ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ (Praveen Nettaru) ರಾಷ್ಟ್ರೀಯ ತನಿಖಾ ದಳದ (National Investigation Agency) ಅಧಿಕಾರಿಗಳು ಚಾರ್ಜ್ಶೀಟ್ (Charge sheet) ಸಲ್ಲಿಕೆ ಮಾಡಿದ್ದಾರೆ. ಎನ್ಐಎ ತಂಡ ಶುಕ್ರವಾರ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸುದೀರ್ಘವಾದ 1500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. 240 ಸಾಕ್ಷಿಗಳ ಹೇಳಿಕೆಗಳು ಸೇರಿ ಒಟ್ಟು 20 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇನ್ನು ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ತಲೆಮರೆಸಿಕೊಂಡಿರುವ 6 ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿರುವ ಎನ್ಐಎ ಅಧಿಕಾರಿಗಳು, ಪತ್ತೆಯಾಗದ ಹಿನ್ನಲೆಯಲ್ಲಿ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಇಬ್ಬರು ಆರೋಪಿಗಳ ಪತ್ತೆಗೆ 10 ಲಕ್ಷ ಬಹುಮಾನ
ಬಂಟ್ವಾಳ ತಾಲೂಕಿನ ಕೊಡಾಜೆಯ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಷರೀಫ್ ಮತ್ತು ನೆಕ್ಕಿಲಾಡಿಯ ಅಗ್ನಾಡಿ ಹೌಸ್ನ ಅಬೂಬಕರ್ ಮಗ ಮಸೂದ್ ಕೆ.ಎ ಆರೋಪಿಗಳ ಸುಳಿವು ನೀಡಿದವರಿಗೆ ತಲಾ 5 ಲಕ್ಷದಂತೆ ಇಬ್ಬರಿಂದ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ಅಧಿಕಾರಿಗಳು ಜನವರಿ 20 ರಂದು ಘೋಷಣೆ ಮಾಡಿದ್ದು, ಆರೋಪಿಗಳ ಸುಳಿವು ಸಿಕ್ಕರೆ ಬೆಂಗಳೂರಿನ ಎನ್ಐಎ ಎಸ್ಪಿ ಕಚೇರಿಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Praveen Nettaru: ನಾಲ್ವರು ಆರೋಪಿಗಳ ತಲೆಗೆ ಲಕ್ಷ ಲಕ್ಷ ಬಹುಮಾನ ಪ್ರಕಟಿಸಿದ ಎನ್ಐಎ
ನಾಲ್ಕು ಆರೋಪಿಗಳ ಪತ್ತೆಗೆ 14 ಲಕ್ಷ ಬಹುಮಾನ
ಪ್ರವೀಣ್ ಹತ್ಯೆ ಪ್ರಕರಣದ ಸಂಬಂಧಿಸಿದಂತೆ ಜನವರಿ 11ರಂದು ರಾಷ್ಟ್ರೀಯ ತನಿಖಾ ದಳ 4 ಆರೋಪಿಗಳ ಪತ್ತೆ ಒಟ್ಟು 14 ಲಕ್ಷ ರೂ ಬಹುಮಾನ ಘೋಷಣೆ ಮಾಡಿತ್ತು. ಪ್ರಮುಖ ಆರೋಪಿಗಳಾದ ಮೊಹಮ್ಮದ್ ಮುಸ್ತಫಾಗೆ ಹಾಗೂ ತುಫೈಲ್ಗೆ ತಲಾ 5 ಲಕ್ಷ ಹಾಗೂ ಉಮರ್ ಫಾರೂಕ್ ಮತ್ತು ಅಬೂಬಕ್ಕರ್ ಸಿದ್ದಿಕ್ಗೆ ತಲಾ 2 ರೂ. ಬಹುಮಾನ ಘೋಷಿಸಿದೆ.
ಜುಲೈ 26, 2022 ರಂದು ಪ್ರವೀಣ್ ಹತ್ಯೆ
ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಚಿಕನ್ ಅಂಗಡಿ ಹೊಂದಿದ್ದ 31 ವರ್ಷದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ರಾತ್ರಿ 8ರ ಸಮಯದಲ್ಲಿ ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮಾಡಿದ್ದರು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 50 ರೂ. ಲಕ್ಷ ಪರಿಹಾರ
ಕುಟುಂಬ ನಿರ್ವಹಣೆ ಮಾಡುತ್ತಿದ್ದ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಹಿನ್ನಲೆ ಸರ್ಕಾರ ಪ್ರವೀಣ್ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಿತ್ತು. ಜೊತೆಗೆ ಮನೆಯನ್ನು ಕಟ್ಟಿಸಿಕೊಡುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಪ್ರವೀಣ್ ಪತ್ನಿಗೆ ಸರ್ಕಾರಿ ಕೆಲಸ
ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದಲ್ಲಿ ವಯಸ್ಸಾದ ಅತ್ತೆ-ಮಾವರನ್ನು ನೋಡಿಕೊಳ್ಳುವುದಕ್ಕಾಗಿ ಪ್ರವೀಣ್ ಪತ್ನಿ ನೂತನ ಕುಮಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಅಂತೆಯೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಕೊಡಿಸಿದ್ದರು. ಆದರೆ ನೂತನ ಕುಮಾರಿ ಅವರ ಮನವಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ