ಬಿಜೆಪಿಗೆ 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಏಕಿಲ್ಲ ನೆರೆ ಪರಿಹಾರ? ನಿಮ್ಮ ಅಭಿಪ್ರಾಯ, ಕಷ್ಟ ನಮ್ಮೊಂದಿಗೆ ಹಂಚಿಕೊಳ್ಳಿ

News18 - ShareChat ಅಭಿಯಾನ: ಪ್ರವಾಹದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ತಾತ್ಸಾರ ತೋರಿದ್ದು ಎಷ್ಟು ಸತ್ಯವೋ? ನಮ್ಮದೇ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ಪ್ರವಾಹ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಧೈರ್ಯವಿಲ್ಲದೆ ಸೋತರು ಎಂಬುದು ಅಷ್ಟೇ ಸತ್ಯ.

MAshok Kumar | news18-kannada
Updated:October 17, 2019, 11:15 AM IST
ಬಿಜೆಪಿಗೆ 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಏಕಿಲ್ಲ ನೆರೆ ಪರಿಹಾರ? ನಿಮ್ಮ ಅಭಿಪ್ರಾಯ, ಕಷ್ಟ ನಮ್ಮೊಂದಿಗೆ ಹಂಚಿಕೊಳ್ಳಿ
ನ್ಯೂಸ್​18 ಕನ್ನಡ ಮತ್ತು ಶೇರ್​ ಚಾಟ್​ ಅಭಿಯಾನ
  • Share this:
ಎತ್ತ ನೋಡಿದರೂ ಸ್ಮಶಾನ ಮೌನ..ಅಲ್ಲಲ್ಲಿ ಮುರಿದು ಬಿದ್ದಿರುವ ಮನೆಗಳು..ಪ್ರವಾಹಕ್ಕೆ ತುತ್ತಾದ ಬೆಳೆ..ಬೀದಿಗೆ ಬಿದ್ದ ಬದುಕು. ಮುಗಿಲು ಮುಟ್ಟಿದ ಆಕ್ರಂದನ ಇದು ಕಳೆದ ಎರಡು ತಿಂಗಳಿನಿಂದ ಇತಿಹಾಸ ಕಾಣದ ಮಳೆ, ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕ ಮತ್ತು ಕೊಡಗು ಜಿಲ್ಲೆಗಳ ಪ್ರಸ್ತುತ ವಸ್ತುಸ್ಥಿತಿ.

2009ರಲ್ಲಿ ಇದೇ ಉತ್ತರ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹದಿಂದ ಇಲ್ಲಿನ ಜನ ಇನ್ನೂ ಸುಧಾರಿಸಿಕೊಂಡಿಲ್ಲ. ಅಷ್ಟರಲ್ಲೇ ಅಪ್ಪಳಿಸಿರುವ ಮತ್ತೊಂದು ಪ್ರವಾಹ ಇದೀಗ ಇಡೀ ಉತ್ತರ ಕರ್ನಾಟಕವನ್ನೇ ಮತ್ತೆ ಬುಡಮೇಲು ಮಾಡಿದೆ. ಆದರೆ, ಇಂತಹ ಸಂದರ್ಭದಲ್ಲಿ ಜನರ ಪರವಾಗಿ ನಿಲ್ಲಬೇಕಾದದ್ದು ಜನ ಪ್ರತಿನಿಧಿಗಳ ಕರ್ತವ್ಯ, ಹಳಿ ತಪ್ಪಿದ ಜನರ ಬದುಕನ್ನು ಮತ್ತೆ ಸರಿದಾರಿಗೆ ತರುವುದು ಪ್ರಭುತ್ವದ ಜವಾಬ್ದಾರಿಯೂ ಹೌದು!

ಆದರೆ, ಕರ್ನಾಟದ ಪಾಲಿಗೆ ಪ್ರಭುತ್ವ ಮತ್ತು ಜನ ಪ್ರತಿನಿಧಿಗಳು ಎರಡೂ ಕೈಕೊಟ್ಟಿರುವುದು ಮಾತ್ರ ವಿಪರ್ಯಾಸದ ಸಂಗತಿ. ಅಸಲಿಗೆ ನಾವು ಹೀಗೊಂದು ವಿಷಾಧನೀಯ ಹೇಳಿಕೆ ನೀಡಲು ಕಾರಣಗಳೂ ಇಲ್ಲದೆ ಏನಿಲ್ಲ.

ರಾಜ್ಯ ಕೊಟ್ಟದ್ದು 25 ಸಂಸದರು. ಆದರೆ, ಬದಲಿಗೆ ನೀವು ಕೊಟ್ಟದ್ದೇನು?

ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಮತ್ತು ಕೊಡಗಿನಲ್ಲಿ ನೂರಾರು ಸಂಖ್ಯೆಯ ಮನೆಗಳು ನೆಲಕ್ಕುರುಳಿವೆ. ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಸುಮಾರು 80 ಅಧಿಕ ಜನ ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡಿದ್ದರೆ, 14 ಜನ ಕಣ್ಮರೆಯಾಗಿದ್ದಾರೆ.

ಈ ಪ್ರವಾಹದಿಂದಾಗಿ ಅಂದಾಜು 1 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸ್ವತಃ ಹೇಳಿಕೆ ನೀಡಿದ್ದ ಬಿಎಸ್ ಯಡಿಯೂರಪ್ಪ ಪ್ರವಾಹದಿಂದಾಗಿ 52 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಿದ್ದರಾದರೂ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ಕೇಂದ್ರದಿಂದ ಲಭ್ಯವಾದದ್ದು ಮಾತ್ರ ಕೇವಲ 1200 ಕೋಟಿ.

ಇಡೀ ರಾಜ್ಯ ಪ್ರವಾಹದಿಂದ ತತ್ತರಿಸಿದ್ದ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತತಕ್ಷಣದಲ್ಲಿ ಹಣ ಬಿಡುಗಡೆ ಮಾಡಬೇಕಿತ್ತು. ಅದು ನಮ್ಮ ಹಕ್ಕೂ ಹೌದು. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿಯದ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೆ ಜಾಣ ಕಿವುಡು ಮತ್ತು ಕುರುಡನ್ನು ಮೆರೆದಿತ್ತು.ಆದರೆ, ಪ್ರವಾಹದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ತಾತ್ಸಾರ ತೋರಿದ್ದು ಎಷ್ಟು ಸತ್ಯವೋ? ನಮ್ಮದೇ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ಪ್ರವಾಹ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಧೈರ್ಯವಿಲ್ಲದೆ ಸೋತರು ಎಂಬುದು ಅಷ್ಟೇ ಸತ್ಯ.

News18 and ShareChat Campaign
ಶೇರ್​ಚಾಟ್​, ನ್ಯೂಸ್​18 ಅಭಿಯಾನ


ಒಂದೆಡೆ ಇಡೀ ರಾಜ್ಯ ಪ್ರವಾಹಕ್ಕೆ ತುತ್ತಾಗಿ ತತ್ತರಿಸುತ್ತಿದ್ದರೆ, ಮತ್ತೊಂದೆಡೆ ಜನರ ನೆರವಿಗೆ ದಾವಿಸಬೇಕಿದ್ದ, ಕೇಂದ್ರದಿಂದ ಪರಿಹಾರ ತರಬೇಕಿದ್ದ ನಮ್ಮದೇ ರಾಜ್ಯದ 25 ಬಿಜೆಪಿ ಸಂಸದರು ದೀರ್ಘವಾದ ಮೌನವ್ರತಕ್ಕೆ ಶರಣಾಗಿದ್ದರು. ತಮಗೂ ಪ್ರವಾಹಕ್ಕೂ ಸಂಬಂಧವೇ ಇಲ್ಲ ಎಂಬಂತಹ ದಾಷ್ಠ್ಯ ಅವರ ನಡವಳಿಕೆಯಲ್ಲಿ ಎದ್ದು ಕಾಣುತ್ತಿತ್ತು. ಈ ನಡುವೆ ಮತ್ತೂ ಕೆಲವು ಸಂಸದರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕುವ ಕೆಲಸಕ್ಕೆ ಕೈಹಾಕಿದ್ದರು. ಅವರಲ್ಲಿ ಪ್ರಮುಖರೆಂದರೆ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ ಸಿಂಹ.

ನೆರೆ ಪರಿಹಾರದ ಕುರಿತು ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ ನಮಗೆ ಕೇಂದ್ರ ನೆರವು ಅಗತ್ಯವಿಲ್ಲ ಎಂದ ಬಹಿರಂಗ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕಿದರೆ, ಅವರಿಗಿಂತ ಒಂದು ಹೆಜ್ಜೆ ಮುಂದಿಟ್ಟಿದ್ದ ಪ್ರತಾಪ ಸಿಂಹ ಪ್ರಧಾನಿ ಮೋದಿಯನ್ನು ದೇವರಿಗೆ ಹೋಲಿಸುವ ಮೂಲಕ ನಗೆಪಾಟಲಿಗೆ ಈಡಾಗಿದ್ದರು. ಅಲ್ಲದೆ, ನೆರೆ ಪರಿಹಾರ ವಿಚಾರದಲ್ಲಿ ಮೋದಿಯನ್ನು ಟೀಕಿಸಿದರೆ ಆಕಾಶ ನೋಡಿ ಉಗುಳಿದಂತೆ ಎನ್ನುವ ಮೂಲಕ ಪ್ರಧಾನಿಯನ್ನು ಮೆಚ್ಚಿಸುವ ಕೆಲಸಕ್ಕೆ ಮುಂದಾಗಿದ್ದರೆ ಹೊರತು ಈ ಯಾವ ಸಂಸದರೂ ಪರಿಹಾರ ನಿಧಿ ತರುವಲ್ಲಿ ಜನರ ಪರವಾಗಿ ಪ್ರಾಮಾಣಿಕವಾಗಿ ಶ್ರಮಿಸಿಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ.

ನೆರೆ ಸಂತ್ರಸ್ತರೆ ನಿಮ್ಮ ಊರಿನ ಸ್ಥಿತಿಯನ್ನು ನೀವೆ ವಿಡಿಯೋ ಮಾಡಿ, ಅದನ್ನು ನಮಗೆ ಕಳುಹಿಸಿ!

ರಾಜ್ಯದಿಂದ ಬಿಜೆಪಿಗೆ ನಾವು 25 ಸಂಸದರನ್ನು ಆರಿಸಿ ಕಳಿಸಿ ಕೊಟ್ಟರೂ ಸಹ ಕೇಂದ್ರ ಸರ್ಕಾರ ರಾಜ್ಯದ ಜನರ ಸಂಕಷ್ಟಗಳಿಗೆ ಕಿವಿಯಾಗಿಲ್ಲ ಎಂಬುದು ಈಗಿನ ಆಗುಹೋಗುಗಳನ್ನು ಗಮನಿಸಿದರೆ ವೇದ್ಯವಾಗುತ್ತದೆ. ರಾಜ್ಯ ಸರ್ಕಾರ ನೆರೆ ಪರಿಹಾರಕ್ಕಾಗಿ ಕೇಂದ್ರದ ಮುಂದಿಟ್ಟ ಮನವಿ 38 ಸಾವಿರ ಕೋಟಿ. ಆದರೆ, ಜನಾಕ್ರೋಶವನ್ನು ಗಮನಿಸಿರುವ ಕೇಂದ್ರ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕೇವಲ 1200 ಕೋಟಿ ಹಣವನ್ನಷ್ಟೇ ನೀಡಿದೆ. ಹೀಗಾಗಿ ಪರಿಹಾರ ಕಾರ್ಯಗಳು ನಿರೀಕ್ಷಿತ ವೇಗ ಪಡೆಯುತ್ತಿಲ್ಲ.

ಹೀಗಾಗಿ ನಿಮ್ಮ ಊರಿನಲ್ಲಿ ಪ್ರವಾಹಕ್ಕೆ ತುತ್ತಾದ ಜಾಗಗಳನ್ನು, ಕೃಷಿ ಭೂಮಿಗಳನ್ನು, ಪ್ರವಾಹದಿಂದ ನೆಲಕ್ಕುರುಳಿದ ಮನೆಗಳ ಪರಿಸ್ಥಿತಿಯನ್ನು ಶೇರ್​ಚಾಟ್ ಸೆಲ್ಫಿ ವಿಡಿಯೋ ಮೂಲಕ ಚಿತ್ರೀಕರಿಸಿ ಅದನ್ನು ಈ ಕೆಳಗೆ ನೀಡಿರುವ ಹ್ಯಾಶ್​ಟ್ಯಾಗ್​ ಬಳಸಿ ಶೇರ್​ಚಾಟ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ. ಆ ವಿಡಿಯೋವನ್ನು ನಾವು ನಮ್ಮ ವೆಬ್​ಸೈಟಿನಲ್ಲಿ ಪ್ರದರ್ಶಿಸುವ ಮೂಲಕ ನೆರೆ ಪರಿಸ್ಥಿತಿಯ ಕುರಿತು ಪ್ರಭುತ್ವದ ಗಮನ ಸೆಳೆಯಲು ಪ್ರತ್ನಿಸುತ್ತೇವೆ.

ಬಳಸಬೇಕಾದ ಹ್ಯಾಶ್​ಟ್ಯಾಗ್​: #ಪ್ರವಾಹ ಪರಿಹಾರ ಎಲ್ಲಿ?
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ