ಹಣ, ಅಧಿಕಾರದ ಹಿಂದೆ ಬಿದ್ದವರಿಗೆ ಪಾಠ ಕಲಿಸಿ; ಶಾಶ್ವತ ಪರಿಹಾರಕ್ಕೆ ಕೃಷ್ಣಮೂರ್ತಿ ಗೆಲ್ಲಿಸಿ: ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ ವಿ. ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಿದೆ. ನಾನು ಕುಮಾರಣ್ಣನವರ ಮಗನಂತೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ. ಅವರು ನನಗೆ ಸಹೋದರನಿದ್ದಂತೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ಧಾರೆ.

ನಿಖಿಲ್ ಕುಮಾರಸ್ವಾಮಿ ಮತ್ತು ವಿ ಕೃಷ್ಣಮೂರ್ತಿ

ನಿಖಿಲ್ ಕುಮಾರಸ್ವಾಮಿ ಮತ್ತು ವಿ ಕೃಷ್ಣಮೂರ್ತಿ

 • Share this:
  ಬೆಂಗಳೂರು: ನೀವು 5 ವರ್ಷ ನಮ್ಮ ಪರ ಕೆಲಸ ಮಾಡಲಿ ಎಂದು ಶಾಸಕರನ್ನು ಆಯ್ಕೆ ಮಾಡುತ್ತೀರಿ. ಆದರೆ, ಅಧಿಕಾರ, ಹಣಕ್ಕಾಗಿ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ಅಂತಹವರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ. ತಾತ್ಕಾಲಿಕ ಪರಿಹಾರಕ್ಕೆ ಬಲಿಯಾಗದೇ ಶಾಶ್ವತ ಪರಿಹಾರಕ್ಕೆ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರನ್ನು ಗೆಲ್ಲಿಸಿ ಎಂದು ನಟ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು. ರಾಜರಾಜೇಶ್ವರಿ ದೇವಸ್ಥಾನದಿಂದ ಡಾ. ರಾಜಕುಮಾರ್‌ ಪುಣ್ಯಭೂಮಿವರೆಗೂ ಬೃಹತ್‌ ರೋಡ್‌ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಬೆಳಗ್ಗೆ ಒಂದು ಪಕ್ಷ, ಮಧ್ಯಾಹ್ನ ಒಂದು ಪಾರ್ಟಿ, ಸಂಜೆ ಒಂದು ಪಕ್ಷ ಅಂತ ಬದಲಾಯಿಸುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿ ಅದರ ಹಣವನ್ನು ಚುನಾವಣೆಗೆ ಬಳಸುತ್ತಾರೆ. ಯುವಕರು ಬುದ್ಧಿವಂತಿಕೆಯಿಂದ ಮತಚಲಾಯಿಸಬೇಕು ಎಂದು ಹೇಳಿದರು.

  ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತ ವಿ.ಕೃಷ್ಣಮೂರ್ತಿ ಅವರಿಗೆ ಟಿಕೆಟ್‌ ನೀಡಿದೆ. ನಾನು ಕುಮಾರಣ್ಣನವರ ಮಗನಂತೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ. ಅವರು ನನಗೆ ಸಹೋದರನಿದ್ದಂತೆ.‌ ಇಲ್ಲಿ ಜೆಡಿಎಸ್‌ ಗೆಲುವಿನ ರೇಸ್‌ನಲ್ಲಿ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ ಅದು ತಪ್ಪು. ತಳಮಟ್ಟದಲ್ಲಿನ ಕಾರ್ಯಕರ್ತರ ಉತ್ಸಾಹ ನಮಗೆ ಗೆಲುವಿನ ಭರವಸೆಯನ್ನು ನೀಡುತ್ತಿದೆ. ನಮ್ಮ ಅಭ್ಯರ್ಥಿ ಗೆಲುವು ಪಕ್ಕಾ ಎಂದರು.

  ಇದನ್ನೂ ಓದಿ: ಉಡುಪಿಯಲ್ಲಿ ‘ಮಾರ್ವಾಡಿ ಹಠಾವೋ’ ಎಂಬ ಶಾಂತಿ ಕದಡುವ ಅಭಿಯಾನ

  ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ನೀಡಿದ ಕೊಡುಗೆ ಅಪಾರ. ಜೆಡಿಎಸ್ ಪಕ್ಷ ಎಷ್ಟು ವರ್ಷಗಳ ಕಾಲ ಅಧಿಕಾರದಲ್ಲಿತ್ತೋ ಆ ಅವಧಿಯಲ್ಲಿ ರಾಜ್ಯ ಪ್ರಗತಿಯ ಪಥದಲ್ಲಿ ನಡೆದಿದೆ. ರಾಜಕಾಲುವೆ ದುರಸ್ತಿಗೆ ಸರಕಾರ ಕೋಟ್ಯಂತರ ರೂಪಾಯಿ ಸುರಿಯುತ್ತದೆ. ಆದರೆ, ಮೊನ್ನೆ ಸುರಿದ ಮಳೆಗೆ ರಾಜಕಾಲುವೆ ಯಾವ ಪರಿಸ್ಥಿತಿ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲಿ ಕಳಪೆ ಕಾಮಗಾರಿ ಮಾಡಿ ಆ ಹಣವನ್ನ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಹರಿಹಾಯ್ದರು.

  ಕೃಷ್ಣಮೂರ್ತಿ ಅವರ ತಂದೆ ಜೆಡಿಎಸ್‌ಗಾಗಿ 25 ವರ್ಷಗಳ ಕಾಲ ದುಡಿದಿದ್ದಾರೆ. ನಿಷ್ಠಾವಂತರಿಗೆ ಟಿಕೆಟ್ ಕೊಟ್ಟ ಹೆಮ್ಮೆ ನಮಗಿದೆ. ಮುಂದಿನ ಪೀಳಿಗೆಗೆ ಯುವಜನತೆ ರಾಜಕೀಯಕ್ಕೆ ಬರುವುದಕ್ಕೆ ಯೋಚನೆ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ, ಮಾಜಿ ಪರಿಷತ್‌ ಸದಸ್ಯ ಟಿ.ಎ.ಶರವಣ, ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಆರ್‌ಆರ್‌ ನಗರ ಜೆಡಿಎಸ್‌ ಅಧ್ಯಕ್ಷ ಚನ್ನಕೇಶವ್‌ ಮೂರ್ತಿ ಮತ್ತಿತರರಿದ್ದರು.

  ಸಿನಿಮಾಕ್ಕೆ ಮಾತ್ರ ಸೀಮಿತ: 

  ರೋಡ್‌ಶೋಗೂ ಮುನ್ನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನನ್ನ ಹಾಗೂ ಮುನಿರತ್ನ ನಡುವಿನ ಸಂಬಂಧ ಸಿನಿಮಾಗೆ ಮಾತ್ರ ಸೀಮಿತ. ಅವರು ನನ್ನ ಗಾಡ್‌ಫಾದರ್‌ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ಅವರ ಹಾಗೂ ನನ್ನ ಸಂಬಂಧ ಮುಗಿದಿದೆ. ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ.  ನಾನು ಜೆಡಿಎಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ವೈಯಕ್ತಿಕ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದರು.

  ಇದನ್ನೂ ಓದಿ: ಜನಪ್ರತಿನಿಧಿಗಳಿಂದಾಗದ ಕೆಲಸ ಗ್ರಾಮಸ್ಥರಿಂದ; ತಮ್ಮೂರಿಗೆ ತಾವೇ ಬಸ್​ ನಿಲ್ದಾಣ ಕಟ್ಟಿಕೊಂಡ ಜನರು

  ಕಾಂಗ್ರೆಸ್‌ಗೆ ಈಗ ಜಾತಿ ನೆನಪಾಗಿದೆ: 

  ಕಾಂಗ್ರೆಸ್‌ನ ಜಾತಿ ಕಾರ್ಡ್‌ ಬಗ್ಗೆ ಮಾತನಾಡಿದ ಅವರು, ಈಗ ಚುನಾವಣೆಯಲ್ಲಿ ಒಕ್ಕಲಿಗ ಜಾತಿ ಕಾರ್ಡ್‌ ಪ್ರಯೋಗಿಸುತ್ತಿರುವ ಕಾಂಗ್ರೆಸ್‌ನವರೇ ಮುನಿರತ್ನಂ ಅವರನ್ನು ಈ ಹಿಂದೆ ಎರಡು ಬಾರಿ ಟಿಕೆಟ್‌ ನೀಡಿ ಗೆಲ್ಲಿಸಿದ್ದಾರೆ. ಆಗ ಇರದ ಜಾತಿ ಮೇಲಿನ ಪ್ರೀತಿ, ಅವರಿಗೆ ಈಗ ಬಂದಿದೆ. ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿಯೂ ಒಕ್ಕಲಿಗ ಜಾತಿಗೆ ಸೇರಿದವರು ಎಂದು ಹೇಳಿದರು.

  ಬೃಹತ್‌ ರೋಡ್‌ ಶೋ: 

  ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ದಿನವಿಡೀ ಬೃಹತ್‌ ರೋಡ್‌ ಶೋ ನಡೆಯಿತು. ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ರೋಡ್‌ ಶೋ, ಚನ್ನಸಂದ್ರ ಸರ್ಕಲ್, ಬಂಗಾರಪ್ಪನ ಗುಡ್ಡೆ, ಜ್ಞಾನ ಭಾರತಿ, ಜ್ಞಾನ ಗಂಗಾಧರ ನಗರ, ಉಳ್ಳಾಲ ಮೇನ್ ರೋಡ್, ಪಾಪರೆಡ್ಡಿ ಪಾಳ್ಯ, ಕೆಂಗುಂಟೆ, ಬಿಡಿಎ ಕಾಂಪ್ಲೆಕ್ಸ್, ಲಗ್ಗೆರೆ ವಾರ್ಡ್‌ಗಳಲ್ಲಿ ಸಂಚರಿಸಿ ಡಾ.ರಾಜಕುಮಾರ್‌ ಪುಣ್ಯಭೂಮಿ ಬಳಿ ಅಂತ್ಯವಾಯಿತು.

  ಕಾರ್ಯಕರ್ತರ ಉತ್ಸಾಹ 

  ಜೆಡಿಎಸ್‌ ರೋಡ್‌ ಶೋಗೆ ದಾರಿಯುದ್ದಕ್ಕೂ ವ್ಯಾಪಕ ಜನಬೆಂಬಲ ವ್ಯಕ್ತವಾಯಿತು. ಜೆಡಿಎಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿತ್ತು. ಅದರ ಪ್ರತಿರೂಪವೆಂಬಂತೆ ರಾಜರಾಜೇಶ್ವರಿ ದೇವಸ್ಥಾನದ ಬಳಿ ಬೃಹತ್‌ ಹೂವಿನ ಹಾರ ಹಾಕಿದರೆ, ಬಿಡಿಎ ಕಾಂಪ್ಲೆಕ್ಸ್‌ ಬಳಿಯ ಬೃಹತ್‌ ಸೇಬಿನ ಹಾರ ಎಲ್ಲರ ಗಮನ ಸೆಳೆದಿತ್ತು.
  Published by:Vijayasarthy SN
  First published: