news18-kannada Updated:November 12, 2020, 1:40 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ನ. 12): ಪ್ರತಿ ವರ್ಷ ಹೊಸ ವರ್ಷದ ದಿನದಿಂದ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಗಿಜಿಗುಡುತ್ತಿರುತ್ತವೆ. ನಗರದ ಯುವಪೀಳಿಗೆ ಎಂಜಿ ರಸ್ತೆಯ ಸುತ್ತಮುತ್ತ ಬೀಡು ಬಿಟ್ಟಿರುತ್ತದೆ. ಆದರೆ, ಈ ವರ್ಷ ಅದಕ್ಕೆ ಅವಕಾಶ ನೀಡದಿರಲು ಬಿಬಿಎಂಪಿ ನಿರ್ಧರಿಸಿದೆ. ಹೀಗಾಗಿ, ಹೊಸ ವರ್ಷಾಚರಣೆಗೆ ಎಂಜಿ ರಸ್ತೆ ಕಡೆಗೆ ಹೋಗುವ ಪ್ಲಾನ್ ಇದ್ದರೆ ನಿಮಗೆ ನಿರಾಸೆ ಖಂಡಿತ.
ಕರ್ನಾಟಕದಲ್ಲಿ ಕಳೆದೊಂದು ತಿಂಗಳಿಂದ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಆದರೆ, ಕೊರೋನಾ ಟೆಸ್ಟ್ಗೆ ಒಳಗಾದವರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ನಿಖರವಾದ ಅಂಕಿ-ಅಂಶ ಲಭ್ಯವಾಗುತ್ತಿಲ್ಲ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಎರಡನೇ ಹಂತದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ, ಬೆಂಗಳೂರಿನಲ್ಲೂ ಕೊರೋನಾ ಮತ್ತಷ್ಟು ಉಲ್ಬಣಿಸದಿರಲಿ ಎಂದು ಮುನ್ನೆಚ್ಚರಿಕೆ ಕೈಗೊಂಡಿರುವ ಸರ್ಕಾರ ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನೇನು ಸದ್ಯದಲ್ಲೇ 2020 ಮುಕ್ತಾಯವಾಗುವುದರಿಂದ ಈ ಬಾರಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: Bangalore Fire Accident: ಬೆಂಗಳೂರು ಕೆಮಿಕಲ್ ಫ್ಯಾಕ್ಟರಿ ಗೋಡೌನ್ ಬೆಂಕಿ ಅವಘಡ; ಮಾಲೀಕ ಸಜ್ಜನ್ ರಾಜ್ ಬಂಧನ
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿ ಮಾಡಲು ಈ ಬಾರಿ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ಬಗ್ಗೆ ಬಿಬಿಎಂಪಿ ತೀರ್ಮಾನ ಮಾಡಿದೆ. ಹೊಸ ವರ್ಷಾಚರಣೆ ವೇಳೆ ಕಿಕ್ಕಿರಿದು ಜನ ಸೇರುತ್ತಾರೆ. ಸಾಮಾಜಿಕ ಅಂತರ, ಮಾಸ್ಕ್ ಎಲ್ಲ ನಿಯಮಗಳನ್ನೂ ಪಾಲನೆ ಮಾಡುವುದು ಅಸಾಧ್ಯ. ಈ ಹಿನ್ನಲೆಯಲ್ಲಿ ಹೊಸ ವರ್ಷಾಚರಣೆಯನ್ನು ನಿಲ್ಲಿಸಲು ಪಾಲಿಕೆ ನಿರ್ಧಾರ ಮಾಡಿದೆ. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಲು ಬೆಂಗಳುರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಸಾವಿರಾರು ಜನರು ಒಂದೇ ಕಡೆ ಸೇರಿ ಸಂಭ್ರಮಾಚರಣೆ ಮಾಡಿದರೆ ಮತ್ತೆ ಕೊರೋನಾ ಹೆಚ್ಚಾಗುವ ಸಾಧ್ಯತೆ ಇರುವುದರಿಂದ 2021ರ ಸಂಭ್ರಮಾಚರಣೆಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ.
ಇನ್ನು, ದೀಪಾವಳಿ ವೇಳೆ ಬೆಂಗಳೂರಿನಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಗೆ ಈ ಬಗ್ಗೆ ವರದಿ ಕೊಟ್ಟಿದ್ದೇವೆ. ಎಲ್ಲರಿಗೂ ಹಸಿರು ಪಟಾಕಿ ಮಾರಲು ಅವಕಾಶ ಇಲ್ಲ. ಕೆಲವು ಅಧಿಕೃತ ಮಾರಾಟಗಾರರಿಗೆ ಮಾತ್ರ ಅನುಮತಿ ನೀಡಲಾಗಿದೆ. ಎಲ್ಲಾ ಕಡೆ ಹಸಿರು ಪಟಾಕಿ ಮಾರಾಟ ಮಾಡೋ ಹಾಗಿಲ್ಲ. ಎಲ್ಲೆಲ್ಲಿ ಮಾರಾಟ ಮಾಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಈ ಬಗ್ಗೆ ಕೆಲವು ಜಾಗವನ್ನು ಸೂಚಿಸಿ ಪೊಲೀಸ್ ಕಮಿಷನರ್ಗೆ ವರದಿ ಒಪ್ಪಿಸಿದ್ದೇವೆ. ಮುಂದಿನದ್ದನ್ನು ಅವರೇ ನೋಡಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
(ವರದಿ: ಆಶಿಕ್ ಮುಲ್ಕಿ)
Published by:
Sushma Chakre
First published:
November 12, 2020, 1:34 PM IST