ನವದೆಹಲಿ(ಜು. 21): ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ಊಹಾಪೋಹಾಗಳು ಹರಿದಾಡುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕರು ದೆಹಲಿ ಭೇಟಿ ನಡೆಸಿದ್ದು, ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಬೆಳವಣಿಗೆ ಚುರುಕುಗೊಂಡಿದೆ. ಕಾಂಗ್ರೆಸ್ ನಾಯಕತ್ವದಲ್ಲಿ ಉಂಟಾಗಿರುವ ಭಿನ್ನಮತದ ಜೊತೆಗೆ ರಾಜ್ಯದಲ್ಲಿ ನಡೆಯುತ್ತಿರು ಬಿಜೆಪಿ ಪಕ್ಷದ ಬೆಳವಣಿಗೆ ಕುರಿತು ಚರ್ಚಿಸಲು ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ ನಡೆಸಿದ್ದಾರೆ. ಹೈ ಕಮಾಂಡ್ ಭೇಟಿ ಬಳಿಕ ಮಾತನಾಡಿರುವ ಅವರು, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಮುನಿಸಲಾಗಲಿ, ಬಿರುಕಗಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಅವರು ರಾಜ್ಯದ ಬೆಳವಣಿಗೆ ಕುರಿತು ಮಾತನಾಡಿದ್ದು, ನಾಯಕತ್ವ ಬದಲಾವಣೆ ಆಗಲಿದೆ ಎಂದು ತಿಳಿಸಿದ್ದಾರೆ.
2023ಕ್ಕೆ ಯಾರು ಸಿಎಂ ಎಂಬುದನ್ನು ಪಕ್ಷದ ಹೈ ಕಮಾಂಡ್ ಇನ್ನು ಘೋಷಿಸಿಲ್ಲ. ನಾವು ಸಾಮೂಹಿಕ ನಾಯಕತ್ವದ ಮೇರೆಗೆ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ನಲ್ಲಿ ಯಾವುದೇ ಸಮಸ್ಯೆಇಲ್ಲ. ಬಿಜೆಪಿ ಮತ್ತು ಜೆಡಿಎಸ್ನೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಹೊರತು ಪಡಿಸಿ ಯಾರ ನಡುವೆಯೂ ನನಗೆ ಮುನಿಸಿಲ್ಲ ಎಂದಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಸಮಸ್ಯೆ ಇದೆ, ನಾಯಕತ್ವದ ಬದಲಾವಣೆ ಆಗಲಿದೆ. ಈಗಾಗಲೇ ಅನೇಕ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ .ಅನೇಕ ವಿಷಯ ಚರ್ಚಿಸಬೇಕಿದೆ ಎಂದು ತಿಳಿಸಿದರು.
ಹೈ ಕಮಾಂಡ್ ಕೇವಲ ನನ್ನ ಮತ್ತು ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡಿಲ್ಲ. ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಬೇರೆ ಬೇರೆ ರಾಜ್ಯದ ಸಿಎಲ್ಪಿ ನಾಯಕರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಈ ವೇಳೆ ಮುಂದಿನ ಸಿಎಂ ಅಭ್ಯರ್ಥಿ ಕುರಿತ ಯಾವುದೇ ಚರ್ಚೆ ನಡೆದಿಲ್ಲ. ಸಾಮೂಹಿಕ ನಾಯಕತ್ವದ ಮೂಲಕ ಚುನಾವಣೆ ಎದುರಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ ಎಂದರು.
ಇನ್ನು ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ಹಿನ್ನಲೆ ಅವರ ಪರ ಕಾಂಗ್ರೆಸ್ ನಾಯಕರಾದ ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್ ವಕಾಲತ್ತು ವಹಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಪಕ್ಷದ ನಾಯಕರಿದ್ದರು, ಆ
ಸಮಾಜದ ಪ್ರತಿನಿಧಿಗಳು. ಅಲ್ಲಿ ಕೆಲ ರಾಜಕೀಯದಲ್ಲಿ ತಂತ್ರಗಾರಿಕೆ. ಒತ್ತಡ ಇರುತ್ತದೆ. ಈ ಹಿನ್ನಲೆ ಅವರು ಮಾತನಾಡಿರಬಹುದು. ಆದರೆ ಇದು ಅವರ ವೈಯಕ್ತಿಕ ಅಭಿಪ್ರಾಯ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: 2024ರವರೆಗೂ ಸೋನಿಯಾ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷೆ
ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ಹಿನ್ನಲೆ ನಮ್ಮ ನಿಲುವಿನ ಕುರಿತು ಯೋಜನೆ ರೂಪಿಸಬೇಕಿದೆ. ಈಗಾಗಲೇ ಸಾಕಷ್ಟು ಜನರು ನಮ್ಮ ಸಂಪರ್ಕಿಸುತ್ತಿದ್ದಾರೆ. ಫೋನ್ ಟ್ಯಾಪಿಂಗ್ ಸೇರಿದಂತೆ ಅನೇಕ ವಿಷಯಗಳನ್ನು ಹೈಕಮಾಂಡ್ನೊಂದಿಗೆ ಚರ್ಚಿಸಲಾಗಿದೆ. ಹೈ ಕಮಾಂಡ್ ಕೂಡ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಮಾಹಿತಿ ಪಡೆದಿದೆ ಎಂದರು.
ಇದನ್ನು ಓದಿ: ಆರ್ಜೆಯಾಗಿದ್ದ ಕೇರಳದ ಮೊದಲ ತೃತೀಯ ಲಿಂಗಿ ಸಾವು; ತನಿಖೆಗೆ ಆದೇಶ
ರಾಹುಲ್ ಗಾಂಧಿ ಇದೇ ವೇಳೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳದಂತೆ ಕಿವಿಮಾತು ಹೇಳಿದ್ದಾರೆ. ಸಾಮೂಹಿಕ ನಾಯಕತ್ವದ ಮೂಲಕ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ಇನ್ನು ಸಭೆ ಬಳಿಕ ಮಾತನಾಡಿರುವ ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿ ನೀಡಿರುವ ಸಲಹೆಯನ್ನು ಪಾಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಕೆಲಸ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಹೊರತು ಪಡಿಸಿ ಗಟ್ಟಿಯಾದ ಪ್ರಜಾಪ್ರಭುತ್ವ ಬಲ ಹೊಂದಿದೆ. ಭಿನ್ನ ಅಭಿಪ್ರಾಯ ಹೊಂದಿರುವುದೇ ಪ್ರಜಾಪ್ರಭುತ್ವದ ಒಂದು ಅಂಶವಾಗಿದೆ. ಆದರೆ ನಾವು ಒಗ್ಗಟ್ಟಿನಿಂದ ಇರುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ