News 18 Kannada Impact | ತೊಗರಿ ಬೆಳೆಗಾರರ ಹೆಸರು ನೋಂದಣಿ ಸಮಸ್ಯೆ; ರೈತರಿಗೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ

ಈ ಮೂಲಕ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ನ್ಯೂಸ್ 18 ಕನ್ನಡದ ವರದಿಗೆ ಸ್ಪಂದಿಸಿದ್ದು, ರೈತರು ಆತಂಕ ಪಡದೇ, ಇಲ್ಲಿ ಸೂಚಿಸಿದ ಅಂಶಗಳನ್ನು ಗಮನಿಸಿ  ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅನ್ನದಾತರಿಗೆ ಭರವಸೆ ನೀಡಿದ್ದಾರೆ.

news18-kannada
Updated:January 24, 2020, 8:41 PM IST
News 18 Kannada Impact | ತೊಗರಿ ಬೆಳೆಗಾರರ ಹೆಸರು ನೋಂದಣಿ ಸಮಸ್ಯೆ; ರೈತರಿಗೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ.
  • Share this:
ವಿಜಯಪುರ: ಜಿಲ್ಲೆಯ ತೊಗರಿ ಬೆಳೆ ರೈತರು ಬೆಂಬಲ ಬೆಲೆಯಡಿ ಹೆಸರು ನೋಂದಾಯಿಸಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದರು. ಜಮೀನಿನಲ್ಲಿ ಬೇರೆ ಬೆಳೆಯನ್ನು ಗ್ರಾಮ ಲೆಕ್ಕಿಗಾಧಿಕಾರಿ ನಮೂದಿಸಿ, ಜಿಪಿಆರ್​ಎಸ್​ನಲ್ಲಿ ಅಪ್ಲೋಡ್​ ಮಾಡಿದ್ದರ ಪರಿಣಾಮ ತೊಗರಿ ಬೆಳೆದ ರೈತರು ಬೆಂಬಲ ಬೆಲೆಯಡಿ ಹೆಸರು ನೋಂದಾಯಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗಿರುವುದರ ಕುರಿತು ನ್ಯೂಸ್ 18 ಕನ್ನಡ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿರುವ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರು, ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ.

ವರದಿ ಬಳಿಕ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ  ಜಿಲ್ಲಾಧಿಕಾರಿ ಪಾಟೀಲ ಅವರು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಜಿಲ್ಲೆಯ 108 ನೋಂದಣಿ ಕೇಂದ್ರಗಳಲ್ಲಿ ಉಂಟಾಗಿರುವ ನೋಂದಣಿ ಸಮಸ್ಯೆಗೆ ಪ್ರಮುಖ ಕಾರಣ, ಅದಕ್ಕೆ ಪರಿಹಾರ ಹಾಗೂ ಅದರ ಜವಾಬ್ದಾರಿಯ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಆ ಸುತ್ತೋಲೆಯ ಪ್ರಕಾರ ಈ ಸಮಸ್ಯೆಗೆ ಪ್ರಮುಖವಾಗಿ ಆರು ಕಾರಣಗಳನ್ನು ಪತ್ತೆ ಮಾಡಿದ್ದು, ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ. ರಾಜ್ಯಾದ್ಯಂತ ತೊಗರಿ ನೋಂದಣಿಗೆ FRUITS ತಂತ್ರಾಂಶ ಮತ್ತು ಬೆಳೆ ಸಮೀಕ್ಷೆ ದತ್ತಾಂಶ ಬಳಸಿಕೊಳ್ಳುತ್ತಿರುವುದರಿಂದ ಕೆಲವು ಸಮಸ್ಯೆಗಳು ಖರೀದಿ ಕೆಂದ್ರದಲ್ಲಿ ಬೆಳಕಿಗೆ ಬಂದಿವೆ. ಒಂದು ವೇಳೆ ರೈತರು ತಮ್ಮ ಹೆಸರು  ನೋಂದಣಿ ಮಾಡಿಕೊಳ್ಳುವಾಗ ಸಮಸ್ಯೆಗಳು ಕಂಡು ಬಂದಲ್ಲಿ  ಗೊಂದಲಕ್ಕೆ ಒಳಗಾಗಬಾರದು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಧಾನದಿಂದ ವರ್ತಿಸಿ ಸಮಸ್ಯೆ ಬಗೆಹರಿಸಿಕೊಳ್ಲಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.

ಇದನ್ನು ಓದಿ: ಜಮೀನಿನಲ್ಲಿ ತೊಗರಿ ಬದಲು ಬೇರೆ ಬೆಳೆ ನಮೂದು; ಗ್ರಾಮ ಲೆಕ್ಕಾಧಿಕಾರಿ ಎಡವಟ್ಟಿಗೆ ಸಾವಿರಾರು ರೈತರು ಕಂಗಾಲು

ಜಿಲ್ಲಾಡಳಿತ ಗುರುತಿಸಿರುವ ಸಮಸ್ಯೆಗಳು ಮತ್ತು ಪರಿಹಾರ

 ಸಮಸ್ಯೆ 1- Crop details (TuR) Not Found:  ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆಕಾರರು ತೊಗರಿ ಬದಲು ಬೇರೆ ಬೆಳೆಯನ್ನು ತಪ್ಪಾಗಿ ನಮೂದಿಸಿರುವುದು

ಪರಿಹಾರ: ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಆಕ್ಷೇಪಣೆ ಸಲ್ಲಿಸಬೇಕು.  ಗ್ರಾಮದ ಬೆಳೆ ಸೂಪರ್​ವೈಸರ್ ಸರಿಪಡಿಸಿದ ನಂತರ ಖರೀದಿ ಕೇಂದ್ರದದಲ್ಲಿ ನೋಂದಣಿ ಮಾಡಿಸಬೇಕು. ಇದಕ್ಕೆ ಆ ಗ್ರಾಮದ ಬೆಳೆ ಸರ್ವೆಯರ್ ಅಥವಾ ಗ್ರಾಮ ಲೆಕ್ಕಾಧಿಕಾರಿಗಳು ಸಹಾಯ ಮಾಡುತ್ತಾರೆ.

ಸಮಸ್ಯೆ 2- ಬೆಳೆ ವಿವರವನ್ನು ಸರಿಯಾಗಿ ಪರಿಶೀಲನೆ ಮಾಡದೇ ಅಥವಾ ರಿಜೆಕ್ಟ್ ಮಾಡಿ ಮರು ಪರಿಶೀಲನೆಗೆ ಹಾಕಿದಾಗ ಸರ್ವೇಯರ್ ಅಥವಾ ಮೇಲ್ವಿಚಾರಕರು ಮರು ಸಮೀಕ್ಷೆ ವಿವರವನ್ನು ಪರಿಶೀಲನೆ ಮಾಡದೇ ಇರಬಹುದು.ಪರಿಹಾರ- ಖರೀದಿ ಕೇಂದ್ರದ ಬೆಳೆ ದರ್ಶಕ ಆ್ಯಪ್ ಬಳಸಿದರೂ ಬೆಳೆ ತಪ್ಪಾಗಿ ದಾಖಲಾಗಿದ್ದರೆ, ಆ ಆ್ಯಪ್ ಮೂಲಕವೇ ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಆಕ್ಷೇಪಣೆ ಸಲ್ಲಿಸಬೇಕು. ಮೇಲ್ವಿಚಾರಕರು ಸರಿಪಡಿಸಿದ ನಂತರ ಖರೀದಿ ಕೇಂದ್ರದಲ್ಲಿಯೇ ನೋಂದಣಿ ಮಾಡಿಸಿಕೊಳ್ಳಬಹುದು. ಆ ಗ್ರಾಮದ ಬೆಳೆ ಸರ್ವೆ ಮೇಲ್ವಿಚಾರಕು ಅಥವಾ ಗ್ರಾಮ ಲೆಕ್ಕಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.

ಸಮಸ್ಯೆ 3- ರೈತರ ಎಲ್ಲಾ ಸರ್ವೆ ನಂಬರ್​ಗಳು ಅವರ FID ಗೆ ಲಿಂಕ್ ಆಗದೇ, ಕೇವಲ ಒಂದೇ ಸರ್ವೆ ನಂಬರ್​ಗೆ ಮಾತ್ರ ಲಿಂಕ್ ಆಗಿ, ಆ ಸರ್ವೆ ನಂಬರ್​ನಲ್ಲಿ ತೊಗರಿ ಬೆಳೆ ದಾಖಲಾಗದೇ ಇರುವುದು.

ಪರಿಹಾರ- ರೈತರ ಆಧಾರ ಕಾರ್ಡಿನಲ್ಲಿದ್ದಂತೆಯೇ ಪಹಣಿಯಲ್ಲಿಯೂ ರೈತರ ಹೆಸರು ಇದ್ದಲ್ಲಿ ಖರೀದಿ ಕೇಂದ್ರದ ಸಿಬ್ಬಂದಿ ತಮ್ಮ FRUITS ತಂತ್ರಾಂಶ ಲಾಗಿನ್​ನಲ್ಲಿ ರೈತರ ಸರ್ವೆ ನಂಬರ್​ಅನ್ನು ಅವರ FIDಗೆ ಲಿಂಕ್ ಮಾಡಬಹುದು. ಒಂದು ವೇಳೆ ಆಧಾರ್​ನಲ್ಲಿ ಇರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ಬೇರೆಯಾಗಿದ್ದಲ್ಲಿ, ಅಂತರ ರೈತರು ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಹೋಗಿ ಸರ್ವೆ ನಂಬರ್​ಅನ್ನು ಅವರ FIDಗೆ ಲಿಂಕ್ ಮಾಡಿಸಿಕೊಳ್ಳಬೇಕು. ಖರೀದಿ ಕೇಂದ್ರದ ಸಿಬ್ಬಂದಿ ಅಥವಾ ಹೋಬಳಿಯ ರೈತಸಂಪರ್ಕ ಕೇಂದ್ರದ ಸಿಬ್ಬಂದಿ ಅಥವಾ ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.

ಸಮಸ್ಯೆ 4 - FID Does not Exist ಎಂಬ ಸಮಸ್ಯೆಗೆ ರೈತರ ಮಾಹಿತಿ Fruits ತಂತ್ರಾಂಶದಲ್ಲಿ ನೋಂದಣಿ ಆಗದಿರುವುದು ಪ್ರಮುಖ ಕಾರಣವಾಗಿದೆ.

ಪರಿಹಾರ- ಇಂಥ ರೈತರು ತಮ್ಮ ಹೋಬಳಿತ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ತಮ್ಮ ಆಧಾರ್, ತಮ್ಮ ಹೆಸರಿನ ಎಲ್ಲಾ ಪಹಣಿಗಳು, ಬ್ಯಾಂಕ್ ಪಾಸ್ಬುಕ್ ಝೆರಾಕ್ಸ್, ಫೋಟೋ ಮತ್ತು ಮೊಬೈಲ್ ನಂಬರ್ ಸಲ್ಲಿಸಿ FRUITS ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ FID ಸಂಖ್ಯೆ ಪಡೆದುಕೊಂಡು ನಂತರ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಬಹುದು.  ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಅಥವಾ ತೋಟಗಾರಿಕೆ ಇಲಾಖೆ ಸಿಬ್ಬಂದಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಸಮಸ್ಯೆ 5- SURVEY details not found ಎಂಬ ಸಮಸ್ಯೆ ಎದುರಾದಾಗ ಆ ಸರ್ವೆ ನಂಬರಿನ ಹೊಲದ ಬೆಳೆ ಸಮೀಕ್ಷೆ ಸರ್ವೆ ಆಗದೆ ಇರುವುದು ಪ್ರಮುಖ ಕಾರಣ.

ಪರಿಹಾರ- ಬೆಳೆ ದರ್ಶಕ ಆ್ಯಪ್ ಮೂಲಕ ಅಥವಾ ಖರೀದಿ ಕೇಂದ್ರದ ಸಿಬ್ಬಂದಿ ಅಥವಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಆಕ್ಷೇಪಣೆ ಸಲ್ಲಿಸಬೇಕು. ಗ್ರಾಮ ಸರ್ವೆ ಮೇಲ್ವಿಚಾರಕರು ಸರಿಪಡಿಸಿದ ನಂತರ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು.  ಇದಕ್ಕಾಗಿ ಆ ಗ್ರಾಮದ ಬೆಳೆ ಸರ್ವೆ ಮೇಲ್ವಿಚಾರಕರು ಅಥವಾ ಗ್ರಾಮ ಲೆಕ್ಕಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಸಮಸ್ಯೆ 6- Father’s Name not found ಸಮಸ್ಯೆ ಬಂದಾಗ FRUITS ತಂತ್ರಾಂಶದಲ್ಲಿ ರೈತರ ನೋಂದಣಿ ಮಾಡುವ ಸಮಯದಲ್ಲಿ ತಂದೆಯ/ಗಂಡನ ಹೆಸರು ನಮೂದಾಗದಿರುವುದು ಪ್ರಮುಖ ಕಾರಣ.

ಪರಿಹಾರ- ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ FRUITS ತಂತ್ರಾಂಶದಲ್ಲಿ ತಮ್ಮ ಆಧಾರ್​ನಲ್ಲಿ ಇರುವಂತೆ ತಂದೆ/ಗಂಡನ ಹೆಸರ ಮತ್ತು ಜನ್ಮದ ದಿನಾಂಕವನ್ನು ಸರಿಪಡಿಸಿಕೊಳ್ಳಬೇಕು. ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಅಥವಾ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಈ ನಿಟ್ಟಿಲಿನಲ್ಲಿ ಕ್ರಮ ಕೈಗೊಳ್ಳಬೇಕು.

ಈ ಮೂಲಕ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ನ್ಯೂಸ್ 18 ಕನ್ನಡದ ವರದಿಗೆ ಸ್ಪಂದಿಸಿದ್ದು, ರೈತರು ಆತಂಕ ಪಡದೇ, ಇಲ್ಲಿ ಸೂಚಿಸಿದ ಅಂಶಗಳನ್ನು ಗಮನಿಸಿ  ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅನ್ನದಾತರಿಗೆ ಭರವಸೆ ನೀಡಿದ್ದಾರೆ.
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ