ವಿಜಯಪುರದಲ್ಲಿ ಪುಂಡರಿಂದ ಮಹಿಳೆಯರ ರಕ್ಷಣೆಗೆ ನಿರ್ಭಯಾ ಪಡೆ ಕಾರ್ಯಾರಂಭ

ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಹಿತರಕ್ಷಣೆ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯದ ಬಗ್ಗೆ ದೂರುಗಳು ಬಂದರೆ ಅವುಗಳಿಗೆ ಪ್ರಥಮ ಆದ್ಯತೆ ಮೇರೆಗೆ ಸ್ಪಂದಿಸುವುದು ಇದರ ಉದ್ದೇಶವಾಗಿದೆ. 

ಮಹಿಳೆಯರ ರಕ್ಷಣೆಗೆ ಸಿದ್ಧವಾಗಿರುವ ನಿರ್ಭಯಾ ಪಡೆ

ಮಹಿಳೆಯರ ರಕ್ಷಣೆಗೆ ಸಿದ್ಧವಾಗಿರುವ ನಿರ್ಭಯಾ ಪಡೆ

  • Share this:
ವಿಜಯಪುರ(ಜ. 05): ಬಸವ ನಾಡಿನಲ್ಲಿ ಮಹಿಳೆಯರ ದೂರಿಗೆ ಕೂಡಲೇ ಸ್ಪಂದಿಸಲು ನಿರ್ಭಯಾ ಪಡೆ ಸೋಮವಾರದಿಂದಲೇ  ಕಾರ್ಯಾರಂಭ ಮಾಡಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಈ ಪಡೆಯನ್ನು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಭಯ ಯೋಜನೆ ಜಾರಿಗೆ ತಂದಿವೆ.  ಈ ಯೋಜನೆಯಡಿ 26 ಬೈಕ್ ಗಳು ಬಂದಿದ್ದು, ಅವುಗಳನ್ನು ಈ ಯೋಜನೆಯಡಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.  ಒಂದು ಪೊಲೀಸ್ ಠಾಣೆಗೊಂದರಂತೆ ವಿಜಯಪುರ ಜಿಲ್ಲೆಯಲ್ಲಿ 26 ಬೈಕ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಹಿತರಕ್ಷಣೆ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯದ ಬಗ್ಗೆ ದೂರುಗಳು ಬಂದರೆ ಅವುಗಳಿಗೆ ಪ್ರಥಮ ಆದ್ಯತೆ ಮೇರೆಗೆ ಸ್ಪಂದಿಸುವುದು ಇದರ ಉದ್ದೇಶವಾಗಿದೆ.  ಸಾಧ್ಯವಾದರೆ ಮಹಿಳೆಯರೇ ಈ ಬೈಕ್ ಚಲಾಯಿಸುತ್ತಾರೆ.  ಆ ಸಂದರ್ಭದಲ್ಲಿ ಮಹಿಳೆಯರು ಇರದಿದ್ದರೆ ಬೇರೆ ಮಹಿಳಾ ಸಿಬ್ಬಂದಿಯ ಜೊತೆ ಪುರುಷ ಸಿಬ್ಬಂದಿಯೂ ತೆರಳಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದು ಹೇಳಿದರು.

ಶಾಲೆ ಮತ್ತು ಕಾಲೇಜುಗಳು ಆರಂಭವಾದ ನಂತರ ಕೆಲವು ದುಷ್ಕರ್ಮಿಗಳು ಹೆಣ್ಣು ಮಕ್ಕಳನ್ನು ಚುಡಾಯಿಸುವ ದೂರುಗಳು ಬರುತ್ತವೆ.  ಇಂಥ ಕಿರುಕುಳ ತಡೆಗಟ್ಟಲೂ ಕೂಡ ನಿರ್ಭಯಾ ಪಡೆ ಶ್ರಮಿಸಲಿದೆ.  ವಿಜಯಪುರ ಜಿಲ್ಲೆಯಲ್ಲಿ ಸಧ್ಯಕ್ಕೆ ಪ್ರತಿಯೊಂದು ಸ್ಟೇಷನ್ ಗೆ ಒಂದು ಬೈಕ್ ನೀಡಲಾಗಿದೆ.  ಮುಂದಿನ ದಿನಗಳಲ್ಲಿ ಹೆಚ್ಚಿಗೆ ಬೈಕ್ ಗಳು ಬಂದರೆ ಅವುಗಳನ್ನು ಅವುಗಳನ್ನೂ ವಿತರಣೆ ಮಾಡಲಾಗುವುದು.  ಈಗಾಗಲೇ ಈ ಬೈಕ್ ಮತ್ತು ಯೋಜನೆಯ ಬಗ್ಗೆ ತಲಾ ಒಬ್ಬರಿಗೆ ತರಬೇತಿ ನೀಡಲಾಗಿದೆ.  ಮತ್ತೆ ಯಾರಿಗಾದರೂ ತರಬೇತಿ ಅವಶ್ಯಕವಾದರೆ ಅವರಿಗೂ ನೀಡಲಾಗುವುದು ಎಂದು ತಿಳಿಸಿದರು.

ಇಡಿ ‌ಕಚೇರಿಗೆ ಮುತ್ತಿಗೆ ಹಾಕಲು ಬಂದ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರನ್ನು ತಡೆದ ಪೊಲೀಸರು

ಟ್ರಾಫಿಕ್ ಹಟ್ ಕಮ್ ಬ್ಯಾರಿಕೇಡ್ ಸಿದ್ಧ

ಈ ಮಧ್ಯೆ, ಸಂಚಾರಿ ಪೊಲೀಸರು ಬಿಸಿಲು, ಮಳೆ ಎನ್ನದೇ ರಸ್ತೆಯಲ್ಲಿ ನಿಂತು ಸಂಚಾರವನ್ನು ನಿಯಂತ್ರಣ ಮಾಡುತ್ತಾರೆ.  ಅವರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ ಕೈಗೊಳ್ಳಲಾಗಿದೆ.  ಸಂಚಾರಿ ಪೊಲೀಸ್ ಸಿಬ್ಬಂದಿಗಾಗಿಯೇ ಸಂಚಾರ ನಿಯಂತ್ರಣದ ಆಯಕಟ್ಟಿನ ಸ್ಥಳಗಳಲ್ಲಿ ನೆರಳಿನಡಿ ಕೆಲಸ ಮಾಡಲು ಟ್ರಾಫಿಕ್ ಹಟ್ ಕಮ್ ಬ್ಯಾರಿಕೇಡ್ ತಯಾರಿಸಲಾಗಿದೆ.  5 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಟ್ರಾಫಿಕ್ ಹಟ್ ಕಮ್ ಬ್ಯಾರಿಕೇಡ್ ಗಳನ್ನು ಸಿದ್ಧಪಡಿಸಲಾಗಿದೆ.  ಇವು ಸೋಲಾರ ವಿದ್ಯುತ್ ಆಧರಿತವಾಗಿದ್ದು, ರಾತ್ರಿ ವೇಳೆಯಲ್ಲಿಯೂ ದೀಪದ ಬೆಳಕಿನಡಿ ಕೆಲಸ ಮಾಡಲಿವೆ.  ಹಗಲು ಹೊತ್ತಿನಲ್ಲಿ ನೆರಳಿನಡಿ ಕೆಲಸ ಮಾಡಲು ಇದು ಅನುಕೂಲವಾಗಲಿದೆ.  ಅಲ್ಲದೇ, ಕುಳಿತುಕೊಂಡು ಕೇಸ್ ದಾಖಲೆ ಪರಿಶೀಲಿಸಲು, ಕೇಸ್ ಹಾಕಲು, ದಂಡ ವಸೂಲಿ ಮಾಡಲು ಟೇಬಲ್ ವ್ಯವಸ್ಥೆಯನ್ನೂ ಕೂಡ ಇದು ಹೊಂದಿದೆ. ಅಷ್ಟೇ ಅಲ್ಲ, ಸಂಚಾರಿ ಪೊಲೀಸ್ ಸಿಬ್ಬಂದಿ ತಮ್ಮ ವಸ್ತುಗಳನ್ನು ಇಟ್ಟು ಲಾಕ್ ಮಾಡಲು ಪುಟ್ಟ ಲಾಕರ್ ಸೌಲಭ್ಯ ಕೂಡ ಇದರಲ್ಲಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದರು.

ವಿಜಯಪುರ ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ಟ್ರಾಫಿಕ್ ಹಟ್ ಕಮ್ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಆದ್ಯತೆ ನೀಡಲಾಗುತ್ತಿದೆ.  ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅನುಕೂಲವಾಗಿದೆ.  ಶಾಲೆ, ಕಾಲೇಜುಗಳ ಸುತ್ತಮುತ್ತ ಕೂಡ ಸರಕಾರ ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಸಿಸಿಟಿವಿ ಅಳವಡಿಸಲಾಗಿದೆ. ವಿಜಯಪುರ ನಗರದಲ್ಲಿ 3000 ಸಿಸಿಟಿವಿ ಇವೆ.  ಅಲ್ಲದೇ, ವಿಜಯಪುರ ಜಿಲ್ಲಾದ್ಯಂತ 6000 ಸಿಸಿಟಿವಿ ಗಳನ್ನು ಹಾಕಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಗಾಂಧಿಚೌಕ್ ಸಿಪಿಏ ರವೀಂದ್ರ ನಾಯಕ, ಸಂಚಾರಿ ಪಿ ಎಸ್ ಐ ಆರಿಫ್ ಮುಶಾಪುರಿ, ಗೋಳಗುಮ್ಮಟ ಸಿಪಿಐ ಬಸವರಾಜ ಮುಕರ್ತಿಹಾಳ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ ಸೇರಿದಂತೆ ನಾನಾ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Published by:Latha CG
First published: