ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ?

ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಕೇಳಿಬರುತ್ತಿದೆ. ಮಂಡ್ಯದಿಂದಲೇ ಸ್ಪರ್ಧೆ ಮಾಡುವಂತೆ ಆ ಭಾಗದ ಜೆಡಿಎಸ್ ಶಾಸಕರು ದೇವೇಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ. 

HR Ramesh | news18
Updated:January 10, 2019, 4:06 PM IST
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ?
ನಿಖಿಲ್​-ಕುಮಾರಸ್ವಾಮಿ (ಸಂಗ್ರಹ ಚಿತ್ರ)
HR Ramesh | news18
Updated: January 10, 2019, 4:06 PM IST
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಮತ್ತೊಂದು ಕುಡಿ ರಾಜಕೀಯ ಅಖಾಡಕ್ಕೆ ಇಳಿಯುವುದು ಬಹುತೇಕ ನಿಶ್ಚಿತವಾದಂತಿದೆ. ಈಗಾಗಲೇ ರೇವಣ್ಣ ಅವರ ಮಗ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿ ಆಗಿದ್ದು, ಇದೀಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ರಾಜಕೀಯ ಪ್ರವೇಶಕ್ಕೂ ವೇದಿಕೆ ಸಿದ್ಧವಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ಮುಂದಿನ ಬಾರಿ ರಾಜಕೀಯ ರಂಗ ಪ್ರವೇಶಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಅದರಂತೆ ನಿಖಿಲ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಕೇಳಿಬರುತ್ತಿದೆ. ಮಂಡ್ಯದಿಂದಲೇ ಸ್ಪರ್ಧೆ ಮಾಡುವಂತೆ ಆ ಭಾಗದ ಜೆಡಿಎಸ್ ಶಾಸಕರು ದೇವೇಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ. ಮೈತ್ರಿಯಾಗಲಿ ಅಥವಾ ಆಗದಿರಲಿ, ಒಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಮಗ ನಿಖಿಲ್  ಮಂಡ್ಯದಿಂದ ಸ್ಪರ್ಧೆ ಮಾಡಲಿ ಎಂದು ಮನವಿ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳ ರಾಜಕೀಯ ಚಿತ್ರಣವನ್ನು ಗಮನಿಸಿದರೆ ನಿಖಿಲ್ ಅವರು ಮಂಡ್ಯ ಭಾಗದಲ್ಲಿ ಹೆಚ್ಚು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮಂಡ್ಯ ಜನರ ಜೊತೆಗೆ ಹೆಚ್ಚಿನ ಸಂಪರ್ಕ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್ ಪರ ಪ್ರಚಾರ ನಡೆಸಿದ್ದ ನಿಖಿಲ್, ಮಂಡ್ಯದಲ್ಲೇ ತಮ್ಮ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲದೇ, ಅಂಬರೀಶ್ ಮೃತಪಟ್ಟಾಗ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಾಗಿನಿಂದ ಹಿಡಿದು ಕೊನೆವರೆಗೂ ನಿಖಿಲ್ ಪಾರ್ಥಿವ ಶರೀರದ ಜೊತೆಗೆ ಇದ್ದು, ಭಾವನಾತ್ಮಕವಾಗಿ ಈ ಭಾಗದ ಜನರ ಪ್ರೀತಿ ಗಳಿಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ನಿಖಿಲ್ ಮಂಡ್ಯ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂದು ರಾಜಕೀಯ ಚಿಂತಕರು ವಿಶ್ಲೇಷಿಸುತ್ತಿದ್ದಾರೆ.

ಇದನ್ನು ಓದಿ: ಅಪ್ಪನ ಪರ ಮಗ ಬ್ಯಾಟಿಂಗ್​; ನಿಜವಾದ ರೈತರು ಗೂಂಡಾಗಿರಿ ಮಾಡಲ್ಲ ಅಂದ್ರು ನಿಖಿಲ್​ ಕುಮಾರಸ್ವಾಮಿ

ಕುಟುಂಬ ರಾಜಕಾರಣ ಎಂಬ ಅಪವಾದ ಹೊಂದಿರುವ ಕಾರಣದಿಂದ ದೇವೇಗೌಡರು ತಮ್ಮ ಕುಟುಂಬ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡುತ್ತಿಲ್ಲ ಎಂಬುದು ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಬಹಿರಂಗಗೊಂಡಿತ್ತು. ಬದಲಾದ ರಾಜಕೀಯ ಚಿತ್ರಣದಿಂದಾಗಿ ರೇವಣ್ಣ ಅವರ ಮಗನಿಗೂ ಪಕ್ಷದ ಮಹತ್ವದ ಜವಾಬ್ದಾರಿ ವಹಿಸುವ ಮೂಲಕ ರಾಜಕೀಯ ಪಾದರ್ಪಣೆಗೆ ವೇದಿಕೆ ಅನುವು ಮಾಡಿಕೊಡಲಾಗಿದೆ. ಇನ್ನು ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿಯಾಗಿದೆ. ತಮ್ಮ ಪತಿಯಿಂದ ತೆರವಾದ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ದೇವೇಗೌಡರ ಕುಟುಂಬದಿಂದ ಒಟ್ಟು ಏಳು ಮಂದಿ ರಾಜಕೀಯ ಕ್ಷೇತ್ರದಿಂದ ತೊಡಗಿಸಿಕೊಂಡಂತೆ ಆಗುತ್ತದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ