ತುಮಕೂರು: ಭೀಕರ ಅಪಘಾತದಲ್ಲಿ ನವ ದಂಪತಿಗಳಿಬ್ಬರು (Couple ) ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು (Tumakuru) ಜಿಲ್ಲೆ ಚಿಕ್ಕನಾಯಕನಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ. ರಘು (35), ಅನುಷಾ (28) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಭೀಕರ ಅಪಘಾತ (Accident) ಸಂಭವಿಸಿದ್ದು, ಮೃತರು ತಿಗಳನಹಳ್ಳಿಯಿಂದ ಬಳ್ಳಾರಿಗೆ ಮದುವೆ (Marriage) ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಮೃತರು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ದಂಪತಿಗೆ ಮದುವೆಯಾಗಿ ಕೇವಲ ಎರಡು ತಿಂಗಳಾಗಿತ್ತು. ಹ್ಯುಂಡೈ ಕ್ರೆಟಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಚಿಕ್ಕನಾಯಕನಹಳ್ಳಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯುವಕನ ಬರ್ಬರವಾಗಿ ಹತ್ಯೆಗೈದು ಸುಟ್ಟು ಹಾಕಿದ್ರು!
ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದು ಮೃತದೇಹ ಸುಟ್ಟ ಹಾಕಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ ನಗರದ ಶ್ರೀನಗರ ಸಮೀಪದ ರೈಲ್ವೆ ಟ್ರ್ಯಾಕ್ ಸಮೀಪ ನಡೆದಿದೆ. ಮೃತನನ್ನು 25 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ರೈಲ್ವೆ ಟ್ರ್ಯಾಕ್ (Railway Track) ಬಳಿ ಬೆಂಕಿ ಕಂಡು ಸ್ಥಳೀಯರು ಗಮನಿಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಅರಸೀಕೆರೆ ನಗರ (Arsikere Nagar) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ಗುರುತು ಪತ್ತೆ ಮಾಡುವ ಕಾರ್ಯವನ್ನು ಪೊಲೀಸರು ಶುರು ಮಾಡಿದ್ದು, ಜನವಸತಿ ಪ್ರದೇಶ ಸಮೀಪವೇ ಭೀಕರ ಹತ್ಯೆ ನಡೆದಿರುವುದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಎಸ್ಪಿ ಹರಿರಾಮ್ ಶಂಕರ್ ಅವರು, ಗೋಣಿ ಚೀಲದಲ್ಲಿ ವ್ಯಕ್ತಿಯ ಮೃತದೇಹವನ್ನು ತೆಗೆದುಕೊಂಡು ಬಂದು, ತೈಲ ಸುರಿದು ಕೊಲೆ ಮಾಡಲಾಗಿದೆ. ಸದ್ಯ ನಮ್ಮಲ್ಲಿ 2-3 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಈಗಾಗಲೇ ತನಿಖೆ ಆರಂಭ ಮಾಡಿದ್ದೇವೆ.
ರೈಲ್ವೆ ಟ್ರ್ಯಾಕ್ ಬಳಿ ವ್ಯಕ್ತಿಯ ದೇಹ ಸುಟ್ಟು ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದರಂತೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತ ವ್ಯಕ್ತಿ ಯಾರು ಎಂದು ತಿಳಿದುಬಂದಿಲ್ಲ. ಮೈಸೂರಿನಿಂದ ಫೋರೆನ್ಸಿಕ್ ತಂಡವನ್ನು ಕರೆತರುತ್ತಿದ್ದೇವೆ, ಮೃತದೇಹ ರೈಲ್ವೆ ಟ್ರ್ಯಾಕ್ 10 ಮೀಟರ್ ಒಳಗೆ ಪತ್ತೆಯಾಗಿರುವುದರಿಂದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇಸ್ ಹಸ್ತಾಂತರ ಮಾಡಲಿದ್ದಾರೆ. ನಾವು ಕೂಡ ಪ್ರಕರಣದಲ್ಲಿ ವಿಚಾರಣೆಯಲ್ಲಿ ತೊಡಗಿಕೊಂಡಿದ್ದೇವೆ. ಮೃತದೇಹದ ಗುರುತು ಸಿಗಬಾರದು ಎಂದು ಸುಟ್ಟು ಹಾಕಿದ್ದಾರೆ. ಆದರೆ ನಮಗೆ ಕೆಲವು ಸುಳಿವುಗಳು ಈಗಾಗಲೇ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
ಕೆರೆಯಲ್ಲಿ ಮುಳುಗಿ 13 ವರ್ಷದ ಬಾಲಕ ಸಾವು
13 ವರ್ಷದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೆರೂರು ಗ್ರಾಮದಲ್ಲಿ ನಡೆದಿದೆ. ಬಾಲಕ ತನ್ನ ಗೆಳೆಯರೊಂದಿಗೆ ಕೆರೆಯಲ್ಲಿ ಈಜಲು ಹೋದಾಗ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: Crime News: ಅತ್ಯಾಚಾರಕ್ಕೆ ಯತ್ನ, ಯುವಕರಿಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ; ಏಳು ಜನ ಅರೆಸ್ಟ್
ಫಜಲ್ ಮುಚಡಿ ಮೃತ ಬಾಲಕನಾಗಿದ್ದು, ನಿನ್ನೆ ಸಂಜೆ ವೇಳೆ ದೊಡ್ಡಕೆರೆಯ ಬಳಿ ಆಟವಾಡುತ್ತಿದ್ದಾಗ ದುರ್ಘಟನೆ ನಡೆದಿದೆ. ಸ್ಥಳೀಯರಿಗೆ ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ದೋಣಿ ಮೂಲಕ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ