ಬೆಂಗಳೂರು(ಡಿ.31): ಪ್ರತಿ ಬಾರಿ ನ್ಯೂ ಇಯರ್ ಬಂತು ಅಂದ್ರೆ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಜಗಮಗಿಸುತ್ತಿದ್ದವು. ನೋಡುಗರ ಕಣ್ಣಿಗೆ ಅದೇ ಹಬ್ಬದಂತೆ ಇರ್ತಿತ್ತು. ಆದ್ರೆ ಈ ಬಾರಿ ಹೊಸ ವರ್ಷಕ್ಕೆ ಬ್ರಿಗೇಡ್ ರಸ್ತೆ ಬಿಕೋ ಎನ್ನುತ್ತಿದೆ. ಪ್ರತಿವರ್ಷ ಹೊಸ ವರ್ಷಾಚರಣೆ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಬ್ರಿಗೇಡ್ ರಸ್ತೆಯಲ್ಲಿ ಈ ಬಾರಿ ನೀರವ ಮೌನ ಹಾಗೂ ಬಿಕೋ ಎನ್ನುವಂತ ವಾತಾವರಣ ಸೃಷ್ಟಿಯಾಗಿದೆ. ಕ್ರಿಸ್‌ಮಸ್ ವೇಳೆಗೆ ಬ್ರಿಗೇಡ್ ರಸ್ತೆಯಲ್ಲಿ ಬಣ್ಣ ಬಣ್ಣದ ಎಲ್ಇಡಿ ದೀಪಗಳಿಂದ ಸಿಂಗರಿಸಿ ಮಧುವಣಗಿತ್ತಿಯಂತೆ ಅಲಂಕಾರ ಮಾಡುತ್ತಿದ್ರು. ಆದ್ರೆ ಈ ಬಾರಿ ಇದೆಲ್ಲಾ ಸಂಭ್ರಮ ಸಡಗರಕ್ಕೆ ಕೊರೋನಾ ಮಾಹಾಮಾರಿ ಬ್ರೇಕ್ ಹಾಕಿದೆ.
ಬ್ರಿಗೇಡ್ ರಸ್ತೆಯಲ್ಲಿ ಹೆಜ್ಜೆ ಇಡುತ್ತಿದ್ದಂತೆ ಕಣ್ಣಿಗೆ ಹಬ್ಬದ ವಾತಾವರಣ ಕಂಡು ಬರುತಿತ್ತು. ಒಮ್ಮೆ ಈ ರಸ್ತೆಗೆ ಬಂದವರು ಪದೇ ಪದೇ ಬರಬೇಕು ಅನ್ನೋ ಹಾಗೇ ರಸ್ತೆಯನ್ನ ಅಲಂಕಾರಿಕವಾಗಿ ಸಿದ್ದಗೊಳಿಸುತ್ತಿದ್ದರು. ಈ ಬಾರಿ ಬ್ರಿಗೇಡ್ ರಸ್ತೆ ಖಾಲಿ-ಖಾಲಿಯಾಗಿದೆ.
ಖಾಲಿ ಖಾಲಿಯಾಗಿರೋ ರಸ್ತೆ, ವಿದ್ಯುತ್ ದೀಪಗಳಿಲ್ಲ, ರಸ್ತೆಯಲ್ಲಿ ಬ್ಯಾರಿಕೇಡ್ ಗಳಿಲ್ಲ. ವಾಚ್ ಟವರ್ ಗಳಿಲ್ಲ, ಹಿಂಡು ಹಿಂಡು ಸಿಸಿಟಿವಿಗಳು ಕಾಣ್ತಿಲ್ಲ. ಇದು ಬ್ರಿಗೇಡ್ ರಸ್ತೆಯ ಈಗಿನ ವಾಸ್ತವ ಸ್ಥಿತಿ. ಕೊರೋನಾ ಮಾಹಾಮಾರಿಯ ಆತಂಕದಲ್ಲಿರುವ ಸರ್ಕಾರ ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ. ಸಾರ್ವಜನಿಕರು ರಸ್ತೆ ಮತ್ತು ಓಪನ್ ಏರಿಯಾಗಳಲ್ಲಿ ಹೊಸ ವರ್ಷಾಚರಣೆ ಮಾಡಬಾರದೆಂದು ತಾಕೀತು ಮಾಡಿದೆ. ಅದ್ರಿಂದ ಈ ಬಾರಿ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಯಾವುದೇ ರಸ್ತೆಗಳಲ್ಲಿ ಸಹ ಸಡಗರದ ವಾತಾವರಣ ಕಂಡು ಬರುತ್ತಿಲ್ಲ.
ಮುಕ್ತಾಯವಾದ ಗ್ರಾಮ ಸಮರ; ರಾಯಚೂರಿನಲ್ಲಿ ಹಲವು ವಿಶಿಷ್ಠ ಅಭ್ಯರ್ಥಿಗಳ ಗೆಲುವು
ಇನ್ನೂ ಡಿಸೆಂಬರ್ 31ರ ಸಂಜೆಯಿಂದಲೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ಸುತ್ತಲಿನ ರಸ್ತೆಗಳಲ್ಲಿರುವ ಶಾಪ್ ಗಳನ್ನ ಕ್ಲೋಸ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ಶಾಪ್ ಗಳು ಇದ್ದರೆ ಜನ ಶಾಪಿಂಗ್ ಹೆಸರಲ್ಲಿ ರಸ್ತೆಗೆ ಇಳಿಯುತ್ತಾರೆ. ಇದರಿಂದ ಜನರ ನಿಯಂತ್ರಣವು ಕಷ್ಟವಾಗುತ್ತೆ, ಅದ್ರಿಂದ ಸಂಜೆ 6 ಗಂಟೆ ಬಳಿಕ ಪಬ್ , ಬಾರ್ , ರೆಸ್ಟೋರೆಂಟ್ ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟು ನಡೆಸುವ ಶಾಪ್ ಗಳು ಬಂದ್ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಇನ್ನೂ ಪ್ರತಿಬಾರಿ ಸಿಸಿಟಿವಿಗಳ ಕಣ್ಗಾವಲಿನಲ್ಲಿ ಹೊಸ ವರ್ಷದ ಸಂಭ್ರಮ ನಡೆಯುತ್ತಿತ್ತು. ಆದ್ರೆ ಈ ಬಾರಿ ಎಂದಿನಂತೆ ಪೊಲೀಸರು ಆಳವಡಿಸಿರುವ ಸಿಸಿಟಿವಿಗಳ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದಷ್ಟು ಸಿಸಿಟಿವಿಗಳನ್ನ ಆಳವಡಿಕೆ ಮಾಡಲಾಗಿದೆ. ಇನ್ನೂ ಜನರ ಓಡಾಟಕ್ಕೆ ನಿರ್ಬಂಧ ಹೇರಿರೋದ್ರಿಂದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕದೇ, ಎಂಜಿ ರಸ್ತೆ ಎಂಟ್ರಿಯಲ್ಲಿ ರಸ್ತೆ ಕ್ಲೋಸ್ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ