• Home
 • »
 • News
 • »
 • state
 • »
 • ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕಿಲ್ಲ ಪ್ರವೇಶ; ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗಿಲ್ಲ ಅಡ್ಡಿ

ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕಿಲ್ಲ ಪ್ರವೇಶ; ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗಿಲ್ಲ ಅಡ್ಡಿ

ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ.

ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ.

ಹೊಸ ವರ್ಷದ ಮೊದಲ ದಿನ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯಗಳಿಗೆ ಆಗಮಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ಈ ರೀತಿ ಹೆಚ್ಚಿನ ಸಂಖ್ಯೆಯ ಜನರ ನಿರ್ವಹಣೆ ಆಡಳಿತ ಮಂಡಳಿಗೆ ಸವಾಲ್​ ಆಗಲಿದೆ. ಅಲ್ಲದೇ, ಸೋಂಕಿಗೆ ಆಹ್ವಾನ ನೀಡುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.

 • Share this:

  ಬೆಂಗಳೂರು (ಡಿ. 28): ಕೊರೋನಾ ಆತಂಕದ ನಡುವೆಯೇ 2020 ಮುಗಿಯುತ್ತಿದೆ. ಹೊಸ ವರ್ಷದ ಆಗಮನಕ್ಕೆ ಎಲ್ಲೆಡೆ ಸಂಭ್ರಮ ಮೂಡಿದೆ. ಈ ನಡುವೆ ಕೋವಿಡ್​ ಆತಂಕ ಕೂಡ ಮನೆ ಮಾಡಿದೆ. ಈ ಹಿನ್ನಲೆ ಹೊಸ ವರ್ಷದಂದು ಕೆಲ ದೇವಾಲಯಗಳಲ್ಲಿ ಭಕ್ತರಿಗೆ ನಿಷೇಧ ವಿಧಿಸಲಾಗಿದೆ. ಹೊಸ ವರ್ಷದ ಮೊದಲ ದಿನ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯಗಳಿಗೆ ಆಗಮಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ಈ ರೀತಿ ಹೆಚ್ಚಿನ ಸಂಖ್ಯೆಯ ಜನರ ನಿರ್ವಹಣೆ ಆಡಳಿತ ಮಂಡಳಿಗೆ ಸವಾಲ್​ ಆಗಲಿದೆ. ಅಲ್ಲದೇ, ಈ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಲಿದ್ದು, ಸೋಂಕಿಗೆ ಆಹ್ವಾನ ನೀಡುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಇದೇ ಹಿನ್ನಲೆ ಮೈಸೂರಿನ ಪ್ರಸಿದ್ಧ ದೇವಾಲಯದಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.


  ಹೊಸ ವರ್ಷದಂದು ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೇ ಮೆಟ್ಟಿಲುಗಳ ಮೂಲಕವು ಪ್ರವೇಶ ನಿಷೇಧ ಮಾಡಲಾಗಿದೆ. ಹೊಸವರ್ಷದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ. ಇನ್ನು ಜಿಲ್ಲೆಯ ನಂಜನಗೂಡು ನಂಜುಂಡೇಶ್ವರ ದೇವಾಲಯ ಎಂದಿನಂತೆ ತೆರದಿರಲಿದೆ. ಆದರೆ, ಹೆಚ್.ಡಿ.ಕೋಟೆಯ ಚಿಕ್ಕದೇವರಮ್ಮ ದೇವಾಲಯ ಕೂಡ ಭಕ್ತರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ. ಅಲ್ಲದೇ, ಕೆ.ಆರ್.ನಗರದಲ್ಲಿ ಹೊಸ ವರ್ಷದ ದಿನ ನಡೆಯುವ ದನಗಳ ಜಾತ್ರೆ ರದ್ದು ಮಾಡಲಾಗಿದೆ. ಉಳಿದಂತೆ ಖಾಸಗಿ ದೇವಾಲಯದಲ್ಲಿ ಕೋವಿಡ್ ನಿಯಮ ಪಾಲಿಸಿ ಭಕ್ತರ ದರ್ಶನೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.


  ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯಗಳಲ್ಲಿ ಎಂದಿನಂತೆ ಸೇವೆ


  ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ದರ್ಶನ, ಸೇವೆ ಯಥಾಸ್ಥಿತಿ ಮುಂದುವರೆಯಲಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಸಮಯದಲ್ಲೂ ಯಾವುದೇ ವ್ಯತ್ಯಾಸವಿಲ್ಲದೇ, ಸೇವೆ ಮುಂದುವರೆಸಲಾಗುವುದು. ವರ್ಷದ ಆರಂಭದ ದಿನದಲ್ಲಿ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದ್ದು, ಎಂದಿನಂತೆ ದೇವರ ಸೇವಾ ಹರಕೆಗಳು ನಡೆಯಲಿದೆ. ಆದರೆ, ದೇವಾಲಯದ ಒಳಭಾಗದಲ್ಲಿ ಕೋವಿಡ್ ನಿಯಮಕ್ಕೆ ಪ್ರಾಮುಖ್ಯತೆ ನೀಡಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಲಾಗುವುದು.


  ದರ್ಶನ ನೀಡಲಿರುವ ಶಾರದೆ, ಅನ್ನಪೂರ್ಣೆ


  ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಕೂಡ ಹೊಸ ವರ್ಷಕ್ಕೆ ಯಾವುದೇ ನಿಷೇಧವಿಲ್ಲ. ಹೊಸ ವರ್ಷಕ್ಕೆ ದೇವಾಲಯಕ್ಕೆ ಬರಬಹುದಾಗಿದ್ದು, ಪ್ರವಾಸಿಗರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ದೇವಾಲಯದಿಂದ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಎಂದರೆ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.


  ಅನ್ನಸಂತರ್ಪಣೆ ಬದಲು ಬಫೆ


  ಉಡುಪಿಯ ಪ್ರಸಿದ್ದ ದೇವಾಲಯ ಕೃಷ್ಣ ಮಠ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೊರೋನಾ ನಿಯಮಾವಳಿ ಪಾಲನೆ ಮಾಡಲಾಗುವುದು. ದೇವಾಲಯದಲ್ಲಿ ಅನ್ನ ಸಂತರ್ಪಣೆಯಲ್ಲಿ ಬಫೆ ವ್ಯವಸ್ಥೆಯನ್ನು ಮಾಡಲಾಗಿದೆ.


  ಶಕ್ತಿ ಪೀಠದ ದರ್ಶನಕ್ಕೆ ಅವಕಾಶ


  ಶಕ್ತಿಪೀಠದಲ್ಲಿ ಒಂದಾಗಿರುವ ಬಾದಾಮಿ ಬನಶಂಕರಿ ದೇಗುಲ ದರ್ಶನಕ್ಕೆ ಕೂಡ ಹೊಸ ವರ್ಷದಂದು ಯಾವುದೇ ನಿರ್ಬಂಧ ಇಲ್ಲ. ಎಂದಿನಂತೆ ಭಕ್ತರಿಗೆ ದೇಗುಲ ದರ್ಶನಕ್ಕೆ ಅವಕಾಶ. ಈ ಬಾರಿ ಜನವರಿಯಲ್ಲಿ ಇದ್ದ ಪ್ರಸಿದ್ಧ  ಬಾದಾಮಿ ಬನಶಂಕರಿ ಜಾತ್ರೆ ನಿಷೇಧ ಹಿನ್ನೆಲೆ. ಜನವರಿ 15ರಿಂದ 31ವರೆಗೆ ಭಕ್ತರಿಗೆ ದೇಗುಲ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ, ಇದರ ಹೊರತಾಗಿ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಯಾಗಿಲ್ಲ.

  Published by:Seema R
  First published: