ನಿವಾರ್ ಸೈಕ್ಲೋನ್ ಎಫೆಕ್ಟ್: ರಾಗಿ ಬೆಳೆ ನಷ್ಟವಾಗುವ ಭೀತಿಯಲ್ಲಿ ರಾಮನಗರದ ರೈತರು

ಹಾಗೆಯೇ ಜಿಲ್ಲೆಯ ಗಡಿಭಾಗಗಳಾದ ರಾಮನಗರ-ಕನಕಪುರ ಗಡಿ, ಚನ್ನಪಟ್ಟಣ-ಕನಕಪುರ ಗಡಿಭಾಗದ ರೈತರ ಬೆಳೆಗಳಿಗೆ ನಿವಾರ್ ಚಂಡಮಾರುತದಿಂದ ಅಲ್ಲಲ್ಲಿ ಎಫೆಕ್ಟ್ ಆಗಿದೆ. ಹಾಗಾಗಿ ಅಂತಹ ರೈತರ ಜಮೀನುಗಳ ಮಾಹಿತಿ ಪಡೆದು ಬೆಳೆನಾಶದ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಿ ಸೂಕ್ತ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ರಾಗಿ ಬೆಳೆ

ರಾಗಿ ಬೆಳೆ

  • Share this:
ರಾಮನಗರ(ಡಿ.15): ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಈ ವರ್ಷ ರಾಗಿ ಫಸಲು ಅತ್ಯುತ್ತಮವಾಗಿ ಬಂದಿತ್ತು. ಆದರೆ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಿವಾರ್ ಚಂಡಮಾರುತದಿಂದಾಗಿ ಜಿಲ್ಲೆಯ ಹಲವೆಡೆ ರಾಗಿ ಫಸಲಿಗೆ ಪೆಟ್ಟಾಗಿದೆ. ಇನ್ನೇನು ಕಟಾವ್ ಮಾಡಬೇಕೆಂದು ಅನ್ನದಾತರು ತಯಾರಿ ನಡೆಸಿದ್ದರು. ಆದರೆ ಅಷ್ಟರಲ್ಲಿ ಸೂರ್ಯನ ಕಿರಣಗಳು ಮರೆಯಾಗಿ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿದ ಪರಿಣಾಮ ರಾಗಿಬೆಳೆಯಲ್ಲಿ ಮೊಳಕೆ ಕಾಣಿಸಿಕೊಂಡಿದೆ. ಇದರಿಂದಾಗಿ  ರೈತರು ಕಂಗಾಲಾಗಿದ್ದಾರೆ.  ಈ ಕುರಿತ ವರದಿ ಇಲ್ಲಿದೆ ನೋಡಿ.

ಹೌದು, ಪ್ರತಿಬಾರಿ ಅನ್ನದಾತರಿಗೆ ಇಂತಹದೊಂದು ಸಮಸ್ಯೆ ಇದ್ದೇ ಇರುತ್ತದೆ. ಬೆಳೆ ಅಚ್ಚುಕಟ್ಟಾಗಿ ಬಂದರೆ ಮಾರುಕಟ್ಟೆಗಳಲ್ಲಿ ಸೂಕ್ತ ಬೆಳೆಯಿಲ್ಲದೇ ರೈತರು ಕಂಗಾಲಾಗುತ್ತಾರೆ. ಇನ್ನು ಬೆಳೆಯೂ ಚೆನ್ನಾಗಿದೆ, ಮಾರುಕಟ್ಟೆಗಳಲ್ಲಿ ಒಳ್ಳೆಯ ಬೆಲೆಯೂ ಇದೇ ಎನ್ನುವಷ್ಟರಲ್ಲಿ ಪ್ರಕೃತಿ ಕೈಕೊಡುತ್ತದೆ.  ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಈ ಬಾರಿ 68.046 ಹೆಕ್ಟೇರ್ ಪ್ರದೇಶದಲ್ಲಿ ರಾಗಿಯನ್ನ ಬಿತ್ತನೆ ಮಾಡಲಾಗಿತ್ತು. ಜೊತೆಗೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮವಾಗಿ ಬೆಳೆಯೂ ರೈತರ ಕೈಗೆ ಬಂದಿತ್ತು. ಆದರೆ ಬಾಯಿಗೆ ಬರುವಷ್ಟರಲ್ಲಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಾಗಿಫಸಲಿಗೆ ಪೆಟ್ಟಾಗಿರುವುದು ಕಂಡುಬಂದಿದೆ.

ವಿಧಾನ ಪರಿಷತ್​ ಕಲಾಪದಲ್ಲೇ ಕೈ ಮಿಲಾಯಿಸಿದ ಸದಸ್ಯರು; ಬಿಜೆಪಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಸಭಾಪತಿ

ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ತಾಲೂಕಿನ ಹಲವು ಕಡೆಗಳಲ್ಲಿ ರಾಗಿಬೆಳೆಗೆ ಮಳೆ ಅವಾಂತರ ತಂದಿದೆ. ಈ ಬಗ್ಗೆ ರೈತ ಮುಖಂಡ ಶಿವಕುಮಾರ್ ತುಂಬೇನಹಳ್ಳಿ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಉತ್ತಮವಾಗಿ ರಾಗಿಫಸಲು ಬಂದಿತ್ತು. ಆದರೆ ಕಳೆದ ವಾರ ನಿರಂತರವಾಗಿ ಮಳೆ ಸುರಿದ ಕಾರಣ ಕಟಾವ್ ಮಾಡುವುದಕ್ಕೂ ಮೊದಲೇ ರಾಗಿ ತೆನೆಯಲ್ಲಿ ಮೊಳಕೆ ಬಂದಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೆಳೆ ನಾಶವಾಗಿರುವ ಬಗ್ಗೆ ವರದಿ ಪಡೆದು ಸರ್ಕಾರದಿಂದ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಬೇಕೆಂದು ನ್ಯೂಸ್ 18 ಮೂಲಕ ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಕೃಷಿ ಇಲಾಖೆಯ ರಾಮನಗರ ಜಿಲ್ಲಾ ಜಂಟಿ ನಿರ್ದೇಶಕರಾಗಿರುವ ಸೋಮಸುಂದರ್ ನ್ಯೂಸ್ 18 ಜೊತೆಗೆ ಮಾತನಾಡಿ 2020ರ ಜನವರಿ 1 ರಿಂದ ಡಿಸೆಂಬರ್ 10 ರವರೆಗೆ ನಮ್ಮ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಾಗಿ 15 % ಹೆಚ್ಚುವರಿ ಮಳೆಯಾಗಿದೆ. 833 ಮಿ.ಮೀ ಮಳೆಯಾಗಬೇಕಿತ್ತು, ಆದರೆ ನಮಗೆ 957 ಮಿ.ಮೀ ಮಳೆಯಾಗಿದೆ. ರಾಮನಗರದಲ್ಲಿ 19%, ಚನ್ನಪಟ್ಟಣ 14%, ಕನಕಪುರ 22%, ಹೆಚ್ಚುವರಿ ಮಳೆಯಾಗಿದ್ದು, ಮಾಗಡಿಯಲ್ಲಿ ಮಾತ್ರ 2% ಮಳೆ ಕೊರತೆಯಾಗಿದೆ. ವಾಡಿಕೆಗಿಂತಲೂ ಹೆಚ್ಚಾಗಿ ಮಳೆ ಸುರಿದಿರುವ ಕಾರಣ ಈ ಸಮಸ್ಯೆ ಆಗಿದೆ.

ಹಾಗೆಯೇ ಜಿಲ್ಲೆಯ ಗಡಿಭಾಗಗಳಾದ ರಾಮನಗರ-ಕನಕಪುರ ಗಡಿ, ಚನ್ನಪಟ್ಟಣ-ಕನಕಪುರ ಗಡಿಭಾಗದ ರೈತರ ಬೆಳೆಗಳಿಗೆ ನಿವಾರ್ ಚಂಡಮಾರುತದಿಂದ ಅಲ್ಲಲ್ಲಿ ಎಫೆಕ್ಟ್ ಆಗಿದೆ. ಹಾಗಾಗಿ ಅಂತಹ ರೈತರ ಜಮೀನುಗಳ ಮಾಹಿತಿ ಪಡೆದು ಬೆಳೆನಾಶದ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಿ ಸೂಕ್ತ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲವೆಂಬ ಆತಂಕ ರೇಷ್ಮೆನಗರಿ ರಾಮನಗರ ಜಿಲ್ಲೆಯ ರೈತರ ಅಭಿಪ್ರಾಯವಾಗಿದೆ. ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರ ಮಳೆಯಿಂದಾಗಿ ಬೆಳೆಗೆ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ನೊಂದ ರೈತರಿಗೆ ಸೂಕ್ತ ಪರಿಹಾರ ಕೊಡಬೇಕೆಂಬುದು ನ್ಯೂಸ್ 18 ಆಶಯವಾಗಿದೆ.

(ವರದಿ: ಎ.ಟಿ.ವೆಂಕಟೇಶ್)
Published by:Latha CG
First published: