ಬೆಂಗಳೂರು (ಡಿ. 31): ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ New Year Celebration ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಹೊಸ ವರ್ಷಾಚರಣೆಗೆ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆ ಬಳಿಕ ಬೆಂಗಳೂರಿನ 6 ಪ್ರಮುಖ ರಸ್ತೆಗಳು ಕಂಪ್ಲೀಟ್ ಬಂದ್ ಆಗಲಿವೆ. ಹೀಗಾಗಿ, ಈ ರಸ್ತೆಗಳತ್ತ ಬಂದರೆ ತೊಂದರೆ ಅನುಭವಿಸಬೇಕಾದೀತು. ಬೆಂಗಳೂರಿನ ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರೋಡ್, ರೆಸಿಡೆನ್ಸಿ ರೋಡ್, ರೆಸ್ಟ್ ಹೌಸ್ ಪಾರ್ಕ್ ರೋಡ್ಗಳಿಗೆ ಬ್ಯಾರಿಕೇಡ್ ಹಾಕಿ ಲಾಕ್ ಮಾಡಲಾಗುವುದು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಕೂಡ ಸಂಪೂರ್ಣ ಬಂದ್ ಆಗಲಿವೆ. ಜೊತೆಗೆ ನಗರದ ಎಲ್ಲಾ ಫ್ಲೈ ಓವರ್ ಗಳು ಕೂಡ ಬಂದ್ ಆಗಲಿವೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಓಪನ್ ಪಾರ್ಟಿ ಹಾಗೂ ಡಿಜೆಗೆ ಅನುಮತಿ ಕೊಡದ ಹಿನ್ನೆಲೆಯಲ್ಲಿ ಈಗಾಗಲೇ New Year Celebration ಗೆ ಜನರು ಬೆಂಗಳೂರು ಬಿಟ್ಟು ಹೊರ ಜಿಲ್ಲೆಗೆ ಹೊರಟಿದ್ದಾರೆ. ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ, ತುಮಕೂರು ಕಡೆಗೆ ಹೊರಟಿರುವ ಜನರು ಅಲ್ಲೇ ಹೊಸ ವರ್ಷಾಚರಣೆ ಮಾಡಲು ನಿರ್ಧರಿಸಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಬೆಂಗಳೂರು ಸ್ತಬ್ಧವಾಗಲಿದೆ.
ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರು ಕಣ್ಗಾವಲು ವಹಿಸಿದ್ದಾರೆ. ಹೊಸ ವರ್ಷಾಚರಣೆಯ ಕೇಂದ್ರ ಸ್ಥಳವಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಅಲ್ಲಲ್ಲಿ ತಾತ್ಕಾಲಿಕವಾಗಿ ಸಿಸಿಟಿವಿ ಅಳವಡಿಸಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಬಿಬಿಎಂಪಿ ಮಾರ್ಷಲ್ಸ್ ಕೂಡ ಫೀಲ್ಡ್ನಲ್ಲಿ ಇರಲಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಈ 10 ನಿಯಮಗಳನ್ನು ಪಾಲಿಸುವಂತೆ ಪಬ್, ಬಾರ್, ರೆಸ್ಟೋರೆಂಟ್ಗಳಿಗೆ ಸೂಚನೆ
ಮಾಸ್ಕ್ ಇಲ್ಲದೆ ಬೇಕಾಬಿಟ್ಟಿ ಕೋವಿಡ್ ಪ್ರೊಟೊಕಾಲ್ ಉಲ್ಲಂಘಿಸಿದರೆ ಭಾರೀ ದಂಡ ವಿಧಿಸಲಾಗುವುದು. ಹೀಗಾಗಿ, ಇಂದು ರಾತ್ರಿ ಬೆಂಗಳೂರಿನಲ್ಲಿ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಎಚ್ಚರ! ಇಂದು ರಾತ್ರಿ 6 ಮುಖ್ಯ ರಸ್ತೆಗಳು ಬಂದ್ ಆಗುವುದರಿಂದ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಸೆಂಟರ್ ಆಫ್ ಅಟ್ರ್ಯಾಕ್ಷನ್ನಂತಿದ್ದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಲ್ಯಾವೆಲ್ಲೆ ರಸ್ತೆಗೆ ಪರ್ಯಾಯವಾಗಿ ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಕಡೆಗೆ ಬಂದು ಬಲ ತಿರುವು ಪಡೆದು, ಕಬ್ಬನ್ ರಸ್ತೆ ಮಾರ್ಗವಾಗಿ ಬಿಆರ್ ಜಂಕ್ಷನ್ ನಿಂದ ಟ್ರಿನಿಟಿ ಸರ್ಕಲ್ ಕಡೆಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.
ಇನ್ನು ಶಾಂತಿನಗರದಿಂದ ಬ್ರಿಗೇಡ್ ರೋಡ್ ಮಾರ್ಗವಾಗಿ ಇಂದಿರಾನಗರಕ್ಕೆ ಹೋಗುವ ಟ್ರಿನಿಟಿ ಸರ್ಕಲ್ ಸಂಪರ್ಕ ಮಾರ್ಗವೂ ಸಂಪೂರ್ಣ ಕ್ಲೋಸ್ ಇರಲಿದೆ. ಜೊತೆಗೆ ಸಂತ ಜೋಸೆಫ್ ಈವಿನಿಂಗ್ ಕಾಲೇಜು ಸಿಗ್ನಲ್ ನಿಂದ ಬ್ರಿಗೇಡ್ ರೋಡ್ ಎರಡನೇ ಸಿಗ್ನಲ್ ಬಳಿ ವರೆಗೂ ಕಂಪ್ಲೀಟ್ ಕ್ಲೋಸ್ ಆಗಲಿದೆ. ಬದಲಿಗೆ ಶಾಂತಿನಗರ ಫುಟ್ಬಾಲ್ ಸ್ಟೇಡಿಯಂ ಮುಖ್ಯ ರಸ್ತೆ ಪರ್ಯಾಯ ಮಾರ್ಗ ಸಾರ್ವಜನಿಕರು ಬಳಸಿಕೊಳ್ಳಬೇಕಿದೆ.
ಮತ್ತೊಂದು ಕಡೆಯಿಂದ, ಎಂಜಿ ರಸ್ತೆಯಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ತಲುಪುವ ಮುಖ್ಯ ರಸ್ತೆ ಈಗಾಗಲೇ ನಮ್ಮ ಮೆಟ್ರೊ ಕಾಮಗಾರಿಯಿಂದ ಬದಲಿ ಮಾರ್ಗ ಕಲ್ಪಿಸಲಾಗಿದೆ. ಹೀಗಾಗಿ ಈ ಮಾರ್ಗ ಸಾರ್ವಜನಿಕರಿಗೆ ತೆರೆದಿರಲಿದೆ. ಇದರ ಜೊತೆಗೆ 144 ಸೆಕ್ಷನ್ ಮುಗಿಯುವವರೆಗೆ ಕೆಆರ್ ಸರ್ಕಲ್ ವೃತ್ತದಿಂದ ವಿಧಾನ ಸೌದ ಮುಖ್ಯ ರಸ್ತೆ ಹಾದು ಇಂಡಿಯನ್ ಎಕ್ಸ್ಪ್ರೆಸ್ ಸಿಗ್ನಲ್ ಬಲ ತಿರುವು ಪಡೆದು ಶಿವಾಜಿನಗರ ತಲುಪಬಹುದು.
(ವರದಿ: ಆಶಿಕ್ ಮುಲ್ಕಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ