Rajyasbha Election: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಕರ್ನಾಟಕದಿಂದ (Karnataka) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ನಾಮಪತ್ರ ಸಲ್ಲಿಕೆ (Nomination File) ಮಾಡಿದರು. ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರಾದ ಜೆ.ಸಿ.ಮಾಧುಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬಿಜೆಪಿ ಟಿಕೆಟ್ ಪಡೆದಿರುವ ನವರಸನಾಯಕ ಜಗ್ಗೇಶ್ (Jaggesh), ಮೂರನೇ ಅಭ್ಯರ್ಥಿಯಾಗಿರುವ ಲೆಹರ್ ಸಿಂಗ್ (Lehar Singh) ಸಹ ನಾಮಪತ್ರ ಸಲ್ಲಿಕೆ ಮಾಡಿದರು. ಇತ್ತ ಜೆಡಿಎಸ್ ನಿಂದ ಕುಪ್ಪೇಂದ್ರ ರೆಡ್ಡಿ ಅವರು ಸಹ ನಾಮಪತ್ರ ಸಲ್ಲಿಕೆ ಮಾಡಿದರು.
ಜಗ್ಗೇಶ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಮಲ್ಲೇಶ್ವರಂ ಗುರು ರಾಘವೇಂದ್ರ ರಾಯರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಜಗ್ಗೇಶ್ ಅವರ ಶ್ರೀಮತಿ ಸಹ ಜೊತೆಯಲ್ಲಿದ್ದರು.
ನಾನು ರಾಯರ ಬಳಿ ಏನೂ ಬೇಡಿಲ್ಲ
ಈ ವೇಳೆ ಮಾಧ್ಯಮಗಳಮ ಜೊತೆ ಮಾತನಾಡಿದ ಜಗ್ಗೇಶ್, ಮಲ್ಲೇಶ್ವರದಲ್ಲಿರುವ ಈ ದೇಗುಲಕ್ಕೂ ನನಗೂ 40 ವರ್ಷಗಳ ಸಂಬಂಧವಿದೆ. ನಾಮಪತ್ರ ಸಲ್ಲಿಕೆ ಮುನ್ನ ರಾಯರ ಆಶೀರ್ವಾದ ಪಡೆದಿದ್ದೇನೆ. ಮದುವೆಗೂ ಮುಂಚಿನಿಂದಲೂ ರಾಯರನ್ನ ನಂಬಿದ್ದೇನೆ. ನಾನು ರಾಯರ ಬಳಿ ಏನನ್ನೂ ಬೇಡಲ್ಲ. ಎಲ್ಲವನ್ನೂ ಶ್ರೀ ರಾಘವೇಂದ್ರ ಶ್ರೀಗಳೇ ನನಗೆ ದಯಪಾಲಿಸಿದ್ದಾರೆ ಎಂದರು.
ಇದನ್ನೂ ಓದಿ: Bengaluru: ರಾಜ್ಯಕ್ಕೆ ಬರಲಿದೆ ಇಂಗ್ಲೆಂಡ್ನ 20 ಕುಲಪತಿಗಳ ತಂಡ! ಮಹತ್ವದ ಚರ್ಚೆ
ರಾಜ್ಯಸಭೆಯಲ್ಲೂ ರಾಜ್ಯದ ಜನರ ಮೆಚ್ಚುವ ರೀತಿ ಕೆಲಸ ಮಾಡುತ್ತೇನೆ. ನನ್ನ ಬದುಕಿನಲ್ಲಿ ಏನೇ ನಡೀಬೇಕಿದ್ರು ಇದೇ ಜಾಗಕ್ಕೆ ನಾನು ಬರ್ತೇನೆ. ನಾನು ನನ್ನ ಹೆಂಡ್ತಿ ಪ್ರೀತಿ ಮಾಡಿ ಮದುವೆ ಆಗೋಕು ಮುನ್ನ ಇದೇ ಜಾಗಕ್ಕೆ ಬಂದಿದ್ದೀವಿ. ಇಲ್ಲಿರುವ ಗುರುಗಳಾದ ಜಯಣ್ಣ ನಮಗೆ ಅವಾಗ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ದರು.
ಇದು ನನಗೆ ಮೊದಲ ಸ್ವರ್ಗ
ನನ್ನ ಚಿಕ್ಕ ಮಗ ಹುಟ್ಟಿದಾಗಲು ನಮಗೆ ತಿನ್ನೋಕೆ ಹಿಟ್ಟು ಇರಲಿಲ್ಲ. ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಭಕ್ತಿ. ಇದು ನನಗೆ ಮೊದಲ ಸ್ವರ್ಗ. ನಾನು ಮಾಡ್ತಿರೋ ಕೆಲಸವನ್ನು ಅವರಿಗೆ ಸಮರ್ಪಣೆ ಮಾಡಿದ್ದೇನೆ. ಎಷ್ಟು ಸಾಧ್ಯವೋ ನಾನು ಮರ್ಯಾದಸ್ಥನ ರೀತಿ ಬದುಕಿದ್ದೇನೆ. ಭಗವಂತ ಕೊಟ್ಟ ಪ್ರಸಾದ ಸ್ವೀಕಾರ ಮಾಡಿ ಬದುಕಿದ್ದೇನೆ.
ಎಲ್ಲವೂ ಸಿಕ್ಕಿದ್ದು ರಾಯರ ಆಶೀರ್ವಾದದಿಂದ
ನಿಮ್ಮೆಲ್ಲರ ಪ್ರೀತಿ, ರಾಯರ ಆಶೀರ್ವಾದಿಂದ ಯಾವುದೋ ಒಂದು ಸ್ಥಾನ ನನಗೆ ಸಿಕ್ಕಿದೆ. ನಿಮ್ಮ ಮನಸ್ಸಿಗೆ ಚ್ಯುತಿ, ನೋವು ಆಗದ ತರ ನಡೆದುಕೊಳ್ತೇನೆ ಎಂದು ಭರವಸೆ ನೀಡಿದರು.
ನಂಬಿಕೆ, ಪ್ರೀತಿ ಉಳಿಸಿಕೊಳ್ಳುತ್ತೇವೆ
ಇದೇ ವೇಳೆ ಮಾತನಾಡಿದ ಪರಿಮಳ ಜಗ್ಗೇಶ್ ಅವರು, ರಾಯರ ಆಶೀರ್ವಾದದಿಂದ ರಾಜ್ಯಸಭೆ ಸ್ಥಾನ ಸಿಕ್ಕಿದೆ. ನಮಗೆ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಕೈಮೀರಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಕರ್ನಾಟಕ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ ಉಳಿಸ್ಕೋತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Mining: ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಬಳಿಕ ಕಾರವಾರ ಬಂದರಿನಲ್ಲಿ ಮತ್ತೆ ಅದಿರು ರಫ್ತು ಚಟುವಟಿಕೆ
ಬಿ.ಎಸ್.ಯಡಿಯೂರಪ್ಪ ಹೇಳಿಕೆ
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಮ್ಮೆಲ್ಲರ ಭಾವನೆಗೆ ಗೌರವ ಕೊಟ್ಟು ನಿರ್ಮಲಾ ಸೀತಾರಾಮನ್ ಅವರಿಗೆ ಅವಕಾಶ ಕೊಟ್ಟಿದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಇಬ್ಬರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣಕ್ಕಿಳಿಸಿದ್ದೇವೆ. ಅವರನ್ನೂ ಗೆಲ್ಲಿಸೋ ಪ್ರಯತ್ನ ಮಾಡ್ತಿದ್ದೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ