ಬೆಂಗಳೂರು; ನಿರ್ಭಯಾ ಸೇಫ್ ಸಿಟಿ ಟೆಂಡರ್ ಪ್ರಕರಣ ಸಂಬಂಧ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ನಾನು ಇ.ಆ್ಯಂಡ್ ವೈ ಕಂಪೆನಿಗೆ ಕಾನೂನು ಬಾಹಿರವಾಗಿ ಪತ್ರ ಬರೆದಿದ್ದೇನೆ ಎಂಬ ಸುದ್ದಿ ಕೇಳಿ ಆಶ್ಚರ್ಯಕ್ಕೆ ಒಳಗಾಗಿದ್ದೇನೆ. ಗೃಹ ಇಲಾಖೆ ಕಾರ್ಯದರ್ಶಿಯಾಗಿ ಕಂಪೆನಿಗಳಿಂದ ಮಾಹಿತಿ ಸಂಗ್ರಹಿಸಿದ್ದೇನೆ ಹೊರತು ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
4500 ಕೋಟಿ ಐಎಂಎ ವಂಚನೆ ಪ್ರಕರಣದ ಆರೋಪಿಯಾಗಿರುವ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ಜಾರ್ಜ್ ಶೀಟ್ ಸಲ್ಲಿಸಲು ಕೋರ್ಟ್ ಅನುಮತಿ ಕೇಳಿದೆ. ಹೈಕೋರ್ಟ್ ಐಎಂಎ ಪ್ರಕರಣವನ್ನು ಗಮನಿಸುತ್ತಲೇ ಇದೆ. ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳ ಈ ವಿಚಾರವಾಗಿ ಅನುಮೋದನೆ ನೀಡಿದೆ. ಇಂತಹ ಹಿನ್ನೆಲೆಯುಳ್ಳ ಅಧಿಕಾರಿ ಸರ್ಕಾರದ ಗಮನಕ್ಕೆ ಸುಳ್ಳು ದೂರನ್ನು ಕೊಟ್ಟಿದ್ದಾರೆ. ಇಂತಹ ಹಿನ್ನೆಲೆ ಇರುವ ನಿಂಬಾಳ್ಕರ್ ಅವರನ್ನು ಸೇಫ್ ಸಿಟಿ ಟೆಂಡರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಕೇಂದ್ರ ಸರ್ಕಾರ ಸ್ವಾಮ್ಯದ ಬಿಇಎಲ್ ಸಂಸ್ಥೆಗೆ ಟೆಂಡರ್ ನೀಡದಿರುವ ಬಗ್ಗೆ ನನ್ನ ಗಮನಕ್ಕೆ ಬಂತು. ಹೀಗಾಗಿ ಟೆಂಡರ್ ಕುರಿತ ಕಡತಗಳ ಪರಿಶೀಲಿಸಿದಾಗ ಸರಿಯಾದ ಕ್ರಮ ಅನುಸರಿಸಿಲ್ಲವೆಂದು ಮೇಲ್ನೊಟಕ್ಕೆ ಗೊತ್ತಾಯಿತು. ಹಾಗಾಗಿ ನಾನು ಹೆಚ್ಚಿನ ಮಾಹಿತಿಗಾಗಿ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕೃತವಾಗಿ ಇ ಆ್ಯಂಡ್ ವೈ ಕಂಪನಿ ಬಳಿ ಮಾಹಿತಿ ಕೇಳಿದ್ದೆ. ನಾನು ಸಮಾಜದ ನಾಗರೀಕರ ಹಾಗೂ ಜನರ ಹಣದ ಹಿತದೃಷ್ಟಿಯಿಂದ ಕೇಳಿದ್ದೆ ಹೊರತು ವೈಯಕ್ತಿಕ ಉದ್ದೇಶದಿಂದ ಕೇಳಿಲ್ಲ. ಹೇಮಂತ್ ನಿಂಬಾಳ್ಕರ್ ಅವರು ಟೆಂಡರ್ ಪ್ರಕ್ರಿಯೆಯಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಇದೆ ಎಂದು ಹೇಳಿ ದೂರು ನೀಡಿರುವುದು ಶುದ್ಧ ಸುಳ್ಳು ಎಂದಿದ್ದಾರೆ.
ಇದನ್ನು ಓದಿ: ನಾಳೆ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ರೈತರ ಕರೆ
ಸೇಫ್ ಸಿಟಿ ಯೋಜನೆಗೆ 1067 ಕೋಟಿ ಹಣ ಮೀಸಲಿಡಲಾಗಿದೆ. ಈ ಯೋಜನೆಯ ಟೆಂಡರ್ ಕರೆಯುವ ಮತ್ತು ಪರಿಶೀಲನೆ ಮಾಡುವ ಸಮಿತಿ ಅಧ್ಯಕ್ಷರಾಗಿರುವ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ನ್ಯಾಯಯುತವಾಗಿ ಟೆಂಡರ್ ಅನುಮೋದಿಸದೆ ಪಕ್ಷಪಾತ ಎಸಗಿದ್ದಾರೆ. ಯಾವುದೋ ಒಂದು ಕಂಪನಿಯ ಪರವಾಗಿ ಕೆಲಸ ಮಾಡಿದ್ದಾರೆ. ಸೆಫ್ ಸಿಟಿ ಟೆಂಡರ್ ನಲ್ಲಿ ಪಕ್ಷಪಾತ ಎಸಗಿದ್ದಾರೆಂದು ಪ್ರಧಾನಮಂತ್ರಿ ಕಚೇರಿಗೆ ಬಿಇಎಲ್ ಸಂಸ್ಥೆ ಪತ್ರ ಬರೆದಿತ್ತು. ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಸೇಫ್ ಸಿಟಿ ಫೈಲ್ ನನಗೆ ಅಧ್ಯಯನ ಮಾಡಲು ನೀಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ತನಿಖಾಧಿಕಾರಿಯಾಗಿ ಕಮಲ್ ಪಂತ್ ನೇಮಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ಟೆಂಡರ್ ಪ್ರಕ್ರಿಯೆ ಜನವರಿ 8ಕ್ಕೆ ಇದೆ. ಇನ್ನೂ ಹೊಸ ಟೆಂಡರ್ ಬಿಡ್ಡಿಂಗ್ ಬಂದಿಲ್ಲ. ಸದ್ಯ ಚಾಲ್ತಿ ಇರುವ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ. ಎಲ್ಲವನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ