ಡಿಸಿಎಂ ಸವದಿ ಕ್ಷೇತ್ರದಲ್ಲಿ ಪ್ರವಾಹದಲ್ಲಿ ಮಗನನ್ನು ಕಳೆದುಕೊಂಡ ತಾಯಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಪ್ರವಾಹ ಬಂದ ಹೋದ ನಂತರ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ಯಡಿಯೂರಪ್ಪನವರೇ ಡಿಎನ್​ಎ ವರದಿ ಬರುವವರೆಗೂ ಕಾಯಬೇಡಿ, ಮೊದಲು ಲಲಿತಮ್ಮನಿಗೆ ಪರಿಹಾರ ನೀಡಿ ಎಂದು ಹೇಳಿದ್ದರಂತೆ. ಆದರೆ ಅಧಿಕಾರಿಗಳು ಪರಿಹಾರವನ್ನೂ ನೀಡುತ್ತಿಲ್ಲ.

ಮಗನನ್ನು ಕಳೆದುಕೊಂಡಿರುವ ತಾಯಿ

ಮಗನನ್ನು ಕಳೆದುಕೊಂಡಿರುವ ತಾಯಿ

  • Share this:
ಚಿಕ್ಕೋಡಿ(ಜೂ.23): ಕಳೆದ ವರ್ಷ ಆಗಸ್ಟ್ ತಿಂಗಳು ರಾಜ್ಯದ ಪಾಲಿಗೆ ಕರಾಳ ತಿಂಗಳಾಗಿತ್ತು.  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ಅದೆಷ್ಟೋ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲೂ ಸಹ ನದಿ ದಾಟಿ ಸುರಕ್ಷಿತ ಪ್ರದೇಶಕ್ಕೆ ತೆರಳುವ ಸಂದರ್ಭದಲ್ಲಿ ಬಸವರಾಜ್ ಮಾನಿಕ್ ಕಾಂಬಳೆ ಎಂಬ ಬಾಲಕ ಹರಿವ ನೀರಿನಲ್ಲಿ ಕಾಲು ಜಾರಿ ಬಿದ್ದು ಮಾಯವಾಗಿದ್ದ. ನೋಡ ನೋಡುತ್ತಲೆ ತುಂಬಿ ಹರಿಯುತ್ತಿದ್ದ ಕೃಷ್ಣೆಯ ಪ್ರತಾಪಕ್ಕೆ ಆಹುತಿಯಾಗಿದ್ದ.

ಲಲಿತಮ್ಮನ ಪ್ರೀತಿಯ ಮಗ ಬಸವರಾಜ್ ನೀರಿನಲ್ಲಿ ಕಾಣೆಯಾದ ಬಳಿಕ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಸಿಬ್ಬಂದಿ ಹಾಗೂ ಸ್ಥಳೀಯರೂ ಸಹ ಬಸವರಾಜ್ ಗಾಗಿ ಹುಡುಕಾಟ ನಡೆಸಿದ್ದರು. ಆದರೂ ಸಹ ಪ್ರಯೋಜನವಾಗಿರಲಿಲ್ಲ. ಪ್ರವಾಹ ಇಳಿಮುಖವಾದ ಒಂದು ತಿಂಗಳ ಬಳಿಕ ಕಬ್ಬಿನ ಗದ್ದೆಯೊಳಗೆ ಅಸ್ಥಿಪಂಜರ ರೀತಿಯಲ್ಲಿ ಬಸವರಾಜ್ ಶವ ಪತ್ತೆಯಾಗಿತ್ತು.‌ ಹೆಗಲಿಗೆ ಹಾಕಿದ್ದ ಸ್ಕೂಲ್  ಬ್ಯಾಗ್ ಬಸವರಾಜ್ ಹಾಕಿದ್ದ ಟಿ-ಶರ್ಟ್ ನೋಡಿ ಇದು ನನ್ನ ಮಗನ ಶವವೇ ಅಂತ ಬಸವರಾಜ್ ತಾಯಿ ಲಲಿತಮ್ಮ ಗೋಳಾಡಿದ್ದರು. ಆ ಕೆಟ್ಟ ಘಟನೆ ನಡೆದು 10 ತಿಂಗಳು ಕಳೆದರೂ ಸಹ ಲಲಿತಮ್ಮನಿಗೆ ಇನ್ನೂ ಸಹ ಸರ್ಕಾರದಿಂದ ಸಿಗಬೇಕಿದ್ದ ಪರಿಹಾರ ಇನ್ನೂ ಸಿಕ್ಕಿಲ್ಲ.

ಹೌದು, ಶವ ಸಿಕ್ಕ ಬಳಿಕ ಡಿಎನ್​ಎ ಪರೀಕ್ಷೆಗೆಂದು ಸ್ಯಾಂಪಲ್​​ಗಳನ್ನು ಆರೋಗ್ಯ ಇಲಾಖೆ ಮತ್ತು ಪೊಲೀಸ್  ಇಲಾಖೆಗಳು ಜಂಟಿಯಾಗಿ ತೆಗೆದುಕೊಂಡು ಹೋಗಿದ್ದರು. ಆದರೆ ಈವರೆಗೆ ಆ  ಡಿ ಎನ್ ಎ ಪರೀಕ್ಷೆಯ ವರದಿ ಏನಾಗಿದೆ ಎಂದು ಲಲಿತಮ್ಮನಿಗಾಗಲಿ, ಗ್ರಾಮಸ್ಥರಿಗಾಗಲಿ ಗೊತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಡಿಎನ್​ಎ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಬಂದ ಬಳಿಕವೇ ನಿಮಗೆ ಪರಿಗಾರ ಸಿಗುತ್ತೆ ಎಂದು ಹೇಳುತ್ತಿದ್ದಾರೆ.

ಕೊರೋನಾ ಆತಂಕವಿಲ್ಲದೇ, ಗುಂಪಾಗಿ ಕುಳಿತು ಸಭೆ ನಡೆಸಿದ ರಾಜ್ಯ ಕಾಂಗ್ರೆಸ್​ ನಾಯಕರು

ಆದರೆ ಪ್ರವಾಹ ಬಂದ ಹೋದ ನಂತರ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ಯಡಿಯೂರಪ್ಪನವರೇ ಡಿಎನ್​ಎ ವರದಿ ಬರುವವರೆಗೂ ಕಾಯಬೇಡಿ, ಮೊದಲು ಲಲಿತಮ್ಮನಿಗೆ ಪರಿಹಾರ ನೀಡಿ ಎಂದು ಹೇಳಿದ್ದರಂತೆ. ಆದರೆ ಅಧಿಕಾರಿಗಳು ಪರಿಹಾರವನ್ನೂ ನೀಡುತ್ತಿಲ್ಲ. ಈ ಬಗ್ಗೆ ಅಥಣಿ ತಹಸಿಲ್ದಾರ್ ಅವರನ್ನು ಕೇಳಿದರೆ ಪೊಲೀಸ್ ಇಲಾಖೆ ನಮಗೆ ಇನ್ನೂ ವರದಿ ನೀಡಿಲ್ಲ ಅಂತ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಸ್ವತ: ಮುಖ್ಯಮಂತ್ರಿಗಳೇ ಪರಿಹಾರ ನೀಡಿ ಎಂದು ಆದೇಶ ಮಾಡಿದರೂ ಸಹ ಅಧಿಕಾರಿಗಳು ಪರಿಹಾರ ನೀಡುವುದಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ.‌ ಇತ್ತ ಡಿಎನ್​​ಎ ಪರೀಕ್ಷೆಯ ವರದಿ ಏನಾಯ್ತು ಎಂಬ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯೂ ಇಲ್ಲ. ಹೀಗಾಗಿ ಪ್ರವಾಹದಲ್ಲಿ ಮಗನನ್ನೂ ಕಳೆದುಕೊಂಡು, ಮನೆಯನ್ನೂ ಸಹ ಕಳೆದುಕೊಂಡು ಲಲಿತಮ್ಮ ಸದ್ಯ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಲಲಿತಮ್ಮನಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕು.

 
First published: