ಕೊಡಲು ಮುಂದಾಗುತ್ತಿದ್ದಾರೆ. ಆದರೆ, ಈ ಸ್ವ್ಯಾಬ್​ ಸಂಗ್ರಹಿಸುವ ಕೇಂದ್ರವೇ, ಕೊರೋನಾ ಸೋಂಕಿಗೆ ಆಹ್ವಾನ ನೀಡುವಂತೆ ಇದೆ. ಕಾರಣ, ಇಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಅಲ್ಲದೇ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕೊರೋನಾ ಸೋಂಕು ಪಸರಿಸುವ  ಆತಂಕ ಕೂಡ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಎದುರು ವಿದ್ಯಾರ್ಥಿಗಳ ಸಾಲು  ಮಾಮೂಲಾಗಿದೆ.  ಪ್ರತಿನಿತ್ಯ ಇಲ್ಲಿಗೆ ಗಂಟಲು ದ್ರವದ ಮಾದರಿ ನೀಡಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಬೆಳಿಗ್ಗೆ 8 ಗಂಟೆಗೂ ಮುಂಚೆಯೇ ಬರುವ ನೂರು ಜನರಿಗೆ ಮಾತ್ರ ಇಲ್ಲಿ ಗಂಟಲು ಮಾದರಿ ಸಂಗ್ರಹ ಮಾಡಲಾಗುವುದು. ಈ ಹಿನ್ನಲೆ ಮೊದಲು ಬಂದವರು  ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನೋಂದಾಯಿಸುತ್ತಾರೆ.   11 ಗಂಟೆಗೆ ಕಚೇರಿ ಆರಂಭವಾದರೂ ಬೆಳಗ್ಗೆಯಿಂದಲೇ ಸಾಲು ಶುರುವಾಗಲಿದೆ. ಈ ವೇಳೆ ಯಾವುದೇ ಸಾಮಾಜಿಕ ಅಂತರಕ್ಕೂ ಇಲ್ಲಿ ಜಾಗವಿಲ್ಲ.11 ಗಂಟೆಗೆ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ಗರಿಷ್ಠ 100 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸುತ್ತಾರೆ. 100 ಜನರ ಸ್ವ್ಯಾಬ್ ಮುಗಿದರೆ  ಇನ್ನುಳಿದವರು ಮತ್ತೆ ಮರುದಿನ ಬಂದು ಪಾಳಿಯಲ್ಲಿ ನಿಂತು ಹೆಸರು ನೋಂದಾಯಿಸಬೇಕು.  ಇದು ಗ್ರಾಮೀಣ ಭಾಗದಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪಾಲಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.  ತಮ್ಮ ಪಾಳಿ ಬಂದರೂ ಕಿಟ್ ಸಿಗದೆ ಸಮಯ ವ್ಯರ್ಥವಾಯಿತಲ್ಲ ಎಂದುಕೊಂಡು ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತ ವಾಪಸ್ಸಾಗುವುದು ಇಲ್ಲಿ ಸರ್ವೆ ಸಾಮಾನ್ಯ ಎಂಬಂತಾಗಿದೆ.

ಇದನ್ನು ಓದಿ: ಶೀಘ್ರದಲ್ಲಿಯೇ ದೇಶದ ಎಲ್ಲರಿಗೂ ಕೊರೋನಾ ಲಸಿಕೆ ; ಸಚಿವ ಹರ್ಷವರ್ಧನ್

ಉಳಿದ ಕೇಂದ್ರಗಳು ಖಾಲಿ ಖಾಲಿ

ಕೊರೊನಾ ಟೆಸ್ಟ್ ಗಾಗಿ ನಗರದಲ್ಲಿ ದರ್ಗಾ, ಎಪಿಎಂಸಿ, ಶಾಂತಿ ನಗರ, ಗಣೇಶ ನಗರ, ಕಾಸಗೇರಿ ಬಳಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಅಲ್ಲಿಗೆ ಹೋಗುವವರ ಸಂಖ್ಯೆ ಬಲು ಕಡಿಮೆ.  ಬಹುತೇಕರು ಈ ವಿಷಯವೇ ಗೊತ್ತಿಲ್ಲ.  ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು  ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿರುವುದು ಕೂಡ ಇಲ್ಲಿ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ  ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಕಳೆದ ಒಂದೂವರೆ ತಿಂಗಳಿಂದ  ಜಿಲ್ಲೆಯಲ್ಲಿ ಪ್ರತಿದಿನ ನಿಗದಿತ 2000 ಗುರಿಗಿಂತ ಹೆಚ್ಚಾಗಿ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಆರ್ ಎ ಟಿ ಕಿಟ್ ಗಳ ಕೊರತೆ, ಆರ್ ಟಿ ಪಿ ಸಿ ಆರ್ ಕಿಟ್ ಗಳ ಕೊರತೆಯಿಂದ ಹೀಗಾಗುತ್ತಿದೆ.  ಆದರೂ, ಸರಕಾರದ ಗಮನಕ್ಕೆ ತಂದು ಹೆಚ್ಚಿನ ಕಿಟ್ ಗಳನ್ನು ತರಿಸಲಾಗುತ್ತಿದೆ.  ಜಿಲ್ಲಾಸ್ಪತ್ರೆಯ ಆವರಣದಲ್ಲಿ ಉಂಟಾಗುವ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಗಂಟಲು ದ್ರವದ ಮಾದರಿ ಸಂಗ್ರಹದ ಕುರಿತು ಆಯಾ ಕಾಲೇಜುಗಳಿಗೆ ಮಾಹಿತಿ ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Published by:Seema R
First published: